ಸೆ.17ರಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಗೆ ನಿರ್ಧಾರ| ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸಾನ| ಕೋವಿಡ್ ಹಿನ್ನೆಲೆ; ಹೆಚ್ಚು ಜನ ಸೇರುವಂತಿಲ್ಲ-ಫೇಸ್‌ಬುಕ್, ಯೂಟ್ಯೂಬ್‌ನಲ್ಲಿ ಲೈವ್ ವೀಕ್ಷಣೆ| ಶಾಲಾಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ, ಜಿಲ್ಲೆಯ ಆಯಾ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರೇ ಧ್ವಜಾರೋಹಣ ಮಾಡಬೇಕು|
ಕಲಬುರಗಿ(ಸೆ.09): ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯನ್ನು ಜಿಲ್ಲೆಯಾದ್ಯಂತ ಸೆ.17ರಂದು ಸಂಭ್ರಮದಿಂದ ಆಚರಿಸಬೇಕು. ಜೊತೆಗೆ ಕೋವಿಡ್-19 ಹಿನ್ನೆಲೆಯಲ್ಲಿ ಅಷ್ಟೇ ಜಾಗರೂಕತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸಾನ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸಮಾರಂಭ ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಹೆಚ್ಚು ಜನ ಸೇರಿಸಬಾರದು. ಆದರೆ, ಕಾರ್ಯಕ್ರಮ ವೀಕ್ಷಿಸುವ ಸೌಭಾಗ್ಯ ಎಲ್ಲರಿಗೂ ದೊರಕುವಂತಾಬೇಕು ಎಂದ ಅವರು, ಫೇಸ್‌ಬುಕ್, ಯೂ ಟ್ಯೂಬ್ ಹಾಗೂ ಟೀವಿ ಚಾನೆಲ್‌ಗಳಲ್ಲಿ ನೇರಪ್ರಸಾರ ಮಾಡಲಾಗುವುದು. ಸಾರ್ವಜನಿಕರು ತಾವಿದ್ದಲ್ಲಿಯೇ ನೇರವಾಗಿ ಕಾರ್ಯಕ್ರಮ ವೀಕ್ಷಿಸಬಹುದು ಎಂದರು.
ಸಮಾರಂಭದ ವೇದಿಕೆ ಅದ್ಭುತವಾಗಿ ಮೂಡಿಬರಬೇಕು. ಹೂದಾನಿಗಳಿಂದ ವೇದಿಕೆ ಅಲಂಕಾರಗೊಳಿಸಬೇಕು. ಈ ಸಂಬಂಧ ತೋಟಗಾರಿಕಾ ಇಲಾಖೆ ಅಧಿಕಾರಿಗಳು ನೀಲಿನಕ್ಷೆ ತಯಾರಿಸಿ, ಎರಡು ದಿನದೊಳಗಾಗಿ ಅದಕ್ಕೆ ಒಪ್ಪಿಗೆ ಪಡೆದುಕೊಳ್ಳಬೇಕು. ಕಾರ್ಯಕ್ರಮದ ದಿನದಂದು ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆಗೆ ಅಲಂಕಾರ ಮಾಡಬೇಕು. ಹಾಗೂ ಗಣ್ಯರು ಪ್ರತಿಮೆಗೆ ಹೂಮಾಲೆ ಹಾಕುವುದಕ್ಕಾಗಿ ಮೆಟ್ಟಿಲುಗಳ ವ್ಯವಸ್ಥೆ ಮಾಡಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತರಿಗೆ ತಿಳಿಸಿದರು.
ಕಲಬುರಗಿ: ದೇವಸ್ಥಾನದ ಹುಂಡಿ ಹೊತ್ತೊಯ್ದ ಖದೀಮರು, ಸಿಸಿಟಿವಿಯಲ್ಲಿ ಸೆರೆ
ಮಳೆ ಬಂದರೂ ಕಾರ್ಯಕ್ರಮ ಸ್ಥಳದಲ್ಲಿ ಯಾವುದೇ ಸಮಸ್ಯೆಯಾಗಬಾರದು. ಈ ಹಿನ್ನೆಲೆಯಲ್ಲಿ ವಾಟರ್ ಪೂ›ಫ್ ಶಾಮಿಯಾನ ಹಾಕಿಸಬೇಕು. ಈ ಸಂಬಂಧ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಯಾರಿ ಮಾಡಿಕೊಳ್ಳಬೇಕು ಎಂದರು.
ಶಾಲಾಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಜೊತೆಗೆ ಜಿಲ್ಲೆಯ ಆಯಾ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರೇ ಧ್ವಜಾರೋಹಣ ಮಾಡಬೇಕು. ಜಿಲ್ಲಾ ಕೇಂದ್ರದಲ್ಲಿ ಬೆಳಿಗ್ಗೆ 7.30ಕ್ಕೆ ಧ್ವಜಾರೋಹಣ ಮಾಡಿದ ನಂತರ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ಡಿಎಆರ್ ಮೈದಾನದಲ್ಲಿ ನಡೆಯುವ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಸೂಚಿಸಿದರು.
ಸಭೆಯಲ್ಲಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಪಿ. ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಂ ಜಾಜ್‌ರ್, ಡಿಸಿಪಿ ಕಿಶೋರ್ ಬಾಬು, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ತುಕಾರಾಂ ಪಾಂಡ್ವೆ, ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಹಾಗೂ ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ ಇದ್ದರು.