ಹಾವೇರಿ: ಸಾಹಿತ್ಯ ಸಮ್ಮೇಳನಕ್ಕೆ ಮತ್ತೆ ಕೊರೋನಾ ಕಾರ್ಮೋಡ

By Kannadaprabha News  |  First Published Dec 23, 2022, 11:09 AM IST

ಕೊರೋನಾ ಕಾರಣದಿಂದ ಎರಡು ವರ್ಷಗಳಿಂದ ಹಲವು ಸಲ ಮುಂದೂಡುತ್ತ ಬಂದು, ಜ. 6ರಿಂದ ಮೂರು ದಿನಗಳ ಕಾಲ ನಿಗದಿಯಾಗಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಮತ್ತೆ ಕೊರೋನಾ ಕಾರ್ಮೋಡ ಕವಿದಿದೆ. ಹಲವು ದೇಶಗಳಲ್ಲಿ ಕೊರೋನಾ ಉಲ್ಬಣ ಆಗಿರುವುದರಿಂದ ಇಲ್ಲಿಯೂ ಆತಂಕ ಹೆಚ್ಚಿಸಿದೆ.


ನಾರಾಯಣ ಹೆಗಡೆ

ಹಾವೇರಿ (ಡಿ.23) : ಕೊರೋನಾ ಕಾರಣದಿಂದ ಎರಡು ವರ್ಷಗಳಿಂದ ಹಲವು ಸಲ ಮುಂದೂಡುತ್ತ ಬಂದು, ಜ. 6ರಿಂದ ಮೂರು ದಿನಗಳ ಕಾಲ ನಿಗದಿಯಾಗಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಮತ್ತೆ ಕೊರೋನಾ ಕಾರ್ಮೋಡ ಕವಿದಿದೆ. ಹಲವು ದೇಶಗಳಲ್ಲಿ ಕೊರೋನಾ ಉಲ್ಬಣ ಆಗಿರುವುದರಿಂದ ಇಲ್ಲಿಯೂ ಆತಂಕ ಹೆಚ್ಚಿಸಿದೆ.

Latest Videos

undefined

2020ರ ಫೆಬ್ರವರಿಯಲ್ಲಿ ಕಲಬುರಗಿಯಲ್ಲಿ ಜರುಗಿದ 85ನೇ ಸಾಹಿತ್ಯ ಸಮ್ಮೇಳನದಲ್ಲಿ 86ನೇ ಸಾಹಿತ್ಯ ಸಮ್ಮೇಳನದ ಆತಿಥ್ಯವನ್ನು ಹಾವೇರಿಗೆ ನೀಡಲಾಗಿತ್ತು. ಅದೇ ವರ್ಷಾಂತ್ಯಕ್ಕೆ ಹಾವೇರಿಯಲ್ಲಿ ಸಮ್ಮೇಳನ ನಡೆಸುವ ಬಗ್ಗೆ ಚರ್ಚೆಯಾಗಿತ್ತು. ಆದರೆ, ಅಲ್ಲಿಂದ ಇಲ್ಲಿಯವರೆಗೂ ಹಾವೇರಿ ಸಮ್ಮೇಳನಕ್ಕೆ ಕೊರೋನಾ ಕಾಟವೇ ಮುಗಿದಿಲ್ಲ. ಹಲವು ಸಲ ಸಮ್ಮೇಳನ ದಿನಾಂಕ ನಿಗದಿ ಮಾಡುತ್ತ, ಮುಂದೂಡುತ್ತ ಬಂದು ಈಗ ಅಂತೂ ಅಂತಿಮ ಹಂತಕ್ಕೆ ಬಂದಿದೆ. 86ನೇ ನುಡಿ ಜಾತ್ರೆಗೆ ಇನ್ನು 15 ದಿನಗಳೂ ಬಾಕಿ ಉಳಿದಿಲ್ಲ. ಆದರೆ, ಈಗ ಮತ್ತೊಮ್ಮೆ ಎಲ್ಲೆಡೆ ಕೊರೋನಾ ಆತಂಕ ಶುರುವಾಗಿದ್ದು, ಸಾಹಿತ್ಯ ಸಮ್ಮೇಳನಕ್ಕೂ ಕಾರ್ಮೋಡ ಕವಿದಂತಾಗಿದೆ.

 

Kannada Sahitya Sammelana: ಕನ್ನಡ ಸಾಹಿತ್ಯ ಸಮ್ಮೇಳನ ನೋಂದಣಿಗೆ ಚಾಲನೆ

ಹಲವು ಸಲ ವಿಘ್ನ

ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಆರಂಭದಿಂದಲೂ ಕೊರೋನಾ ಕಾಡುತ್ತಲೇ ಬಂದಿದೆ. ಹಲವು ಬಾರಿ ಮುಹೂರ್ತ ನಿಗದಿ ಮಾಡಿ ಮುಂದೂಡುತ್ತಲೇ ಬರಲಾಗಿತ್ತು. ಎಲ್ಲವೂ ಸರಿಯಾಗಿದ್ದರೆ ಸಮ್ಮೇಳನ ಮುಗಿದು ಎರಡು ವರ್ಷಗಳೇ ಕಳೆದಿರುತ್ತಿತ್ತು. ಒಂದನೇ ಅಲೆ, ಎರಡನೇ ಅಲೆಯಿಂದಾಗಿ ಸಮ್ಮೇಳನ ನಡೆಸಲು ಸಾಧ್ಯವಾಗಿರಲಿಲ್ಲ.

ಕೊರೋನಾ ನಿಯಂತ್ರಣಕ್ಕೆ ಬಂದಿದ್ದರಿಂದ ಕಳೆದ ಮೇ ತಿಂಗಳಲ್ಲಿ ಸಮ್ಮೇಳನ ಆಯೋಜಿಸಲು ದಿನಾಂಕ ನಿಗದಿ ಮಾಡಲಾಗಿತ್ತು. ತವರು ಜಿಲ್ಲೆಯಲ್ಲಿ ನಡೆಯುವ ಸಮ್ಮೇಳನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ 20 ಕೋಟಿ ರು. ಅನುದಾನ ಒದಗಿಸಿದ್ದರು. ಮಳೆಗಾಲ ಸಮೀಪಿಸಿದ್ದರಿಂದ ಅದನ್ನು ನವೆಂಬರ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ನಂತರ ಮತ್ತೆ ದಿನಾಂಕ ಬದಲಾವಣೆ ಮಾಡಿ ಅಂತೂ ಜನವರಿ 6, 7 ಮತ್ತು 8ರಂದು ಸಮ್ಮೇಳನಕ್ಕೆ ಮುಹೂರ್ತ ನಿಗದಿಯಾಗಿದೆ. ಇದಕ್ಕೆ ಸಕಲ ಸಿದ್ಧತೆಗಳೂ ನಡೆಯುತ್ತಿರುವಾಗ ಕೊರೋನಾ ಸೋಂಕು ಹಲವು ದೇಶಗಳಲ್ಲಿ ಉಲ್ಬಣಗೊಂಡಿದೆ. ದೇಶದಲ್ಲೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬಗ್ಗೆ ಮಾರ್ಗಸೂಚಿ ಹೊರಬೀಳುವ ಸಾಧ್ಯತೆಯಿದೆ. ಲಕ್ಷಾಂತರ ಜನರು ಸೇರುವ ಸಾಹಿತ್ಯ ಜಾತ್ರೆ ಮೇಲೆ ಕೊರೋನಾ ಕರಿನೆರಳು ಬೀಳುವಂತಾಗಿದೆ. ಇನ್ನೇನು ಎರಡು ವಾರ ಕಳೆದರೆ ಸಮ್ಮೇಳನ ಮುಗಿಯುವ ಹಂತಕ್ಕೆ ಬಂದಾಗ ಏನಾದರೂ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಬಿದ್ದರೆ ಎಂಬ ಆತಂಕ ಎಲ್ಲರಲ್ಲಿ ಮನೆ ಮಾಡಿದೆ.

ಅಂತಿಮ ಹಂತದ ಸಿದ್ಧತೆ

ಸಮ್ಮೇಳನಕ್ಕೆ ಇನ್ನು ಎರಡು ವಾರಗಳಷ್ಟೇ ಬಾಕಿ ಇರುವುದರಿಂದ ಸಿದ್ಧತೆ ಜೋರಾಗಿ ನಡೆದಿದೆ. ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕಲಾವಿದರ ಆಯ್ಕೆ, ಸಮ್ಮೇಳನಕ್ಕೆ ಬರುವವರಿಗೆ ವಸತಿ, ಸಾರಿಗೆ ಸೇರಿದಂತೆ ಅಗತ್ಯ ವ್ಯವಸ್ಥೆಗೆ ಜಿಲ್ಲಾಡಳಿತ ನಿರಂತರವಾಗಿ ಶ್ರಮಿಸುತ್ತಿದೆ. 24 ಉಪಸಮಿತಿಗಳು ಸಭೆ ನಡೆಸಿ ಏನೆಲ್ಲ ಸಿದ್ಧತೆಯಾಗಬೇಕು ಎಂಬುದನ್ನು ಚರ್ಚಿಸಿ ಅನುಷ್ಠಾನಕ್ಕೆ ಮುಂದಾಗಿವೆ. ಸಾಹಿತ್ಯ ಪರಿಷತ್ತು ಕೂಡ ಆಮಂತ್ರಣ ಪತ್ರಿಕೆ ಮುದ್ರಣ, ಪ್ರತಿನಿಧಿಗಳ ನೋಂದಣಿ, ಪುಸ್ತಕಗಳ ಮುದ್ರಣ ಇತ್ಯಾದಿ ತಯಾರಿ ನಡೆಸಿದೆ. ಈ ಹಂತದಲ್ಲಿ ಕೊರೋನಾ ಅಲೆ ಅಪ್ಪಳಿಸಿದರೆ ಏನು ಗತಿ ಎಂಬ ಚಿಂತೆ ಎಲ್ಲರನ್ನು ಕಾಡತೊಡಗಿದೆ. ಹಲವು ಬಾರಿ ವಿಘ್ನ ಎದುರಿಸಿರುವ ಹಾವೇರಿ ಸಮ್ಮೇಳನಕ್ಕೆ ಈ ಸಲ ಏನೂ ಆಗದಿರಲಿ ಎಂಬ ಆಶಯ ಎಲ್ಲರದ್ದಾಗಿದೆ.

Haveri: ಕನ್ನಡದ ಕಟ್ಟಾಳು ಪಾಟೀಲ್‌ ಪುಟ್ಟಪ್ಪ ಸಮಾಧಿ ಕಾಯಕಲ್ಪ ಮರೆತ ಸರ್ಕಾರ

ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಬಹುತೇಕ ಎಲ್ಲ ತಯಾರಿ ಅಂತಿಮ ಹಂತದಲ್ಲಿದೆ. ಈಗ ಕೊರೋನಾ ಆತಂಕ ಶುರುವಾಗಿದೆ. ಏನಾದರೂ ಟಫ್‌ ರೂಲ್ಸ್‌ ಜಾರಿಯಾದರೆ ಎಂಬ ಆತಂಕ ಎದುರಾಗಿದೆ. ದೇಶಕ್ಕೇ ನಿಯಮ ಜಾರಿಯಾದಾಗ ನಾವು ಏನೂ ಮಾಡಲು ಸಾಧ್ಯವಿಲ್ಲ. ಯಾವುದಕ್ಕೂ ಕಾದು ನೋಡೋಣ.

-ಲಿಂಗಯ್ಯ ಹಿರೇಮಠ ಕಸಾಪ ಜಿಲ್ಲಾಧ್ಯಕ್ಷರು

click me!