* ಜಲಪಾತಗಳಿಗೆ ಜೀವಕಳೆ, ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟ
* ಬಾಲಕಿಗಾಗಿ ಶೋಧಕಾರ್ಯ
* ಚಿಕ್ಕಮಗಳೂರು ಜಿಲ್ಲೆಯಲ್ಲಿ 8 ಮನೆಗಳು ಪೂರ್ಣವಾಗಿ ಮತ್ತು 15 ಮನೆಗಳು ಭಾಗಶಃ ಹಾನಿ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜು.09): ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಕೆಲವೆಡೆ ಧರೆ ಮತ್ತು ರಸ್ತೆ ಕುಸಿತ ಉಂಟಾಗಿರುವುದರಿಂದ ಸಂಚಾರಕ್ಕೆ ಪರದಾಡುವಂತಾಗಿದೆ. ನೀರಿನಲ್ಲಿ ಕೊಚ್ಚಿಹೋಗಿದ್ದ ವಿದ್ಯಾರ್ಥಿನಿ ಬಾಲಕಿ ಪತ್ತೆ ಕಾರ್ಯ ಮುಂದುವರೆದಿದೆ.
ಮಲೆನಾಡಿನಲ್ಲಿ ಮಳೆ ಅರ್ಭಟ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅರ್ಭಟ ಜೋರಾಗಿದೆ. ಮಲೆನಾಡಿನಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಜಿಲ್ಲೆಯಲ್ಲಿ ಜುಲೈ ಮೊದಲನೇ ವಾರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಮಲೆನಾಡು ಭಾಗಗಳಾದ ಶೃಂಗೇರಿ, ಮೂಡಿಗೆರೆ, ಎನ್.ಆರ್.ಪುರ ಹಾಗೂ ಕೊಪ್ಪ ತಾಲ್ಲೂಕುಗಳಲ್ಲಿ ಹೆಚ್ಚು ಮಳೆಯಾಗಿದೆ. ಮೂಡಿಗೆರೆ, ಕಳಸ,ಕೊಟ್ಟಿಗೆಗಾರ,ಕುದುರೆಮುಖ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕಿನಲ್ಲಿ ಭಾರೀಮಳೆಯಾಗುತ್ತಿದೆ. ಕಳೆದ 5 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಶಾಲಾ,ಕಾಲೇಜುಗಳಿಗೆ ರಜೆ ಮುಂದುವರೆದಿದೆ. ತುಂಗಾ,ಭದ್ರಾ ಮತ್ತು ಹೇಮಾವತಿ ನದಿಗಳು ಅಪಾಯದ ಮಟ್ಟ ತಲುಪಿವೆ.
ಚಿಕ್ಕಮಗಳೂರು: ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿರುವ ತೀರ್ಥಕೆರೆ ಜಲಪಾತ
ಮಳೆಯಿಂದ ಜಲಪಾತಗಳಿಗೆ ಜೀವ ಕಳೆ
ಮಳೆಯಿಂದ ಜಲಪಾತಗಳಿಗೆ ಜೀವಕಳೆಬಂದಿದೆ. ಮಳೆಯನ್ನು ಲೆಕ್ಕಿಸದೆ ಪ್ರವಾಸಿಗರು ಜಲಪಾತ ವೀಕ್ಷಣೆಗೆ ಮುಂದಾಗುತ್ತಿದ್ದಾರೆ. ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿಯಲ್ಲೂ ಅಧಿಕ ಮಳೆಯಾಗುತ್ತಿದ್ದು, ಹೆಬ್ಬೆಜಲಪಾತ ಮೈದುಂಬಿದೆ. 80 ಅಡಿ ಎತ್ತರದಿಂದ ನೀರು ಧುಮ್ಮಿಕ್ಕಿ ಹರಿಯುತ್ತಿದೆ. ಹಾಲ್ನೊರೆಯಂತೆ ಕಂಡುಬರುತ್ತಿದ್ದು, ಚಂದ್ರದ್ರೋಣ ಪರ್ವತ ತಪ್ಪಲಿನಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಕಲ್ಹತ್ತಿಗಿರಿ ಜಲಪಾತ ತಂಬಿಹರಿಯುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.ಕೊಪ್ಪ ತಾಲೂಕು ಜಯಪುರ ಸಮೀಪದ ತೀರ್ಥಕೆರೆ ಜಲಪಾತ ಜೋರಾಗಿದ್ದು, ಈ ಜಲಪಾತ ವೀಕ್ಷಣೆಗೆ ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ಮಳೆಗಾಲದಲ್ಲಿ ಜೀವತಳೆಯುವ ಜಲಪಾತಗಳು ನೋಡುಗರು ನಿಬ್ಬೆರಗಾಗಿದ್ದಾರೆ.
ಮನೆಗಳ ಕುಸಿತ
ಚಿಕ್ಕಮಗಳೂರು ಜಿಲ್ಲೆಯಲ್ಲಿ 8 ಮನೆಗಳು ಪೂರ್ಣವಾಗಿ ಮತ್ತು 15 ಮನೆಗಳು ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಗುಡ್ಡೇತೋಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಡ್ಡೇತೋಟ ಕೆಳಗಿನ ಸೈಟ್ ಐತಪ್ಪ ಎಂಬುವವರ ಮನೆ ಮುಂಭಾಗದ ಧರೆಕುಸಿದಿದ್ದು, ಮನೆಯು ಕುಸಿಯುವ ಹಂತದಲ್ಲಿರುವುದರಿಂದ ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ.ಜಯಪುರ ಹೇರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶುಂಠಿಕುಡಿಗೆ, ಶಾಂತಿಕುಡಿಗೆ, ಬಿಟ್ಟಿಕುಡಿಗೆ ಹಾಗೂ ಬ್ರಹ್ಮರಾಜನಕುಡಿಗೆ ಸಂಪರ್ಕ ರಸ್ತೆ ಮಳೆಗೆ ಸಂಪೂರ್ಣವಾಗಿ ಕುಸಿತವಾಗಿದ್ದು, ಇಲ್ಲಿನ ಮನೆಗಳಿಗಿದ್ದ ಏಕೈಕ ರಸ್ತೆ ಕುಸಿತದಿಂದಾಗಿ ಇಲ್ಲಿನ ನಿವಾಸಿಗಳು ಕಂಗಾಲಾಗಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ಸತತವಾಗಿ ಮಳೆಯಾಗುತ್ತಿದೆ. ಕೋಗಿಲೆ- ದೇವರಮನೆ ಭಾಗದ ಅರಣ್ಯದ ಗುಡ್ಡಪ್ರದೇಶದಲ್ಲಿ ಮಣ್ಣು ಕುಸಿದಿದೆ. ಗುತ್ತಿ- ಕಂಬಳಗದ್ದೆ ಆನೆಗೆರಸಿ ಭಾಗದ ಅರಣ್ಯದಲ್ಲೂ ಮಣ್ಣು ಕುಸಿದಿದೆ.
ಬಾಲಕಿಗಾಗಿ ಶೋಧಕಾರ್ಯ
ಐದು ದಿನಕಳೆದರೂ ನೀರಿನಲ್ಲಿ ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿ ಸುಪ್ರಿತ ಪತ್ತೆಯಾಗಿಲ್ಲ, ಎಸ್ಡಿಆರ್ಎಫ್, ಅಗ್ನಿಶಾಮಕ ದಳದವರು ಶೋಧಕಾರ್ಯ ಮುಂದುವರೆಸಿದ್ದಾರೆ. ಮಲ್ಪೆಯಿಂದ ಮುಳುಗು ತಜ್ಞರು ಆಗಮಿಸಿ ಶೋಧಕಾರ್ಯ ನಡೆಸುತ್ತಿದ್ದಾರೆ. ಒಟ್ಟು 70 ಸಿಬ್ಬಂದಿಗಳುಶೋಧ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.