ಧಾರವಾಡ: ಕೊರೋನಾ ಏರುಗತಿ ಆತಂಕದ ಮಧ್ಯೆ ಗುಣಮುಖರಾಗುತ್ತಿರುವ ಸಮಾಧಾನ!

By Kannadaprabha News  |  First Published Jul 20, 2020, 7:12 AM IST

ಆಸ್ಪತ್ರೆ, ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಬೇಗ ಗುಣಮುಖರಾಗುತ್ತಿರುವ ಸೋಂಕಿತರು|ಬೇಗ ಗುಣಮುಖರಾಗಲು ಚಿಕಿತ್ಸೆಯೊಂದಿಗೆ ಯೋಗ, ಮನರಂಜನೆ| ಒಟ್ಟು 1917 ಪಾಸಿಟಿವ್‌, 643 ಬಿಡುಗಡೆ, 1194 ಸಕ್ರೀಯ|ರೋಗ ಲಕ್ಷಣ ಇರುವ, ಗಂಭೀರ ಪ್ರಕರಣಗಳು ಮಾತ್ರ ಆಸ್ಪತ್ರೆಯಲ್ಲಿ|ಲಕ್ಷಣ ಇರದೇ ಇರುವವರಿಗೆ ಕೋವಿಡ್‌ ಕೇರ್‌ ಸೆಂಟರ್‌| ಕೋವಿಡ್‌ನ ಏರುಗತಿಯ ಮಧ್ಯೆ ಗುಣಮುಖ|


ಬಸವರಾಜ ಹಿರೇಮಠ

ಧಾರವಾಡ(ಜು.20): ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಏರುಗತಿ ಕಾಣುತ್ತಿರುವುದು ಆತಂಕಕಾರಿ ಸಂಗತಿ. ಆದರೆ, ಈ ಮಧ್ಯೆಯೇ ಸಮಾಧಾನಕರ ರೀತಿಯಲ್ಲಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದುತ್ತಿರುವುದು ಸಹ ಗಮನಾರ್ಹ ಸಂಗತಿ.

Tap to resize

Latest Videos

ಕಳೆದ ಮೂರು ತಿಂಗಳಿಗೆ ಹೋಲಿಸಿದರೆ ಪ್ರಸ್ತುತ ಜುಲೈ ತಿಂಗಳಲ್ಲಂತೂ ನಿತ್ಯ 100ಕ್ಕೂ ಹೆಚ್ಚು ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗುತ್ತಿದ್ದು, ಕೋವಿಡ್‌ ಬಹುಬೇಗ ಸಮುದಾಯದ ಹಂತಕ್ಕೆ ತಲುಪುತ್ತಿದೆ ಎನ್ನುವ ಭಾಸ ಉಂಟಾಗುತ್ತಿದೆ. ಈ ಮಧ್ಯೆಯೂ ನಿತ್ಯವೂ ಹತ್ತಾರು ಸೋಂಕಿತರು ಗುಣಮುಖರಾಗಿ ನಗುಮುಖದಿಂದ ಮನೆಗೆ ತೆರಳುತ್ತಿದ್ದಾರೆ. ಒಟ್ಟು ಸೋಂಕಿತರ ಪೈಕಿ ಶೇ. 30ರಷ್ಟು ಗುಣಮುಖರಾಗಿದ್ದು, ಜುಲೈ 1ರಿಂದ 18ರ ವರೆಗೆ ಅತೀ ಹೆಚ್ಚು ಜುಲೈ 17ರಂದು 69 ಜನರು ಗುಣಮುಖರಾಗಿದ್ದಾರೆ. ಇಲ್ಲಿ ವರೆಗೆ 1917 ಸೋಂಕಿತರ ಪೈಕಿ 643 ಗುಣಮುಖರಾಗಿದ್ದು 1194 ಚಿಕಿತ್ಸೆ ಪಡೆಯುತ್ತಿದ್ದಾರೆ.

ರೋಗ ನಿರೋಧಕವೇ ಚಿಕಿತ್ಸೆ

ಕೋವಿಡ್‌ಗೆ ಈ ವರೆಗೂ ನಿರ್ದಿಷ್ಟಚಿಕಿತ್ಸೆ ಕಂಡು ಹಿಡಿಯದೇ ಹೋದರೂ ವ್ಯಕ್ತಿಯ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮೂಲಕ ಸೋಂಕನ್ನು ಹೊಡೆದೋಡಿಸುವ ಕಾರ್ಯ ವೈದ್ಯಲೋಕದಿಂದ ನಡೆಯುತ್ತಿದೆ. ಬೇರೆ ಬೇರೆಯ ರೋಗಗಳನ್ನು ಹೊಂದಿ ಸೋಂಕು ಸಹ ಹೊಂದಿರುವ 50 ವರ್ಷ ಮೇಲ್ಪಟ್ಟವರು ಮಾತ್ರ ಇಲ್ಲಿ ವರೆಗೆ ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆಯೇ ಹೊರತು ಬರೀ ಸೋಂಕಿನಿಂದಲೇ ಮೃತರಾಗಿದ್ದು ತೀರಾ ವಿರಳ. ಜಿಲ್ಲೆಯಲ್ಲಿ ಶೇ. 3ರಷ್ಟುಮಾತ್ರ ಸಾವಿನ ಸಂಖ್ಯೆ ಇದ್ದು, ಉಳಿದವರೆಲ್ಲರೂ ಗುಣಮುಖರಾಗುವುದು ನಿಶ್ಚಿತ ಎಂದು ಕಿಮ್ಸ್‌ನ ತಜ್ಞ ವೈದ್ಯರು ಹೇಳುತ್ತಾರೆ.

ಹುಬ್ಬಳ್ಳಿ-ಧಾರವಾಡದ 45ಕ್ಕೂ ಹೆಚ್ಚು ಪೊಲೀಸರಿಗೆ ಕೊರೋನಾ

ಯಾವ ರೀತಿ ಗುಣಮುಖ:

ಹುಬ್ಬಳ್ಳಿಯ ಕಿಮ್ಸ್‌ ಅಲ್ಲದೇ ಇತ್ತೀಚೆಗೆ ಜಿಲ್ಲೆಯ 15 ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್‌ ಚಿಕಿತ್ಸೆ ಯಶಸ್ವಿಯಾಗಿ ನಡೆಯುತ್ತಿದೆ. ಕೋವಿಡ್‌ನ ಲಕ್ಷಣಗಳಿದ್ದು, ತೀರಾ ಗಂಭೀರ ಪ್ರಕರಣಗಳನ್ನು ಮಾತ್ರ ಆಸ್ಪತ್ರೆಗೆ ಸೇರಿಸಲಾಗುತ್ತಿದ್ದು, ಇತ್ತೀಚೆಗೆ ಪತ್ತೆಯಾಗುತ್ತಿರುವ ರೋಗ ಲಕ್ಷಣಗಳೇ ಇಲ್ಲದ ಪ್ರಕರಣಗಳಿಗಾಗಿಯೇ ಜಿಲ್ಲೆಯಲ್ಲಿ 25 ಕೋವಿಡ್‌ ಕೇರ್‌ ಸೆಂಟರ್‌ಗ​ಳನ್ನು ತೆರೆಯಲಾಗಿದ್ದು ಸೋಂಕಿತರು ಬಹು ಬೇಗ ಗುಣಮುಖರಾಗುತ್ತಿದ್ದಾರೆ. ಇದರೊಂದಿಗೆ ಲಕ್ಷಣ ರಹಿತ ಕೋವಿಡ್‌ ಸೋಂಕಿತರು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯಲು ಸಹ ಸರ್ಕಾರ ಅವಕಾಶ ನೀಡಿದೆ. ಇಂತಹ 20ಕ್ಕೂ ಹೆಚ್ಚು ಸೋಂಕಿತರು ಮನೆಯಲ್ಲಿಯೇ ವೈದ್ಯರ ಸಲಹೆ ಮೇರೆಗೆ ಗುಣಮುಖರಾಗುತ್ತಿರುವದು ಉತ್ತಮ ಬೆಳವಣಿಗೆ.

ಜಿಲ್ಲೆಯಲ್ಲಿ ಕೋವಿಡ್‌ನ ಹೆಚ್ಚಳದ ಜೊತೆಗೆ ಗುಣಮುಖರೂ ಆಗುತ್ತಿದ್ದಾರೆ ಎಂಬುದು ಸಮಾಧಾನದ ಸಂಗತಿ. ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಕ್ಷಣ ರಹಿತರ ಮನೋಸ್ಥೈರ್ಯ ಹೆಚ್ಚಿಸಲು ದೂರವಾಣಿ ಮೂಲಕ ಆಪ್ತ ಸಮಾಲೋಚನೆ, ಯೋಗ, ಮನರಂಜನಾ ಚಟುವಟಿಕೆ ಆಯೋಜಿಸುತ್ತಿರುವುದು ಸೋಂಕಿತ ವ್ಯಕ್ತಿ ಬಹುಬೇಗ ಗುಣಮುಖನಾಗಲು ಸಾಧ್ಯವಾಗುತ್ತಿದೆ. ಅಯ್ಯೋ ನನಗೆ ಕೊರೋನಾ ಬಂದು ಬಿಡ್ತು, ನನ್ನ ಸಮಾಜದಿಂದ ದೂರ ಇಡಲಾಗುತ್ತಿದೆ ಎಂಬ ಭಾವನೆ ಬರದಂತೆ ಮನೋಸ್ಥೈರ‍್ಯ ತುಂಬಲಾಗುತ್ತಿದೆ. ಇದಕ್ಕಾಗಿಯೇ ಅಧಿಕಾರಿಗಳ ಉಪ ಸಮಿತಿ ಸಹ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಮಾಹಿತಿ ನೀಡಿದರು.

ದಿನ ಗುಣಮುಖರ ಸಂಖ್ಯೆ

ಜುಲೈ 18 50
ಜುಲೈ 17 69
ಜುಲೈ 16 42
ಜುಲೈ 15 32
ಜುಲೈ 14 32
ಜುಲೈ 13 36
ಜುಲೈ 12 64
ಜುಲೈ 11 12
ಜುಲೈ 10 13
ಜುಲೈ 9 17
ಜುಲೈ 8 23
ಜುಲೈ 7 00
ಜುಲೈ 6 22
ಜುಲೈ 5 22
ಜುಲೈ 4 09
ಜುಲೈ 3 20
ಜುಲೈ 2 00
ಜುಲೈ 1 00

ಅಗತ್ಯ ಬಿದ್ದರೆ ಬಾಕ್‌ ಆಗಿ ಬಳಸಿಕೊಳ್ಳಿ..

ಕಳೆದ ಮಾರ್ಚ್‌ 20ರಂದು ಧಾರವಾಡ ಜಿಲ್ಲೆಯ ಪೈಕಿ ಆಸ್ಪ್ರೇಲಿಯಾದಿಂದ ಆಗಮಿಸಿದ ಇಲ್ಲಿನ ಹೊಸಯಲ್ಲಾಪೂರ ಪಿ-21 ವ್ಯಕ್ತಿಗೆ ಕೋವಿಡ್‌ ಪಾಸಿಟಿವ ದೃಢಪಟ್ಟಿತ್ತು. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆದು ಏ. 5ರಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದ. ಇದಾದ ನಂತರ ಹುಬ್ಬಳ್ಳಿಯ ಮುಲ್ಲಾ ಓಣಿ ಪಿ-194 ತನ್ನ ಸಹೋದರನ ಜೊತೆಗೆ ದೆಹಲಿ ಪ್ರಯಾಣದ ಸಂಪರ್ಕದ ಮೂಲಕ ಸೋಂಕು ಹೊಂದಿದ್ದನು. ಈ ಇಬ್ಬರು ಸಹೋದರರ ಸಂಪರ್ಕದಿಂದ ಮನೆ ಮಂದಿಗೆ ಕೋವಿಡ್‌ ಪಾಸಿಟಿವ ಪ್ರಕರಣ ದಾಖಲಾಗಿತ್ತು. ಆದರೆ, ಇವರು ಸೇರಿದಂತೆ ಮೂರೂವರೆ ತಿಂಗಳ ವರೆಗೆ 1917 ಜನರಿಗೆ ಕೊರೋನಾ ಪಾಸಿಟಿವ್‌ ಪತ್ತೆಯಾಗಿತ್ತು. ಈ ಪೈಕಿ 643 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
 

click me!