Covid Crisis: ಲಸಿಕೆ ಪಡೆಯದ, ಇತರೆ ಕಾಯಿಲೆಯಿಂದ ಬಳಲುವ ಜನರಿಗೆ 4ನೇ ಅಲೆ ‘ಡೇಂಜರ್‌’

By Girish GoudarFirst Published Apr 27, 2022, 4:28 AM IST
Highlights

*  ಎಲ್ಲರೂ ಲಸಿಕೆ ಪಡೆಯಲು ಜಾಗೃತಿ
*  ಬೆಂಗ್ಳೂರಲ್ಲಿ ಪರೀಕ್ಷೆ ಹೆಚ್ಚಳ: ವಿಶೇಷ ಆಯುಕ್ತ ತ್ರಿಲೋಕಚಂದ್ರ
*  ಮುನ್ನೆಚ್ಚರಿಕೆಯಾಗಿ ಪ್ರತಿಯೊಬ್ಬರು ಕೋವಿಡ್‌ ನಿಯಮ ತಪ್ಪದೇ ಅನುಸರಿಸಬೇಕು
 

ಬೆಂಗಳೂರು(ಏ.27):  ಕೊರೋನಾ ನಾಲ್ಕನೇ ಅಲೆ(Covid 4th Wave) ಸಾಧ್ಯತೆ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್‌ ಪರೀಕ್ಷೆಗಳನ್ನು ಹೆಚ್ಚಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಆರೋಗ್ಯ) ಡಾ. ತ್ರಿಲೋಕಚಂದ್ರ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿತ್ಯ 3500ರಿಂದ 4500ರವರೆಗೆ ಕೋವಿಡ್‌ ಪರೀಕ್ಷೆ(Covid Test) ಮಾಡಲಾಗುತ್ತಿದೆ. ಸೋಂಕಿನ ಲಕ್ಷಣಗಳು ಇರುವವರಿಗೆ, ‘ಸಾರಿ’, ಐಎಲ್‌ಐ ಮತ್ತು ಆಸ್ಪತ್ರೆಗೆ ದಾಖಲಾಗುತ್ತಿರುವವರ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗುತ್ತಿದೆ. ಪ್ರತಿ ದಿನ ಸಂಗ್ರಹಿಸಲಾದ ಸ್ಕ್ಯಾಬ್‌ ಮಾದರಿಯನ್ನು ಜಿನೊಮ್‌ ಸಿಕ್ವೆನ್ಸಿಂಗ್‌ಗೆ ಕಳುಹಿಸುತ್ತಿದ್ದೇವೆ. ಈವರೆಗೂ ಕೋವಿಡ್‌ ರೂಪಾಂತರ ಹೊಸ ತಳಿ ಪತ್ತೆಯಾಗಿಲ್ಲ ಎಂದು ಹೇಳಿದರು.

Covid Crisis: ತಮಿಳುನಾಡು, ದಿಲ್ಲಿಯಲ್ಲಿ ಮತ್ತೆ ಕಠಿಣ ನಿರ್ಬಂಧ: ಮಾಸ್ಕ್‌ ಬಳಕೆ ಕಡ್ಡಾಯ

ಲಸಿಕೆ(Vaccine) ಪಡೆಯದವರು ಮತ್ತು ಇತರೆ ಕಾಯಿಲೆಗಳಿಂದ ಬಳಲುತ್ತಿರುವವರು ನಾಲ್ಕನೇ ಅಲೆಯಲ್ಲಿ ಹೆಚ್ಚು ಬಾಧಿತರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಈವರೆಗೂ ಪಾಲಿಕೆ(BBMP) ವ್ಯಾಪ್ತಿಯಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಮಂದಿ ದ್ವಿತೀಯ ಡೋಸ್‌ ಲಸಿಕೆ ಪಡೆದಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳ (PHC) ವ್ಯಾಪ್ತಿಯಲ್ಲಿ ಲಸಿಕೆ ಪಡೆದವರನ್ನು ಗುರುತಿಸಿ ಅವರಿಗೆ ಕರೆ ಮಾಡಿ ಮನೆಗೆ ಹೋಗಿ ಲಸಿಕೆ ಹಾಕುವ ಕಾರ್ಯ ಮಾಡಲಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿ 7 ಲಕ್ಷ ಜನರಿಗೆ ಮನವೊಲಿಸಿ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.

ಮೂರನೇ ಅಲೆಯಲ್ಲಿ ಮೊಬೈಲ್‌ ಟ್ರೇಸಿಂಗ್‌ ಯೂನಿಟ್‌ ಮೂಲಕ ಜನರ ಮನೆ ಮನೆಗೆ ಹೋಗಿ ಟ್ರಯಾಜಿಂಗ್‌ ಮೂಲಕ ಹೋಂ ಐಸೋಲೇಷನ್‌(Home Isolation) ಅಥವಾ ಆಸ್ಪತ್ರೆಗೆ ದಾಖಲು ಮಾಡುವ ಕೆಲಸ ಮಾಡಿದ್ದೇವೆ. ಈ ಬಾರಿಯೂ ಅದೇ ಮಾದರಿಯಲ್ಲಿ ಕೆಲಸ ಮಾಡಲು ಅಗತ್ಯ ಕ್ರಮಕೈಗೊಂಡಿದ್ದೇವೆ. ಹೆಚ್ಚು ಪ್ರಕರಣಗಳು ವರದಿಯಾಗಿರುವ ಮಹದೇವಪುರ ಮತ್ತು ಪೂರ್ವ ವಲಯದಲ್ಲಿ ಕೊರೋನಾ(Coronavirus) ಪರೀಕ್ಷೆ ಹೆಚ್ಚಿಸಿದ್ದೇವೆ. ಪ್ರಸ್ತುತ ಬೆಂಗಳೂರಿನಲ್ಲಿ(Bengaluru) 60ರಿಂದ 80 ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿದ್ದು, ಬಹುತೇಕ ಸೌಮ್ಯ ಲಕ್ಷಣಗಳು ಇರುವುದು ಕಂಡು ಬಂದಿದೆ. ಆದರೂ ಮುನ್ನೆಚ್ಚರಿಕೆಯಾಗಿ ಪ್ರತಿಯೊಬ್ಬರು ಕೋವಿಡ್‌ ನಿಯಮಗಳನ್ನು ತಪ್ಪದೇ ಅನುಸರಿಸಬೇಕು ಎಂದು ಹೇಳಿದರು.
 

click me!