Omicron Threat: ಜರ್ಮನಿಯಿಂದ ಬಂದ ಇಬ್ಬರಿಗೆ ಕೋವಿಡ್‌ ಪಾಸಿಟಿವ್‌

By Kannadaprabha NewsFirst Published Dec 9, 2021, 6:55 AM IST
Highlights

*    ಒಮಿಕ್ರೋನ್‌ ಸೋಂಕು ಪರೀಕ್ಷೆಗೆ ಮಾದರಿ ರವಾನೆ
*    ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇಬ್ಬರೂ ಪ್ರಯಾಣಿಕರು
*    ಹೈರಿಸ್ಕ್‌ ದೇಶಗಳಿಂದ ಬಂದವರ ವರದಿ ನೆಗೆಟಿವ್‌ ಇದ್ರೂ RTPCR ಟೆಸ್ಟ್‌
 

ಬೆಂಗಳೂರು(ಡಿ.09):  ಜರ್ಮನಿಯಿಂದ(Germany) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ()(Kempegowda International Airport) ಬುಧವಾರ ಬಂದಿಳಿದ ಪ್ರಯಾಣಿಕರ ಪೈಕಿ ಇಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದೆ.

ಒಮಿಕ್ರೋನ್‌(Omicron) ತಳಿ ಪತ್ತೆಗೆಂದು ವಂಶವಾಹಿ ಪರೀಕ್ಷೆಗೆ ಆರೋಗ್ಯ ಇಲಾಖೆ(Department of Health) ಕ್ರಮ ವಹಿಸಿದೆ. ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬೆಳಗಿನ ಜಾವ ಆಗಮಿಸಿದ್ದ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ರಾಜ್ಯ ಸರ್ಕಾರದ(Government of Karnataka) ನಿಯಮದಂತೆ ಮತ್ತೊಮ್ಮೆ ನಿಲ್ದಾಣದಲ್ಲಿಯೇ ಸೋಂಕು ಪರೀಕ್ಷೆ(Covid Test) ನಡೆಸಲಾಗಿತ್ತು. ನಗರದ ರಾಜಾಜಿನಗರ ಮೂಲದ 43 ಮತ್ತು 50 ವರ್ಷದ ಇಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಆ ಇಬ್ಬರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಕರೆತರಲಾಗಿದೆ. 

Covid-19 Vaccine Certificate: 2 ಡೋಸ್‌ ಪಡೆದಿದ್ರೂ ಸಿಗ್ತಿಲ್ಲ ಪ್ರಮಾಣಪತ್ರ..!

ವಂಶವಾಹಿ ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ(Lab) ಸೋಂಕಿತರ ಗಂಟಲು ಮಾದರಿಯನ್ನು(Swab) ಕಳುಹಿಸಲಾಗಿದೆ. ಸದ್ಯ ಅವರಲ್ಲಿ ಸೋಂಕು ಲಕ್ಷಣಗಳಿಲ್ಲ. ವಂಶವಾಹಿ ವರದಿ ಬರುವವರೆಗೂ ಮತ್ತು ಕೊರೊನಾ ಸೋಂಕು ನೆಗೆಟಿವ್‌ ಆಗುವವರೆಗೂ ಆಸ್ಪತ್ರೆಯಲ್ಲಿರಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಒಬ್ಬ ಕೆಲ ಕಾಲ ನಾಪತ್ತೆ:

ವಿಮಾನ ನಿಲ್ದಾಣದಲ್ಲಿ ಸೋಂಕು ದೃಢಪಟ್ಟ ಇಬ್ಬರ ಪೈಕಿ ಒಬ್ಬ ವ್ಯಕ್ತಿ ಆರೋಗ್ಯಾಧಿಕಾರಿಗಳ ಸಂಪರ್ಕಕ್ಕೆ ತಕ್ಷಣ ಸಿಕ್ಕಿಲ್ಲ. ದೂರವಾಣಿ ಕರೆಯನ್ನೂ ಸ್ವೀಕರಿಸಲಿಲ್ಲ. ಇದರಿಂದಾಗಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೆಲ ಸಮಯದ ಬಳಿಕ ಸಂಪರ್ಕಕ್ಕೆ ಬಂದಿದ್ದು, ಸುರಕ್ಷಿತವಾಗಿ ಸಾಂಸ್ಥಿಕ ಕ್ವಾರಂಟೈನ್‌(Quarantine) ಮಾಡಲಾಗಿದೆ. ಚಿಕಿತ್ಸೆ ಅಥವಾ ಆರೈಕೆಗೆ ಆ ಪ್ರಯಾಣಿಕ ನಿರಾಕರಿಸಿಲ್ಲ, ಮಾಹಿತಿ ಕೊರತೆಯಿಂದ ಗೊಂದಲ ಉಂಟಾಗಿತ್ತು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹೈರಿಸ್ಕ್‌ ದೇಶಗಳಿಂದ ಬಂದವರ ವರದಿ ನೆಗೆಟಿವ್‌ ಇದ್ರೂ ಆರ್‌ಟಿಪಿಸಿಆರ್‌ ಟೆಸ್ಟ್‌

ದಕ್ಷಿಣ ಆಫ್ರಿಕಾ(South Africa) ಸೇರಿದಂತೆ ಅಪಾಯಕಾರಿ ದೇಶಗಳಿಂದ ಬಂದವರ ಕೋವಿಡ್‌ ಪರೀಕ್ಷಾ ವರದಿ ನೆಗೆಟಿವ್‌ ಇದ್ದರೂ ಮತ್ತೊಮ್ಮೆ ಆರ್‌ಟಿಪಿಸಿಆರ್‌(RTPCR) ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಬಿಬಿಎಂಪಿ(BBMP) ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gaurav Gupta) ತಿಳಿಸಿದರು.

ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ, ನಗರಕ್ಕೆ ಬರುವ ಎಲ್ಲ ಅಂತಾರಾಷ್ಟ್ರೀಯ ಮಟ್ಟದ ಪ್ರಯಾಣಿಕರಿಗೆ ಎರಡು ಲಸಿಕೆ(Vaccine) ಮತ್ತು ಕೋವಿಡ್‌ ಆರ್‌ಟಿಪಿಸಿಆರ್‌ ಆಗಿದೆಯೇ ಎಂಬುದನ್ನು ತಪಾಸಣೆ ಮೂಲಕ ಖಚಿತಪಡಿಸಿಕೊಳ್ಳುತ್ತೇವೆ. ನಗರಕ್ಕೆ ಯಾರೇ ಬಂದರೂ ಅವರು ಎರಡು ಲಸಿಕೆ ಪಡೆದಿರುವುದು ಮತ್ತು 72 ಗಂಟೆಗಳೊಳಗೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಂಡಿರುವ ವರದಿ ತರುವುದು ಕಡ್ಡಾಯವಾಗಿದೆ. ಆದರೆ ಅಪಾಯಕಾರಿ ದೇಶಗಳಿಂದ ಬಂದವರ ಕೋವಿಡ್‌ ವರದಿ ನೆಗೆಟಿವ್‌ ಇದ್ದರೂ ಮತ್ತೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸುತ್ತೇವೆ ಎಂದು ಹೇಳಿದರು.

ಉಳಿದಂತೆ ಕೋವಿಡ್‌ ಪಾಸಿಟಿವ್‌ ವರದಿ ಬಂದಂತಹ ಆಯ್ದ ಕೆಲವರ ಮಾದರಿಗಳನ್ನು ಜಿನೊಮ್‌ ಸಿಕ್ವೆನ್ಸಿಂಗ್‌ಗೆ ತೆಗೆದುಕೊಳ್ಳುತ್ತೇವೆ. ಅಪಾಯಕಾರಿ ದೇಶಗಳಿಂದ ಬಂದವರಲ್ಲಿ ಪಾಸಿಟಿವ್‌ ಬಂದ ಎಲ್ಲ ಮಾದರಿಗಳನ್ನು ಜಿನೊಮ್‌ ಸಿಕ್ವೆನ್ಸಿಂಗ್‌ಗೆ ಕಳುಹಿಸುತ್ತೇವೆ. ಜರ್ಮನಿಯಿಂದ ನಗರಕ್ಕೆ ಬಂದಿದ್ದ ಬೆಂಗಳೂರು ಮೂಲಕ ವ್ಯಕ್ತಿ ನಾಪತ್ತೆ ಆಗಿರಲಿಲ್ಲ. ಅವರ ಸಂಪರ್ಕಿಸಿದ್ದು ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದೆ ಎಂದು ತಿಳಿಸಿದರು.

ಒಮಿಕ್ರೋನ್‌ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದೊಂದಿಗೆ(Central Government) ಹೊಂದಾಣಿಕೆ ಮಾಡಿಕೊಂಡು ಹೋಗುವ ಕುರಿತು ರಾಜ್ಯ ಸರ್ಕಾರದ ಮಟ್ಟದಲ್ಲಿ ಸಮಾಲೋಚನೆ ಮಾಡಲಾಗಿದೆ. ನಗರ ಮತ್ತು ಮಹಾನಗರ ಮಟ್ಟದಲ್ಲಿ ಆಗುವಂತಹ ಬೆಳವಣಿಗೆಗಳ ಕುರಿತು ಮಾಹಿತಿ ಸಂಗ್ರಹಿಸಲಾಗುವುದು. ಎಲ್ಲ ಕಡೆ ಕೋವಿಡ್‌ ಸಂಪರ್ಕಿತರ ಪತ್ತೆ, ಕಂಟೈನ್ಮೆಂಟ್‌ ವಲಯ ಗುರುತಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳ ಕುರಿತು ಸರ್ಕಾರಗಳಿಗೆ ಮಾಹಿತಿ ನೀಡಿದ್ದೇವೆ. ಮುಖ್ಯವಾಗಿ ಕೋವಿಡ್‌ ಪರೀಕ್ಷೆ ಹೆಚ್ಚಿಸಿದ್ದು ನಿತ್ಯ 50 ಸಾವಿರಕ್ಕೂ ಹೆಚ್ಚು ಪರೀಕ್ಷೆ ನಡೆಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

Covid Crisis In Karnataka: ಮತ್ತೊಮ್ಮೆ ಲಾಕ್ ಆಗುತ್ತಾ ರಾಜ್ಯ : ಸಿಎಂ ಶೀಘ್ರ ನಿರ್ಧಾರ

ಹೈರಿಸ್ಕ್‌ ದೇಶದಿಂದ ಬರುವ ಸೋಂಕಿತರಿಗೆ ಬೌರಿಂಗ್‌, ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ

ಒಮಿಕ್ರೋನ್‌ ಸೋಂಕು ದೃಢಪಟ್ಟ ಹೈರಿಸ್ಕ್‌ ದೇಶಗಳಿಂದ ಆಗಮಿಸಿದವರಲ್ಲಿ ಸೋಂಕು ದೃಢಪಟ್ಟರೆ ಬೆಂಗಳೂರಿನಲ್ಲಿ ಬೌರಿಂಗ್‌ ಆಸ್ಪತ್ರೆ(Bowring Hospital), ಮಂಗಳೂರಿನಲ್ಲಿ ವೆನ್‌ಲಾಕ್‌ ಆಸ್ಪತ್ರೆಗೆ(Wenlock Hospital) ದಾಖಲಿಸಿ ಚಿಕಿತ್ಸೆ ನೀಡುವಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ರಾಜ್ಯದಲ್ಲಿರುವ ಬೆಂಗಳೂರು ಮತ್ತು ಮಂಗಳೂರಿನ ವಿಮಾನ ನಿಲ್ದಾಣಗಳಲ್ಲಿ ವಿದೇಶಿ ಪ್ರಯಾಣಿಕರ ಸೋಂಕು ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆ ವೇಳೆ ಸೋಂಕು ದೃಢಪಟ್ಟರೆ ವಿಮಾನ ನಿಲ್ದಾಣದಿಂದ ನೇರವಾಗಿ ನಿಗದಿ ಪಡಿಸಿದ ಆಸ್ಪತ್ರೆ ವರ್ಗಾಯಿಸಬೇಕು. ಇದಕ್ಕಾಗಿ ಈ ಎರಡೂ ಆಸ್ಪತ್ರೆಗಳು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು. ಕೊರೊನಾ ಸೋಂಕು ದೃಢಪಟ್ಟವರು, ಒಮಿಕ್ರೋನ್‌ ದೃಢಪಟ್ಟವರು ಹಾಗೂ ವಿದೇಶದಿಂದ ಬಂದು ಸೋಂಕು ದೃಢಪಟ್ಟವರಿಗೆಂದು ಪ್ರತ್ಯೇಕ ವಾರ್ಡ್‌ಗಳನ್ನು ವ್ಯವಸ್ಥೆ ಮಾಡಬೇಕು. ಸದ್ಯ ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಯಂತೆ ಚಿಕಿತ್ಸೆ ನೀಡಬೇಕು ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್‌ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
 

click me!