ಕಾರಟಗಿ ತಾಲೂಕಿನ ಹುಳ್ಕಿಹಾಳ ಕ್ಯಾಂಪ್‌ನಲ್ಲಿ 37 ವರ್ಷದ ಪುರುಷನಿಗೆ ಸೋಂಕು ದೃಢ| ಸೋಂಕಿತನ ಕುಟುಂಬದ ಇತರೆ ಮೂವರು ಸದಸ್ಯರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಪರೀಕ್ಷೆಗೆ ಒಳಪಡಿಸಿ 15 ದಿನಗಳ ಕಾಲ ಹೋಂ ಕ್ವಾರಂಟೈನ್‌ಲ್ಲಿರುವಂತೆ ಕಟ್ಟುನಿಟ್ಟಾಗಿ ಸೂಚನೆ|
ಕಾರಟಗಿ(ಜು. 06): ಕೊರೋನಾ ವೈರಸ್ ತನ್ನ ಅಟ್ಟಹಾಸ ಮುಂದುವರಿಸಿದ್ದು, ತಾಲೂಕಿನ ಹುಳ್ಕಿಹಾಳ ಕ್ಯಾಂಪ್(ಮಾರಿಕ್ಯಾಂಪ್)ನಲ್ಲಿ ಹೈದರಾಬಾದ್‌ನಿಂದ ಬಂದ ವ್ಯಕ್ತಿಗೆ ಶನಿವಾರ ಸೋಂಕು ಕಾಣಿಸಿಕೊಂಡಿದೆ. ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ದಿನಕ್ಕೊಬ್ಬರಲ್ಲಿ ಕೊರೋನಾ ವೈರಸ್ ಕಾಣಿಸಿಕೊಳ್ಳುತ್ತಿರುವುದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ.
ತಾಲೂಕಿನ ಹುಳ್ಕಿಹಾಳ ಕ್ಯಾಂಪ್‌ನಲ್ಲಿ 37 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದ್ದರಿಂದ ತಕ್ಷಣವೇ ಆರೋಗ್ಯ ಇಲಾಖೆ ಆ್ಯಂಬುಲೆನ್ಸ್ ಕ್ಯಾಂಪಿಗೆ ತೆರಳಿ ಸೋಂಕಿತನನ್ನು ಕೊಪ್ಪಳದ ಕೋವಿಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದೆ.
ಆರೋಗ್ಯ ಇಲಾಖೆಯ ಪ್ರಕಾರ ಸೋಂಕಿತ ವ್ಯಕ್ತಿ ಕಳೆದ ಕೆಲ ದಿನಗಳ ಹಿಂದೆ ಹೈದರಾಬಾದ್‌ನಿಂದ ಕ್ಯಾಂಪ್‌ಗೆ ಆಗಮಿಸಿದ್ದ. ಈ ವೇಳೆ ಜೂ. 30ರಂದು ಇಲ್ಲಿನ ಸಮುದಾಯ ಆಸ್ಪತ್ರೆಗೆ ಸ್ವತಃ ತೆರಳಿ ಸ್ವಾಬ್ ಟೆಸ್ಟ್ ಮಾಡಿಸಿಕೊಂಡಿದ್ದ. ಕೋವಿಡ್ ಪರೀಕ್ಷೆ ವರದಿಯಲ್ಲಿ ವ್ಯಕ್ತಿಗೆ ಸೋಂಕು ತಗುಲಿರುವುದು ಶನಿವಾರ ಖಚಿತವಾದ ಹಿನ್ನೆಲೆಯಲ್ಲಿ ತಕ್ಷಣವೇ ಎಚ್ಚೆತ್ತ ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕಿತನನ್ನು ಚಿಕಿತ್ಸೆಗಾಗಿ ಕೊಪ್ಪಳ ಕೋವಿಡ್ ಆಸ್ಪತ್ರೆಗೆ ದಾಖಲಿಸಿದೆ.
ಕೊಪ್ಪಳ: ಇಂದು ಲಾಕ್‌ಡೌನ್, ಆಚೆ ಬಂದೀರಿ ಜೋಕೆ!
ಸೋಂಕಿತನ ಕುಟುಂಬದ ಇತರೆ ಮೂವರು ಸದಸ್ಯರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಪರೀಕ್ಷೆಗೆ ಒಳಪಡಿಸಿ 15 ದಿನಗಳ ಕಾಲ ಹೋಂ ಕ್ವಾರಂಟೈನ್‌ಲ್ಲಿರುವಂತೆ ಕಟ್ಟುನಿಟ್ಟಾಗಿ ಸೂಚಿಸಿದೆ. ಕೃಷಿಕರೆ ಇರುವ ಕ್ಯಾಂಪ್‌ನಲ್ಲಿ ಶನಿವಾರ ಮಧ್ಯಾಹ್ನ ಗ್ರಾಪಂ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಎಲ್ಲಡೆ ಸ್ಯಾನಿಟೈಸ್ ಮಾಡಿತು. ಸೋಂಕಿತನ ಮನೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಿದರು. ಸ್ಥಳಕ್ಕೆ ಕಂದಾಯ, ಆರೋಗ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.