14 ದಿನಗಳ ಕ್ವಾರಂಟೈನ್‌ಗೆ ಹೆದರಿ ವಾಪಸ್ ಆಂಧ್ರಪ್ರದೇಶಕ್ಕೆ ತೆರಳಿದ ದಂಪತಿ| ಜೋಳದರಾಶಿ ಚೆಕ್‌ಪೋಸ್ಟ್‌ನಲ್ಲಿ ಘಟನೆ| ಮಲ್ಲಿಕಾರ್ಜುನ ಹಾಗೂ ಕಲಾವತಿ ದಂಪತಿ ಆಂಧ್ರಕ್ಕೆ ಮರಳಿ ಹೋದ ದಂಪತಿ| ಲಾಕ್‌ಡೌನ್ ಮುಂಚೆ ಆಂಧ್ರದ ಕರ್ನೂಲ್ ಜಿಲ್ಲೆಯ ಡೋನ್ ಗ್ರಾಮದಲ್ಲಿರುವ ಮಗಳ ಮನೆಗೆ ತೆರಳಿದ್ದ ದಂಪತಿ|
ಬಳ್ಳಾರಿ(ಮೇ.10): 14 ದಿನಗಳ ಕ್ವಾರಂಟೈನ್‌ಗೆ ಹೆದರಿ ತಾಲೂಕಿನ ಚಾನಾಳ್ ಗ್ರಾಮದ ಕುಟುಂಬವೊಂದು 110 ಕಿಮೀ ದೂರದ ಆಂಧ್ರಪ್ರದೇಶಕ್ಕೆ ವಾಪಸ್ ತೆರಳಿದ ಘಟನೆ ಶನಿವಾರ ನಡೆದಿದೆ.
ಮಲ್ಲಿಕಾರ್ಜುನ ಹಾಗೂ ಕಲಾವತಿ ದಂಪತಿ ಲಾಕ್‌ಡೌನ್ ಮುಂಚೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಡೋನ್ ಗ್ರಾಮದಲ್ಲಿರುವ ಮಗಳ ಮನೆಗೆ ತೆರಳಿದ್ದರು. ಮತ್ತೆ ತಮ್ಮೂರಿಗೆ ಮರಳು ಅಲ್ಲಿನ ಜಿಲ್ಲಾಧಿಕಾರಿಯಿಂದ ಪಾಸ್ ಪಡೆದು ಆಗಮಿಸಿದ್ದರು. ತಾಲೂಕಿನ ಜೋಳದರಾಶಿ ಗ್ರಾಮದ ಬಳಿ ಅಂತರರಾಜ್ಯ ಚೆಕ್‌ಪೋಸ್ಟ್‌ನಲ್ಲಿ ಇವರನ್ನು ತಡೆಯಲಾಗಿದ್ದು, 14 ದಿನ ಕ್ವಾರಂಟೈನ್ ಇರುವುದಾದರೆ ಮಾತ್ರ ಸ್ವಗ್ರಾಮಕ್ಕೆ ತೆರಳಲು ಅವಕಾಶ ನೀಡಲಾಗುವುದು ಎಂದು ಸ್ಥಳೀಯ ವೈದ್ಯಕೀಯ ಸಿಬ್ಬಂದಿ ಹಾಗೂ ಚೆಕ್‌ಪೋಸ್ಟ್‌ಗೆ ನಿಯೋಜನೆಗೊಂಡಿದ್ದ ಇತರೆ ಅಧಿಕಾರಿಗಳು ತಿಳಿಸಿದರು. ಇದರಿಂದ ಆತಂಕಗೊಂಡ ಚಾನಾಳ್ ಗ್ರಾಮದ ದಂಪತಿ ಮರಳಿ ಆಂಧ್ರಪ್ರದೇಶದಲ್ಲಿನ ಮಗಳ ಊರಿಗೆ ತೆರಳಿದ್ದಾರೆ.
ದುಡ್ಡು ಕೊಟ್ರೆ ಐಷಾರಾಮಿ ಲಾಡ್ಜ್‌ನಲ್ಲಿ ಕ್ವಾರಂಟೈನ್ ವ್ಯವಸ್ಥೆ..!
ಇದೇ ವೇಳೆ ಸ್ಥಳೀಯ ವೈದ್ಯಕೀಯ ಸಿಬ್ಬಂದಿ ಈ ದಂಪತಿಗೆ ತಿಳಿಸಿ ಹೇಳಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. 14 ದಿನಗಳ ಕಾಲ ಕ್ವಾರಂಟೈನ್ ಆಗಿಬಿಡಿ. ಮತ್ತೆ ಅಷ್ಟೊಂದು ದೂರ ಏಕೆ ಹೋಗುತ್ತೀರಿ? ಕ್ವಾರಂಟೈನ್‌ನಿಂದ ನಿಮಗ್ಯಾವ ಸಮಸ್ಯೆಯಾಗುವುದಿಲ್ಲ ಎಂದು ತಿಳಿಸಿ ಹೇಳಿದರು ಒಪ್ಪದ ಮಲ್ಲಿಕಾರ್ಜುನ ದಂಪತಿ, 14 ದಿನಗಳ ಕಾಲ ಇರುವುದು ಹೇಗೆ? ನಮಗೆ ಹೊಸದು. ಯಾಕೆ ಬೇಕು. ಮಗಳ ಊರಲ್ಲಿ ಇನ್ನಷ್ಟು ದಿನ ಇರುತ್ತೇವೆ. ಎಲ್ಲ ಸರಿಯಾದ ಬಳಿಕ ಮರಳುತ್ತೇವೆ ಎಂದು ಹೇಳಿ ಮತ್ತೆ ಆಂಧ್ರಪ್ರದೇಶದ ಕಡೆ ಹೋಗಿದ್ದಾರೆ.