24 ವರ್ಷದ ಯುವಕನೊಬ್ಬನಿಗೆ ಕೆಮ್ಮು, ಜ್ವರ, ಮೈಕೈ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಆರೋಗ್ಯ ಇಲಾಖೆ ಮತ್ತು ತಹಸೀಲ್ದಾರ್ ಅವರು ನಗರಕ್ಕೆ ಭೇಟಿ| ರೋಗದ ಲಕ್ಷಣಗಳನ್ನು ಹೊಂದಿದ್ದ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು| ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ಸೋಂಕು ದೃಢ|
ಕುಷ್ಟಗಿ(ಜೂ.25): ಪಟ್ಟಣದ ಕಂದಕೂರ ರಸ್ತೆಯಲ್ಲಿರುವ ಮಾರುತಿ ನಗರದಲ್ಲಿ ವಾಸವಾಗಿದ್ದ ಯುವಕನಿಗೆ ಕೊರೋನಾ ವೈರಸ್ ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಈ ಪ್ರದೇಶ ಸೀಲ್‌ಡೌನ್ ಮಾಡಲಾಗಿದೆ ಎಂದು ತಹಸೀಲ್ದಾರ್ ಸಿದ್ದೇಶ ಎಂ. ಹೇಳಿದ್ದಾರೆ.
ಈ ಕುರಿತು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಅವರು, ಮಂಗಳವಾರ ರಾತ್ರಿ ಇಲ್ಲಿನ ಮಾರುತಿ ನಗರದಲ್ಲಿ ವಾಸವಾಗಿದ್ದ 24 ವರ್ಷದ ಯುವಕನೊಬ್ಬನಿಗೆ ಕೆಮ್ಮು, ಜ್ವರ, ಮೈಕೈ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಆರೋಗ್ಯ ಇಲಾಖೆ ಮತ್ತು ತಹಸೀಲ್ದಾರ್ ಅವರು ನಗರಕ್ಕೆ ಭೇಟಿ ನೀಡಿ ರೋಗದ ಲಕ್ಷಣಗಳನ್ನು ಹೊಂದಿದ್ದ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢ ಪಟ್ಟಿದೆ ಎಂದರು.
ಸೋಂಕಿತ ವ್ಯಕ್ತಿ ಬಾಗಲಕೋಟೆ ಜಿಲ್ಲೆಗೆ ಹೋಗಿ ಬಂದ ನಂತರ ಲಕ್ಷಣ ಕಂಡು ಬಂದ ನಂತರ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸದ್ಯ ನಗರದ 75 ಮನೆಗಳಿರುವ ಪ್ರದೇಶವನ್ನು ಕಂಟೈನ್ಮೆಂಟ್ ವಲಯವೆಂದು ಗುರುತಿಸಲಾಗಿದೆ. ಜತೆಗೆ ನಗರವನ್ನು ಸೀಲ್‌ಡೌನ್ ಮಾಡಲಾಗಿದೆ, ಹಾಗಾಗಿ ಇಲ್ಲಿರುವ ಜನರು ಸಹಕರಿಸಬೇಕು. ಜತೆಗೆ ಬಡಾವಣೆಯ ನಿವಾಸಿಗರು ಮನೆಯಿಂದ ಹೊರಗೆ ಹೋಗುವುದನ್ನು ನಿಲ್ಲಿಸಬೇಕು. ಅನಾವಶ್ಯಕವಾಗಿ ಹೊರ ಹೋಗಿ ಬರುವುದನ್ನು ಮಾಡಬಾರದು ಎಂದು ತಹಸೀಲ್ದಾರ್ ಸೂಚನೆ ನೀಡಿದರು.
ಗೆಳೆಯರೊಂದಿಗೆ ಮಸ್ತ್ ಪಾರ್ಟಿ ಮಾಡಿದ್ದ ಕೊರೋನಾ ಸೋಂಕಿತ: ಹೆಚ್ಚಿದ ಆತಂಕ
ಅಗತ್ಯ ವಸ್ತು ಪೊರೈಕೆ
ಇನ್ನು ನಗರದಲ್ಲಿರುವ 75 ಮನೆಗಳ ನಿವಾಸಿಗರಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುವುದು. ಯಾವುದೇ ರೀತಿಯ ಭಯ ಪಡುವ ಅವಶ್ಯಕತೆ ಇಲ್ಲ. ಜತೆಗೆ ನಿಮ್ಮ ರಕ್ಷಣೆಯ ಜತೆಗೆ ನಿಮ್ಮ ಕುಟುಂಬಗಳ ರಕ್ಷಣೆ ನಿಮ್ಮ ಕೈಯಲ್ಲಿ್ತದೆ ಎಂದು ಹೇಳಿದರು. ಸದ್ಯ ಈ ನಗರದ 200 ನೂರ ಮೀಟರ್ ವ್ಯಾಪ್ತಿಯನ್ನು ಕಂಟೈನ್ಮೆಂಟ್ ವಲಯ ಮತ್ತು ನೂರ ಮೀಟರ್ ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಗುರುತಿಸಲಾಗಿದೆ ಎಂದು ಹೇಳಿದರು.
ಭಯದ ವಾತಾವರಣ:
ಪಟ್ಟಣದ ಹೊರ ವಲಯದಲ್ಲಿರುವ ಮಾರುತಿ ನಗರದ ವ್ಯಕ್ತಿಗೆ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಪಟ್ಟಣದ ಜನರಲ್ಲಿ ಭಯದ ವಾತವರಣ ನಿರ್ಮಾಣವಾಗಿದೆ. ಆದರೆ, ಕೆಲವರು ಜನನಿಬಿಡ ಪ್ರದೇಶದಲ್ಲಿ ಸಂಚರಿಸುತ್ತಿದ್ದರೂ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಈ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಇನ್ನಷ್ಟುಬಿಗಿ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ ಎಂದು ಕೆಲ ಪ್ರಜ್ಞಾವಂತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ತಾಲೂಕಿನ ಪುರ ಗ್ರಾಮದ ಮಹಿಳೆ ಸೇರಿದಂತೆ ಪಟ್ಟಣದ ವ್ಯಕ್ತಿಗೆ ಸೋಂಕು ದೃಢ ಪಟ್ಟಹಿನ್ನೆಲೇಯಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿರುವ ಸಾರ್ವಜನಿಕರಿಗೆ ಭಯದ ವಾತವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಮುಂಜಾಗ್ರತೆ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಿದೆ. ಜನ ಸಹ ತಮ್ಮಷ್ಟಕ್ಕೆ ತಾವೇ ಈ ಕುರಿತು ಜಾಗೃತಿ ವಹಿಸುವ ಅವಶ್ಯಕತೆ ಇದೆ.
ಪಟ್ಟಣದ ಮಾರುತಿ ನಗರದಲ್ಲಿ ಬುಧವಾರ ನೂರು ಮೀಟರ್ ಪ್ರದೇಶವನ್ನು ಸೀಲ್‌ಡೌನ್ ಮಾಡಿದ ಸಂದರ್ಭದಲ್ಲಿ ಇಲ್ಲಿನ ಸಿಪಿಐ ಚಂದ್ರಶೇಖರ ಜಿ., ಪುರಸಭೆಯ ಮುಖ್ಯಾಧಿಕಾರಿ ಅಶೋಕ ಪಾಟೀಲ, ಪ್ರಭಾರ ಪಿಎಸ್‌ಐ ಈರಪ್ಪ ನಾಯಕ, ಎಎಸ್‌ಐ ತಾಯಪ್ಪ ಪುರಸಭೆಯ ಸದಸ್ಯ ವಸಂತ ಮೇಲಿನಮನೆ ಸೇರಿದಂತೆ ಇತರರು ಇದ್ದರು.