Corona Crisis : ಇನ್ನೂ ಮೂರ್ನಾಲ್ಕು ತಿಂಗಳಷ್ಟೆ ಕೊರೋನಾ ಇರುತ್ತದೆ : ಗುರೂಜಿ ಭವಿಷ್ಯ

By Kannadaprabha NewsFirst Published Dec 12, 2021, 6:49 AM IST
Highlights
  • ಮುಂಬರುವ ಮಾರ್ಚ್ -  ಮೇ ತಿಂಗಳ ವರೆಗೆ ಕೊರೋನಾ ಮುಂದುವರಿಯಲಿದೆ
  • ದತ್ತಪೀಠ ಸೇರಿದಂತೆ ಗಿರಿಪ್ರದೇಶದಲ್ಲಿ ಶನಿವಾರ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ  ವಿನಯ್‌ ಗುರೂಜಿ

ಚಿಕ್ಕಮಗಳೂರು (ಡಿ.12): ಮುಂಬರುವ ಮಾರ್ಚ್ -  ಮೇ  ತಿಂಗಳ ವರೆಗೆ ಕೊರೋನಾ (Corona) ಮುಂದುವರಿಯಲಿದೆ ಎಂದು ಗೌರಿಗದ್ದೆ ಆಶ್ರಮದ ಅವಧೂತ ವಿನಯ್‌ ಗುರೂಜಿ (Vinay Guruji) ಹೇಳಿದರು.  ದತ್ತಪೀಠ ಸೇರಿದಂತೆ ಗಿರಿ ಪ್ರದೇಶದಲ್ಲಿ ಶನಿವಾರ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 3-4 ತಿಂಗಳ ನಂತರ ಈ ಪರಿಸ್ಥಿತಿಯಿಂದ ಹೊರಗೆ ಬರುತ್ತೇವೆ. ನಾನು ಮೆಡಿಟೇಷನ್‌ ಮಾಡಿದಂತೆ ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.  ಮನುಷ್ಯನಿಗೆ ವಿಲ್‌ ಪವರ್‌ (Will Power) ದೊಡ್ಡ ಪವರ್‌. ಜನ ಆತ್ಮವಿಶ್ವಾಸ ಕಳೆದುಕೊಳ್ಳುವುದು ಬೇಡ, ಎಲ್ಲವನ್ನೂ ದೇವರು ಮಾಡಲಿ. ಮ್ಯಾಜಿಕ್‌ ಆಗಲಿ, ಪವಾಡ ಆಗಲಿ ಅಂದ್ರೆ ಆಗಲ್ಲ, ನಮ್ಮ ಪ್ರಯತ್ನವೇ ನಿಜವಾದ ಪವಾಡ. ಜನ, ಸರ್ಕಾರ, ಪಕ್ಷಗಳು ಎಲ್ಲರೂ ದೂರಿಕೊಳ್ಳುವುದು ಸರಿಯಲ್ಲ. ಎಲ್ಲ ಜನರನ್ನು ರಕ್ಷಿಸಬೇಕು ಎಂದು ಒಮ್ಮತದಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಪ್ರಾಧಿಕಾರ ರಚನೆ: ದತ್ತಪೀಠ ಪ್ರಾಧಿಕಾರ ಮಾಡಿ ಇದನ್ನು ಅಭಿವೃದ್ಧಿ ಮಾಡಬೇಕು ಎಂದು ಹೇಳಿದ ವಿನಯ್‌ ಗುರೂಜಿ ಅವರು, ಈ ಸಂಬಂಧ ಮುಖ್ಯಮಂತ್ರಿ, ಪ್ರವಾಸೋದ್ಯಮ ಸಚಿವರಿಗೆ ಮನವಿ ಮಾಡಲಾಗುವುದು. ದತ್ತಪೀಠದಲ್ಲಿ ಶೌಚಾಲಯಗಳನ್ನು ಕ್ಲೀನ್‌ ಮಾಡಿ ಬಂದೆ. ವೀಕ್‌ ಎಂಡ್‌ ನಲ್ಲಿ 2000 ಅಧಿಕ ವಾಹನಗಳಲ್ಲಿ ಜನ ಇಲ್ಲಿಗೆ ಬರುತ್ತಾರೆ. ಗುರು ಅನ್ನೋದಕ್ಕಿಂತ ಜನಸಾಮಾನ್ಯನಾಗಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು.

ಮಹಿಳೆಯರಿಗೆ ಇನ್ನೂ ಹೆಚ್ಚು ಶೌಚಾಲಯ (Toilet) ನಿರ್ಮಿಸಿ ಕೊಡಲಿ, ದುಡ್ಡಿದ್ದವರು ರೆಸಾರ್ಟ್‌ಗೆ ಹೋಗ್ತಾರೆ, ಬಡವರು ಎಲ್ಲಿ ಹೋಗ್ತಾರೆ. ಬಡವರು ಟೂರ್‌ ಮಾಡಬಾರದು ಎಂದು ರೂಲ್‌ ಇಲ್ಲ, ಸಂಬಂಧಪಟ್ಟವರಿಗೆ ಖುದ್ದು ನಾನೇ ಪತ್ರ ಬರೆಯುತ್ತೇನೆ. ಸ್ಪಂದಿಸಿ, ಮುಂದಿನ ವರ್ಷದೊಳಗೆ ವ್ಯವಸ್ಥೆ ಮಾಡಲಿ ಎಂದರು.

 ದತ್ತಪೀಠ ಆಸ್ತಿ, ಇದನ್ನು ಎಲ್ಲರೂ ಕಾಪಾಡಬೇಕು :    ಗಿರಿ ಪ್ರದೇಶಕ್ಕೆ ಬರುವ ಪ್ರವಾಸಿಗರು ಎಲ್ಲೆಂದರಲ್ಲಿ ಬಿಸಾಡಿದ ತ್ಯಾಜ್ಯ ವಸ್ತುಗಳನ್ನು ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮದ ಅವಧೂತರಾದ ವಿನಯ್‌ ಗುರೂಜಿ ಅವರ ನೇತೃತ್ವದಲ್ಲಿ ನೂರಾರು ಜನರು ಶ್ರಮದಾನದ ಮೂಲಕ ಶನಿವಾರ ಸ್ವಚ್ಛಗೊಳಿಸಿದರು. ಮಹಾತ್ಮ ಗಾಂಧಿ (Mahathma Gandhi) ಸೇವಾ ಟ್ರಸ್ಟ್‌, ಜಿಲ್ಲಾಡಳಿತ, ಪೊಲೀಸ್‌(Police) ಇಲಾಖೆ, ಅರಣ್ಯ ಇಲಾಖೆ, ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು ನಗರಸಭೆ ಹಾಗೂ ಇತರೆ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸ್ವಚ್ಚತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಿಗ್ಗೆ ದಟ್ಟವಾದ ಇಬ್ಬನಿಯ ಮೋಡ, ನಿರಂತರವಾಗಿ ಬೀಸುತ್ತಿರುವ ಥಂಡಿ ಗಾಳಿಯ ನಡುವೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು, ಸ್ವಯಂ ಸೇವಕರು ಇಲ್ಲಿನ ಕೈಮರ ಚಕ್‌ ಪೋಸ್ಟ್‌ನಿಂದ ರಸ್ತೆಯ ಉದ್ದಕ್ಕೂ ಗಿರಿಯಲ್ಲಿ ಸಂಚರಿಸಿ ದಾರಿಯಲ್ಲಿ ಸಿಕ್ಕಿರುವ ಬಿಯರ್‌ ಬಾಟಲಿ, ಪ್ಲಾಸ್ಟಿಕ್‌ ಸೇರಿದಂತೆ ಇತರೆ ವಸ್ತುಗಳನ್ನು ಸಂಗ್ರಹಿಸಿದರು. ಸುಮಾರು 20 ವಾಹನಗಳಷ್ಟುಕಸವನ್ನು ಸಂಗ್ರಹ ಮಾಡಲಾಯಿತು.

ದತ್ತಪೀಠಕ್ಕೆ (Dattapeetha) ಬರುವ ಭಕ್ತರ ಉಪಯೋಗಕ್ಕಾಗಿ ನಿರ್ಮಾಣ ಮಾಡಲಾಗಿರುವ ಶೌಚಾಲಯಗಳಿಗೆ ವಿನಯ್‌ ಗುರೂಜಿ ಅವರು ಸ್ವತಹ ನೀರು ಹಾಕಿ ಶುಚಿಗೊಳಿಸಿದರು. ಇದೇ ವೇಳೆಯಲ್ಲಿ ಕೈಯಲ್ಲಿ ಪರಕೆ ಹಿಡಿದು ಕಸವನ್ನು ಗುಡಿಸಿದರು. ಇದಕ್ಕೆ ವಿವಿಧ ಇಲಾಖೆಯ ಅಧಿಕಾರಿ, ನೌಕರರು, ಸ್ವ ಯಂ ಸೇವಕರು ಕೈ ಜೋಡಿಸಿದರು.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ್‌ ಗುರೂಜಿ, ಮನಸ್ಸು ಕೆಟ್ಟಾಗ ಶ್ರದ್ಧೆ ಜಾಸ್ತಿ ಆಗಲು ಮನುಷ್ಯ ದೇವಸ್ಥಾನ, ಪ್ರಾರ್ಥನಾ ಮಂದಿರಗಳಿಗೆ ಹೋಗುತ್ತಾನೆ. ಮುನ್ಸಿಪಾಲಿಟಿ, ಬೀದಿಯನ್ನು ಹೇಗೆ ಸ್ವಚ್ಛ ಮಾಡುತ್ತೋ, ಪ್ರಾರ್ಥನಾ ಮಂದಿರಗಳು ಭಾವನೆಯನ್ನು ಸ್ವಚ್ಛ ಮಾಡುತ್ತವೆ ಎಂದರು.

ಭಾರತ ಶಕ್ತಿಪೀಠ, ಇಲ್ಲಿ, ಮಠ ಮಂದಿರ, ಪವಿತ್ರ ನದಿಗಳು ಇವೆ. ಅವುಗಳನ್ನು ಮಹಾತ್ಮ ಗಾಂಧಿ ಸೇವಾ ಟ್ರಸ್ಟ್‌ ವತಿಯಿಂದ ಸ್ವಚ್ಚಗೊಳಿಸುವ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. ಗಾಂಧಿ ಜಯಂತಿ ದಿನದಂದು ಬೆಂಗಳೂರು ನಗರ ಸ್ವಚ್ಚ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರ ಮುಂದುವರೆದ ಭಾಗವಾಗಿ ರಾಜ್ಯದ ಜಿಲ್ಲಾ ಕೇಂದ್ರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ದೇವಸ್ಥಾನಕ್ಕೆ (Temple) ಹೋಗಿ ಹೂವು ಇಡುವ ಬದಲು ದೇವಸ್ಥಾನ ಶುಚಿಯಾಗಿಡಲು ಆಶ್ರಮದಿಂದ ಆಂದೋಲನಾ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ದತ್ತಪೀಠ ಪ್ರವಾಸಿ ಕೇಂದ್ರ, ಶ್ರದ್ಧಾ ಕೇಂದ್ರ. ದತ್ತಾತ್ರೇಯ, ಸೂಫಿ ಸಂತರ ಕೇಂದ್ರ, ಪಾವಿತ್ರ್ಯತೆಯಿಂದ ತನ್ನತ್ತ ಆಕರ್ಷಣೆ ಮಾಡುತ್ತಿದೆ. ಇದೊಂದು ಆಸ್ತಿ. ಇದನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ.ಪ್ರಕೃತಿ ಹಾಳು ಮಾಡಿದ ಪ್ರಭಾವವೇ ಕೊರೋನಾ. ಮನುಷ್ಯ ಹಾಳಾದಾಗ ಪ್ರಕೃತಿ ಹಾಳಾಗುತ್ತದೆ. ಪ್ರಕೃತಿ ಹಾಳಾದಾಗ ಮನುಷ್ಯನಿಗೆ ಕಾಯಿಲೆ ಬರುತ್ತದೆ. ದತ್ತಪೀಠದಲ್ಲಿ ಸ್ವಚ್ಛತೆಯೇ ನಿಜವಾದ ದತ್ತಜಯಂತಿ, ಎಲ್ಲದಿಕ್ಕೂ ಸರ್ಕಾರವನ್ನು ದೂರುವುದಲ್ಲ, ಪ್ರತಿ ತಿಂಗಳು ಈ ರೀತಿಯ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದರು.

ಚಿಕ್ಕಮಗಳೂರಿಗೆ ಬನ್ನಿ ಬೇಜರಿಲ್ಲ. ದತ್ತಪೀಠಕ್ಕೆ ಬನ್ನಿ, ಮನಸ್ಸಿಗೆ ಸಮಧಾನ ಸಿಗಬೇಕಾದರೆ ಈ ಪ್ರದೇಶ ಸ್ವಚ್ಛವಾಗಿರಬೇಕು. ದತ್ತಪೀಠದಲ್ಲಿ ದತ್ತಾತ್ರೇಯ ಗಿಡವನ್ನು ನೆಟ್ಟಿದ್ದೇವೆ. ಪ್ರತಿ ತಿಂಗಳು ಈ ರೀತಿಯ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಸ್ವಚ್ಚತಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್‌, ಕೋಟೆ ವಿನಯ್‌, ಚಂದ್ರಶೇಖರ್‌, ಡಾ. ಎಚ್‌.ಎಲ್‌. ನಾಗರಾಜ್‌, ಡಾ. ಮಂಜುನಾಥ್‌ ಹಾಗೂ ಸ್ವಯಂ ಸೇವಕರು ಪಾಲ್ಗೊಂಡಿದ್ದರು.

click me!