ತುಮಕೂರು ಸಿದ್ಧಗಂಗಾ ಮಠದ 30 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲಿದೆ. ಎಲ್ಲರಿಗೂ ಎ ಸಿಂಟಮ್ಸ್ ಲಕ್ಷಣ ಇರೋದು ದೃಢಪಟ್ಟಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ತುಮಕೂರು (ಏ.20): ಸಿದ್ಧಗಂಗಾ ಮಠದಲ್ಲಿ 25 ರಿಂದ 30 ಮಕ್ಕಳಿಗೆ ಕೊರೋನಾ ಸೋಂಕು ತಗುಲಿದ್ದು, ಎಲ್ಲರಿಗೂ ಎ ಸಿಂಟಮ್ಸ್ ಲಕ್ಷಣ ಇರೋದು ದೃಢಪಟ್ಟಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ಸೋಮವಾರ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಠದಲ್ಲಿ ಪ್ರಸ್ತುತ ಎರಡು ಸಾವಿರ ಮಕ್ಕಳಿದ್ದಾರೆ. ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಿಸಿದ್ದೀವಿ. ಸದ್ಯ ಮಕ್ಕಳಿಗೆ ನೆಗಡಿ ಹಾಗೂ ಕೆಮ್ಮಿನಂತಹ ಲಕ್ಷಣಗಳಿಲ್ಲ. ಎಲ್ಲರೂ ದೈಹಿಕವಾಗಿ ಚೆನ್ನಾಗಿದ್ದಾರೆ. ಆದರೂ, ಅವರಿಗೆ ಕೋವಿಡ್ ಬಂದಿರುವುದು ದೃಢ ಪಟ್ಟಿರುವುದರಿಂದ ಪ್ರತ್ಯೇಕವಾಗಿ ಇರುವ ವ್ಯವಸ್ಥೆ ಮಾಡಲಾಗಿದೆ ಎಂದರು. ಸರ್ಕಾರದಿಂದ ಅಧಿಕಾರಿಗಳು ಬಂದು ಪರೀಕ್ಷೆ ಮಾಡುತ್ತಿದ್ದಾರೆ. ಮಠಕ್ಕೆ ಬರುವ ಭಕ್ತರಿಗೆ ಸದ್ಯಕ್ಕೆ ಯಾವುದೇ ನಿರ್ಬಂಧ ಹೇರುವುದಿಲ್ಲ. ಮಾಸ್ಕ್ ಮತ್ತು ಸಮಾಜಿಕ ಅಂತರ ಕಾಪಾಡಿಕೊಂಡು ಬಂದು ಹೋಗುವುದಕ್ಕೆ ಯಾವುದೇ ರೀತಿಯ ನಿರ್ಬಂಧ ಇಲ್ಲ ಎಂದು ತಿಳಿಸಿದ್ದಾರೆ.
'ಜನರಿಗೆ ಪ್ರತಿ ಸಂಜೆ ಸೂಪರ್ ಸ್ಪೆಷಾಲಿಟಿ ಸೌಕರ್ಯದೊಂದಿಗೆ ಉಚಿತ ಆರೋಗ್ಯ ಸೇವೆ'
ಭಾವುಕರಾದ ಸ್ವಾಮೀಜಿ: ಕೊರೋನಾ ಎರಡನೇ ಅಲೆಗೆ ಮಕ್ಕಳು, ವಯಸ್ಕರರು, ವೃದ್ಧರು ಬಲಿಯಾಗುವ ಪರಿಸ್ಥಿತಿ ಉಂಟಾಗಿದ್ದು, ಬಹಳ ನೋವಿನ ಸಂಗತಿ. ಔಷಧಿ ಬಂದಿದೆಯೋ, ಜನರಿಗೆ ಸಿಕ್ಕಿದೆಯೋ, ಸಿಗದವರಿಗೆ ಏನಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಮಾಧ್ಯಮಗಳಲ್ಲಿ ಕೊರೋನಾ ವಿಚಾರಗಳನ್ನು ಓದುತ್ತಿದ್ದರೆ ದುಃಖವಾಗುತ್ತಿದೆ ಎಂದು ಸ್ವಾಮೀಜಿ ಭಾವುಕರಾದರು.
ಸರ್ಕಾರ ಅನೇಕ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಹಿಂದಿನಂತೆ ಲಾಕ್‌ಡೌನ್ ಮಾಡುವುದೆಲ್ಲಾ ಕಷ್ಟವಾಗಲಿದೆ. ಜನಜೀವನ ಮತ್ತು ವ್ಯವಸ್ಥೆಗಳು ನಡೆಯಬೇಕಿದೆ. ಸಾರ್ವಜನಿಕರು ಅನಾವಶ್ಯಕವಾಗಿ ಓಡಾಡುವುದನ್ನು ನಿಲ್ಲಿಸಬೇಕು ಎಂದರು.