ಇನ್ಮುಂದೆ ಧಾರವಾಡದ ಡಿಮ್ಹಾನ್ಸ್‌ನಲ್ಲೂ ಕೊರೋನಾ ಟೆಸ್ಟಿಂಗ್‌

By Kannadaprabha NewsFirst Published Apr 20, 2020, 7:13 AM IST
Highlights

ಇಂದಿನಿಂದ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲೂ ಕೊರೋನಾ ಟೆಸ್ಟಿಂಗ್‌| ಐಸಿಎಂಆರ್‌ನಿಂದಲೂ ದೊರೆತಿದೆ ಅನುಮತಿ| ಸದ್ಯ ಮ್ಯಾನುವೆಲ್‌ ಟೆಸ್ಟಿಂಗ್‌ ಪ್ರಾರಂಭ|ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಇನ್ನಷ್ಟು ಅನುಕೂಲ|
 

ಶಿವಾನಂದ ಗೊಂಬಿ

ಹುಬ್ಬಳ್ಳಿ(ಏ.20): ಧಾರವಾಡದ ಡಿಮ್ಹಾನ್ಸ್‌ (ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ)ನಲ್ಲಿ ಇಂದಿನಿಂದ (ಏ. 20) ಮತ್ತೊಂದು ಕೊರೋನಾ ಟೆಸ್ಟಿಂಗ್‌ ಲ್ಯಾಬ್‌ ಶುರುವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಡಿಮ್ಹಾನ್ಸ್‌ನಲ್ಲಿ ಪೂರ್ಣಗೊಂಡಿದ್ದು, ಒಂದೆರಡು ದಿನ ಇಲ್ಲಿನ ಸಿಬ್ಬಂದಿ ಮ್ಯಾನೆವಲ್‌ ಪರೀಕ್ಷೆ ಪ್ರಾರಂಭಿಸಲಾಗುವುದು. ಇನ್ನೊಂದು ವಾರದಲ್ಲಿ ಸ್ವಯಂಚಾಲಿತ ಆರ್‌ಎನ್‌ಎ ಎಕ್ಸ್‌ಟ್ರ್ಯಾಕ್ಟ್ ಯಂತ್ರದ ಮೂಲಕ ಕಾರ್ಯಾರಂಭ ಮಾಡಲಿದೆ. ಇದು ಪ್ರಾರಂಭವಾದರೆ ಹಾವೇರಿ, ಗದಗ ಸೇರಿದಂತೆ ಉತ್ತರ ಕರ್ನಾಟಕ ಬಹುತೇಕ ಜಿಲ್ಲೆಗಳಿಗೆ ಅನುಕೂಲವಾಗಲಿದೆ.

ಸದ್ಯ ಕಿಮ್ಸ್‌ನಲ್ಲಿ ಲ್ಯಾಬ್‌ ಇದೆ. ಕಳೆದ ವಾರವಷ್ಟೇ ಪ್ರಾರಂಭಿಸಲಾಗಿರುವ ಲ್ಯಾಬ್‌ ಇದು. ಪ್ರತಿದಿನ 100ರಷ್ಟು ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಕಿಮ್ಸ್‌ನಲ್ಲೇ ಸಾಕಷ್ಟು ಜನರ ಪರೀಕ್ಷೆ ನಡೆಸಬೇಕಿರುವುದರಿಂದ ಅಕ್ಕಪಕ್ಕದ ಜಿಲ್ಲೆಗಳಿಗೆ ಅಷ್ಟೊಂದು ಅನುಕೂಲವಾಗುತ್ತಿಲ್ಲ. ಇದರೊಂದಿಗೆ ಇಲ್ಲಿನ ಕೆಲವೊಂದು ರಿಪೋರ್ಟ್‌ಗಳನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗುತ್ತಿದೆ. ಇದೀಗ ಡಿಮ್ಹಾನ್ಸ್‌ನಲ್ಲಿ ಪ್ರಾರಂಭವಾದರೆ ಕಿಮ್ಸ್‌ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಅಲ್ಲದೇ ಹಾವೇರಿ, ಗದಗ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೂ ಅನುಕೂಲವಾಗುತ್ತದೆ.

ಕೊರೋನಾ: ಕಿಮ್ಸ್‌ನಲ್ಲಿ ಕೋವಿಡ್‌-19 ಪರೀಕ್ಷಾ ಕೇಂದ್ರ ಆರಂಭ

ಗ್ರೀನ್‌ ಸಿಗ್ನಲ್‌

ಕೊರೋನಾ ಟೆಸ್ಟಿಂಗ್‌ಗೆ ಡಿಮ್ಹಾನ್ಸ್‌ ಸೂಕ್ತವಾಗಿದೆ. ಅನುಮತಿ ಕೊಡಿ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಅದಕ್ಕೆ ಕಳೆದ ವಾರ ಹಸಿರು ನಿಶಾನೆ ಸಿಕ್ಕಿತು. ಇಲ್ಲಿನ ಸಿಬ್ಬಂದಿಗೆ ಬೆಂಗಳೂರಿಗೆ ಕರೆಯಿಸಿಕೊಂಡು ಒಂದು ದಿನದ ತರಬೇತಿಯನ್ನೂ ನೀಡಿದೆ. ಆ ಸಿಬ್ಬಂದಿಗಳೆಲ್ಲ ಇದೀಗ ಬಂದಿದ್ದು, ಪರೀಕ್ಷೆಗೆ ಸನ್ನದ್ಧರಾಗಿದ್ದಾರೆ. ಸದ್ಯ ಮ್ಯಾನುವೆಲ್‌ ಮಾಡಲಾಗುತ್ತಿದೆ.

ಎಷ್ಟು ಟೆಸ್ಟ್‌?:

ಸದ್ಯ ಡಿಮ್ಹಾನ್ಸ್‌ನಲ್ಲಿ ಶೇ. 60ರಷ್ಟುಸೌಲಭ್ಯವಿದೆ. ಕೊರೋನಾ ಹಿನ್ನೆಲೆಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡಿದ್ದೇವೆ. ಮ್ಯಾನುವೆಲ್‌ ಟೆಸ್ಟಿಂಗ್‌ ಪ್ರಾರಂಭಿಸಲು ಸದ್ಯ ಯಾವುದೇ ಸಮಸ್ಯೆಯಿಲ್ಲ. ಅದನ್ನು ಸೋಮವಾರದಿಂದ ಪ್ರಾರಂಭಿಸುತ್ತಿದ್ದೇವೆ. ಇನ್ನು ಆರ್‌ಎನ್‌ಎ ಎಕ್ಸ್‌ಟ್ರ್ಯಾಕ್ಟ್ ಯಂತ್ರ ಅಳವಡಿಕೆಯನ್ನು ಇನ್ನೂ ನಾಲ್ಕೈದು ದಿನಗಳಲ್ಲಿ ಮಾಡಲಾಗುವುದು. ಯಂತ್ರಗಳು ಆಗಲೇ ಬೆಂಗಳೂರಿಗೆ ಬಂದಿವೆ. ಅಲ್ಲಿಂದ ತರಿಸಿಕೊಳ್ಳಬೇಕಿದೆ. ಅವುಗಳನ್ನು ತಂದು ಅಳವಡಿಸಿಕೊಳ್ಳಲು ನಾಲ್ಕೈದು ದಿನಗಳಾಗಬಹುದು. ಆಗ 200ಕ್ಕೂ ಅಧಿಕ ಮಾದರಿಯನ್ನು ಪರೀಕ್ಷಿಸಬಹುದಾಗಿದೆ ಎಂದು ಡಿಮ್ಹಾನ್ಸ್‌ ನಿರ್ದೇಶಕ ಡಾ. ಮಹೇಶ ದೇಸಾಯಿ ತಿಳಿಸುತ್ತಾರೆ.

ಒಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಇನ್ನೊಂದು ಕೋವಿಡ್‌ ಲ್ಯಾಬ್‌ ಸ್ಥಾಪನೆಯಾಗುತ್ತಿರುವುದು ಈ ಭಾಗದಲ್ಲಿ ಸಂತಸಕರ ವಿಷಯ. ಕೊರೋನಾ ಇನ್ನು ಮೇಲಾದರೂ ತೀವ್ರಗತಿಯಲ್ಲಿ ಪರೀಕ್ಷಿಸಲು ಅನುಕೂಲವಾಗುವುದರಲ್ಲಿ ಸಂದೇಹವಿಲ್ಲ.

ಈ ಬಗ್ಗೆ ಮಾತನಾಡಿದ ಡಿಮ್ಹಾನ್ಸ್‌ ನಿರ್ದೇಶಕ ಡಾ. ಮಹೇಶ ದೇಸಾಯಿ ಅವರು, ಡಿಮ್ಹಾನ್ಸ್‌ನಲ್ಲಿ ಕೋವಿಡ್‌ ಪರೀಕ್ಷಿಸಲು ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ನಾಲ್ಕೈದು ದಿನದ ಹಿಂದೆ ಐಸಿಎಂಆರ್‌ (ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌)ಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿತ್ತು. ಸೋಮವಾರದಿಂದ ಈ ಲ್ಯಾಬ್‌ ಪ್ರಾರಂಭಿಸಲಾಗುತ್ತಿದೆ. ಇನ್ನೊಂದು ವಾರದಲ್ಲಿ ಸ್ವಯಂಚಾಲಿತ ಆರ್‌ಎನ್‌ಎ ಎಕ್ಸ್‌ಟ್ರ್ಯಾಕ್ಟ್ ಯಂತ್ರ ಅಳವಡಿಸಲಾಗುವುದು. ಆಗ ಇನ್ನಷ್ಟುತೀವ್ರಗತಿಯಲ್ಲಿ ಪರೀಕ್ಷೆ ಕೈಗೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
 

click me!