ಉತ್ತರಕನ್ನಡ: ಗ್ಯಾರೇಜ್‌ ಸೇರಿಕೊಂಡ ಜನಸೇವೆಗಿದ್ದ ಆ್ಯಂಬುಲೆನ್ಸ್‌..!

By Girish Goudar  |  First Published Aug 6, 2022, 11:08 PM IST

ಜನಸಾಮಾನ್ಯರ ಸೇವೆಗಾಗಿ ನೀಡಲಾದ ಹಲವು ಆ್ಯಂಬುಲೆನ್ಸ್‌ಗಳು ಇದೀಗ ಯಾರೂ ಹೇಳೋರು, ಕೇಳೋರು ಇಲ್ಲದಂತೆ ಸಾಕಷ್ಟು ಸಮಯಗಳಿಂದ ಗ್ಯಾರೇಜ್‌ಗಳಲ್ಲಿ ಬಿದ್ದುಕೊಂಡಿವೆ


ಭರತ್‌ರಾಜ್‌ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರಕನ್ನಡ(ಆ.06):  ಯಾವುದೇ ಅಪಘಾತಗಳಾಗಲೀ, ಅಹಿತಕರ ಘಟನೆಗಳಾಲೀ ಅಥವಾ ಅನಾರೋಗ್ಯವೇ ಕಾಣಿಸಿಕೊಳ್ಳಲಿ ಗಾಯಾಳುಗಳನ್ನು, ಅನಾರೋಗ್ಯ ಪೀಡಿತರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲು ನೆನಪಾಗೋದು ಆ್ಯಂಬುಲೆನ್ಸ್. ಆದರೆ, ಇದೇ ಆ್ಯಂಬುಲೆನ್ಸ್‌ಗಳ ನಿಜವಾದ ಸ್ಥಿತಿಗತಿ ಹೇಗಿದೆ..? ಈ ಆ್ಯಂಬುಲೆನ್ಸ್‌ಗಳು ಎಲ್ಲಿವೆ..?ಅಂತಾ ಗೊತ್ತಾದರೆ‌ ಜನರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಉಗಿಯದಿರರು. ಯಾಕಂದ್ರೆ, ಜನಸಾಮಾನ್ಯರ ಸೇವೆಗಾಗಿ ನೀಡಲಾದ ಹಲವು ಆ್ಯಂಬುಲೆನ್ಸ್‌ಗಳು ಇದೀಗ ಯಾರೂ ಹೇಳೋರು, ಕೇಳೋರು ಇಲ್ಲದಂತೆ ಸಾಕಷ್ಟು ಸಮಯಗಳಿಂದ ಗ್ಯಾರೇಜ್‌ಗಳಲ್ಲಿ ಬಿದ್ದುಕೊಂಡಿವೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ...

Tap to resize

Latest Videos

ಗ್ಯಾರೇಜ್‌ಗಳಲ್ಲಿವೆ ಜನಸೇವೆಗಾಗಿ ನಿಗದಿ ಪಡಿಸಿದ್ದ ಆ್ಯಂಬುಲೆನ್ಸ್‌ಗಳು 

ಹೌದು, ಬಡ ಜನರು, ಕಾರ್ಮಿಕರ ಸೇವೆಗಾಗಿ ಬಳಕೆಯಾಗಬೇಕಿದ್ದ ಆ್ಯಂಬುಲೆನ್ಸ್‌ಗಳು ಇದೀಗ ಸರಿಯಾಗಿ ರಿಪೇರಿ ಕಾಣದೆ ತುಕ್ಕು ಹಿಡಿಯುತ್ತಾ ಗ್ಯಾರೇಜ್‌ಗಳಲ್ಲಿ ಸೇರಿಕೊಂಡಿವೆ. ಯಡಿಯೂರಪ್ಪ ಸರಕಾರವಿದ್ದಾಗ ಪ್ರಾರಂಭ ಮಾಡಿದ್ದ 108 ಆ್ಯಂಬುಲೆನ್ಸ್‌ಗಳು, ಕಾರ್ಮಿಕರ ಸೇವೆಗಾಗಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ನೀಡಿದ ಆ್ಯಂಬುಲೆನ್ಸ್, ಕೊರೊನಾ ಸಮಯದಲ್ಲಿ ಜನಸೇವೆಗಾಗಿ ಭಟ್ಕಳ ಶಾಸಕ ಸುನೀಲ್ ಕುಮಾರ್ ನಾಯ್ಕ್ ನೀಡಿದ ಆ್ಯಂಬುಲೆನ್ಸ್ ಹಾಗೂ ಹೊನ್ನಾವರ ತಾಲೂಕು ಆಸ್ಪತ್ರೆಯ ಆ್ಯಂಬುಲೆನ್ಸ್‌ಗಳು ಸೇರಿದಂತೆ ಕೆಲವು ಆ್ಯಂಬುಲೆನ್ಸ್‌ಗಳು ಇದೀಗ ಕುಮಟಾದ ರಸ್ತೆ ಬದಿಯಲ್ಲಿರುವ ಗ್ಯಾರೇಜ್‌ಗಳಿಗೆ ಸೇರಿಕೊಂಡಿವೆ. 

ಪ್ರವೀಣ್‌ ಹತ್ಯೆ ಆರೋಪಿಗಳ ಸುಳಿವು ಸಿಕ್ಕಿದೆ: ಸಚಿವ ಕೋಟ

ಸಾಕಷ್ಟು ದಿನಗಳಿಂದ ಈ ಆ್ಯಂಬುಲೆನ್ಸ್‌ಗಳು ಗ್ಯಾರೇಜ್ ಸೇರಿಕೊಂಡರೂ ರಿಪೇರಿ ಕಾಣದ ತುಕ್ಕು ಹಿಡಿಯುತ್ತಿದ್ದು, ಇವುಗಳ‌ ದುಸ್ಥಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು, ಏಜೆನ್ಸಿಗಳು ಹಾಗೂ ಜನಪ್ರತಿನಿಧಿಗಳು ಮೂಸಿಯೂ ನೋಡುತ್ತಿಲ್ಲ. ಪ್ರಸ್ತುತ ಹಲವು ಆ್ಯಂಬುಲೆನ್ಸ್‌ಗಳು ಗ್ಯಾರೇಜ್‌ಗಳಲ್ಲಿ ಇರೋದ್ರಿಂದ ಜನ ಸಾಮಾನ್ಯರಿಗೆ ಅಗತ್ಯ ಬಿದ್ದಾಗ ಆ್ಯಂಬುಲೆನ್ಸ್‌ಗಳು ದೊರೆಯದಿರೋದು ಒಂದೆಡೆಯಾದ್ರೆ, ಮತ್ತೊಂದೆಡೆ ಆ್ಯಂಬುಲೆನ್ಸ್ ಚಾಲಕರು ಕರೆ ಸ್ವೀಕರಿಸಲ್ಲ ಅನ್ನೋ‌ ದೂರು, ಇನ್ನೊಂದೆಡೆ ಚಾಲಕರ ಕೊರತೆ. ಈ ಎಲ್ಲಾ ಸಮಸ್ಯೆಗಳು ಜನ ಸಾಮಾನ್ಯರ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಸಂಬಂಧಪಟ್ಟ ಏಜೆನ್ಸಿಗಳು, ಇಲಾಖೆಯ ಅಧಿಕಾರಿಗಳು ಸಂಬಂಧವೇ ಇಲ್ಲ ಅನ್ನೋತರ ಸುಮ್ಮನಿದ್ದಾರೆ. 

ಈ ಆ್ಯಂಬುಲೆನ್ಸ್‌ಗಳನ್ನು ಹೊರಗಿನಿಂದ ಸರಿಯಾಗಿ ಗಮನಿಸಿದರೆ ನಾಲ್ಕು ಸುತ್ತಲೂ ತುಕ್ಕು ಹಿಡಿದಿರುತ್ತದೆ. ಫೈರ್ ಎಸ್ಟಿಂಗ್ವಿಷರ್ ಪೈಪ್ ತುಂಡಾಗಿ ಮೂಲೆಯಲ್ಲಿದ್ದರೆ, ಯುಪಿಎಸ್ ಕಾರ್ಯನಿರ್ವಹಿಸಲ್ಲ. ಇದರೊಂದಿಗೆ ಸ್ಕೂಪ್, ಸ್ಟ್ರೆಚರ್, ವೀಲ್‌ಚೇರ್‌ಗಳಂತೂ ತುಕ್ಕು ಹಿಡಿದು ಯಾವಾಗ ಮುರಿದು ಬೀಳಬಹುದು ಅನ್ನೋ ಸ್ಥಿತಿಯಲ್ಲಿದೆ. ಈ ಕಾರಣದಿಂದ ಸರಕಾರ ಈ ಬಗ್ಗೆ ಗಮನ ಹರಿಸಬೇಕಲ್ಲದೇ, ಅಯಾಯ ತಾಲೂಕಿನ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯ ಮೂಲಕ ಆ್ಯಂಬುಲೆನ್ಸ್‌ಗಳನ್ನು ರಿಪೇರಿ ಮಾಡಿಸಿ ಜನಸಾಮಾನ್ಯರ ಸೇವೆ ನೀಡಬೇಕು. ಇತ್ತೀಚೆಗೆ ಹೊನ್ನಾವರದಿಂದ ಹೊರಟ ಆ್ಯಂಬುಲೆನ್ಸ್‌ನಲ್ಲಿ ಜೀವ ರಕ್ಷಕ ವ್ಯವಸ್ಥೆಗಳಿದಿದ್ದರೆ ಅತೀ ವೇಗವಾಗಿ ತೆರಳಿ ಉಡುಪಿಯ ಶಿರೂರಿನಲ್ಲಿ ಅಪಘಾತಕ್ಕೀಡಾಗುತ್ತಿರಲಿಲ್ಲ. 

ಈ ಕಾರಣದಿಂದ ಎಲ್ಲಾ ಆ್ಯಂಬುಲೆನ್ಸ್‌ಗಳನ್ನು ರಿಪೇರಿ ಮಾಡಿಸಬೇಕಲ್ಲದೇ, ಪ್ರತೀ ಆ್ಯಂಬುಲೆನ್ಸ್‌ಗಳಲ್ಲಿ ಜೀವ ರಕ್ಷಕ ವ್ಯವಸ್ಥೆಯನ್ನು ಅಳವಡಿಸಬೇಕು. ಜಿಲ್ಲೆಯ ಶಾಸಕರು, ಸಚಿವರು ತಮಗೆ ಸಂಬಂಧವಿಲ್ಲ ಎಂದು ಸುಮ್ಮನೆ ಕೂರೋದಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ, ಉಳಿದ ಆ್ಯಂಬುಲೆನ್ಸ್‌ಗಳಿಗೆ ಹೋಲಿಸಿದರೆ ಉತ್ತರಕನ್ನಡ ಜಿಲ್ಲೆಯಲ್ಲಿ 108 ಆ್ಯಂಬುಲೆನ್ಸ್‌ಗಳು ಒಟ್ಟು 20 ಇದ್ದು, ಅವುಗಳ ಪೈಕಿ ವೆಂಟಿಲೇಟರ್, ಡಿಫಿಬ್ರಿಲೇಟರ್, ಮಾನಿಟರ್ ಮುಂತಾದ ವ್ಯವಸ್ಥೆಯಿರೋ 108 ಆ್ಯಂಬುಲೆನ್ಸ್‌ಗಳು 3 ಮಾತ್ರ. ಅದು ಕೂಡಾ ಕಾರವಾರ, ಕುಮುಟಾ ಹಾಗೂ ಕದ್ರಾ ವ್ಯಾಪ್ತಿಯಲ್ಲಿದೆ. ಉಳಿದವುಗಳಲ್ಲಿ ಈ ಸೌಲಭ್ಯಗಳಿಲ್ಲ. ಕೊರೊನಾ ಕಾಟ ಹೆಚ್ಚಾಗಿದ್ದ ಸಮಯದಲ್ಲಿ ಆ್ಯಂಬುಲೆನ್ಸ್‌ಗಳ ಒಳಭಾಗದಲ್ಲೂ ಫ್ಯುಮಿಗೇಷನ್ ಮಾಡಲಾಗಿತ್ತು. ಅಂದು ಮಲಗಿದ್ದ ಮನುಷ್ಯನ ಜೀವರಕ್ಷಕ ವಸ್ತುಗಳು ಇಂದಿನವರೆಗೆ ಮಲಗಿದಂತೇ ಇದೆ. ಆ್ಯಂಬುಲೆನ್ಸ್‌ಗಳ ಸ್ಥಿತಿಗತಿಗಳ ಬಗ್ಗೆ ಪ್ರಶ್ನಿಸಿದಾಗ ಕಾರ್ಮಿಕ ಸಚಿವ ಶಿವರಾಮ‌ ಹೆಬ್ಬಾರ್, ಕೊರೊನಾ ಸಂದರ್ಭಗಳಲ್ಲಿ ಜನಸೇವೆಗಾಗಿ ಆ್ಯಂಬುಲೆನ್ಸ್ನಗಳನ್ನು ನೀಡಿದ್ದೆವು. ಪ್ರಸ್ತುತ ಅವುಗಳ ಸ್ಥಿತಿಗತಿಯ ಬಗ್ಗೆ ಮಾಹಿತಿಯಿಲ್ಲ. ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ. 

ಮಳೆಯಾಗಿ ನಾಲ್ಕು ದಿನವಾದ್ರೂ ಆರಂಭವಾಗದ ಸರ್ವೇ ಕಾರ್ಯ

ಇನ್ನು ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಚಾಲಕರಿಲ್ಲ, ಸಂಸ್ಥೆಯವರು ಟೆಂಡರ್ ಪೂರೈಸಿಲ್ಲ, ಚಾಲಕರು ಯಾರೂ ಕರೆ ಸ್ವೀಕರಿಸಲ್ಲ ಅನ್ನೋ ಸಾಕಷ್ಟು ದೂರುಗಳು ಬಂದಿವೆ. ಈ ಸಮಸ್ಯೆಗೆ ಅಂತ್ಯ ಹಾಡಲು ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಿಂದ 24*7 ಟೋಲ್ ಫ್ರೀ ನಂಬರ್ 6-7 ದಿನಗಳಲ್ಲಿ ಪ್ರಾರಂಭ ಮಾಡಲಾಗುವುದು. ಕೆಲವು ಆ್ಯಂಬುಲೆನ್ಸ್‌ಗಳು ರಿಪೇರಿಗೆ ಹೋಗಿವೆ, ಕೆಲಸಕ್ಕೆ ಚಾಲಕರಿಲ್ಲ ಮುಂತಾದ ಸಮಸ್ಯೆಯನ್ನು ರಾಜ್ಯ ಆರೋಗ್ಯ ಸಚಿವರ ಗಮನಕ್ಕೆ ತಂದು ಚರ್ಚೆ ಮಾಡಲಾಗುವುದು. ಆ್ಯಂಬುಲೆನ್ಸ್‌ಗಳ ಏಜೆನ್ಸಿಯವರು ಕೈಗೆ ಸಿಗಲ್ಲ ಅನ್ನೋ ಆರೋಪವಿದೆ. ಅದನ್ನು ಬದಲಾಯಿಸಿ ಇನ್ನು ಮುಂದೆ ಜಿಲ್ಲಾಡಳಿತದಿಂದಲೇ ಆಪರೇಟ್ ಮಾಡಲಾಗುತ್ತದೆ. ಈ ಬಗ್ಗೆ ಕೆಡಿಪಿ ಸಭೆಯಲ್ಲೂ ಚರ್ಚೆ ಮಾಡಲಾಗಿದೆ. ಟೋಲ್ ಫ್ರೀ ನಂಬರ್ ಮಾಡಿದ ಬಳಿಕ ಸ್ಥಿತಿಗತಿಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. 

ಒಟ್ಟಿನಲ್ಲಿ ಜನರ ಜೀವ ಉಳಿಸುವ ಕೆಲಸ ನಡೆಸಬೇಕಾಗಿದ್ದ ಆ್ಯಂಬುಲೆನ್ಸ್‌ಗಳು ಇದೀಗ ಜನಪ್ರತಿನಿಧಿಗಳು, ಅಧಿಕಾರಿಗಳ ಹಾಗೂ ಏಜೆನ್ಸಿಗಳ ನಿರ್ಲಕ್ಷ್ಯದಿಂದ ಗ್ಯಾರೇಜ್‌ಗಳಲ್ಲಿ ಕೊಳೆಯುತ್ತಿವೆ. ಸರಕಾರ ಈ ಬಗ್ಗೆ ಸರಿಯಾಗಿ ಗಮ‌ನ ಹರಿಸಿ  ಆ್ಯಂಬುಲೆನ್ಸ್‌ಗಳು ಜನಸೇವೆಗೆ ಉತ್ತಮ ರೀತಿಯಲ್ಲಿ ಹಾಗೂ ಕ್ಲಪ್ತ ಸಮಯದಲ್ಲಿ ದೊರೆಯುವಂತೆ ಮಾಡಬೇಕಿದೆ.
 

click me!