ರಾಜ್ಯದಲ್ಲಿ 300ಕ್ಕೂ ಅಧಿಕ ಪಿಡಿಒಗಳಿಗೆ ಕೊರೋನಾ..!

By Kannadaprabha News  |  First Published May 22, 2021, 8:11 AM IST

* 7ಕ್ಕೂ ಹೆಚ್ಚು ಪಿಡಿಒಗಳು ಸೋಂಕಿಗೆ ಬಲಿ
* ಕೊರೋನಾ ಮೊದಲನೆ ಅಲೆಯಲ್ಲಿ 10ಕ್ಕೂ ಹೆಚ್ಚು ಪಿಡಿಒಗಳು ಸಾವು
* ಕೊರೋನಾ ನಿಯಂತ್ರಣಕ್ಕಾಗಿ ನಿರಂತರ ಜಾಗೃತಿ ಅಗತ್ಯ


ಶಿವಾನಂದ ಗೊಂಬಿ

ಹುಬ್ಬಳ್ಳಿ(ಮೇ.22): ಕೊರೋನಾ ವಾರಿಯರ್ಸ್‌ಗಳಾಗಿ ಕೆಲಸ ಮಾಡುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೂ (ಪಿಡಿಒ) ಕೊರೋನಾ ವಕ್ಕರಿಸುತ್ತಿದೆ. ಒಂದು ತಿಂಗಳಿಂದ ಈ ವರೆಗೂ 300ಕ್ಕೂ ಅಧಿಕ ಪಿಡಿಒಗಳಿಗೆ ಸೋಂಕು ತಗುಲಿದೆ. ಅದರಲ್ಲಿ 7ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದು ಪಿಡಿಒಗಳು ಹಾಗೂ ಅವರ ಕುಟುಂಬಸ್ಥರಲ್ಲಿ ತಲ್ಲಣವನ್ನುಂಟು ಮಾಡಿದೆ.

Latest Videos

undefined

ರಾಜ್ಯದಲ್ಲಿ 6,009 ಗ್ರಾಪಂಗಳಿದ್ದರೆ, 5,200 ಪಿಡಿಒಗಳಿದ್ದಾರೆ. ಕೆಲವೆಡೆ ಎರಡ್ಮೂರು ಪಂಚಾಯಿತಿಗಳನ್ನು ಒಬ್ಬೊಬ್ಬ ಪಿಡಿಒಗಳೇ ನಿರ್ವಹಿಸುತ್ತಿದ್ದಾರೆ. ಎರಡನೆಯ ಅಲೆ 15 ದಿನಗಳಲ್ಲಿ ಹಳ್ಳಿಗಳಲ್ಲಿ ಗುಪ್ತಗಾಮಿನಿಯಂತೆ ಎಲ್ಲೆಡೆ ವ್ಯಾಪ್ತಿಸುತ್ತಿದೆ. ಈ ಸವಾಲಿಗೆ ಮೈಯೊಡ್ಡಿ ಪಂಚಾಯಿತಿ ಮಟ್ಟದಲ್ಲಿ ಕೆಲಸಗಳು ಆಗುತ್ತಿವೆ. ಟಾಸ್ಕ್‌ಪೋರ್ಸ್‌ ರಚಿಸಿಕೊಂಡು ಕೊರೋನಾ ನಿಯಂತ್ರಣಕ್ಕೆ ಪಿಡಿಒ, ಸಿಬ್ಬಂದಿ ಎಲ್ಲರೂ ಹಗಲಿರಳು ಎನ್ನದೇ ಶ್ರಮಿಸುತ್ತಿದ್ದಾರೆ.
ಕೊರೋನಾ ನಿಯಂತ್ರಣಕ್ಕಾಗಿ ನಿರಂತರ ಜಾಗೃತಿ, ನಿಯಮ ಪಾಲನೆ, ನಗರ, ಪಟ್ಟಣಗಳಿಂದ ಊರಿಗೆ ಬಂದಿರುವ ಕಾರ್ಮಿಕರ ಕೈಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ, ಹೀಗೆ ಗ್ರಾಪಂಗಳು ಹತ್ತಾರು ಜವಾಬ್ದಾರಿಗಳನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ.

"

ಆತಂಕ: 

ಪುಣೆ, ಬೆಂಗಳೂರು, ಗೋವಾ ಮತ್ತಿತರರ ದೊಡ್ಡ ದೊಡ್ಡ ನಗರಗಳಿಂದ ಮರಳಿ ಬಂದಿರುವ ಜನರಿಂದ ಕೊರೋನಾ ಹಬ್ಬುತ್ತಲೇ ಇದೆ. ಇದು ಇದೀಗ ಪಿಡಿಒಗಳಿಗೆ ವಕ್ಕರಿಸುತ್ತಿದೆ. ರಾಜ್ಯದಲ್ಲಿ 300ಕ್ಕೂ ಅಧಿಕ ಪಿಡಿಒಗಳಿಗೆ ಕೊರೋನಾ ತಗುಲಿದೆ. ಒಂದೇ ವಾರದಲ್ಲಿ ಬೀದರ, ಕೊಪ್ಪಳ, ಬೆಳಗಾವಿ, ಬಳ್ಳಾರಿ ಹೀಗೆ ವಿವಿಧ ಜಿಲ್ಲೆಗಳಲ್ಲಿ 7ಕ್ಕೂ ಅಧಿಕ ಪಿಡಿಒಗಳು ಕೊರೋನಾದಿಂದ ಮೃತಪಟ್ಟಿದ್ದಾರೆ. ಇನ್ನು ಪಿಡಿಒಗಳಿಗೆ ತಗುಲಿದ ಸೋಂಕು ಅವರ ಕುಟುಂಬಕ್ಕೂ ವ್ಯಾಪ್ತಿಸುತ್ತಿದೆ. ಇದು ಪಿಡಿಒ ಹಾಗೂ ಅವರ ಕುಟುಂಬಸ್ಥರಲ್ಲಿ ತಲ್ಲಣವನ್ನುಂಟು ಮಾಡಿದೆ.

ಕೊರೋನಾದಿಂದ ಅನಾಥರಾದ ಮಕ್ಕಳ ದತ್ತು: ದಿಂಗಾಲೇಶ್ವರ ಶ್ರೀ

ಕೊರೋನಾ ಮೊದಲನೆಯ ಅಲೆ ಬಂದಾಗ 10ಕ್ಕೂ ಹೆಚ್ಚು ಪಿಡಿಒಗಳು ಮೃತಪಟ್ಟಿದ್ದರು. ಅದರಲ್ಲಿ ಒಬ್ಬರ ಕುಟುಂಬಕ್ಕೆ ಮಾತ್ರ ಸರ್ಕಾರ ಪರಿಹಾರ ನೀಡಿದೆ. 2ನೆಯ ಅಲೆಯಲ್ಲಿ 7 ಪಿಡಿಒಗಳು ಅಸು ನೀಗಿದ್ದಾರೆ. ಎಲ್ಲರಿಗೂ 30 ಲಕ್ಷ ಪರಿಹಾರ ನೀಡಬೇಕು. ಇದಕ್ಕಾಗಿ ಪ್ರತ್ಯೇಕ ನಿಧಿ ಕಾಯ್ದಿರಿಸಬೇಕು ಎಂದು ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಚ್‌. ಬೋರಯ್ಯ ತಿಳಿಸಿದ್ದಾರೆ.

ಹಳ್ಳಿಗಳಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಹಗಲಿರಳು ಶ್ರಮಿಸುತ್ತಿದ್ದೇವೆ. ನಮಗೂ ತಗುಲುತ್ತಿದೆ. ಇದು ನಮ್ಮ ಕುಟುಂಬಸ್ಥರಲ್ಲಿ ಆತಂಕವನ್ನುಂಟು ಮಾಡಿದೆ. ಕೆಲಸ ಮಾಡಲು ನಾವು ಸಿದ್ಧ. ಪಿಡಿಒ ಹಾಗೂ ಪಂಚಾಯಿತಿ ಸಿಬ್ಬಂದಿಗೆ ಸೋಂಕು ತಗುಲಿದರೆ ಚಿಕಿತ್ಸೆ ಪಡೆಯಲು ಪ್ರತ್ಯೇಕ ಬೆಡ್‌ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ದೇವರಗುಡಿಹಾಳ ಪಿಡಿಒ ಹನುಮಂತಪ್ಪ ಕಲಹಾಳ ಹೇಳಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!