ಲೋಪದೋಷಕ್ಕೆ ಕಾರಣವಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದೆ ಈ ರೀತಿ ಲೋಪದೋಷ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ರಾಜ್ಯ ಆಗ್ರಹಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಹುಬ್ಬಳ್ಳಿ(ಜೂ.26): ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2023-24ರ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಅಡಿ ಬೆಳೆ ಪರಿಹಾರ ವಿತರಣೆಯಲ್ಲಿ ಹಲವಾರು ಲೋಪದೋಷಗಳಾಗಿವೆ. ಅವುಗಳನ್ನು ಸರಿಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಚಲುವರಾಯಸ್ವಾಮಿ ಹಾಗೂ ರಾಜ್ಯದ ಮುಖ್ಯಕಾರ್ಯದರ್ಶಿ ಸೆಲ್ವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಜಿಲ್ಲೆಯ ರೈತರಿಗೆ ಬೆಳೆ ಪರಿಹಾರದಲ್ಲಿ ಆಗಿರುವ ಅನ್ಯಾಯ ಸರಿಪಡಿಸುವುದು ಹಾಗೂ ಯಾವ ಲೋಪದೋಷಗಳಾಗಿವೆ ಎಂಬುದನ್ನು ವಿವರಿಸಿದ್ದಾರೆ. ಹುಬ್ಬಳ್ಳಿ ತಾಲೂಕಿನ ಕೋಳಿವಾಡದಲ್ಲಿ 2600 ಫ್ರೂಟ್ ಐಡಿಗೆ ರೈತರ ಖಾತೆ ದಾಖಲಾಗಿದ್ದು ಕೇವಲ 680 ಖಾತೆಗೆ ಬರಪರಿಹಾರ ಮೊತ್ತ ಜಮೆಯಾಗಿದೆ. ಇದರಲ್ಲೂ 2 ಹೆಕ್ಟೇರ್ ಮತ್ತು ಅದಕ್ಕಿಂತ ಹೆಚ್ಚಿನ ಹಿಡುವಳಿ ಹೊಂದಿರುವ ರೈತರಿಗೆ ಕೇವಲ ಒಂದು ಹೆಕ್ಟೇರ್‌ಗೆ ಮಾತ್ರ ಬೆಳೆ ನಷ್ಟ ಪರಿಹಾರ ದೊರೆತಿದೆ. ಬೆಳೆ ಪರಿಹಾರ ಪಡೆಯಲು ಇರಬೇಕಾದ ಮಾನದಂಡಗಳ ಪೈಕಿ ಎಲ್ಲವು ಪೂರೈಸಿರುವ ರೈತರ ಖಾತೆಗಳಿಗೆ ಬೆಳೆ ಪರಿಹಾರ ಮೊತ್ತ ಜಮೆಯಾಗಿಲ್ಲ ಅಥವಾ ಅತೀ ಕಡಿಮೆ ಮೊತ್ತ ಜಮೆಯಾಗಿದೆ. ಇದರ ಬಗ್ಗೆ ರೈತರು ನನ್ನೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ತಾಳೆ ಹಾಕಿ ನೋಡಿದಾಗ ಲೋಪದೋಷವಾಗಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
undefined
ಬಿಎಸ್‌ವೈ ಮೇಲೆ ಇಲ್ಲಸಲ್ಲದ ಪ್ರಕರಣ ಎಳೆಯುತ್ತಿದ್ದೀರಿ: ಸಿದ್ದು ಸರ್ಕಾರದ ವಿರುದ್ಧ ಹರಿಹಾಯ್ದ ಸಚಿವ ಪ್ರಹ್ಲಾದ ಜೋಶಿ
ಇನ್ನೊಂದು ಪ್ರಕರಣದಲ್ಲಿ ಬರ ಪರಿಹಾರ ಮೊತ್ತ ಜಮೆಯಾಗಿರುವ ಕೋಳಿವಾಡ ಗ್ರಾಮದ 680 ರೈತರ ಪೈಕಿ ಕಲ್ಪಪ್ಪ ಬೂದಿಹಾಳ ಎಂಬ ರೈತರಿಗೆ ಅವರ 8.20 ಎಕರೆ ಜಮೀನಿನ ಪೈಕಿ 2 ಎಕರೆ ಬೆಳೆ ಮಾಹಿತಿ ಮಾತ್ರ ದಾಖಲಿಸಿ ₹ 4800 ಮತ್ತು ₹ 2000 ಬೆಳೆ ಪರಿಹಾರ ಜಮೆ ಮಾಡಲಾಗಿದೆ. ಇದೇ ರೀತಿ ರಾಮಪ್ಪ ಬೂದಿಹಾಳ ಎಂಬುವವರಿಗೆ 8.16 ಎಕರೆ ಜಮೀನಿನ ಪೈಕಿ 3.16 ಎಕರೆಯಲ್ಲಿನ ಬೆಳೆ ಮಾಹಿತಿ ಮಾತ್ರ ದಾಖಲಿಸಿ ₹ 9560 ಮತ್ತು ₹ 2000 ಬೆಳೆ ಪರಿಹಾರ ಮಾತ್ರ ಜಮೆ ಮಾಡಲಾಗಿದೆ. ಬಸಪ್ಪ ಭದ್ರಣ್ಣವರ ಎಂಬುವವರಿಗೆ 3.19 ಎಕರೆ ಪೈಕಿ 1.19 ಬೆಳೆ ಮಾಹಿತಿ ಮಾತ್ರ ದಾಖಲಿಸಿ ₹ 3015 ಮಾತ್ರ ಜಮೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಬೆಳೆ ಪರಿಹಾರ ಜಮೆ ಆಗದ ಕೋಳಿವಾಡ ಗ್ರಾಮದ 1900 ರೈತರ ಪೈಕಿ ಉದಾಹರಣೆಗಾಗಿ ಮೈಲಾರಪ್ಪ ಕಲ್ಲಪ್ಪ ಬೂದಿಹಾಳ ಇವರ ಸರ್ವೇ ನಂ -306/4 ರ ಪೈಕಿ 4 ಎಕರೆ ಜಮೀನು ಮತ್ತು ಪ್ರಭು ಬಸಪ್ಪ ಬದ್ರಣ್ಣವರ ಇವರ 4 ಎಕರೆ ಜಮೀನಿನ ಯಾವುದೇ ಬೆಳೆ ಮಾಹಿತಿ ರಿಪೋರ್ಟ್‌ನಲ್ಲಿ ದಾಖಲಿಸಿಲ್ಲ. ಇವರಿಗೆ ಬೆಳೆ ಪರಿಹಾರದ ಹಣ ಜಮೆ ಆಗಿಲ್ಲ. ಇವೆಲ್ಲವೂ ಬರೀ ಉದಾಹರಣೆ ಮಾತ್ರ. ಆದರೆ ಈ ರೀತಿ ಸಮಸ್ಯೆ ಇಡೀ ಕ್ಷೇತ್ರದಲ್ಲಿ ಆಗಿದೆ. ಆದಕಾರಣ ಆಗಿರುವ ಲೋಪದೋಷಗಳನ್ನು ಸರಿಪಡಿಸಿ ಎಲ್ಲ ರೈತರಿಗೆ ಬೆಳೆಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಜತೆಗೆ ಲೋಪದೋಷಕ್ಕೆ ಕಾರಣವಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದೆ ಈ ರೀತಿ ಲೋಪದೋಷ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.