ಬಳ್ಳಾರಿಯ ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತ ವ್ಯಕ್ತಿ ಸಾವು| ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿಯೇ ಕೆಲವು ದಿನಗಳ ಕಾಲ ಉಳಿದಿದ್ದರಿಂದ ಅಲ್ಲಿಂದಲೇ ಸೋಂಕು ತಗುಲಿರಬಹುದು ಎಂಬ ಶಂಕೆ| ಕೊರೋನಾದಿಂದ ಜಿಲ್ಲೆಯಲ್ಲಿ ಮೊದಲ ಬಲಿ ಎಂದು ಹೇಳಿದರೂ ಕೊರೋನಾ ವೈರಸ್‌ನಿಂದಾಗಿಯೇ ಇವರು ಮೃತಪಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ|
ಬಳ್ಳಾರಿ(ಮೇ.20): ಇಲ್ಲಿನ ಕೊರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಗರದ ಕೋಟೆ ಪ್ರದೇಶದ 65 ವರ್ಷದ ವ್ಯಕ್ತಿ ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಕಳೆದ ತಿಂಗಳು 23ರಂದು ಬೆಂಗಳೂರಿನಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಇವರು ಬಳ್ಳಾರಿಗೆ ಬಂದ ಬಳಿಕ ಗಣೇಶ ಕಾಲೋನಿಯ ತಮ್ಮ ಸಹೋದರ ಮನೆಯಲ್ಲಿ ಉಳಿದಿದ್ದರು. ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದ ಸಹ ಇವರು ಬಳಲುತ್ತಿದ್ದರು. ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿಯೇ ಕೆಲವು ದಿನಗಳ ಕಾಲ ಉಳಿದಿದ್ದರಿಂದ ಅಲ್ಲಿಂದಲೇ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿತ್ತು. ಕೊರೋನಾದಿಂದ ಜಿಲ್ಲೆಯಲ್ಲಿ ಮೊದಲ ಬಲಿ ಎಂದು ಹೇಳಿದರೂ ಕೊರೋನಾ ವೈರಸ್‌ನಿಂದಾಗಿಯೇ ಇವರು ಮೃತಪಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.
ಸಿರಗುಪ್ಪದಲ್ಲಿ ತಂದೆ ಸಾವು; ಬಸ್‌ಗಾಗಿ ಮೆಜೆಸ್ಟಿಕ್‌ನಲ್ಲಿ ಮಗಳ ಕಣ್ಣೀರು..!
ಸೋಂಕಿತ ವ್ಯಕ್ತಿಯ ಆರೋಗ್ಯ ಕ್ಷೀಣಿಸಿದ್ದರಿಂದ ಕುಟುಂಬ ಸದಸ್ಯರನ್ನು ಸೋಮವಾರ ಸಂಜೆ ಕರೆಸಿ ಅವರಿಗೆ ರೋಗಿಯ ಸ್ಥಿತಿಗತಿಯ ಕುರಿತು ಮನವರಿಕೆ ಮಾಡಿಕೊಡಲಾಯಿತು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸರೆಡ್ಡಿ ಅವರು ಬೆಂಗಳೂರಿನ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ನೀಡಿದ್ದು, ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಮಂಗಳವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.
ಮೃತ ದೇಹವನ್ನು ವೀಕ್ಷಿಸಲು ಇಲ್ಲಿನ ಕೊರೋನಾ ಆಸ್ಪತ್ರೆಯಲ್ಲಿ ಕುಟುಂಬ ಸದಸ್ಯರಿಗೆ ಅವಕಾಶ ಮಾಡಿಕೊಡಲಾಗಿತ್ತು. ದೂರದಿಂದಲೇ ಕುಟುಂಬಸ್ಥರು ದೇಹ ವೀಕ್ಷಿಸಿದರು. ಬೆಳಗ್ಗೆ 10 ಗಂಟೆಗೆ ಇಲ್ಲಿನ ಹರಿಶ್ಚಂದ್ರಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಯಿತು. ತಾಲೂಕು ಆಡಳಿತದ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ವೈರಸ್ ಸೋಂಕಿತ ವ್ಯಕ್ತಿಯನ್ನು ಹರಿಶ್ಚಂದ್ರಘಾಟ್‌ನಲ್ಲಿ ಅಂತ್ಯಸಂಸ್ಕಾರ ಮಾಡಬಾರದು. ಇದರಿಂದ ಸ್ಥಳೀಯ ನಿವಾಸಿಗಳಿಗೆ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅಂತ್ಯಸಂಸ್ಕಾರಕ್ಕೆ ವಿರೋಧಿಸಿದ್ದಾರೆ. ಪೊಲೀಸರು ಮಧ್ಯಪ್ರವೇಶ ಮಾಡಿ, ಮನವರಿಕೆ ಮಾಡಿಕೊಟ್ಟಬಳಿಕ ಸುಮ್ಮನಾಗಿದ್ದಾರೆ.
ಕೊರೋನಾ ವೈರಸ್ ಸೋಂಕಿತ ವ್ಯಕ್ತಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಇಲ್ಲಿನ ಗಣೇಶ ಕಾಲೋನಿಯಲ್ಲಿ ಆರೋಗ್ಯ ತಪಾಸಣೆ ಹಾಗೂ ಮನೆ ಮನೆ ಸಮೀಕ್ಷೆ ಕಾರ್ಯ ಚುರುಕುಗೊಳಿಸಲಾಗಿದೆ. ಕಂಟೈನ್ಮೆಂಟ್ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದ್ದು, ಯಾರೂ ಒಳಗಡೆ ಹೋಗದಂತೆ ಹಾಗೂ ಸ್ಥಳೀಯರು ಹೊರ ಬರದಂತೆ ನಿಗಾ ವಹಿಸಲಾಗಿದೆ. ಕಾಲೋನಿಯ ಒಳಗೆ ಪ್ರವೇಶವಾಗದಂತೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದ್ದು, ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಜಿಲ್ಲೆಯಲ್ಲಿ ಈ ವರೆಗೆ 19 ಜನರಿಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿದ್ದು, ಈ ಪೈಕಿ 13 ಜನರು ಗುಣಮುಖರಾಗಿದ್ದಾರೆ. 5 ಜನರು ಇಲ್ಲಿನ ಕೊರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈರಸ್ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಕಡೆ ಆರೋಗ್ಯ ತಪಾಸಣೆ ಕಾರ್ಯ ಮುಂದುವರಿದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ವರೆಗೆ 3,095,23 ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ.
ಮಂಗಳವಾರ 302 ಜನರ ಗಂಟಲುದ್ರವ ಪರೀಕ್ಷೆಗೆ ಕಳುಸಲಾಗಿದ್ದು, ಈ ವರೆಗೆ ಒಟ್ಟು 5849 ಜನರ ಗಂಟಲುದ್ರವ ಪರೀಕ್ಷೆಯಾಗಿದೆ. ಈ ಪೈಕಿ 5418 ಜನರಲ್ಲಿ ನೆಗೆಟಿವ್ ಬಂದಿದೆ. ಇನ್ನು 412 ಜನರ ಗಂಟಲುದ್ರವ ವೈದ್ಯಕೀಯ ಪರೀಕ್ಷೆಯನ್ನು ಕಾಯಲಾಗುತ್ತಿದೆ.