ಡಿ.ಜೆ.ಹಳ್ಳಿ ಗಲಭೆ ಪ್ರಕರಣ: ಮಾಜಿ ಕಾರ್ಪೊರೇಟರ್‌ಗಿಲ್ಲ ಬೇಲ್‌

By Kannadaprabha NewsFirst Published Oct 29, 2020, 9:29 AM IST
Highlights

ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಅಬ್ದುಲ್‌ ರಕೀಬ್‌ ಜಾಕೀರ್‌ ಹಾಗೂ ಸೋದರ ಯಾಸೀರ್‌ ಮೊಹಮ್ಮದ್‌ ಹಮೀದ್‌| ಅರ್ಜಿ ವಿಚಾರಣೆ ನಡೆಸಿದ 71ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ|  ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಕೋರ್ಟ್‌| 

ಬೆಂಗಳೂರು(ಅ.29): ನಗರದ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್‌ಮೂರ್ತಿ ಅವರ ಮನೆ ಮೇಲೆ ದಾಳಿ ನಡೆಯಲು ಕುಮ್ಮಕ್ಕು ನೀಡಿದ ಆರೋಪದಲ್ಲಿ ಬಂಧನ ಭೀತಿ

ಎದುರಿಸುತ್ತಿರುವ ಮಾಜಿ ಕಾರ್ಪೊರೇಟರ್‌ ಅಬ್ದುಲ್‌ ರಕೀಬ್‌ ಜಾಕೀರ್‌ ಹಾಗೂ ಸೋದರ ಯಾಸೀರ್‌ ಮೊಹಮ್ಮದ್‌ ಹಮೀದ್‌ಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ನಗರದ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ನಿರಾಕರಿಸಿದೆ.
ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಗರದ 71ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತು.

ಬೆಂಗಳೂರು ಗಲಭೆ ಪ್ರಕರಣ: ಸಂಪತ್‌ ರಾಜ್‌ಗೆ ನಿರೀಕ್ಷಣಾ ಜಾಮೀನು ನೀಡಬೇಡಿ

ವಿಚಾರಣೆ ವೇಳೆ ಆರೋಪಿತರ ಪರ ವಾದ ಮಂಡಿಸಿದ ವಕೀಲರು, ಅರ್ಜಿದಾರರ ವಿರುದ್ಧದ ಆರೋಪಗಳು ನಿರಾಧಾರವಾಗಿದ್ದು, ಪೊಲೀಸರ ತನಿಖೆಗೆ ಸಹಕಾರ ನೀಡುತ್ತಿದ್ದಾರೆ. ಅವರು ತಲೆ ಮರೆಸಿಕೊಳ್ಳಲು ಪ್ರಯತ್ನಿಸುವುದಿಲ್ಲ. ಹೀಗಾಗಿ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಿಶೇಷ ಅಭಿಯೋಜಕ ಪಿ. ಪ್ರಸನ್ನ ಕುಮಾರ್‌, ಆರೋಪಿತರ ವಿರುದ್ಧ ದಾಖಲಿಸಿರುವಂತಹ ದೂರು ಗುರುತರವಾದದ್ದು. ಆರೋಪಿತರು ಪೊಲೀಸರ ತನಿಖೆಗೆ ಸೂಕ್ತ ಸಹಕಾರ ನೀಡಿಲ್ಲ. ಶಾಸಕರ ಮನೆಗೆ ಬೆಂಕಿ ಹಚ್ಚುವಲ್ಲಿ ಇವರ ಪಾತ್ರವಿದ್ದು ತನಿಖೆ ನಡೆಯುತ್ತಿದೆ. ಆದ್ದರಿಂದ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಾಧೀಶರು ಆರೋಪಿಗಳ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ವಿಚಾರಣೆ ನವೆಂಬರ್‌ 4ಕ್ಕೆ ಮುಂದೂಡಿದರು.
 

click me!