* ಬಿಬಿಎಂಪಿಯಿಂದಲೇ ನಿತ್ಯ 90 ಸಾವಿರ ಲಸಿಕೆ ನೀಡಲು ನಿರ್ಧಾರ
* 8 ವಲಯಗಳಲ್ಲಿ ತಲಾ 1 ಕೇಂದ್ರ
* 1 ಕೋಟಿ ಲಸಿಕೆ ನೀಡಿದ ದೇಶದ 2ನೇ ನಗರ ಬೆಂಗಳೂರು
ಶ್ರೀಕಾಂತ್ ಎನ್. ಗೌಡಸಂದ್ರ
ಬೆಂಗಳೂರು(ಆ.30): ದೆಹಲಿ ಬಳಿಕ ದೇಶದಲ್ಲೇ ಅತಿ ಹೆಚ್ಚು ಕೊರೋನಾ ಲಸಿಕೆ ನೀಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಇದೀಗ ಆಯ್ದ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ದಿನದ 24 ಗಂಟೆಯೂ ಕೊರೋನಾ ಲಸಿಕೆ ನೀಡಲು ನಿರ್ಧರಿಸಿದೆ.
undefined
ಬಿಬಿಎಂಪಿಯ ಎಂಟು ವಲಯಗಳಲ್ಲಿ ತಲಾ ಒಂದು ಆಯ್ದ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ 24 ಗಂಟೆಗಳ ಕಾಲ ಕೊರೋನಾ ಸಿಗುವಂತೆ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ಜತೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕೊಳಗೇರಿ ಪ್ರದೇಶ, ದಿನಗೂಲಿ ಕಾರ್ಮಿಕರ ವಾಸಸ್ಥಳ ಹಾಗೂ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ರಾತ್ರಿ 8 ಗಂಟೆವರೆಗೆ ಕೊರೋನಾ ಲಸಿಕೆ ನೀಡುವ ಸಮಯವನ್ನು ವಿಸ್ತರಣೆ ಮಾಡಲು ಮಹತ್ವದ ತೀರ್ಮಾನ ಮಾಡಿದೆ. ಬಿಬಿಎಂಪಿಯಿಂದಲೇ ನಿತ್ಯ ಸರಾಸರಿ 90 ಸಾವಿರ ಲಸಿಕೆ ನೀಡಬೇಕು ಎಂದು ನಿರ್ಧರಿಸಿದ್ದು, ಈ ಬಗ್ಗೆ ಸೋಮವಾರ ಬೆಳಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರೊಂದಿಗೆ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆ ಬಳಿಕ ಅಧಿಕೃತವಾಗಿ ವಲಯವಾರು 24/7 ಲಸಿಕಾ ಸೇವೆ ನೀಡುವ ಲಸಿಕಾ ಕೇಂದ್ರಗಳ ಪಟ್ಟಿಯನ್ನು ಬಿಬಿಎಂಪಿ ಪ್ರಕಟಿಸಲಿದೆ ಎಂದು ಬಿಬಿಎಂಪಿ ಉನ್ನತ ಮೂಲಗಳು ‘ಕನ್ನಡಪ್ರಭಕ್ಕೆ’ ತಿಳಿಸಿವೆ.
ಲಸಿಕೆಗಾಗಿ ಕಾಯುವಂತಿಲ್ಲ:
ಸಾಮಾನ್ಯ ಲಸಿಕಾ ಕೇಂದ್ರಗಳಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 2.30ರವರೆಗೆ ಲಸಿಕೆ ನೀಡಲಾಗುವುದು. ಲಸಿಕೆ ಲಭ್ಯವಿದ್ದರೆ ಲಸಿಕೆ ಮುಗಿಯುವವರೆಗೂ ಸಾರ್ವಜನಿಕರಿಗೆ ಲಸಿಕೆ ಒದಗಿಸಲಾಗುವುದು. ಲಸಿಕೆ ಮುಗಿದ ಬಳಿಕವೂ ಸರತಿ ಸಾಲಿನಲ್ಲಿ ನಿಂತವರನ್ನು ಬರಿಗೈಯಲ್ಲಿ ವಾಪಸು ಕಳುಹಿಸುವುದಿಲ್ಲ. ಅವರು ಮರುದಿನ ಬೆಳಗ್ಗೆ ಮತ್ತೆ ಟೋಕನ್‌ಗಾಗಿ ಕಾಯುವುದನ್ನು ತಪ್ಪಿಸಲು ಮರು ದಿನದ ಲಸಿಕೆಗೆ ಹಿಂದಿನ ದಿನವೇ ಟೋಕನ್ ನೀಡಲಾಗುವುದು. ಈ ಮೂಲಕ ಲಸಿಕೆಗೆ ಕಾಯುವುದನ್ನು ತಪ್ಪಿಸಲು ಸಹ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ನೀವೂ ಕೋವಿಡ್ ಲಸಿಕೆ ಮೂರನೇ ಡೋಸ್ ತೆಗೆದುಕೊಳ್ಳಬೇಕೇ?
1 ಕೋಟಿ ಲಸಿಕೆ ನೀಡಿದ ದೇಶದ 2ನೇ ನಗರ:
1 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಿದ ದೇಶದ ಎರಡನೇ ನಗರವಾಗಿ ಹೆಸರು ಮಾಡಿದೆ. ದೆಹಲಿಯ ಬಳಿಕ ಅತಿ ಹೆಚ್ಚು ಡೋಸ್ ಲಸಿಕೆ ನೀಡಿದ್ದು, ಜನಸಂಖ್ಯೆ ಸರಾಸರಿಗೆ ಹೋಲಿಸಿಕೊಂಡರೆ ದೇಶದಲ್ಲೇ ಅತಿ ಹೆಚ್ಚು ಲಸಿಕೆ ನೀಡಿರುವುದು ಬೆಂಗಳೂರು. ಭಾನುವಾರ ರಾತ್ರಿ 7.30 ಗಂಟೆವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 92,56,522 ಡೋಸ್ ಲಸಿಕೆ ಪೂರೈಸಲಾಗಿದೆ. ಈ ಪೈಕಿ 67,76,961 ಮಂದಿಗೆ ಮೊದಲ ಡೋಸ್, 24,79,562 ಮಂದಿಗೆ ಎರಡೂ ಡೋಸ್ ನೀಡಲಾಗಿದೆ. ಅಲ್ಲದೆ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ 13,62,719 ಮಂದಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ 10,63,427 ಮಂದಿಗೆ ಮೊದಲ ಡೋಸ್ ಹಾಗೂ 2,99,292 ಮಂದಿಗೆ ಎರಡು ಡೋಸ್ ನೀಡಲಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಒಟ್ಟು 1.06 ಕೋಟಿ (1,06,19,241) ಡೋಸ್ ಲಸಿಕೆ ನೀಡಿದಂತಾಗಿದೆ.
8 ವಲಯಗಳಲ್ಲಿ ತಲಾ 1 ಕೇಂದ್ರ:
ಬೆಂಗಳೂರಿನಲ್ಲಿರುವ ಯಲಹಂಕ, ದಾಸರಹಳ್ಳಿ, ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ, ದಕ್ಷಿಣ ವಲಯ, ಪೂರ್ವ, ಪಶ್ಚಿಮ ಹಾಗೂ ಮಹದೇವಪುರ ಸೇರಿ ಎಂಟು ವಲಯದಲ್ಲಿ ಮೊದಲ ಹಂತದಲ್ಲಿ ಕನಿಷ್ಠ ತಲಾ ಒಂದು ಕೇಂದ್ರಗಳಲ್ಲಿ 24/7 ಲಸಿಕೆ ಸೇವೆ ನೀಡಲಾಗುವುದು. ಬಳಿಕ ಮುಂದಿನ ಹಂತದಲ್ಲಿ 2-3 ಕೇಂದ್ರಗಳಲ್ಲಿ 24/7 ಲಸಿಕಾ ದೊರೆಯುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲು ಬಿಬಿಎಂಪಿ ನಿರ್ಧಾರ ಸ್ಲಂಗಳಲ್ಲಿ ರಾತ್ರಿ 8ರವರೆಗೂ ಲಸಿಕೆ ಹಾಕಲು ಪಾಲಿಕೆ ಯೋಜನೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಲಸಿಕಾ ಅಭಿಯಾನಕ್ಕೆ ವೇಗ ನೀಡಲು ಹಲವು ಮಹತ್ವದ ತೀರ್ಮಾನ ಮಾಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಲಯವಾರು ಆಯ್ದ ಕೇಂದ್ರಗಳಲ್ಲಿ ದಿನದ 24 ಗಂಟೆಯೂ ಲಸಿಕೆ ಸಿಗುವಂತೆ ಮಾಡಲು ನಿರ್ಧರಿಸಿದ್ದೇವೆ. ಅಲ್ಲದೆ, ವಿಧಾನಸಭಾ ಕ್ಷೇತ್ರವಾರು ಆಯ್ದ ಕ್ಷೇತ್ರಗಳಲ್ಲಿ ಲಸಿಕೆ ವಿತರಣೆ ಸಮಯವನ್ನು ವಿಸ್ತರಿಸಲಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.