ಕೊರೋನಾ ವೈರಸ್ ಆತಂಕ ಬೇಡ/ ಈ ಭಾಗದ ಬಿಸಿಲಿನ ಝಳಕ್ಕೆ ಕೊರೋನಾ ವೈರಸ್ ಸತ್ತೇ ಹೋಗ್ತದೆ!/ ರಾಜ್ಯ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್/ ವೈದ್ಯಕೀಯ ಆಧಾರ ನೀಡಿದ ಸಚಿವ
ಯಾದಗಿರಿ(ಫೆ. 08) ಕೊರೋನಾ ವೈರಸ್ ಬಗ್ಗೆ ಆತಂಕ ಬೇಡ, ಈ ಭಾಗದ ಬಿಸಿಲಿನ ಝಳಕ್ಕೆ ಕೊರೋನಾ ವೈರಸ್ ಸತ್ತೇ ಹೋಗ್ತದೆ ಎಂದು ರಾಜ್ಯ ಪಶುಸಂಗೋಪನೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳುವ ಮೂಲಕ ಜನರಲ್ಲಿ ಧೈರ್ಯ ತುಂಬಿದ್ದಾರೆ.
ಅವರು, ಕೊರೋನಾ ವೈರಸ್ ನಿರ್ದಿಷ್ಟ ತಾಪಮಾನದಲ್ಲಿ ಮಾತ್ರ ಸೋಂಕು ಹಬ್ಬಿಸುತ್ತದೆ ಎಂದರು. ಯಾದಗಿರಿ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಶನಿವಾರ ಜನೌಷಧಿ 2ನೇ ವರ್ಷದ ಸಂಭ್ರಮಾಚರಣೆ ಹಾಗೂ ಪೋಷಣ ಅಭಿಯಾನ ಕುರಿತಂತೆ ರಾಷ್ಟ್ರವನ್ನು ಉದ್ದೇಶಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದರ್ಶನ ನೇರಪ್ರಸಾರ ಕಾರ್ಯಕ್ರಮ ವೀಕ್ಷಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೋನಾ ವೈರಸ್ ಬಗ್ಗೆ ಜನರು ಆತಂಕ ಪಡುವುದು ಬೇಡ.
ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಹಬ್ಬುತ್ತಿರುವ ವದಂತಿ ಗಳು ನಿಜಕ್ಕೂ ಜನರನ್ನು ಕಂಗಾಲಾಗಿಸಿದೆ. ಸ್ವಚ್ಛತೆ ಹಾಗೂ ಮುಂಜಾಗ್ರತೆ ಮಾತ್ರ ವಹಿಸಿದರೆ ಯಾವುದೇ ರೋಗದಿಂದ ದೂರವಿರಬಹುದು ಎಂದರು. ಈ ಭಾಗದಲ್ಲಿ ತಾಪಮಾನ ತುಂಬಾ ಹೆಚ್ಚಿರುತ್ತದೆ. ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಗಿಂತ ಕೆಳಗಿದ್ದಲ್ಲಿ ಮಾತ್ರ ಸೋಂಕು ಹಬ್ಬುವ ಭೀತಿಯಾಗಬಹುದು. ಆದರೆ, ಅತೀ ಹೆಚ್ಚಿನ ಉಷ್ಣಾಂಶ ಇರುವ ಈ ಭಾಗದಲ್ಲಿ ಆ ವೈರಸ್ ಸತ್ತೇ ಹೋಗ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಈ ವೇಳೆ ಮಾತನಾಡಿದ ಶಾಸಕ ವೆಂಕಟರೆಡ್ಡಿ ಮುದ್ನಾಳ್, ಕೊರೋನಾ ವೈರಸ್ ಬಗ್ಗೆ ಯಾವುದೇ ಆತಂಕ ಬೇಡ. ಮುಂಜಾಗ್ರತೆ ಹಾಗೂ ಎಚ್ಚರ ವಹಿಸುವುದು ಸೂಕ್ತ ಎಂದರು. ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್, ಜಿಪಂ ಸಿಇಒ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಜಿಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಸೇರಿ ಮುಂತಾದವರಿದ್ದರು.