ಕೊಪ್ಪಳ ಜಿಲ್ಲೆಯಲ್ಲಿ ಸಚಿವ ಬಿಸಿ ಪಾಟೀಲ್ ಪ್ರವಾಸ/ ಕೊರೋನಾ ಪರಿಸ್ಥಿತಿ ಅವಲೋಕನ ಮಾಡಲಿರುವ ಉಸ್ತುವಾರಿ ಸಚಿವರು/ ಕೃಷಿ ಸಚಿವರಿಂದ ಎಲ್ಲ ಮಾಹಿತಿ ಸಂಗ್ರಹಣೆ
ಬೆಂಗಳೂರು (ಮೇ.5) ಕೊಪ್ಪಳ ಜಿಲ್ಲಾ ಉಸ್ತುವಾರಿಗಳೂ ಆಗಿರುವ ಬಿ.ಸಿ.ಪಾಟೀಲ್ ಕೊಪ್ಪಳದಲ್ಲಿನ ಕೋವಿಡ್ ಪರಿಶೀಲನೆಗೆ ಮುಂದಾಗಿದ್ದಾರೆ.
ನಾಳೆ ಅಂದರೆ ಮೇ.6ರಂದು ಬೆಳಿಗ್ಗೆ ಬೆಂಗಳೂರಿನ ಗೃಹಕಚೇರಿಯಿಂದ ಕೊಪ್ಪಳಕ್ಕೆ ತೆರಳುತ್ತಿರುವ ಅವರು, ಮಧ್ಯಾಹ್ನ 3.30 ಕ್ಕೆ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಸೋಂಕಿತರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಸೇರಿದಂತೆ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ.
ಕೊರೋನಾ ನಿಯಂತ್ರಂಣಕ್ಕೆ ಶಾಸಕರ ನೇತೃತ್ವದಲ್ಲಿ ಸೈನ್ಯ
ಬಳಿಕ 4.30 ರ ಸುಮಾರಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ಕೋವಿಡ್ ಅನ್ನು ನಿಯಂತ್ರಿಸಲು ಹಾಗೂ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಲು ಕೈಗೊಂಡ ಕ್ರಮಗಳಿಗೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳು ಹಾಗೂ ಇತರೆ ಸಂಬಂಧಿತ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಲಿದ್ದಾರೆ.
ಮೇ.7ರ ಶುಕ್ರವಾರದಂದು ಕುಷ್ಟಗಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಸೋಂಕಿತರಿಗೆ ಚಿಕಿತ್ಸೆ ,ನಿಯಂತ್ರಣ ಸಂಬಂಧ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಅಲ್ಲಿಂದ ಮಧ್ಯಾಹ್ನ ಯಲಬುರ್ಗಾ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಲಿರುವ ಬಿ.ಸಿ.ಪಾಟೀಲ್,ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಆಸ್ಪತ್ರೆಯಲ್ಲಿನ ಸೌಲಭ್ಯಗಳು ನಿಯಂತ್ರಣ ಬಗ್ಗೆ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.