ವಿಜಯಪುರದಲ್ಲಿ ಬೆಡ್‌ ಸಿಗದೆ ಕೊರೋನಾ ರೋಗಿಗಳ ಪರದಾಟ

By Kannadaprabha News  |  First Published Apr 24, 2021, 1:37 PM IST

ಹೆಚ್ಚಿದ ಕೊರೋನಾ ಅಬ್ಬರ| ಪರಿಸ್ಥಿತಿ ನಿಭಾಯಿಸಲು ಆರೋಗ್ಯ ಸಿಬ್ಬಂದಿ ಹೆಣಗಾಟ| ಐಸಿಯು ವಾರ್ಡ್‌ನಲ್ಲಿ ರೋಗಿಗಳನ್ನು ನೋಡಿಕೊಳ್ಳಲು ಸಿಬ್ಬಂದಿಯೇ ಇಲ್ಲ ಎಂದು ಕೊರೋನಾ ರೋಗಿಗಳ ಸಂಬಂಧಿಕರ ದೂರು| ಮಿತಿ ಮೀರಿ ಕೊರೋನಾ ಪ್ರಕರಣಗಳು ಬರುತ್ತಿರುವುದರಿಂದಾಗಿ ಪರಿಸ್ಥಿತಿ ನಿಭಾಯಿಸುವುದು ಜಿಲ್ಲಾಡಳಿತಕ್ಕೆ ಕಷ್ಟದ ಕೆಲಸ| 


ವಿಜಯಪುರ(ಏ.24): ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಬೆಡ್‌ ಸಿಗದೆ ರೋಗಿಗಳ ಪರದಾಟ ಇನ್ನೂ ಮುಂದುವರಿದಿದೆ. ಜಿಲ್ಲಾಡಳಿತ ಬೆಡ್‌ಗಳ ವ್ಯವಸ್ಥೆ ಮಾಡಲು ಹರಸಾಹಸ ಪಡುತ್ತಿದೆ. ಆದರೆ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದಾಗಿ ಪರಿಸ್ಥಿತಿ ಕೈಮೀರಿದೆ. ಆದಾಗ್ಯೂ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಹಗಲು ರಾತ್ರಿ ಶ್ರಮಿಸುತ್ತಿದೆ.

ಜಿಲ್ಲಾಡಳಿತ ಬೆಡ್‌, ಆಕ್ಸಿಜನ್‌, ವೆಂಟಿಲೇಟರ್‌, ರೆಮ್‌ಡಿಸಿವಿರ್‌ ಮುಂತಾದ ಅವಶ್ಯಕತೆಗಳ ಸಮಸ್ಯೆ ನೀಗಿಸಲು ಹೆಚ್ಚಿನ ನಿಗಾ ವಹಿಸಲಾಗಿದೆ. ಆದಾಗ್ಯೂ ಮಿತಿ ಮೀರಿ ಕೊರೋನಾ ಪ್ರಕರಣಗಳು ಬರುತ್ತಿರುವುದರಿಂದಾಗಿ ಪರಿಸ್ಥಿತಿ ನಿಭಾಯಿಸುವುದು ಸ್ವಲ್ಪ ಕಷ್ಟವಾಗಿದೆ.

Latest Videos

undefined

ಜಿಲ್ಲಾಸ್ಪತ್ರೆಯಲ್ಲಿ ಬೆಡ್‌ ಇಲ್ಲದೆ ರೋಗಿಗಳನ್ನು ಅಲ್ಲಿನ ಸಿಬ್ಬಂದಿ 1 ಗಂಟೆವರೆಗೆ ಸ್ಟ್ರೆಚರ್‌ ಮೇಲೆ ಮಲಗಿಸಿದ ಘಟನೆಗಳು ವರದಿಯಾಗಿವೆ. ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ವೆಂಕಟೇಶ ಜಗಡೆಗೆ ಚಿಕಿತ್ಸೆ ಸಿಗದೆ ಪ್ರಯಾಸ ಪಡಬೇಕಾಯಿತು. ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಬಂದರೆ ಕೂಡಲೇ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದ ರೋಗಿಗಳು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.

ಕೋವಿಡ್‌ ಆಸ್ಪತ್ರೆಯಲ್ಲಿ ರೋಗಿಗಳು ಇರುವ ವಾರ್ಡ್‌ನಲ್ಲಿ ನಾನ್‌ ಕೋವಿಡ್‌ ಜನರು ಹೆಚ್ಚಿನ ರೀತಿಯಲ್ಲಿ ಓಡಾಡುತ್ತಿದ್ದಾರೆ. ಕೋವಿಡ್‌ ಐಸಿಯು ವಾರ್ಡ್‌ನಲ್ಲಿಯೇ ರೋಗಿಗಳ ಕುಟುಂಬಸ್ಥರು ಸಂಬಂಧಿಕರು ಇದ್ದಾರೆ. ಐಸಿಯು ವಾರ್ಡ್‌ನಲ್ಲಿ ರೋಗಿಗಳನ್ನು ನೋಡಿಕೊಳ್ಳಲು ಸಿಬ್ಬಂದಿಯೇ ಇಲ್ಲ ಎಂದು ಕೊರೋನಾ ರೋಗಿಗಳ ಸಂಬಂಧಿಕರು ದೂರಿದ್ದಾರೆ.

ಮತ್ತೆ ಡೆಡ್ಲಿ ವೈರಸ್‌ ಅಟ್ಟಹಾಸ: ಮರುಕಳಿಸಿದ 2020..!

ರೋಗಿಗಳನ್ನು ಸ್ಟೆ್ರಚರ್‌ ಮೇಲೆ ಮಲಗಿಸಿಕೊಂಡು ಎಳೆದೊಯ್ದು ಜಿಲ್ಲಾಸ್ಪತ್ರೆಗೆ ಕರವೇ ಮುಖಂಡ ನೇತೃತ್ವದಲ್ಲಿ ಸೇರಿಸಲಾಗಿದೆ. ಆರೋಗ್ಯ ಸಿಬ್ಬಂದಿ ಸಹಾಯಕ್ಕೆ ಬರದೇ ಇದ್ದುದ್ದರಿಂದ ತಾವೇ ರೋಗಿಯನ್ನು ಜಿಲ್ಲಾಸ್ಪತ್ರೆಗೆ ಸಾಗಿಸಬೇಕಾಯಿತು ಎಂದು ಶಕ್ತಿಕುಮಾರ ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಕೊರೋನಾ ಪ್ರಕರಣ ಹೆಚ್ಚಳದಿಂದ ಪರಿಸ್ಥಿತಿ ಕೈ ಮೀರುತ್ತಿದೆ. ಆದಾಗ್ಯೂ ಎಂಥ ಪರಿಸ್ಥಿತಿ ಬಂದರೂ ಅದನ್ನು ಸಮರ್ಥವಾಗಿ ನಿಭಾಯಿಸಲು ತಮ್ಮ ಆರೋಗ್ಯ ಸಿಬ್ಬಂದಿ ಸಿದ್ಧವಾಗಿದೆ. ಆರೋಗ್ಯ ಸಿಬ್ಬಂದಿ 8-10 ಮಂದಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದಾಗ್ಯೂ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ. ಬೆಡ್‌, ಆಕ್ಸಿಜನ್‌, ವೆಂಟಿಲೇಟರ್‌ ಮತ್ತಿತರ ಅಗತ್ಯ ವಸ್ತುಗಳನ್ನು ಸಕಾಲಕ್ಕೆ ಪೂರೈಸಲಾಗುತ್ತಿದೆ. ಮಿತಿ ಮೀರಿ ಹೆಚ್ಚುತ್ತಿರುವ ಕೊರೋನಾ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶರಣಪ್ಪ ಕಟ್ಟಿ ತಿಳಿಸಿದ್ದಾರೆ. 
 

click me!