ಬೆಂಗಳೂರಲ್ಲಿ ಕೇವಲ 30 ದಿನದಲ್ಲಿ ಕೊರೋನಾ ದುಪ್ಪಟ್ಟು: 1000 ಕ್ಕೂ ಅಧಿಕ ಮಂದಿ ಸಾವು

By Kannadaprabha NewsFirst Published Sep 27, 2020, 7:24 AM IST
Highlights

ಆ.26ರಂದು ಸೋಂಕಿತರ ಸಂಖ್ಯೆ 1.15 ಲಕ್ಷ, ಸೆ.26ಕ್ಕೆ 2.16 ಲಕ್ಷ| ಸರಾಸರಿ ದಿನಕ್ಕೆ 35 ದರದಲ್ಲಿ ಕೊರೋನಾ ಸೋಂಕಿತರು ಮೃತಪಡುತ್ತಿದ್ದಾರೆ| ಆದರೂ ಆ.26ಕ್ಕೆ ಹೋಲಿಸಿದರೆ ಸಾವಿನ ಪ್ರಮಾಣ ಕಡಿಮೆ| ಮೂರನೇ ದಿನವೂ ನಗರದಲ್ಲಿ 4 ಸಾವಿರ ಮಂದಿಗೆ ಸೋಂಕು| 

ಬೆಂಗಳೂರು(ಸೆ.27): ರಾಜಧಾನಿ ಬೆಂಗಳೂರಿನಲ್ಲಿ ಕೇವಲ 30 ದಿನದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದ್ವಿಗುಣಗೊಂಡಿದ್ದು, ಒಂದು ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಕಳೆದ ಆಗಸ್ಟ್‌ 26ರ ವೇಳೆ ನಗರದಲ್ಲಿ ಒಟ್ಟು ಕೊರೋನಾ ಸೋಂಕಿತರ 1.15 ಲಕ್ಷವಿತ್ತು. ಕೇವಲ ಒಂದು ತಿಂಗಳಲ್ಲಿ (ಸೆ.26) ಒಂದು ಲಕ್ಷಕ್ಕೂ ಅಧಿಕ ಕೊರೋನಾ ಸೋಂಕಿತರು ಪತ್ತೆಯಾಗುವ ಮೂಲಕ 2.16 ಲಕ್ಷ ತಲುಪಿದೆ.
ಆ.26ರಂದು ಶೇ.11ರ ಪ್ರಮಾಣದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಪತ್ತೆಯಾಗುತ್ತಿತ್ತು. ಆದರೆ, ಇದೀಗ (ಸೆ.26) ಕೊರೋನಾ ಸೋಂಕು ಪತ್ತೆಯಾಗುವ ಪ್ರಮಾಣ ಶೇ.15.04ಕ್ಕೆ ಏರಿಕೆಯಾಗಿದೆ. ಈ ಮೂಲಕ ಕೊರೋನಾ ಸೋಂಕಿತರು ಪತ್ತೆ ಪ್ರಮಾಣ ಶೇ.4 ರಷ್ಟು ಹೆಚ್ಚಾಗಿದೆ.

ಇನ್ನು ಆ.26 ರಂದು ಶೇ.67ರ ದರದಲ್ಲಿ 77,531 ಮಂದಿ ಗುಣಮುಖರಾಗುತ್ತಿದ್ದವು. ಸೆ. 26ರ ವೇಳೆ ಗುಣಮುಖರ ಸಂಖ್ಯೆ ಶೇ.78.67ಕ್ಕೆ ಏರಿಕೆ ಆಗುವ ಮೂಲಕ 1,70,430ಕ್ಕೆ ತುಲಪಿದೆ. ಸರಾಸರಿ ದಿನಕ್ಕೆ 3,375 ಪ್ರಕರಣದಲ್ಲಿ ಸೋಂಕಿತರು ಪತ್ತೆಯಾಗಿದ್ದು, ಸರಾಸರಿ 3,089 ಪ್ರಮಾಣದಲ್ಲಿ ಗುಣಮುಖರಾಗಿದ್ದಾರೆ.

ಕೊರೋನಾ ನಿಯಮ ಉಲ್ಲಂಘನೆ ದಂಡ ಪ್ರಮಾಣ ಸಾವಿರಕ್ಕೆ ಹೆಚ್ಚಿಸಲು ಪ್ರಸ್ತಾವನೆ

ಸಾವಿನ ಒಟ್ಟಾರೆ ಪ್ರಮಾಣದಲ್ಲಿ ಇಳಿಕೆ:

ಆ.26ರಿಂದ ಸೆ.26ರ ಅವಧಿಯಲ್ಲಿ ಬರೋಬ್ಬರಿ ಒಂದು ಸಾವಿರಕ್ಕೂ ಅಧಿಕ ಮಂದಿ (1,038) ಮೃತಪಟ್ಟಿದ್ದಾರೆ. ಸರಾಸರಿ ದಿನಕ್ಕೆ 35 ದರದಲ್ಲಿ ಕೊರೋನಾ ಸೋಂಕಿತರು ಮೃತಪಡುತ್ತಿದ್ದಾರೆ. ಆದರೂ ಆ.26ಕ್ಕೆ ಹೋಲಿಸಿದರೆ ಸಾವಿನ ಪ್ರಮಾಣ ಕಡಿಮೆಯಾಗಿದೆ. ಆ.26ರಂದು ಶೇ.1.50 ರಷ್ಟು ಸೋಂಕಿತರು ಮೃತಪಡುತ್ತಿದ್ದರು. ಸೆ.26ರ ವೇಳೆಗೆ ಸಾವಿನ ಪ್ರಮಾಣ ಶೇ.1.30ಕ್ಕೆ ಕುಸಿದಿದೆ. ಈ ಮೂಲಕ ಸಾವಿನ ಪ್ರಮಾಣ ಶೇ.0.20 ರಷ್ಟುಇಳಿಕೆಯಾಗಿದೆ.

ಸಾಮೂಹಿಕ ಮಟ್ಟದಲ್ಲಿ ನಿಯಂತ್ರಣ ಆಗುತ್ತಿಲ್ಲ

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು, ನಗರದಲ್ಲಿ ನಿತ್ಯಸುಮಾರು 25 ಸಾವಿರಕ್ಕೂ ಅಧಿಕ ಜನರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಆದ್ದರಿಂದ ಪಾಸಿಟಿವ್‌ ಕೇಸ್‌ಗಳ ಸಂಖ್ಯೆ ಹೆಚ್ಚಾಗಿದೆ. ಮತ್ತೊಂದೆಡೆ ಅನ್‌ಲಾಕ್‌ ನಂತರ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಸಾಮಾನ್ಯ ದಿನಗಳಲ್ಲಿ ಓಡಾಡುವಂತೆ ಓಡಾಡುತ್ತಿದ್ದಾರೆ. ಸ್ಯಾನಿಟೈಸ್‌ ಬಳಸದಿರುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸದಿರುವುದರಿಂದ ಸೋಂಕು ರಾಜಧಾನಿಯಲ್ಲಿ ವ್ಯಾಪಿಸುತ್ತಿದೆ. ಹೀಗಾಗಿ ಸರ್ಕಾರ ಅನೇಕ ಕಾನೂನುಗಳನ್ನು ತಂದರೂ ಸಮುದಾಯ ಮಟ್ಟದಲ್ಲಿ ಸೋಂಕು ನಿಯಂತ್ರಣವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಮೂರನೇ ದಿನವೂ ನಗರದಲ್ಲಿ 4 ಸಾವಿರ ಮಂದಿಗೆ ಸೋಂಕು

ರಾಜಧಾನಿ ಬೆಂಗಳೂರಿನಲ್ಲಿ ಸತತ ಮೂರನೇ ದಿನ ನಾಲ್ಕು ಸಾವಿರಕ್ಕೂ ಅಧಿಕ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗುವ ಮೂಲಕ ನಗರ ಸೋಂಕಿತರ ಸಂಖ್ಯೆ 2.16 ಲಕ್ಷ ತಲುಪಿದೆ.
ಕಳೆದ ಗುರುವಾರ ಒಂದೇ ದಿನ 4,192 ಪ್ರಕರಣ ಪತ್ತೆಯಾಗಿದ್ದವು, ಶುಕ್ರವಾರ 4,080 ಪ್ರಕರಣ ಪತ್ತೆಯಾಗಿದ್ದವು. ಸೆ.26ರ ಶನಿವಾರ ಸಹ 4,083 ಹೊಸ ಪ್ರಕರಣ ಪತ್ತೆಯಾಗಿವೆ. ಈ ಮೂಲಕ ನಗರದಲ್ಲಿ ಈವರೆಗೆ ಒಟ್ಟು 2,16,630 ಪ್ರಕರಣ ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಶನಿವಾರ 2,494 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 1,70,430ಕ್ಕೆ ತಲುಪಿದೆ. ಇನ್ನೂ 43,378 ಸಕ್ರಿಯ ಪ್ರಕರಣಗಳಿವೆ. 264 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇನ್ನು ಶನಿವಾರ ನಗರದಲ್ಲಿ ಒಟ್ಟು 27 ಮಂದಿ ಸೋಂಕಿನಿಂದ ಮೃತಪಟ್ಟವರದಿಯಾಗಿದ್ದು, ನಗರದ ಒಟ್ಟು ಮೃತರ ಸಂಖ್ಯೆ 2,821ಕ್ಕೆ ಏರಿಕೆಯಾಗಿದೆ.

ಗುಣಮುಖರ ಸಂಖ್ಯೆ ಇಳಿಕೆ:

ಕಳೆದ ಮೂರು ದಿನದಲ್ಲಿ ಬರೋಬ್ಬರಿ 12,355 ಪ್ರಕರಣ ಪತ್ತೆಯಾಗಿವೆ. ಆದರೆ, ಇದೇ ಮೂರು ದಿನದಲ್ಲಿ 8,895 ಮಂದಿ ಮಾತ್ರ ಗುಣಮುಖರಾಗಿದ್ದಾರೆ. ಒಟ್ಟಾರೆ ಗುಣಮುಖರ ಸಂಖ್ಯೆ ಶೇ.78 ರಷ್ಟು ಇದ್ದರೂ ಕಳೆದ ಮೂರು ದಿನಗಳಿಂದ ಗುಣಮುಖರ ಪ್ರಮಾಣ ಶೇ.71ಕ್ಕೆ ಕುಸಿದಿದೆ.
 

click me!