ಹೆಚ್ಚುತ್ತಿರುವ ಸರಾಸರಿ ಸಾವಿನ ಪ್ರಮಾಣ| ಜನರಿಂದಲೇ ಸೀಲ್‌ಡೌನ್| ಕೋವಿಡ್ ದೃಢಪಟ್ಟಿರುವ ಪ್ರಕರಣಗಳ ಪೈಕಿ ಭಾನುವಾರ ಇಬ್ಬರು ಅಸುನೀಗಿದ್ದಾರೆ| ಒಂದೇ ದಿನ 40 ಜನರಿಗೆ ಕೊರೋನಾ ದೃಢ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜು.13): ಹಸಿರು ವಲಯ ಕೊಪ್ಪಳದಲ್ಲಿ ಕೋವಿಡ್-19 ರಣಕೇಕೆ ಹಾಕುತ್ತಿದೆ. ಇಡೀ ದೇಶದ ಸರಾಸರಿ ಸಾವಿನ ಪ್ರಮಾಣ ದುಪ್ಪಟ್ಟು ಪ್ರಮಾಣದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಸಾವನ್ನಪ್ಪುತ್ತಿದ್ದು, ಬೆಚ್ಚಿ ಬೀಳುವಂತೆ ಮಾಡಿದೆ. ಹೌದು, ಪಕ್ಕದ ಬಳ್ಳಾರಿ, ರಾಯಚೂರು ಸೇರಿದಂತೆ ಯಾವೊಂದು ಜಿಲ್ಲೆಯಲ್ಲಿಯೂ ಸಾವಿನ ಪ್ರಮಾಣ ಇಷ್ಟೊಂದು ಇಲ್ಲ. ಆದರೆ, ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಕೋವಿಡ್-19 ಸೋಂಕಿತರಾಗಿ ದೃಢಪಡುತ್ತಿದ್ದಂತೆ ಮರಣ ಹೊಂದುತ್ತಿದ್ದಾರೆ. ಕೇವಲ
ಮೂರು ದಿನಗಳಲ್ಲಿ ಐವರು ಮೃತಪಟ್ಟಿದ್ದರೆ, ಇದುವರೆಗೂ ಬರೋಬ್ಬರಿ 8 ಜನರು ಅಸು ನೀಗಿದ್ದಾರೆ. ಕೇವಲ 210 ಜನರಿಗೆ ಕೊರೋನಾ ದೃಢಪಟ್ಟಿದ್ದರೂ 8 ಜನರು ಪ್ರಾಣ ಕಳೆದುಕೊಳ್ಳುವ ಮೂಲಕ ಸಾವಿನ ಪ್ರಮಾಣ ಶೇ. 4 ಆಗಿದೆ. ದೇಶದಾದ್ಯಂತ ಸರಾಸರಿ ಶೇ. 2.73ರಷ್ಟು ಸಾವಿನ ಪ್ರಮಾಣ ಇದೆ. ಇದಲ್ಲದೆ ಒಂದು ಮಗು ಸಹ ಮೃತಪಟ್ಟಿದೆ. ಇದರ ಲೆಕ್ಕವನ್ನು ತೆಗೆದುಕೊಂಡರೆ ಸಾವಿನ ಪ್ರಮಾಣ ಶೇ. 4.5 ಆಗುತ್ತದೆ. ಆದರೆ, ಈ ಮಗುವಿನ ಕೋವಿಡ್-19 ವರದಿ ನೆಗೆಟಿವ್ ಬಂದಿದೆ. ಇದುವರೆಗೂ ಇಷ್ಟೊಂದು ಹೆಚ್ಚಿನ ಪ್ರಮಾಣದ ಸಾವು ಎಲ್ಲೂ ಇಲ್ಲ. ಹೀಗಾಗಿ, ಇದು ಜನರ ಆತಂಕಕ್ಕೆ ಕಾರಣವಾಗಿದೆ.
ಗಂಗಾವತಿ: ಯುವಕನಿಗೆ ನೆಗೆಟಿವ್ ಬಂದ್ರೂ ಕೋವಿಡ್ ಆಸ್ಪತ್ರೆಗೆ ದಾಖಲು....!
ವೆಂಟಿಲೇಟರ್ ಅಭಾವ
ಜಿಲ್ಲೆಯಲ್ಲಿ ಇದುವರೆಗೂ ಸುಮಾರು 20 ವೆಂಟಲೇಟರ್ ಮಾತ್ರ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೇ ಮಾಹಿತಿ ನೀಡುತ್ತದೆ. ಇದರಲ್ಲಿ 5 ಖಾಸಗಿ ಹಾಗೂ 15 ಸರ್ಕಾರಿ ವೆಂಟಿಲೇಟರ್‌ಗಳು ಮಾತ್ರ. ಇದರಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ಕೇವಲ 5 ವೆಂಟಿಲೇಟರ್ ಮಾತ್ರ ಇವೆ ಎನ್ನಲಾಗುತ್ತದೆ. ಆದರೆ, ಇದು ಸಹ ಸುಳ್ಳು ಎನ್ನಲಾಗುತ್ತಿದೆ. ವಾಸ್ತವದಲ್ಲಿ ವೆಂಟಿಲೇಟರ್‌ಗಳ ಸಂಖ್ಯೆ ಹತ್ತಾರು ಸಹ ಇಲ್ಲ. ಅವುಗಳಲ್ಲಿಯೂ ಸೇವೆಗೆ ಸಿದ್ಧವಾಗಿರುವ ಸಂಖ್ಯೆ ಇನ್ನು ಕಡಿಮೆ ಇದೆ. ಹೀಗಾಗಿ, ವೆಂಟಿಲೇಟರ್ ಇಲ್ಲದೇ ಇರುವುದರಿಂದ ಕೋವಿಡ್-19ಕ್ಕೆ ತುತ್ತಾಗುವ ರೋಗಿಗಳು ಆಸ್ಪತ್ರೆಗೆ ದಾಖಲಾದಾಗ ಉಸಿರಾಟದ ಸಮಸ್ಯೆಯಿಂದ ಬಳಲಿ ಮರಣ ಹೊಂದುತ್ತಿದ್ದಾರೆ.
ಅಷ್ಟಕ್ಕೂ ಇದುವರೆಗೂ ಮೃತಪಟ್ಟವರು ಅಂಥ ಗಂಭೀರ ಕಾಯಿಲೆಯಿಂದ ಬಳಲುತ್ತಿರಲಿಲ್ಲ. ಒಂದಿಬ್ಬರು ನಾನಾ ಆರೋಗ್ಯದ ಸಮಸ್ಯೆಯಿಂದ ಬಳಲಿದರೂ ಉಳಿದವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದವರು. ಆದರೆ, ಅವರೆಲ್ಲರಿಗೂ ವೆಂಟಿಲೇಟರ್ ಸಿಕ್ಕಿದ್ದರೆ ಖಂಡಿತವಾಗಿಯೂ ಬದುಕುತ್ತಿದ್ದರು ಎಂದು ಹೆಸರು ಹೇಳದ ವೈದ್ಯರೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಜಿಲ್ಲೆಗೆ ತುರ್ತಾಗಿ ವೆಂಟಿಲೇಟರ್ ಅಗತ್ಯವಿದ್ದು, ಈ ದಿಸೆಯಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಸಾವಿನ ಪ್ರಮಾಣ ಇನ್ನೂ ಹೆಚ್ಚಳವಾಗುತ್ತದೆ ಎನ್ನಲಾಗುತ್ತದೆ.
ಜಿಲ್ಲೆಯಲ್ಲಿ ಇದುವರೆಗೂ ಕೇವಲ 210 ಜನರಿಗೆ ಮಾತ್ರ ಕೋರೊನಾ ಪಾಸಿಟಿವ್ ದೃಢಪಟ್ಟಿದ್ದು, ಈ ಪೈಕಿ ಇದುವರೆಗೂ 8 ಜನರು ಮೃತಪಟ್ಟಿದ್ದಾರೆ. ಅಚ್ಚರಿ ಎಂದರೆ ಇದರಲ್ಲಿ ಅರ್ಧದಷ್ಟುಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅಥವಾ ಮರುದಿನವೇ ಸಾವು ಕಂಡಿದ್ದಾರೆ. ಮೃತಪಟ್ಟವರು ಅಬ್ಬಬ್ಬಾ ಎಂದರೆ 67 ವರ್ಷವೇ ಗರಿಷ್ಠ. ಉಳಿದಂತೆ 35ರಿಂದ 55, 60 ವರ್ಷದೊಳಗಿನವರೇ ಎನ್ನುವುದು ಗಮನಾರ್ಹ ಸಂಗತಿ.
ಮತ್ತೆ ಕೊರೋನಾ ಸ್ಫೋಟ, ಇಬ್ಬರ ಸಾವು
ಜಿಲ್ಲೆಯಲ್ಲಿ ಕೊರೋನಾ ಹೆಮ್ಮಾರಿ ಸ್ಫೋಟಗೊಳ್ಳುತ್ತಿದೆ. ಶನಿವಾರ 44 ಜನರಿಗೆ ಪಾಸಿಟಿವ್ ಬಂದಿರುವ ಬೆನ್ನಲ್ಲೇ ಭಾನುವಾರವೂ 40 ಜನರಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 250 ಆಗಿದ್ದು, ತ್ರಿಶತಕದತ್ತ ಸಾಗುತ್ತಿದೆ. ಇಬ್ಬರು ಮೃತಪಟ್ಟಿದ್ದಾರೆ. ಕೇವಲ ಎರಡು ದಿನಗಳಲ್ಲಿ 84 ಜನರಿಗೆ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಕೊರೋನಾ ಸೋಂಕಿತರ ಪೈಕಿ ಇಬ್ಬರು ಮೃತಪಟ್ಟಿದ್ದು, ಇನ್ನೊಂದು ಮಗು ಸಹ ಮೃತಪಟ್ಟಿದೆ. ಆದರೆ, ಇದಕ್ಕೆ ಕೊರೋನಾ ಪಾಸಿಟಿವ್ ಬಂದಿಲ್ಲ ಎನ್ನಲಾಗಿದೆ. ಇದಲ್ಲದೆ ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ.
ಸುಸ್ತಾದವರಿಗೆಲ್ಲಾ ಸೋಂಕು
ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಅರ್ಭಟ ಜೋರಾಗುತ್ತಿದೆ. ಜ್ವರ ಮತ್ತಿತರರ ಕಾರಣಗಳಿಗಾಗಿ ದಾಖಲಾಗುತ್ತಿರುವವರೆಲ್ಲರಿಗೂ ಸೋಂಕು ದೃಢವಾಗುತ್ತಿದೆ. ಅಚ್ಚರಿ ಎಂದರೆ ಬಹುತೇಕ ಪ್ರಕರಣಗಳಲ್ಲಿ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ ಎನ್ನುವುದು. ಈ ನಡುವೆ ಗಂಗಾವತಿ ತಾಲೂಕಿನಲ್ಲಿಯೇ ಅತ್ಯಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. ಗಂಗಾವತಿಯ ಜುಲೈ ನಗರ ಹಾಟ್‌ಸ್ಪಾಟ್ ಆಗುತ್ತಿದೆಯೇ ಎನ್ನುವ ಅನುಮಾನ ಶುರುವಾಗಿದೆ.
ಜನರಿಂದಲೇ ಸೀಲ್‌ಡೌನ್
ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿರುವುದರಿಂದ ಅಧಿಕಾರಿಗಳು ಕೈ ಚೆಲ್ಲಿದ್ದಾರೆ. ಪ್ರತಿದಿನ 40 ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಜನರೇ ಈಗ ಸೀಲ್‌ಡೌನ್ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಕೊರೋನಾ ದೃಢವಾಗುತ್ತಿದ್ದಂತೆ ಅವರನ್ನು ಕರೆದೊಯ್ಯುತ್ತಿದ್ದಂತೆ ಸುತ್ತಮುತ್ತಲ ಜನರು ತಮ್ಮ ಏರಿಯಾಕ್ಕೆ ಮುಳ್ಳುಬೇಲಿ ಹಚ್ಚಿಕೊಂಡು ಬಂದ್ ಮಾಡಿಸುತ್ತಿದ್ದಾರೆ.
ಇಬ್ಬರ ಸಾವು
ಕೋವಿಡ್ ದೃಢಪಟ್ಟಿರುವ ಪ್ರಕರಣಗಳ ಪೈಕಿ ಭಾನುವಾರ ಇಬ್ಬರು ಅಸು ನೀಗಿದ್ದಾರೆ. ಇದರಿಂದ ಸತ್ತವರ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು, ಭಾರಿ ಆತಂಕಕ್ಕೆ ಕಾರಣವಾಗಿದೆ.