ಹೊಸಪೇಟೆಯಲ್ಲಿ ದೇಶದ ಅತಿ ಎತ್ತರದ ಧ್ವಜಸ್ತಂಭ ನಿರ್ಮಾಣ

By Kannadaprabha NewsFirst Published Aug 7, 2022, 5:00 AM IST
Highlights

ಪ್ರವಾಸೋದ್ಯಮ ಇಲಾಖೆಯು ಧ್ವಜಸ್ತಂಭ ನಿರ್ಮಾಣಕ್ಕೆ 6 ಕೋಟಿ ಅನುದಾನ ನೀಡಿದ್ದು, ಲೋಕೋಪಯೋಗಿ ಇಲಾಖೆಯ ಮೇಲುಸ್ತುವಾರಿಯಲ್ಲಿ ಧ್ವಜಸ್ತಂಭ ನಿರ್ಮಾಣ ಕಾಮಗಾರಿ ಆರಂಭ 

ಹೊಸಪೇಟೆ(ಆ.07):  ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ದೇಶದಲ್ಲೇ ಅತಿ ಎತ್ತರದ (405 ಅಡಿ) ಧ್ವಜಸ್ತಂಭ ಸ್ಥಾಪನೆ ಕಾಮಗಾರಿ ವಿಜಯನಗರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಇದಕ್ಕಾಗಿ ಪುಣೆಯಿಂದ ಲಾರಿಯಲ್ಲಿ ಬಂದ ತುಕ್ಕು ಹಿಡಿಯದ ಕಬ್ಬಿಣದ ಕಂಬಗಳನ್ನು ಶನಿವಾರ ಭವ್ಯ ಮೆರವಣಿಗೆ ಮೂಲಕ ಬರ ಮಾಡಿಕೊಳ್ಳಲಾಯಿತು. ಪ್ರವಾಸೋದ್ಯಮ ಇಲಾಖೆಯು ಧ್ವಜಸ್ತಂಭ ನಿರ್ಮಾಣಕ್ಕೆ 6 ಕೋಟಿ ಅನುದಾನ ನೀಡಿದ್ದು, ಲೋಕೋಪಯೋಗಿ ಇಲಾಖೆಯ ಮೇಲುಸ್ತುವಾರಿಯಲ್ಲಿ ಧ್ವಜಸ್ತಂಭ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಪುಣೆ ಮೂಲದ ಬಜಾಜ್‌ ಕಂಪನಿಯಿಂದ ಈ ಸಲಕರಣೆಗಳನ್ನು ತಂದು, 405 ಅಡಿ ಎತ್ತರದ ಧ್ವಜಸ್ತಂಭ ನಿರ್ಮಿಸಲಾಗುತ್ತಿದೆ. ಈಗಾಗಲೇ ಅಡಿಪಾಯ ಕಾಮಗಾರಿ ಪೂರೈಸಲಾಗಿದ್ದು, ಇನ್ನು ನಾಲ್ಕೈದು ದಿನಗಳಲ್ಲಿ ಧ್ವಜ ಸ್ತಂಭ ನಿರ್ಮಾಣ ಕಾಮಗಾರಿ ಮುಗಿಯಲಿದೆ. ಆ.15ರಂದು ಈ ಧ್ವಜಸ್ತಂಭದಲ್ಲಿ ಧ್ವಜಾರೋಹಣ ಮಾಡುವ ಉದ್ದೇಶ ಪ್ರವಾಸೋದ್ಯಮ ಇಲಾಖೆಗಿದೆ.

ಸದ್ಯ ಬೆಳಗಾವಿಯ ಕೋಟೆ ಬಳಿ ಸ್ಥಾಪಿಸಲಾದ 361 ಅಡಿ ಎತ್ತರದ ಧ್ವಜಸ್ತಂಭವೇ ಈವರೆಗೆ ದೇಶದ ಅತೀ ಎತ್ತರದ ಧ್ವಜಸ್ತಂಭ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಅಟ್ಟಾರಿ ಗಡಿಯಲ್ಲಿ ದೇಶದಲ್ಲಿ ಎರಡನೇ ಅತಿ ಎತ್ತರದ (360 ಅಡಿ) ಧ್ವಜಸ್ತಂಭವಿದೆ.

INDIA@75: ಕರ್ನಾಟಕದ ಪಾತ್ರ ಹೋರಾಟಗಾರರ ‘ತರಬೇತಿ ಕೇಂದ್ರ’ ವಿಜಯನಗರದ ಹರಪನಹಳ್ಳಿ

ವಿಜಯನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ .6 ಕೋಟಿ ವೆಚ್ಚದಲ್ಲಿ ದೇಶದಲ್ಲೇ ಅತಿ ಎತ್ತರದ (405 ಅಡಿ ) ಧ್ವಜಸ್ತಂಭ ನಿರ್ಮಿಸಲಾಗುತ್ತಿದೆ. ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ಈ ಕಾಮಗಾರಿ ನಡೆಸಲಾಗುತ್ತಿದೆ. ವಿಶ್ವದಲ್ಲೇ ಒಂಬತ್ತನೇ ಅತೀ ಎತ್ತರದ ಧ್ವಜಸ್ತಂಭ ಇದಾಗಲಿದೆ ಅಂತ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ತಿಳಿಸಿದ್ದಾರೆ.  

ನಗರದ ನ್ಯಾಷನಲ್‌ ಹೈಸ್ಕೂಲ್‌ ಮೈದಾನದಲ್ಲಿ ನಗರಸಭೆ ಉಪಾಧ್ಯಕ್ಷ ಎಲ್‌.ಎಸ್‌.ಆನಂದ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ ಲಾರಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಲಕರಣೆಗಳನ್ನು ಬರಮಾಡಿಕೊಂಡರು. ಬಳಿಕ ನಗರದ ವಿವಿಧ ವೃತ್ತದ ಮೂಲಕ ಮೆರವಣಿಗೆ ನಡೆಸಲಾಯಿತು. ನಗರದ ಜಿಲ್ಲಾ ಕ್ರೀಡಾಂಗಣದವರೆಗೂ ಮೆರವಣಿಗೆ ನಡೆಯಿತು.
 

click me!