
ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ(ಜು.19): ಕೊರೋನಾ ಸೋಂಕು ದೃಢಪಟ್ಟಿದ್ದರೂ ಬುಧವಾರ ಬೆಂಗಳೂರಿನಿಂದ ತಪ್ಪಿಸಿಕೊಂಡು ಬಂದಿದ್ದ ತಾಲೂಕಿನ ಕಡಕೋಳ ಗ್ರಾಮದ 26 ವರ್ಷದ ಯುವಕನ ಸಂಪರ್ಕದಲ್ಲಿದ್ದ ಆತನ ತಂದೆ ಹಾಗೂ ಗ್ರಾಮದ ಮತ್ತಿಬ್ಬರಿಗೆ ಶುಕ್ರವಾರ ರಾತ್ರಿ ಕೊರೋನಾ ದೃಢಪಟ್ಟಿದ್ದು, ಸೋಂಕಿತರನ್ನು ಕರೆದೊಯ್ಯಲು ಬರಬೇಕಾದ ಆ್ಯಂಬುಲನ್ಸ್ ಶನಿವಾರ ಮಧ್ಯಾಹ್ನದ ವರೆಗೂ ಬಾರದೇ ರೋಗಿಗಳು ಪರದಾಡಿದ್ದು, ಬಳಿಕ ಸಂಜೆ 4 ಗಂಟೆಗೆ ಆ್ಯಂಬುಲೆನ್ಸ್ ಆಗಮಿಸಿ ಅವರನ್ನು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಿದ ಘಟನೆ ಜರುಗಿದೆ.
ಗ್ರಾಮದಲ್ಲಿ ಮೂರು ಜನರಿಗೆ ಸೋಂಕು ದೃಢಪಟ್ಟು ಸುಮಾರು 19 ತಾಸು ಕಳೆದರೂ ಸೋಂಕಿತರನ್ನು ಕರೆದೊಯ್ಯಲು ಆ್ಯಂಬುಲನ್ಸ್ ಬಾರದಿರುವುದರಿಂದ ಸೋಂಕಿತರು ಒಂದು ರೀತಿಯಲ್ಲಿ ಚಡಪಡಿಸುತ್ತಿದ್ದರೆ, ಗ್ರಾಮದ ಜನತೆ ಮತ್ತೊಂದು ರೀತಿ ಭಯಭೀತರಾಗಿದ್ದು, ಮನೆಗಳಿಗೆ ಬೀಗ ಹಾಕಿ ಗ್ರಾಮ ತೊರೆಯುತ್ತಿದ್ದಾರೆ. ಹಳ್ಳಿ ಹಳ್ಳಿಗೂ ವಕ್ಕರಿಸುತ್ತಿರುವ ಕೊರೋನಾ ಸೋಂಕು ಜನರ ಜೀವ ಹಿಂಡುತ್ತಿದೆ. ಒಂದು ಕಡೆ ಸಕಾಲದಲ್ಲಿ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗಳಿಗೆ ಸಾಗಿಸಲು ವಾಹನಗಳ ಬರುವಿಕೆಯ ಬಗ್ಗೆ ಅಧಿಕಾರಿಗಳು ಬರಿ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಭಯಭೀತರಾದ ಗ್ರಾಮಸ್ಥರು ಆರೋಪಿಸುತ್ತಾರೆ.
ಪಾನ್ ಶಾಪ್ ಮಾಲೀಕನಿಗೆ ಕೊರೋನಾ; ಪಾನ್ ಜಗಿದವರಿಗೆ ಶೋಧ
ಕೋವಿಡ್ ಪಾಸಿಟಿವ್ ಬಂದಿದೆ ಎಂದು ಗೊತ್ತಾದ ಮೇಲೂ ಸಮೀಪದ ಶಿರಹಟ್ಟಿಯಿಂದಾಗಲಿ, ಗದಗ ಜಿಮ್ಸ್‌ನಿಂದಾಗಲಿ ಆ್ಯಂಬುಲೆನ್ಸ್ ಏರ್ಪಾಡು ಮಾಡುವಲ್ಲಿ ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆಗಳ ವೈಫಲ್ಯ ಎದ್ದು ಕಾಣುತ್ತಿದೆ ಎನ್ನುವ ದೂರುಗಳು ಗ್ರಾಮಸ್ಥರಿಂದ ಕೇಳಿಬರುತ್ತಿದ್ದು, ಸರ್ಕಾರ ಕೇವಲ ಬೆಂಗಳೂರನಲ್ಲಿರುವ ಜನರ ಪ್ರಾಣ ರಕ್ಷಣೆಗಾಗಿ ನೂರಾರು ವಾಹನಗಳನ್ನು ಖರೀದಿಸಲು ತುರ್ತು ಆದೇಶ ನೀಡುತ್ತಿದೆ. ಗ್ರಾಮೀಣ ಜನರ ಗೋಳು ಅರ್ಥವಾಗುತ್ತಿಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು ಪರಿಸ್ಥಿತಿ ಗಂಭೀರವಾಗಿದ್ದು, ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಕೂಡಲೇ ತುರ್ತು ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಗಂಭೀರವಾಗುವ ಲಕ್ಷಣಗಳು ಕಾಣುತ್ತಿವೆ. ಮೀನಮೇಷ ಮಾಡದೇ ಜಿಲ್ಲೆ ಮತ್ತು ತಾಲೂಕ ಆಸ್ಪತ್ರೆಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆ್ಯಂಬುಲನ್ಸ್‌ಗಳನ್ನು ಸಜ್ಜಾಗಿಡಲು ಮುಂದಾಗಬೇಕಷ್ಟೇ.
ತಾಲೂಕಿನಲ್ಲಿ ಕೊರೋನಾ ಪಾಸಿಟಿವ್ ಹೆಚ್ಚು ಬರುತ್ತಿವೆ. ಅಲ್ಲದೇ ತಾಲೂಕಿನಲ್ಲಿ ಕೇವಲ ಒಂದೇ ಒಂದು ಆ್ಯಂಬುಲನ್ಸ್ ವಾಹನ ಇರುವುದರಿಂದ ಸೋಂಕಿತರನ್ನು ಆಸ್ಪತ್ರೆಗಳಿಗೆ ಕರೆದೊಯ್ಯುವಲ್ಲಿ ಸ್ವಲ್ಪ ವಿಳಂಬವಾಗುತ್ತಿದೆ. ಬೆಳಿಗ್ಗೆಯಿಂದ ಅದೇ ಕಾರ್ಯದಲ್ಲಿ ತೊಡಗಿದ್ದು, ಗ್ರಾಮಸ್ಥರಿಗೆ ತೊಂದರೆಯಾಗದಂತೆ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುಭಾಸ ದಾಯಗೊಂಡ ಅವರು ತಿಳಿಸಿದ್ದಾರೆ.
ಕಡಕೋಳ ಗ್ರಾಮದಲ್ಲಿ ಕಳೆದ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ 3 ಜನರಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, 19 ಗಂಟೆ ಕಳೆದರೂ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಿಲ್ಲ. ತಹಸೀಲ್ದಾರ್, ಪೊಲೀಸ್, ಆರೋಗ್ಯ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಗಮನಿಸಿದ್ದು, ತುರ್ತು ಕ್ರಮಕ್ಕೆ ಮುಂದಾಗಿಲ್ಲ. ಗ್ರಾಮಸ್ಥರಲ್ಲಿ ಭಯ ಉಂಟಾಗಿದ್ದು, ಮನೆಗಳಿಗೆ ಬೀಗ ಹಾಕಿ ಗ್ರಾಮ ತೊರೆಯುತ್ತಿದ್ದಾರೆ ಎಂದು ತಿಪ್ಪಣ್ಣ ಕೊಂಚಿಗೇರಿ (ತಾಪಂ ಸದಸ್ಯ), ತೋಟಪ್ಪ ಸೊನ್ನದ (ಗ್ರಾಪಂ ಸದಸ್ಯ) ಅವರು ತಿಳಿಸಿದ್ದಾರೆ.