ಎಟಿಎಂನಿಂದ ಹಣ ಬರದೇ ಇದ್ದರೂ ಉಳಿತಾಯ ಖಾತೆಯಿಂದ ರೂ.20000 ಡೆಬಿಟ್ ಆಗಿತ್ತು. ತನ್ನ ಉಳಿತಾಯ ಖಾತೆ ಇರುವ ಹುಬ್ಬಳ್ಳಿಯ ಅಂಚಟಗೇರಿಯ ಯುನಿಯನ್ ಬ್ಯಾಂಕ್‍ಗೆ ದೂರು ನೀಡಿ ಎಟಿಎಂ ತಪ್ಪನ್ನು ಸರಿಪಡಿಸಲು ಕೋರಿದ್ದ ದೂರುದಾರ.
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ಜ.04): ಹುಬ್ಬಳ್ಳಿಯ ಅಂಚಟಗೇರಿ ನಿವಾಸಿ ಮಹ್ಮದ್ ರಫಕತ್ ಅನಸಾರಿ ಎಂಬುವವರು ಬಿಹಾರ ರಾಜ್ಯದ ಮುಝಫರಪುರ್‍ಗೆ ಪ್ರವಾಸಕ್ಕೆ ತೆರಳಿದಾಗ ಅಲ್ಲಿನ ಹೆಚ್‌ಡಿಎಫ್‌ಸಿ ಬ್ಯಾಂಕಿನ ಎಟಿಎಂನಲ್ಲಿ ರೂ. 10 ಸಾವಿರದಂತೆ ಎರಡು ಬಾರಿ ಹಣ ತೆಗೆಯಲು ತನ್ನ ಎಟಿಎಂ ಕಾರ್ಡ್ ಬಳಸಿದ್ದರು. ಆದರೆ ಸದರಿ ಎಟಿಎಂನಿಂದ ಹಣ ಬರದೇ ಇದ್ದರೂ ಅವರ ಉಳಿತಾಯ ಖಾತೆಯಿಂದ ರೂ.20000 ಡೆಬಿಟ್ ಆಗಿತ್ತು. ಈ ಬಗ್ಗೆ ದೂರುದಾರ ತನ್ನ ಉಳಿತಾಯ ಖಾತೆ ಇರುವ ಹುಬ್ಬಳ್ಳಿಯ ಅಂಚಟಗೇರಿಯ ಯುನಿಯನ್ ಬ್ಯಾಂಕ್‍ಗೆ ದೂರು ನೀಡಿ ಎಟಿಎಂ ತಪ್ಪನ್ನು ಸರಿಪಡಿಸಲು ಕೋರಿದ್ದರು.
ಆ ದೂರಿನ ಆಧಾರದ ಮೇಲೆ ಯುನಿಯನ್ ಬ್ಯಾಂಕ್ ಎಟಿಎಂ ದೋಷದಿಂದ ಬಾರದ ರೂ.20,000/-ಗಳನ್ನು ತಕ್ಷಣ ದೂರುದಾರರ ಖಾತೆಗೆ ಜಮಾ ಮಾಡುವಂತೆ ಹೆಚ್‌ಡಿಎಫ್‌ಸಿ ಬ್ಯಾಂಕ್‍ಗೆ ಪತ್ರ ವ್ಯವಹಾರ ಮಾಡಿದ್ದರು. ಆದರೂ ಸದರಿ ಬ್ಯಾಂಕಿನವರು ರೂ.20,000/-ಗಳ ಹಣ ತನ್ನ ಖಾತೆಗೆ ಜಮಾ ಮಾಡಿಲ್ಲವಾದ್ದರಿಂದ ತನಗೆ ತೊಂದರೆಯಾಗಿ ಆ ಬ್ಯಾಂಕುಗಳಿಂದ ತನಗೆ ಸೇವಾ ನ್ಯೂನ್ಯತೆ ಆಗಿದೆ ಅಂತಾ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ಸಲ್ಲಿಸಿದ್ದರು. ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಹೆಚ್‌ಡಿಎಫ್‌ಸಿ ಬ್ಯಾಂಕಿನ ಎಟಿಎಂ ಯಂತ್ರದ ದೋಷದಿಂದ ದೂರುದಾರನಿಗೆ ಹಣ ಬಂದಿಲ್ಲ. ಕಾರಣ ಆ ಹಣ ಸದರಿ ಬ್ಯಾಂಕಿನಲ್ಲಿಯೇ ಉಳಿದಿತ್ತು.
ಹುಬ್ಬಳ್ಳಿ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೆ ಏರಿಸಲು ಕೇಂದ್ರ ಚಿಂತನೆ: ಪ್ರಲ್ಹಾದ್ ಜೋಶಿ
ಈ ಬಗ್ಗೆ ಯುನಿಯನ್ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಎರಡು ಬಾರಿ ಎಫ್.ಟಿ.ಎಸ್. ಸೆಂಟರ್ ನಿಂದ ಹೆಚ್‌ಡಿಎಫ್‌ಸಿ ಬ್ಯಾಂಕ್‍ನವರನ್ನು ಸಂಪರ್ಕಿಸಿ ದೂರುದಾರನ ಹಣವನ್ನು ಅವನ ಖಾತೆಗೆ ಹಿಂದಿರುಗಿಸಲು ಕೋರಿದ್ದರು. ಆದರೂ ಹೆಚ್‌ಡಿಎಫ್‌ಸಿ ಬ್ಯಾಂಕಿನವರು ಘಟನೆ ನಡೆದ ದಿ:17/01/2019 ರಿಂದ ಈ ವರೆಗೆ ಸುಮಾರು 4 ವರ್ಷ ದೂರುದಾರನ ಖಾತೆಗೆ ಹಣ ಜಮಾ ಮಾಡಿರಲಿಲ್ಲ. ಈ ರೀತಿ ಎಟಿಎಂ ದೋಷದಿಂದ ಹಣ ಬಾರದ ಪ್ರಸಂಗಗಳಲ್ಲಿ 6 ದಿವಸದೊಳಗಾಗಿ ಸಂಬಂಧಿಸಿದ ಬ್ಯಾಂಕಿನವರು ಕ್ರಮ ಕೈಗೊಂಡು ಗ್ರಾಹಕನ ಖಾತೆಗೆ ತಕ್ಷಣ ಹಣ ಜಮಾ ಮಾಡಬೇಕು. ತಪ್ಪಿದ್ದಲ್ಲಿ 7ನೇ ದಿನದಿಂದ ಜಮಾ ಆಗುವವರೆಗೆ ಪ್ರತಿ ದಿವಸ ರೂ.100/-ಗಳ ಪೆನಾಲ್ಟಿ ಕೊಡಬೇಕು ಅಂತಾ ಆರ್‌ಬಿಆಯ್ ಸುತ್ತೋಲೆ ಇದ್ದರೂ ದಿ:17/01/2019 ರಿಂದ ಈವರೆಗೆ ಸುಮಾರು 4 ವರ್ಷಗಳ ಕಾಲ ಹಣ ದೂರುದಾರನ ಖಾತೆಗೆ ಜಮಾ ಮಾಡದೇ ಸದರಿ ಬ್ಯಾಂಕಿನ ಸಿಬ್ಬಂದಿ ಕರ್ತವ್ಯ ಲೋಪ ಎಸಗಿ ಸೇವಾ ನ್ಯೂನ್ಯತೆ ಮಾಡಿದ್ದಾರೆ ಅಂತಾ ತನ್ನ ತೀರ್ಪಿನಲ್ಲಿ ಜಿಲ್ಲಾ ಗ್ರಾಹಕರ ಆಯೋಗ ಅಭಿಪ್ರಾಯಪಟ್ಟಿದೆ.
ದಿ:17/01/2019 ರಂದು ಈ ಘಟನೆ ನಡೆದಿದ್ದು ಅದು ಆದ 6 ದಿವಸದ ನಂತರ ದಿ:23/01/2019 ರಿಂದ ಈ ತೀರ್ಪು ನೀಡಿದ ದಿ:03/01/2023ರ ವರೆಗೆ 1441 ದಿವಸಕ್ಕೆ ಪ್ರತಿ ದಿವಸಕ್ಕೆ ರೂ.100/- ರೂಪಾಯಿಯಂತೆ ಲೆಕ್ಕಾ ಹಾಕಿ ಎಚ್.ಡಿ.ಎಪ್ ಸಿ ಬ್ಯಾಂಕಿನವರು ದೂರುದಾರನಿಗೆ ರೂ.1,44,100/-ಗಳ ಪೆನಾಲ್ಟಿ, ರೂ.20,000/-ಗಳ ಎಟಿಎಂ ಹಣ, ಮತ್ತು ದೂರುದಾರನಿಗೆ ಆಗಿರುವ ತೊಂದರೆ ಮತ್ತು ಮಾನಸಿಕ ಹಿಂಸೆಗೆ ರೂ.50,000/-ಗಳ ದಂಡ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ಸೇರಿ ಒಟ್ಟು ರೂ.2,24,100/- ಗಳನ್ನು ಶೇ8% ರಂತೆ ಬಡ್ಡಿ ಹಾಕಿ ನೀಡುವಂತೆ ಹೆಚ್‌ಡಿಎಫ್‌ಸಿ ಬ್ಯಾಂಕಿಗೆ ಆಯೋಗ ಆದೇಶಿಸಿದೆ.