ಕೊರೋನಾದಿಂದ ಸಾವಿಗೀಡಾದರೆ, ಅಥವಾ ವೆಂಟಿಲೇಟರ್ ಸಿಗದೇ ಸಾವಿಗೀಡಾದರೆ 10 ಲಕ್ಷ ರು. ಪರಿಹಾರ ಕುಟುಂಬಕ್ಕೆ ನೀಡಲು ಆಗ್ರಹಿಸಲಾಗಿದೆ.
ದಾವಣಗೆರೆ (ಸೆ.09): ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಕೋವಿಡ್- ನಾನ್ ಕೋವಿಡ್ ಸಾವುಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿವೆ. ವೆಂಟಿಲೇಟರ್ ಸಿಗದೇ ಸತ್ತವರು, ಕೊರೋನಾಗೆ ಬಲಿಯಾದವರ ಕುಟುಂಬಕ್ಕೆ 10 ಲಕ್ಷ ರು. ಪರಿಹಾರ ನೀಡುವಂತೆ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ ನೇತೃತ್ವದ ಪಕ್ಷ ಸದಸ್ಯರು, ಕಾಂಗ್ರೆಸ್ ಮುಖಂಡರ ನಿಯೋಗವು ಜಿಲ್ಲಾ ಆಡಳಿತದ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದೆ.
ನಗರದ ಜಿಲ್ಲಾಧಿಕಾರಿ ಕಚೇರಿಗೆ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಅವರನ್ನು ಭೇಟಿ ಮಾಡಿದ ವಿಪಕ್ಷ ಸದಸ್ಯರು, ಕಾಂಗ್ರೆಸ್ ಪದಾಧಿಕಾರಿಗಳು, ಮುಖಂಡರು ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಿದರು.
ಎ.ನಾಗರಾಜ ಮಾತನಾಡಿ, ದಿನದಿನಕ್ಕೂ ವೆಂಟಿಲೇಟರ್ ಸೌಲಭ್ಯ ಸಿಗದೇ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದೆ. ಇಷ್ಟೆಲ್ಲಾ ಸರಣಿ ಸಾವುಗಳು ಸಂಭವಿಸಿದರೂ ರಾಜ್ಯ ಸರ್ಕಾರ ಮೌನ ವಹಿಸಿರುವುದು ಖಂಡನೀಯ. ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳಿದ್ದರೂ ಅವುಗಳನ್ನು ಬಳಸುವ ಸಿಬ್ಬಂದಿ ಕೊರತೆಯಿಂದಾಗಿ ಸಾಧ್ಯವಾಗಿಲ್ಲ ಎಂದು ಅವರು ದೂರಿದರು.
ಕೊರೋನಾ ಕೊನೆಯಲ್ಲ, ಜಗತ್ತಿಗೆ ವಕ್ಕರಿಸಲಿದೆ ಇನ್ನಷ್ಟು ಮಹಾಮಾರಿ: WHO ಎಚ್ಚರಿಕೆ ..
ವೆಂಟಿಲೇಟರ್ ನಿರ್ವಹಣೆಗೆ ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳದ್ದರಿಂದಲೇ ಸಾವುಗಳು ಹೆಚ್ಚುತ್ತಿವೆ. ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಂಡು, ತ್ವರಿತವಾಗಿ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಈ ಮೂಲಕ ಕೊರೋನಾ ಸಾವಿನ ಪ್ರಮಾಣ ಕಡಿಮೆ ಮಾಡಲು, ಸಾವು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೊಪ್ಪಳದಲ್ಲಿ ಕೋವಿಡ್ ಮರಣ ಮೃದಂಗ: ಬೆಡ್ ಸಿಗದೆ ಸಾಲು ಸಾಲು ಸಾವು .
ತಮ್ಮ ವಾರ್ಡ್‌ನ ವಿನೋಬ ನಗರವೊಂದರಲ್ಲೇ ವೆಂಟಿಲೇಟರ್ ಸಿಗದಿದ್ದರಿಂದ ಇಂದು ಒಂದೇ ದಿನ ಮೂವರು ಸಾವನ್ನಪ್ಪಿದ್ದಾರೆ. ಈ ಸಾವುಗಳಿಗೆ ಯಾರು ಹೊಣೆ? ಇರುವ ವೆಂಟಿಲೇಟರ್‌ಗಳ ಜೊತೆಗೆ ಹೊಸದಾಗಿ ಬಂದಿರುವ ವೆಂಟಿಲೇಟರ್‌ಗಳನ್ನು ಬಳಸಿದ್ದರೆ ಸಾವಿನ ಪ್ರಮಾಣ ಕಡಿಮೆ ಮಾಡಬಹುದಿತ್ತು. ವೆಂಟಿಲೇಟರ್ ನಿರ್ವಹಣೆ ಸಿಬ್ಬಂದಿ ಇಲ್ಲದಿರುವುದು, ಆಕ್ಸಿಜನ್ ನೀಡಲು ಸಾಧ್ಯವಾಗದೇ ಅಮಾಯಕರ ಪ್ರಾಣ ಹೋಗುತ್ತಿದೆ. ಇದಕ್ಕೆ ಸರ್ಕಾರವೇ ನೇರ ಹೊಣೆ. ಇನ್ನಾದರೂ ಜಿಲ್ಲಾ ಸಚಿವರು, ಆರೋಗ್ಯ ಸಚಿವರು ದಾವಣಗೆರೆ ಜಿಲ್ಲಾಸ್ಪತ್ರೆಗೆ ವೆಂಟಿಲೇಟರ್ ನಿರ್ವಹಣೆಗೆ ಅಗತ್ಯ ಸಿಬ್ಬಂದಿ ನೇಮಿಸಲಿ ಎಂದು ಆಗ್ರಹಿಸಿದರು.
ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು, ವೆಂಟಿಲೇಟರ್ ನಿರ್ವಹಣೆಗೆ ಅಗತ್ಯ ಸಿಬ್ಬಂದಿಯನ್ನು ನೇಮಿಸಿ, ಕೋವಿಡ್ ಸೋಂಕಿತರ ಪ್ರಾಣ ಕಾಪಾಡಬೇಕು. ಬಡವರು, ಮಧ್ಯಮ ವರ್ಗದ ಸೋಂಕಿತರು ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಪರದಾಡುತ್ತಿದ್ದಾರೆ. ಬಹುತೇಕ ಕುಟುಂಬಗಳ ಆಧಾರವಾಗಿದ್ದ ವ್ಯಕ್ತಿಗಳು, ಮಧ್ಯವಯಸ್ಕರೇ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಇಂತಹ ಕುಟುಂಬಗಳ ಮುಂದಿನ ಜೀವನವೇ ಕಷ್ಟವಾಗಿದೆ. ಕೋವಿಡ್‌ಗೆ ಬಲಿಯಾದವರ ಕುಟುಂಬಕ್ಕೆ 10 ಲಕ್ಷ ರು. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.