ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಕಾವೇರಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ಮುಂದುವರೆಸಿದರು.
ಮೈಸೂರು : ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಕಾವೇರಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ಮುಂದುವರೆಸಿದರು.
ಕಾವೇರಿ ಕ್ರಿಯಾ ಸಮಿತಿಯ ಕ್ರಿಯಾ ಸಮಿತಿ ಹಾಗೂ ಕರ್ನಾಟಕ ಜನಪರ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಪ್ರತಿಭಟಿಸಲಾಯಿತು.
ನಗರದ ಪುರಭವನ ಆವರಣದ ವೇದಿಕೆಯಲ್ಲಿ ಜಮಾವಣೆಗೊಂಡ ಕಾವೇರಿ ಕ್ರಿಯಾ ಸಮಿತಿ ಹಾಗೂ ಜನಪರ ವೇದಿಕೆ ಕಾರ್ಯಕರ್ತರು ತಮಿಳುನಾಡು ಸರ್ಕಾರ ಆಗಾಗ್ಗೆ ಕಾವೇರಿ ವಿವಾದವನ್ನು ಕೆದಕುವ ಮೂಲಕ ಕನ್ನಡಿಗರ ಭಾವನೆಯನ್ನು ಕೆರಳಿಸುತ್ತಿದೆ. ನಮಗೆ ನೀರಿಲ್ಲದಿರುವಾಗ ತಮಿಳುನಾಡಿಗೆ ನೀರು ಬಿಡುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಕೇಂದ್ರ, ಕಾವೇರಿ ನೀರು ಹಂಚಿಕೆ ಪ್ರಾಧಿಕಾರ ಹಾಗೂ ತಮಿಳುನಾಡಿನ ಸರ್ಕಾರಗಳ ಒತ್ತಡಕ್ಕೆ ಮಣಿಯಬಾರದು. ನೀರನ್ನು ಬಿಡದಿರುವ ತೀರ್ಮಾನ ತೆಗೆದುಕೊಳ್ಳಬೇಕು. ಕಾವೇರಿ ವಿವಾದ ಎದುರಾದಾಗ ಯಾರೂ ರಾಜಕೀಯ ಮಾಡಬಾರದು. ಎಲ್ಲಾ ಪಕ್ಷಗಳೂ ಒಟ್ಟಾಗಿ ಹೋರಾಟ ಮಾಡುವ ಮೂಲಕ ಕರ್ನಾಟಕದ ಹಿತ ಕಾಯಬೇಕು. ನಮ್ಮ ಸಂಸದರು ದಿಲ್ಲಿಯಲ್ಲಿ ಧನಿ ಎತ್ತಬೇಕು ಎಂದು ಅವರು ಆಗ್ರಹಿಸಿದರು.
ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಎಂ. ಮೋಹನ್ ಕುಮಾರ್ ಗೌಡ, ಮೂಗೂರು ನಂಜುಂಡಸ್ವಾಮಿ, ಸುರೇಶ್ ಗೌಡ, ಎಸ್. ಜಯಪ್ರಕಾಶ, ಮೆಲ್ಲಹಳ್ಳಿ ಮಹದೇವಸ್ವಾಮಿ, ಜನಪರ ವೇದಿಕೆ ರಾಜ್ಯಾಧ್ಯಕ್ಷ ಸೋಮೇಗೌಡ, ರಾಜ್ಯ ಗೌರವಾಧ್ಯಕ್ಷ ಹೊನ್ನೇಗೌಡ, ಶಂಕರ್, ಪ್ರಕಾಶ್, ಚಂದ್ರಶೇಖರ್, ಗೋಪಾಲ್ ಮೊದಲಾದವರು ಪಾಲ್ಗೊಂಡಿದ್ದರು.