ಸೋಂಕಿತರನ್ನ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದ ಕಾನ್ಸಟೇಬಲ್‌ಗೆ ಪಾಸಿಟಿವ್| ಠಾಣೆಯ 20ಕ್ಕೂ ಹೆಚ್ಚು ಸಿಬ್ಬಂದಿಗೆ ಹೋಂ ಕ್ವಾರಂಟೈನ್: ಠಾಣೆಗೆ ಸ್ಯಾನಿಟೈಜರ್ ಸಿಂಪರಣೆ| ಗಂಟಲು ದ್ರವ ಮಾದರಿ ಪಡೆದ 15 ದಿನಗಳ ನಂತರ ವರದಿ : ಸಿಬ್ಬಂದಿಗಳ ಕುಟುಂಬದಲ್ಲಿ ಆತಂಕ|
ಶಹಾಪುರ(ಜೂ.06): ಕ್ವಾರಂಟೈನ್ ಕೇಂದ್ರದಿಂದ ಸುಮಾರು 50ಕ್ಕೂ ಹೆಚ್ಚು ಸೋಂಕಿತರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದ ಕಾನ್ಸಟೇಬಲ್ ಒಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದು ಪೊಲೀಸ್ ಸಿಬ್ಬಂದಿಗಳಲ್ಲಿ ಹಾಗೂ ಕುಟುಂಬದಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ.
ನಗರದ ಪೊಲೀಸ್ ಠಾಣೆಯ ಕಾನ್ಸಟೇಬಲ್ ಒಬ್ಬರಿಗೆ ಕೊರೋನಾ ಸೋಂಕು ತಗುಲಿರುವ ಸುದ್ದಿ ನಗರದಲ್ಲಿ ಶುಕ್ರವಾರ ಕಾಳ್ಗಿಚ್ಚಿನಂತೆ ಹಬ್ಬಿ ಪೊಲೀಸ್ ಮತ್ತು ಜನತೆಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಸುದ್ದಿ ತಿಳಿದ ತಕ್ಷಣ ನಗರ ಪೊಲೀಸ್ ಠಾಣೆಯಲ್ಲಿ ಸ್ಯಾನಿಟೈಸರ್ ಸಿಂಪರಣೆ ಮಾಡಲಾಗಿದೆ.
undefined
ಯಾದಗಿರಿ ಜಿಲ್ಲಾಡಳಿತದಿಂದ ಮಹಾ ಯಡವಟ್ಟು: ರಿಪೋರ್ಟ್ ಬರೋ ಮುನ್ನ ಕೊರೋನಾ ಶಂಕಿತರು ರಿಲೀಸ್..!
ಈ ಪೊಲೀಸ್ ಸಿಬ್ಬಂದಿಗೆ ಎಲ್ಲಿ ಮತ್ತು ಹೇಗೆ ಕೋವಿಡ್-19 ವೈರಸ್ ತಗುಲಿದ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲವಾದರೂ, ಕನ್ಯಾಕೋಳೂರು ಕ್ವಾರಂಟೈನ್ ಕೇಂದ್ರದಿಂದ ಪಾಸಿಟಿವ್ ಬಂದಿದ್ದ ವ್ಯಕ್ತಿಗಳನ್ನು ಶಿಫ್ಟ್ ಮಾಡಲು ಸಹಕರಿಸಿದ್ದರು. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ, ಇವರಿಗೆ ಸೋಂಕು ತಗುಲಿರುವುದು ಆಘಾತ ಮೂಡಿಸಿದೆ ಎನ್ನಲಾಗಿದೆ.
ಶುಕ್ರವಾರ ಸುದ್ದಿ ತಿಳಿಯುತ್ತಲೇ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಗೃಹರಕ್ಷಕದಳದ ಎಲ್ಲಾ ನೌಕರರು ಭೀಮರಾಯನಗುಡಿಯಲ್ಲಿರುವ ಗಂಟಲು ಮತ್ತು ಮೂಗಿನ ಮಾದರಿಯ ದ್ರವ ಪರೀಕ್ಷೆಗೆ ಒಳಗಾಗಿದ್ದಾರೆ. ಕಳೆದ ಮೇ 20ರಂದು ಎಲ್ಲಾ ಪೊಲೀಸ್ ಸಿಬ್ಬಂದಿಗಳು ಟೆಸ್ಟ್ ಮಾಡಿಸಿಕೊಂಡಿದ್ದೇವೆ. 15 ರಿಂದ 16 ದಿನಗಳವರೆಗೆ ರಿಪೋರ್ಟ್ ಲೇಟಾಯಿತು ಎಂದು ಹೇಳಿದ ಪೊಲೀಸ್ ಸಿಬ್ಬಂದಿಯೊಬ್ಬರು, ಎಲ್ಲರೂ ಒಟ್ಟಿಗೆ ಕೆಲಸ ಮಾಡಿ ಯಾವುದೇ ಭಯವಿಲ್ಲದೆ ಇದ್ದೆವು. ಪ್ರತಿದಿನ ನಾವುಗಳೆಲ್ಲರೂ ಯಾವುದೇ ಅನುಮಾನವಿಲ್ಲದೆ ಹೆಂಡರು ಮಕ್ಕಳು ಜೊತೆ ಬೆರೆಯುತ್ತಿದ್ದೆವು. ಈ ಪ್ರಕರಣದಿಂದ ಎಲ್ಲ ಪೊಲೀಸ್ ಸಿಬ್ಬಂದಿಗಳಲ್ಲಿ ಮತ್ತು ಅವರ ಕುಟುಂಬದಲ್ಲಿ ಆತಂಕ ಭಯ ಮನೆಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೊರೋನಾ ವಾರಿಯರ್ಸ್ ಆಗಿ ಸೇವೆಸಲ್ಲಿಸುತ್ತಿರುವ ನಾವುಗಳು ಟೆಸ್ಟ್ ಮಾಡಿಸಿಕೊಂಡ ವರದಿ ಇಷ್ಟುತಡವಾದರೆ, ಇನ್ನು ಸಾಮಾನ್ಯ ಜನರ ಟೆಸ್ಟ್ ವರದಿ ಇನ್ನೆಷ್ಟುವಿಳಂಬವಾಗಬಹುದು ಎಂದು ಹೇಳಿದ ಸಿಬ್ಬಂದಿಯೊಬ್ಬರು, ಈಗ ನಮ್ಮ ಮತ್ತು ನಮ್ಮ ಕುಟುಂಬದವರ ಬಗ್ಗೆ ತುಂಬಾ ಚಿಂತೆ ಕಾಡುತ್ತಿದೆ ಎಂದು ಅಳಲು ತೋಡಿಕೊಂಡರು.
ಬೇರೆ ಬೇರೆ ಕೆಲಸದ ನಿಮಿತ್ಯ ಪೊಲೀಸ್ ಠಾಣೆಗೆ ದಿನ ನೂರಾರು ಜನರು ಬಂದು ಹೋಗಿದ್ದಾರೆ. ಕರ್ತವ್ಯದಲ್ಲಿರುವ ಪೊಲೀಸರು ಸಾರ್ವಜನಿಕರ ಜೊತೆ ನಿಕಟ ಸಂಬಂಧ ವಿರಿಸಿಕೊಂಡಿದ್ದರ ಬಗ್ಗೆ ಜನರ ಎದೆಯಲ್ಲಿ ಡವಡವ ಶುರುವಾಗಿದೆ.
ನಮ್ಮ ಜೀವನ ಒತ್ತೆಯಿಟ್ಟು ಜನರ ಜೀವನ ರಕ್ಷಣೆಗಾಗಿ ಹಗಲಿರುಳು ಸೇವೆ ಸಲ್ಲಿಸಿದ್ದೇವೆ. ಈಗ ಸೋಂಕು ನಮ್ಮ ಜೊತೆ ಕೆಲಸ ಮಾಡುವ ಸಿಬ್ಬಂದಿಗೆ ತಗಲಿರುವ ಸುದ್ದಿಯಿಂದ ತುಂಬಾ ಹೆದರಿಕೆ ಯಾಗಿದೆ. ನಾವು ಟೆಸ್ಟ್ ಮಾಡಿಸಿಕೊಂಡ ವರದಿ ಸಕಾಲಕ್ಕೆ ಬಂದಿದ್ದರೆ ನಮಗೆ ಇಷ್ಟುಭಯವಾಗುತ್ತಿರಲಿಲ್ಲ. ನಮ್ಮ ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಅವರ ಬಗ್ಗೆ ತುಂಬಾ ಚಿಂತೆಯಾಗಿದೆ ಎಂದು ಶಹಾಪುರ ಪೊಲೀಸ್ ಠಾಣೆಯ ಹೆಸರು ಹೇಳಲಿಚ್ಛಿಸದ ಪೊಲೀಸ್ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.