IAS ಶಾಲಿನಿ ರಜನೀಶ್ ವಿರುದ್ಧ ಕೊಟ್ಯಂತರ ರು. ಭ್ರಷ್ಟಾಚಾರ ಆರೋಪ

By Web DeskFirst Published Nov 27, 2019, 3:01 PM IST
Highlights

ಕೊಟ್ಯಂತರ ರು. ಅವ್ಯವಹಾರ ನಡೆಸಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ.

ತುಮಕೂರು (ನ.27) : ತುಮಕೂರು ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಕೋಟ್ಯಂತರ ರು. ಅವ್ಯವಹಾರ ನಡೆದಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ವಿರುದ್ಧ ಗುಡುಗಿದ್ದಾರೆ. 

ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಶಾಲಿನಿ ರಜನೀಶ್  ಹಂತ ಹಂತವಾಗಿ ಸ್ಮಾರ್ಟ್ ಸಿಟಿ ಮಾಡುವ ಬದಲು ಅವೈಜ್ಞಾನಿಕವಾಗಿ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಈ ಮೂಲಕ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಶಿವಣ್ಣ ಆರೋಪಿಸಿದರು. 

ಶಾಲಿನಿ ರಜನೀಶ್ ತುಮಕೂರು ಜಿಲ್ಲೆಗೆ ಬರಸಿಡಿಲು ಬಡಿದ ಹಾಗೆ ಬಂದಿದ್ದಾರೆ. ಆರೇಳು ವರ್ಷದಿಂದ ಸ್ಮಾರ್ಟ್ ಸಿಟಿ ಜಿಲ್ಲಾ ಉಸ್ತುವಾರಿ ಅಧಿಕಾರಿಯಾಗಿ ಠಿಕಾಣಿ ಹೂಡಿ, ಬಂದಂತಹ ಸರ್ಕಾರಗಳಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು‌.

ಸ್ಮಾರ್ಟ್ ಸಿಟಿ ಯೋಜನೆಯ ಸಾವಿರಾರು ಕೋಟಿ ಹಣಕ್ಕೆ ಬೆಂಗಳೂರಲ್ಲೇ  ತಮಗೆ ಬೇಕಾದವರಿಗೆ ಟೆಂಡರ್ ಕೊಟ್ಟು ಮನಸ್ಸೋ ಇಚ್ಚೆ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಅವ್ಯವಹಾರಕ್ಕೆ ನಾಂದಿ ಹಾಡಿದ್ದಾರೆ‌. ಇಂತಹ ಅವ್ಯವಹಾರ ನಡೆಸಿರುವ ಶಾಲಿನಿ ರಜನೀಶ್ ಸರ್ಕಾರ ಅಮಾನತಿನಲ್ಲಿಟ್ಟು ಸಿಬಿಐ ತನಿಖೆ ಮಾಡಬೇಕು ಎಂದು ಸೊಗಡು ಶಿವಣ್ಣ ಹೇಳಿದರು. 

ಅಮೃತ್ ಯೋಜನೆ, ಯುಜಿಡಿ ಎರಡನೇ ಹಂತ ಇವೆಲ್ಲವೂ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನ.  ಅದನ್ನೂ ಸ್ಮಾರ್ಟ್ ಸಿಟಿ ಕಾಮಗಾರಿಯೊಂದಿಗೆ ತೋರಿಸಿ, ಅವ್ಯವಹಾರ ಮಾಡಿದ್ದಾರೆ‌. ಸ್ಥಳೀಯರು, ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಲಹೆ ಪಡೆಯದೇ ದರ್ಪ ತೋರುತ್ತಿದ್ದಾರೆ ಶಾಲಿನಿ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಇಲ್ಲಿನ ರಸ್ತೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಂಡಿಲ್ಲ. ಅವರ ವಿರುದ್ಧ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳದೆ ಇದ್ದರೆ ಕಾನೂನು ಕೈಗೆ ತೆಗೆದುಕೊಳ್ಳಬೇಕಾಗುತ್ತದೆ.  ಕಾನೂನು ಸುವ್ಯವಸ್ಥೆಯನ್ನು ಬ್ರೇಕ್ ಮಾಡಬೇಕಾಗುತ್ತದೆ.  ಸ್ಮಾರ್ಟ್ ಸಿಟಿಗಳ ಕಾಮಗಾರಿಗಳ ಖರ್ಚು ವೆಚ್ಚವನ್ನ ಸೋಶಿಯಲ್ ಆಡಿಟ್ ಮಾಡಿಸಬೇಕು. 

ಆದರೆ ಶಾಲಿನಿ ರಜನೀಶ್ ಎಲ್ಲವನ್ನೂ ಗೌಪ್ಯವಾಗಿಟ್ಟಿದ್ದಾರೆ. ಸರ್ಕಾರದ ಯಾವುದೇ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳದೇ ದರ್ಪ ತೋರಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಈ ಕೂಡಲೇ ಶಾಲಿನಿ ರಜನೀಶ್ ರನ್ನ ಅಮಾನತ್ತಿನಲ್ಲಿಟ್ಟು ತನಿಖೆಗೆ ಮಾಡಬೇಕು ಎಂದು ಸೊಗಡು ಶಿವಣ್ಣ ಆಗ್ರಹಿಸಿದರು. 

click me!