'ಬೈ ಎಲೆಕ್ಷನ್ ರಿಸಲ್ಟ್‌ ದಿನ ಕುಕ್ಕರ್‌ ಶಬ್ದ ರಾಜ್ಯಕ್ಕೆ ಕೇಳಿಸಲಿದೆ'..!

By Kannadaprabha NewsFirst Published Nov 30, 2019, 2:04 PM IST
Highlights

ಇನ್ನೂ ಮತಯಾಚನೆಗೆ ಇರುವ ಮೂರುವರೆ ದಿನ ನನಗಾಗಿ ಓಡಾಡಿ ನಿಮಗಾಗಿ ಇನ್ನೂ ಮೂರೂವರೆ ವರ್ಷ ನಾನು ಓಡಾಡುತ್ತೇನೆ. ಡಿ. 9ರ ಫಲಿತಾಂಶದಲ್ಲಿ ಕುಕ್ಕರ್‌ ಶಬ್ದ ಇಡೀ ರಾಜ್ಯಕ್ಕೆ ಕೇಳಿಸಬೇಕು ಎಂದು ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡ ಹೇಳಿದ್ದಾರೆ.

ಮೈಸೂರು(ನ.30): ಇನ್ನೂ ಮತಯಾಚನೆಗೆ ಇರುವ ಮೂರುವರೆ ದಿನ ನನಗಾಗಿ ಓಡಾಡಿ ನಿಮಗಾಗಿ ಇನ್ನೂ ಮೂರೂವರೆ ವರ್ಷ ನಾನು ಓಡಾಡುತ್ತೇನೆ. ಡಿ. 9ರ ಫಲಿತಾಂಶದಲ್ಲಿ ಕುಕ್ಕರ್‌ ಶಬ್ದ ಇಡೀ ರಾಜ್ಯಕ್ಕೆ ಕೇಳಿಸಬೇಕು ಎಂದು ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡ ಹೇಳಿದ್ದಾರೆ.

ಹೊಸಕೋಟೆ ಗ್ರಾಮಾಂತರ ಪ್ರದೇಶದ ಸುಮಾರು 22 ಗ್ರಾಮಗಳಲ್ಲಿ ಶುಕ್ರವಾರ ಮಿಂಚಿನ ಮತಯಾಚನೆ ಮಾಡಿದ ಅವರು, ಸ್ಪರ್ಧೆಯಲ್ಲಿರುವ ಎರಡು ಪಕ್ಷದ ಅಭ್ಯರ್ಥಿಗಳು ಹೊರಗಿನವರಾಗಿದ್ದು, ನಾನು ಸ್ಥಳೀಯ ಮಣ್ಣಿನ ಮಗನಾಗಿದ್ದೇನೆ. ಬಿಜೆಪಿ ಕಟ್ಟಿಬೆಳೆಸಿದ ನನಗೆ ಟಿಕೆಟ್‌ ನೀಡದೆ ಸ್ವಾರ್ಥಕ್ಕಾಗಿ ಎಂಟಿಬಿಗೆ ಟಿಕೆಟ್‌ ನೀಡಿದ್ದಾರೆ ಎಂದು ಹೇಳಿದ್ದಾರೆ.

JDS, ಕಾಂಗ್ರೆಸ್ ಶಾಸಕರು BJP ಸೇರೋಕೆ ತುದಿಗಾಲಲ್ಲಿದ್ದಾರೆ: ಶ್ರೀರಾಮುಲು

ನನಗೆ ಆನೇಕ ಆಮಿಷಗಳನ್ನು ಒಡ್ಡಿದರೂ ಕ್ಷೇತ್ರದ ಜನರ ನಡುವಿನ ಸಂಬಂಧವನ್ನು ಕಡಿದುಕೊಳ್ಳಲು ಇಷ್ಟಪಡದ ಜನರ ಆಶಯದಂತೆ ಸ್ವಾಭಿಮಾನಕ್ಕಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪ​ರ್ಧಿಸಿದ್ದು, ನಿಮ್ಮ ಸ್ವಾಭಿಮಾನವನ್ನು ನೀವೇ ಉಳಿಸಿಕೊಳ್ಳಬೇಕು. ಸುಪ್ರೀಂ ಕೋರ್ಟ್‌ ಅನರ್ಹರು ಎಂದು ತೀರ್ಪು ನೀಡಿದೆ. ಕ್ಷೇತ್ರದ ಜನರು ಎಂಟಿಬಿಯನ್ನು ಅನರ್ಹ ಮಾಡಿ ಸ್ವಾಭಿಮಾನದ ಕೈಹಿಡಿಯಬೇಕು ಎಂದಿದ್ದಾರೆ.

ತಂದ ಮಗನ ದೂರು ಮಾಡಿದ ಬಿಜೆಪಿ:

ಕುತಂತ್ರ ರಾಜಕಾರಣದ ಸನ್ನಿವೇಶದಲ್ಲಿ ನನ್ನ ತಂದೆ ಬಚ್ಚೇಗೌಡರನ್ನು ನನ್ನಿಂದ ದೂರ ಮಾಡಿದ್ದಾರೆ. ಅವರ ಜೊತೆ ಮಾತನಾಡಿ ಎರಡು ತಿಂಗಳು ಕಳೆದಿದೆ. ತಂದೆ ಮಗನನ್ನೇ ದೂರ ಮಾಡಿದ ಈತ ನಾಳೆ ನಿಮ್ಮನ್ನು ಬಿಡ್ತಾನಾ? ಕುಟುಂಬಗಳಲ್ಲಿರುವ ಅಣ್ಣ ತಮ್ಮಂದಿರನ್ನು ದೂರ ಮಾಡ್ತಾನೆ ಎಂದು ವಾಗ್ದಾಳಿ ನಡೆಸಿದರು.

ಜನರ ಆಯ್ಕೆ ನನ್ನ ತೀರ್ಮಾನ:

ಕೆಲವರು ಶರತ್‌ ಗೆದ್ದರೇ ಮತ್ತೆ ಬಿಜೆಪಿಗೆ ಹೋಗ್ತಾನೆ ಎಂದು ಹೇಳುತ್ತಿದ್ದಾರೆ. ನಾನು ಕ್ಷೇತ್ರದ ಜನರ ತೀರ್ಮಾನದಂತೆ ಪಕ್ಷೇತರ ಅಭ್ಯರ್ಥಿಯಾಗಿದ್ದೇನೆ. ಜನರ ಆಶೀರ್ವಾದದಿಂದ ಗೆದ್ದರೇ ಮತ್ತೆ ಜನರ ತೀರ್ಮಾನದಂತೆ ನಡೆಯುತ್ತೇನೆ ವಿನಃ ಸ್ವಂತ ನಿರ್ಣಯ ತೆಗೆದುಕೊಂಡು ಯಾವುದೇ ಪಕ್ಷಕ್ಕೆ ಹೋಗಲ್ಲ ಎಂದರು.

ಪಕ್ಷಪಾತ ರಾಜಕಾರಣ ಮಾಡೋಲ್ಲ:

ಕ್ಷೇತ್ರದಲ್ಲಿ 2.5 ಲಕ್ಷ ಮತದಾರರು ನನ್ನಗೆ ಮುಖ್ಯ. ನಾನು ಗೆದ್ದರೆ ಯಾವುದೇ ಪಕ್ಷಪಾತ ರಾಜಕಾರಣ ಮಾಡೋಲ್ಲ. ಕೆಲವರು ನನ್ನ ಬಗ್ಗೆ ಇಲ್ಲಸಲ್ಲದ ಕೆಟ್ಟಸುದ್ದಿಗಳನ್ನು ಹಬ್ಬಿಸಿ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ನನಗೆ ಕ್ಷೇತ್ರ ಎಲ್ಲ ಮತದಾರರು ಒಂದೇ. ಪಕ್ಷಭೇದ ಮಾಡಲ್ಲ. ಸುಳ್ಳು ಮಾಹಿತಿಗಳನ್ನು ನಂಬದೆ ಸ್ವಾಭಿಮಾನಿ ಕೈ ಹಿಡಿಯಬೇಕು ಎಂದರು.

ಬೆಮೂಲ್‌ ನಿರ್ದೇಶಕ ಸಿ. ಮಂಜುನಾಥ್‌ ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ ಅಪ್ಪ, ಅಮ್ಮನ ಬೆಂಬಲ ಇಲ್ಲದೇ ಚುನಾವಣೆ ಅಖಾಡದಲ್ಲಿರುವ ಶರತ್‌ ಬಚ್ಚೇಗೌಡರಿಗೆ ತಾಲೂಕಿನ ಜನತೆಯೇ ಅಪ್ಪ, ಅಮ್ಮ, ಅಣ್ಣ, ತಮ್ಮ, ಅಜ್ಜಿ, ತಾತ, ಅಕ್ಕ, ತಂಗಿಯಾಗಿ ಮತ ನೀಡಬೇಕು ಎಂದರು.

'ಮುಂದೆ ಕಾಂಗ್ರೆಸ್ ಪಕ್ಷದಲ್ಲಿ ದೀಪ ಹಚ್ಚಲು ಯಾವ ನಾಯಕರು ಇರೋದಿಲ್ಲ'

ಮಲ್ಲಿಕಾನಪುರದಲ್ಲಿ ಶರತ್‌ ಅಭಿಮಾನಿಗಳು ಸುಮಾರು 500 ಕೆಜಿ ತೂಕದ 30 ಅಡಿ ಸೇಬಿನ ಹಾರ ಹಾಕಿ ಸ್ವಾಗತ ಕೋರಿದ್ದು ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಸಿ. ಮುನಿಯಪ್ಪ, ಎಪಿಎಂಸಿ ಅಧ್ಯಕ್ಷ ಕೆ.ಸತೀಶ್‌, ಹರೀಶಬಾಬು, ಬಂಗಾರಪ್ಪ, ಭೀಮಕನಹಳ್ಳಿ, ರಾಮೇಗೌಡ, ನಾಗರಾಜಪ್ಪ, ಗಣೇಶ್‌, ಲಲಿತಾ ಮಹೇಶ್‌, ಚಿಕ್ಕಪ್ಪಯಣ್ಣ, ರಾಜಗೋಪಾಲ್‌, ಅಲ್ಪಸಂಖ್ಯಾತ ಮುಖಂಡರು ಹಾಜರಿದ್ದರು.

ಬಿ.ಸಿ. ಪಾಟೀಲ್ ಗೆ ಎದುರಾಗಿದೆಯಾ ಸೋ​ಲಿನ ಭೀತಿ?

ಚಿಕ್ಕಹುಲ್ಲೂರು ಗ್ರಾಮದಲ್ಲಿ ಪ್ರಚಾರದ ವೇಳೆ ಶರತ್‌ ಬಚ್ಚೇಗೌಡ, ಪ್ರತಿ ಮನೆಯಲ್ಲಿ ಅಕ್ಷಯ ಪಾತ್ರೆ ಕುಕ್ಕರ್‌ ಇರುತ್ತೆ. ದಿನಕ್ಕೆರಡು ಬಾರಿ ಕುಕ್ಕರ್‌ ಕೂಗುತ್ತೆ. ಕುಕ್ಕರ್‌ ಕೂಗಿದಾಗ ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡರನ್ನು ನೆನಪಿಸಿಕೊಂಡು ಮತ ನೀಡಿ. ಹೊಸಕೋಟೆ ತಾಲೂಕು ಅಭಿವೃದ್ಧಿಯಾಗಬೇಕಾದರೆ ಸ್ವಾಭಿಮಾನದ ಚಿನ್ಹೆ ಕುಕ್ಕರ್‌ಗೆ ಮತ ನೀಡಿ ಸ್ವಾಭಿಮಾನ ಎತ್ತಿಹಿಡಿಯಬೇಕು ಎಂದಿದ್ದಾರೆ.

click me!