ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಮನೆಯ ಬಳಿ ಸೇತುವೆ ನಿರ್ಮಾಣ: ಶಾಸಕಿ ರೂಪಾಲಿ

By Girish Goudar  |  First Published Jul 9, 2022, 5:00 AM IST

*  ಕಿರು ಸೇತುವೆಗೆ 25 ಲಕ್ಷ ರೂ. ಹಾಗೂ ರಸ್ತೆಗೆ 15 ಲಕ್ಷ ರೂ. ಮಂಜೂರು
*  ತುಳಸಿ ಗೌಡ ಸಂಚಾರಕ್ಕಾಗಿ ತಾತ್ಕಾಲಿಕ ಸೇತುವೆ ವಾರದೊಳಗೆ ನಿರ್ಮಾಣ
*  ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭವಾಗಿಲ್ಲ


ವರದಿ: ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್‌ ಸುರ್ಣ ನ್ಯೂಸ್‌, ಕಾರವಾರ

ಉತ್ತರ ಕನ್ನಡ(ಜು.09): ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿಯಲ್ಲಿನ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಅವರ ನಿವಾಸ ಸಂಪರ್ಕಿಸುವ ಕಿರು ಸೇತುವೆಗೆ 25 ಲಕ್ಷ ರೂ. ಹಾಗೂ ರಸ್ತೆಗೆ 15 ಲಕ್ಷ ರೂ. ಮಂಜೂರಾಗಿದ್ದು, ಮಳೆಗಾಲದ ತರುವಾಯ ಕಾಮಗಾರಿ ಶುರುವಾಗಲಿದೆ. ತುಳಸಿ ಗೌಡ ಅವರ ಸಂಚಾರಕ್ಕಾಗಿ ತಾತ್ಕಾಲಿಕ ಸೇತುವೆಯನ್ನು ವಾರದೊಳಗೆ ನಿರ್ಮಿಸಲಾಗುವುದು ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ಭರವಸೆ ನೀಡಿದ್ದಾರೆ. 

Latest Videos

undefined

ತುಳಸಿ ಗೌಡ ಅವರ ನಿವಾಸದ ಬಳಿ ಸೇತುವೆ ಹಾಗೂ ರಸ್ತೆಗಾಗಿ 40 ಲಕ್ಷ ರೂ. ಮಾರ್ಚ್ 2022ರಲ್ಲೇ ಮಂಜೂರಾಗಿದೆ. ಇದನ್ನು ತುಳಸಿ ಗೌಡ ಅವರ ಗಮನಕ್ಕೂ ತರಲಾಗಿದೆ. ಆದರೆ, ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭವಾಗಿಲ್ಲ. ನಂತರ ಮಳೆ ಬಂದಿದ್ದರಿಂದ ಮತ್ತೆ ವಿಳಂಬವಾಯಿತು. ವೃಕ್ಷಮಾತೆ ತುಳಸಿ ಗೌಡ ಅವರ ಮನವಿ ಹಿನ್ನೆಲೆಯಲ್ಲಿ ಈ ರಸ್ತೆ ಹಾಗೂ ಸೇತುವೆ ಕಾಮಗಾರಿಯನ್ನು ಮಂಜೂರು ಮಾಡಲಾಗಿತ್ತು. ಎಲ್ಲೆಡೆ ಭಾರಿ ಮಳೆ ಬೀಳುತ್ತಿದೆ. ಪದ್ಮಶ್ರೀ ತುಳಸಿ ಗೌಡ ಅವರ ನಿವಾಸದ ಬಳಿಯೂ ನೀರು ತುಂಬಿರುವುದನ್ನು ಗಮನಿಸಿದ್ದೇನೆ. ಅವರಿಗೆ ಸಂಚಾರಕ್ಕೆ ತೊಂದರೆಯಾಗದಂತೆ ವಾರದೊಳಗೆ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿಕೊಡಲಾಗುವುದು. ಮಳೆಗಾಲ ಮುಗಿದ ತರುವಾಯ ಶಾಶ್ವತ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಲಿದೆ. ವೃಕ್ಷಮಾತೆ ತುಳಸಿ ಗೌಡ ಹಾಗೂ ಹಾಡುಹಕ್ಕಿ ಸುಕ್ರಿ ಗೌಡ ಅವರು ನಮ್ಮ ಕ್ಷೇತ್ರದ ಹೆಮ್ಮೆಯಾಗಿದ್ದು ಅವರಿಗೆ  ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.‌ ಅಂದಹಾಗೆ, ತಮ್ಮ ಮನೆಯ ಮುಂದೆ ಹರಿಯುವ ಹಳ್ಳಕ್ಕೆ ಸಂಕ ನಿರ್ಮಿಸಿಕೊಡುವಂತೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಪರಿಸರ ತಜ್ಞೆ ತುಳಸಿ ಗೌಡ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಗಸೂರಿನ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ತುಳಸಿ ಗೌಡರವರ ಮನೆಯಿದ್ದು, ಅದರ ಮುಂದೆ ಸಣ್ಣದೊಂದು ಹಳ್ಳ ಹರಿಯುತ್ತದೆ. ಪ್ರತೀ ವರ್ಷ ಹೆಚ್ಚಿನ ಮಳೆಯಾಗುವುದರಿಂದ ಈ ಹಳ್ಳ ಭೋರ್ಗರೆದು ಹರಿಯುತ್ತದೆ.‌ತುಳಸಿ ಗೌಡರವರು ಹೇಳುವಂತೆ ನನಗೆ ವಯಸ್ಸಾಗಿದ್ದು ಆರೋಗ್ಯವಾಗಿರಲಿ, ಇಲ್ಲದಿರಲಿ ಈ ಹಳ್ಳವನ್ನು ಮಳೆಗಾಲದಲ್ಲಿ ದಾಟಲು ಆಗುವುದಿಲ್ಲ. 

ಉತ್ತರಕನ್ನಡ ಜಿಲ್ಲೆಯಲ್ಲೂ ವರುಣನ ಅಬ್ಬರ, 91 ಮನೆಗಳಿಗೆ ಹಾನಿ, ಬೀಡುಬಿಟ್ಟ SDRF ತಂಡ

ಆಸ್ಪತ್ರೆಗೆ ಹೋಗಬೇಕು ಎಂದರೂ ಈ ಹಳ್ಳದಿಂದ ದಾಟಿ ಹೋಗಲು ನನಗೆ ಆಗುವುದಿಲ್ಲ. ನನ್ನ ಮೊಮ್ಮಕ್ಕಳಿಗೆ ಶಾಲೆಗೆ ಹೋಗಲು ಈ ಹಳ್ಳ ದಾಟಲು ಆಗುವುದಿಲ್ಲ. ಈ ಹಿಂದೆ ಶಾಸಕರಿಗೆ ಹಾಗೂ ಜಿಲ್ಲಾಡಳಿತಕ್ಕೆ ಗಮನಕ್ಕೆ ತಂದಿದ್ದೆ .ಆದರೇ ಸಂಕ ಮಾಡಿಕೊಡುವುದಾಗಿ ಭರವಸೆ ನೀಡಿ ಒಂದು ವರ್ಷವಾದರೂ ಸಂಕ ಮಾಡಿಕೊಟ್ಟಿಲ್ಲ. ನಾನು ಹೇಗೆ ಹೋಗಬೇಕು ಎಂದು ವಿಡಿಯೋ ದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಹರಿಯುವ ಹಳ್ಳದಲ್ಲಿ ತನ್ನ ಮೊಮ್ಮೊಕ್ಕಳೊಂದಿಗೆ ನಿಂತು ಮನವಿ ಮಾಡಿರುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಚಾರ ಮಾಧ್ಯಮದಲ್ಲೂ ಪ್ರಸಾರವಾಗಿತ್ತು.
 

click me!