:ಭಕ್ತಾದಿಗಳ ಬಹುದಿನದ ಬೇಡಿಕೆಯಾಗಿದ್ದ ಶ್ರೀ ಶ್ರೀಕಂಠೇಶ್ವರ ದೇವಾಲಯದ ಬೆಳ್ಳಿ ರಥ ನಿರ್ಮಾಣ ಕಾಮಗಾರಿಗೆ ಶಾಸಕ ಬಿ. ಹರ್ಷವರ್ಧನ್ ಶುಕ್ರವಾರ ಚಾಲನೆ ನೀಡಿದರು.
ನಂಜನಗೂಡು(ಅ.15):ಭಕ್ತಾದಿಗಳ ಬಹುದಿನದ ಬೇಡಿಕೆಯಾಗಿದ್ದ ಶ್ರೀ ಶ್ರೀಕಂಠೇಶ್ವರ ದೇವಾಲಯದ ಬೆಳ್ಳಿ ರಥ ನಿರ್ಮಾಣ ಕಾಮಗಾರಿಗೆ ಶಾಸಕ ಬಿ. ಹರ್ಷವರ್ಧನ್ ಶುಕ್ರವಾರ ಚಾಲನೆ ನೀಡಿದರು.
ಬೆಳ್ಳಿರಥ (Silver Ratha) ನಿರ್ಮಾಣ ಕಾಮಗಾರಿ ಅಂಗವಾಗಿ ದೇವಾಲಯದ ಆಗಮಿಕರಾದ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ದೇವಾಲಯದ (Temple) ಆವರಣದಲ್ಲಿ ಗಣಪತಿ ಹೋಮ, ವಾಸ್ತು ಹೋಮ ನಡೆಸುವ ಮೂಲಕ ಬೆಳ್ಳಿರಥ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
undefined
ಶಾಸಕ ಬಿ. ಹರ್ಷವರ್ಧನ್ ಮಾತನಾಡಿ, ದೇವಾಲಯದ ಹುಂಡಿ ಹಣದಲ್ಲಿ ಬೆಳ್ಳಿರಥ ನಿರ್ಮಾಣ ಮತ್ತು 75 ಕೊಠಡಿಗಳ ಅಥಿತಿಗೃಹ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡುವಂತೆ ಮನವಿ ಮಾಡಲಾಗಿತ್ತು. ನಮ್ಮ ಮನವಿಯನ್ನು ಪುರಷ್ಕರಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಳ್ಳಿರಥ ಮತ್ತು ಅತಿಥಿಗೃಹ ನಿರ್ಮಾಣ ಕಾಮಗಾರಿಗೆ ಮಂಜೂರಾತಿ ನೀಡಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಚಾಲನೆ ಕೊಡುವ ಸಲುವಾಗಿ ವಿಳಂಬವಾಯಿತು, ಈಗಲೂ ಸಹ ಕೆಲಸದ ಒತ್ತಡದಿಂದ ಮುಖ್ಯಮಂತ್ರಿಗಳು ಎರಡು ತಿಂಗಳ ತಡವಾಗುವುದಾಗಿ ತಿಳಿಸಿದ್ದಾರೆ. ನಾನು ದೇವಾಲಯದ ಬೆಳ್ಳಿರಥ ನಿರ್ಮಾಣ ಮಾಡಿಯೇ ಚುನಾವಣೆಗೆ ಹೋಗುವುದಾಗಿ ಮಾತು ನೀಡಿದ್ದೆ. ಕೊಟ್ಟಮಾತಿನಂತೆ ಬೆಳ್ಳಿರಥ ನಿರ್ಮಾಣ ತಡವಾಗುವುದು ಬೇಡ ಎಂದು ಮೂರು ವರ್ಷಗಳ ನಂತರ ನಾನೇ ಚಾಲನೆ ನೀಡಿ ಕಾರ್ಯಗತಗೊಳಿಸಿದ್ದೇನೆ ಎಂದರು.
297 ಕೆ.ಜಿ ಬೆಳ್ಳಿ ಬಳಕೆ, 8 ತಿಂಗಳಲ್ಲಿ ಕಾಮಗಾರಿ ಪೂರ್ಣ: ಬೆಳ್ಳಿರಥ ನಿರ್ಮಾಣಕ್ಕೆ ದೇವಾಲಯದಲ್ಲಿ ಭಕ್ತರು ನೀಡಿದ್ದ ಬೆಳ್ಳಿಯನ್ನು ಬಳಕೆ ಮಾಡಿಕೊಳ್ಳದೆ ಶುದ್ದವಾದ ಬೆಳ್ಳಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಬ್ಯಾಂಕ್‌ನಲ್ಲೇ ಖರೀದಿಸಿ ಬಳಕೆ ಮಾಡಲಾಗುತ್ತದೆ. ಸುಮಾರು 2.90 ಕೋಟಿ ರು. ವೆಚ್ಚದಲ್ಲಿ ಬೆಳ್ಳಿರಥ ನಿರ್ಮಾಣ ಮಾಡಲಾಗುತ್ತಿದ್ದು, 297 ಕೆಜಿ ಬೆಳ್ಳಿ ಬಳಕೆ ಮಾಡಲಾಗುವುದು, 16 ಅಡಿ ಎತ್ತರದ 6 ಅಡಿ ಸುತ್ತಳತೆಯನ್ನು ಒಳಗೊಂಡ ಚೌಕಾಕಾರದ ಅಷ್ಟಮೂಲೆ ಪುಷ್ಪರಥ ರಚನೆಯಾಗಲಿದೆ ಎಂದರು.
ಈ ಕಾಮಗಾರಿಯನ್ನು ಮುರುಡೇಶ್ವರ ಮೂಲದ ಗಂಗಾಧರ ಗಜಾನನ ಆಚಾರ್ ಅವರು ಕೆತ್ತನೆಕಾರ್ಯ ಮಾಡಲಿದ್ದು, ತಿಪಟೂರು ಮೂಲದ ಕೃಷ್ಣಮೂರ್ತಿರವರು ಬೆಳ್ಳಿ ಕೆಲಸ ಮಾಡಲಿದ್ದಾರೆ. ಮುಂದಿನ 8 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಆ ಮೂಲಕ ಭಕ್ತರ ಬಹುದಿನದ ಕನಸು ನನಸಾಗಲಿದೆ, ಜೊತೆಗೆ ಶೀಘ್ರದಲ್ಲೇ 75 ಕೊಠಡಿಗಳ ಅಥಿತಿಗೃಹ ನಿರ್ಮಾಣ ಕಾಮಗಾರಿಯನ್ನು ಮುಖ್ಯಮಂತ್ರಿಗಳಿಂದ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ನಾಗಚಂದ್ರ ದೀಕ್ಷಿತ್ ಮಾತನಾಡಿ, ಬೆಳ್ಳಿರಥ ನಿರ್ಮಾಣ ಕಾಮಗಾರಿ ನಿರ್ವಿಘ್ನವಾಗಿ ಸಾಗಲಿ ಎಂಬ ಉದ್ದೇಶದಿಂದ ಗಣಪತಿ ಹೋಮ, ಬೆಳ್ಳಿ ಮತ್ತು ಮರಶುದ್ದಿಗಾಗಿ ವಾಸ್ತುಹೋಮ ನೆರವೇರಿಸಲಾಗಿದೆ ಎಂದರು.
ನಗರಸಭಾಧ್ಯಕ್ಷ ಎಚ್.ಎಸ್. ಮಹದೇವಸ್ವಾಮಿ, ಉಪಾಧ್ಯಕ್ಷೆ ನಾಗಮಣಿ ಶಂಕರಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಪಿ. ಮಹೇಶ್, ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ, ಜಿಪಂ ಮಾಜಿ ಸದಸ್ಯರಾದ ಸಿ. ಚಿಕ್ಕರಂಗನಾಯಕ, ಎಸ್.ಎಂ. ಕೆಂಪಣ್ಣ, ತಾಪಂ ಮಾಜಿ ಅಧ್ಯಕ್ಷ ಬಿ.ಎಸ್. ಮಹದೇವಪ್ಪ, ತಾಪಂ ಮಾಜಿ ಸದಸ್ಯರಾದ ಬಿ.ಎಸ್. ರಾಮು, ಹೆಮ್ಮರಗಾಲ ಶಿವಣ್ಣ, ಹುಲ್ಲಹಳ್ಳಿ ಶಿವಣ್ಣ, ನಗರಸಭಾ ಸದಸ್ಯರಾದ ಮಹದೇವಪ್ರಸಾದ್, ಸಿದ್ದರಾಜು, ದೇವಾಲಯದ ಎಇಓ ವೆಂಕಟೇಶ್‌ಪ್ರಸಾಸ್ ಇದ್ದರು.
16 ಜನ ಮರದ ಕೆತ್ತನೆ ಕೆಲಸಗಾರರು--
ರಥ ನಿರ್ಮಾಣ ಕಾರ್ಯದ ಶಿಲ್ಪಿ ಗಂಗಾಧರ ಗಜಾನನ ಆಚಾರಿ ಮಾತನಾಡಿ, ಈ ಹಿಂದೆ ರಂಗಾಪುರ, ಹಾವೇರಿಯಲ್ಲೂ 19 ಅಡಿ ಎತ್ತರದ ಬೆಳ್ಳಿರಥ ನಿರ್ಮಾಣ ಮಾಡಿದ್ದೇವೆ, ಪ್ರಸ್ತುತ ಶ್ರೀಕಂಠೇಶ್ವರ ದೇವಾಲಯದ ರಥ ನಿರ್ಮಾಣ ಕಾಮಗಾರಿಗೆ ಮುಂದಾಗಿದ್ದೇವೆ. ನಮ್ಮ ತಂಡದಲ್ಲಿ 16 ಜನ ಮರದ ಕೆತ್ತನೆ ಕೆಲಸಗಾರರಿದ್ದು, 10 ಜನ ಬೆಳ್ಳಿ ಕೆಲಸಗಾರರಿದ್ದಾರೆ. ಕೆತ್ತನೆ ಕೆಲಸಕ್ಕೆ ತೇಗದ ಮರವನ್ನು ಉಪಯೋಗಿಸಲಾಗುವುದು, ಚೌಕಟ್ಟು, ಅಡ್ಡಪಟ್ಟಿಗಳಿಗೆ ಹೊನ್ನೆಮರ, ಚಕ್ರಗಳಿಗೆ ಹೆಬ್ಬಲಸಿನ ಮರವನ್ನು ಉಯೋಗಿಸಿಕೊಂಡು ಬೆಳ್ಳಿರಥ ನಿರ್ಮಾಣ ಮಾಡಲಾಗುವುದು ಎಂದರು.