
ಮೈಸೂರು: ದಸರಾ 2026ಕ್ಕೆ ಕೌಂಟ್‌ಡೌನ್ ಶುರುವಾಗಿದೆ. ನಾಡಹಬ್ಬ ದಸರಾ ಮಹೋತ್ಸವದ ಆಹ್ವಾನ ಪತ್ರಿಕೆ ಪ್ರಕಟವಾಗಿದ್ದು, ಅಕ್ಟೋಬರ್ 11ರಿಂದ 21ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಾಗಲಿದ್ದು, ಅಕ್ಟೋಬರ್ 21ರಂದು ವಿಜಯ ದಶಮಿಯ ಜಂಬೂ ಸವಾರಿಯೊಂದಿಗೆ ದಸರಾ ಸಂಭ್ರಮ ಕಳೆಕಟ್ಟಲಿದೆ. ಈ ಬಾರಿಯ ದಸರಾ ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ.
ಅಕ್ಟೋಬರ್ 11ರಂದು ಬೆಳಗ್ಗೆ 11:50ರಿಂದ 12:13ರ ಶುಭ ಧನುರ್ ಲಗ್ನದಲ್ಲಿ ದಸರಾ ಉದ್ಘಾಟನೆಗೊಳ್ಳಲಿದ್ದು, ಚಾಮುಂಡಿ ಬೆಟ್ಟದಲ್ಲಿ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಂದ ದಸರಾ ಉದ್ಘಾಟನೆ ನಡೆಯಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಡಿಸಿಎಂ ಜಿ. ಪರಮೇಶ್ವರ್ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಅರಮನೆ ಆವರಣದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಘು ದೀಕ್ಷಿತ್, ಸಿದ್ ಶ್ರೀರಾಮ್, ಶಾನ್, ಜಾಸ್ಮಿನ್ ಸ್ಯಾಂಡ್ಲಾಸ್ ಸೇರಿದಂತೆ ಖ್ಯಾತ ಕಲಾವಿದರಿಂದ ಸಂಗೀತ ಸಂಜೆ ಆಯೋಜಿಸಲಾಗಿದೆ. ಯುವ ದಸರಾ, ಮಹಿಳಾ ದಸರಾ, ರೈತ ದಸರಾ, ಮಕ್ಕಳ ದಸರಾ, ಯೋಗ ದಸರಾ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಆಹಾರ ಮೇಳ, ಪುಸ್ತಕ ಮೇಳ, ಫಲಪುಷ್ಪ ಪ್ರದರ್ಶನ ಮತ್ತು ಕೃಷಿ ವಸ್ತು ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿ ದಸರಾ ಮಹೋತ್ಸವದಲ್ಲಿ ಕಂಬಳವೂ ಪ್ರಮುಖ ಆಕರ್ಷಣೆಯಾಗಲಿದೆ. ಅಕ್ಟೋಬರ್ 18 ಮತ್ತು 19ರಂದು ಸಾತಗಳ್ಳಿಯಲ್ಲಿ ಕಂಬಳ ಸ್ಪರ್ಧೆ ನಡೆಯಲಿದೆ. ಅದೇ ರೀತಿ ಈ ಬಾರಿ ಬನ್ನಿಮಂಟಪದಲ್ಲಿ ಡ್ರೋನ್ ಶೋ ಕೂಡ ಆಯೋಜಿಸಲಾಗಿದೆ.
ಇನ್ನು ಅಕ್ಟೋಬರ್ 21ರಂದು ವಿಜಯದಶಮಿ ಸಂಭ್ರಮ ಇರಲಿದ್ದು, ಮಧ್ಯಾಹ್ನ 1:36ರಿಂದ 1:56ರ ಅವಧಿಯಲ್ಲಿ ಕೋಟೆ ಆಂಜನೇಯ ದೇವಾಲಯದ ಮುಂದೆ ನಂದಿಧ್ವಜ ಪೂಜೆ ನಡೆಯಲಿದೆ. ಸಂಜೆ 4:10ರಿಂದ 4:35ರೊಳಗೆ ಅರಮನೆ ಆವರಣದಲ್ಲಿ ಜಂಬೂಸವಾರಿಗೆ ಚಾಲನೆ ಸಿಗಲಿದೆ. ಶುಭ ಮೀನ ಲಗ್ನದಲ್ಲಿ ನಡೆಯಲಿರುವ ಜಂಬೂಸವಾರಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿಶೇಷ ಆಹ್ವಾನಿತರಾಗಿ ಭಾಗಿಯಾಗಲಿದ್ದಾರೆ. ರಾತ್ರಿ 7 ಗಂಟೆಗೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ನಡೆಯಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಗೌರವ ವಂದನೆ ಸ್ವೀಕರಿಸಲಿದ್ದಾರೆ.
ಒಟ್ಟಾರೆ ಅಕ್ಟೋಬರ್ 11ರಿಂದ 21ರವರೆಗೆ ಮೈಸೂರಿನಲ್ಲಿ ದಸರಾ ಸಂಭ್ರಮ ಇರಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮ, ಕಂಬಳ, ಡ್ರೋನ್ ಶೋ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳೊಂದಿಗೆ ಈ ಬಾರಿಯ ನಾಡಹಬ್ಬ ನಡೆಯಲಿದೆ. (ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು)