
ಬೆಂಗಳೂರು(ಜೂ.28): ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಟೀಲ್ ಬ್ರಿಡ್ಜ್ ಆರಂಭಿಸುವ ಹಳೆಯ ಪ್ರಸ್ತಾವಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮರುಜೀವ ನೀಡಿದ್ದಾರೆ.
ಕೆಂಪೇಗೌಡ ಜಯಂತಿ ಸಮಾರಂಭದಲ್ಲಿ ಮಂಗಳವಾರ ಮಾತನಾಡಿದ ಅವರು, ‘ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿರುವ ಕೆಂಪೇಗೌಡರು, ಕೆಂಗಲ್ ಹನುಮಂತಯ್ಯ, ಎಸ್.ಎಂ.ಕೃಷ್ಣ ಅವರನ್ನು ನಾವು ಮರೆಯಬಾರದು. ನಗರದಲ್ಲಿ 1.60 ಕೋಟಿ ಜನರಿದ್ದಾರೆ. ಸಂಚಾರ ದಟ್ಟಣೆ ದೊಡ್ಡ ಸಮಸ್ಯೆಯಾಗಿದ್ದು ಆಸಕ್ತಿಯಿಂದ ಬೆಂಗಳೂರು ಅಭಿವೃದ್ಧಿ ಖಾತೆ ಪಡೆದಿದ್ದೇನೆ ಅಂತ ತಿಳಿಸಿದ್ದಾರೆ.
Bengaluru: ಮಿನರ್ವ ಟು ಹಡ್ಸನ್ ವೃತ್ತಕ್ಕೆ ಫ್ಲೈಓವರ್: ಬಿಬಿಎಂಪಿ ಸಿದ್ಧತೆ
ಬ್ರ್ಯಾಂಡ್ ಬೆಂಗಳೂರಿಗೆ ಯಾರು ಬೇಕಾದರೂ ಸಲಹೆ ನೀಡಬಹುದು. ಹಿಂದೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಟೀಲ್ ಬ್ರಿಡ್ಜ್ ನಿರ್ಮಿಸಲು ಹೋದಾಗ ವಿರೋಧ ವ್ಯಕ್ತವಾಗಿದ್ದರಿಂದ ಸಿದ್ದರಾಮಯ್ಯ ಹಾಗೂ ಅಂದಿನ ಸಚಿವ ಜಾರ್ಜ್ ಹಿಂದೆ ಸರಿದರು. ಆದರೆ ಯಾರು ಪ್ರತಿಭಟನೆ, ಧರಣಿ ಮಾಡಲಿ ನನ್ನ ಕೆಲಸ ಮಾಡುತ್ತೇನೆ’ ಎಂದರು. ಈ ಮೂಲಕ ಪರೋಕ್ಷವಾಗಿ ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಬಗ್ಗೆ ಶಿವಕುಮಾರ್ ಪ್ರಸ್ತಾಪಿಸಿದರು.