South Western Railway: ನೈಋುತ್ಯ ರೈಲ್ವೆಯಿಂದ ವರ್ಷದಲ್ಲಿ 209 ಕಿಮೀ ರೈಲು ಮಾರ್ಗ ನಿರ್ಮಾಣ

By Girish Goudar  |  First Published Mar 31, 2022, 7:57 AM IST

*   ಭರದಿಂದ ಸಾಗಿದ ಜೋಡಿ ಮಾರ್ಗ-ನೂತನ ರೈಲ್ವೆ ಮಾರ್ಗ ನಿರ್ಮಾಣ
*   ಹುಬ್ಬಳ್ಳಿ- ಬೆಂಗಳೂರು ಜೋಡಿ ಮಾರ್ಗ ಬಹುತೇಕ ಈ ವರ್ಷ ಪೂರ್ಣ
*   ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಪ್ರಯಾಣದ ಅವಧಿ ಕಡಿತ 
 


ಹುಬ್ಬಳ್ಳಿ(ಮಾ.31):  ನೈಋುತ್ಯ ರೈಲ್ವೆ(South Western Railway) ವಲಯದ ವ್ಯಾಪ್ತಿಯಲ್ಲಿ ಜೋಡಿ ಮಾರ್ಗ ಹಾಗೂ ನೂತನ ರೈಲ್ವೆ ಮಾರ್ಗ(Railway Line) ನಿರ್ಮಾಣದ ಕಾಮಗಾರಿ ಭರದಿಂದ ಸಾಗಿದ್ದು, ಕಳೆದ ಒಂದು ವರ್ಷದಲ್ಲಿ 209 ಕಿಮೀ ರೈಲು ಮಾರ್ಗ ನಿರ್ಮಿಸಲಾಗಿದೆ.

ಈ ಕುರಿತು ಪ್ರಕಟಣೆ ನೀಡಿರುವ ನೈಋುತ್ಯ ರೈಲ್ವೆ ವಲಯ, ಏಪ್ರಿಲ್‌ 2021ರಿಂದ ಮಾರ್ಚ್‌ 2022ರ ವರೆಗೆ 22 ಕಿಮೀ ಹೊಸ ಮಾರ್ಗ ನಿರ್ಮಿಸಲಾಗಿದ್ದರೆ, 187.5 ಕಿಮೀ ಜೋಡಿ ನಿರ್ಮಾಣ ಸೇರಿ ಒಟ್ಟು 209.5 ಕಿಮೀ ರೈಲ್ವೆ ಮಾರ್ಗ ನಿರ್ಮಿಸಿದಂತಾಗಿದೆ ಎಂದು ಹೇಳಿದೆ.

Tap to resize

Latest Videos

Hubballi: ನೈರುತ್ಯ ರೈಲ್ವೆ ವಲಯ ದಾಖಲೆಯ ಪಾರ್ಸೆಲ್‌ ಸೇವೆ

ಗದಗ-ವಾಡಿ ಹೊಸ ಮಾರ್ಗದಲ್ಲಿನ 257 ಕಿಮೀ ವ್ಯಾಪ್ತಿಯಲ್ಲಿ ತಳಕಲ್‌- ಸಂಗನಾಳದ ಮಧ್ಯೆ 22 ಕಿಮೀ ನಿರ್ಮಾಣವನ್ನು ಪ್ರಸಕ್ತ ವರ್ಷದಲ್ಲಿ ಪೂರ್ಣಗೊಳಿಸಿದೆ. ಈ ಯೋಜನೆ 2013-14ರಲ್ಲಿ ಮಂಜೂರಾಗಿತ್ತು. ಇನ್ನು 2022- 23ರಲ್ಲಿ 45 ಕಿಮೀ ಹೊಸ ಮಾರ್ಗದ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ನೈಋುತ್ಯ ರೈಲ್ವೆ ವಲಯ ತಿಳಿಸಿದೆ.

ಜೋಡಿ ಮಾರ್ಗ:

2014-15ರಲ್ಲಿ ಮಂಜೂರಾದ ಗದಗ- ಕೂಡಗಿ-ಹುಟಗಿ ಯೋಜನೆಯಡಿ 284 ಕಿಮೀ ಜೋಡಿ ಮಾರ್ಗದಲ್ಲಿ ಹೊಂಬಳ-ಹೊಳೆಆಲೂರು 36 ಕಿಮೀ, ಗದಗ- ಹೊಂಬಳ (16 ಕಿಮೀ) ಜೋಡಿ ಮಾರ್ಗ ಪೂರ್ಣಗೊಳಿಸಲಾಗಿದೆ. ಇದರಿಂದ ಈ ವರೆಗೆ ಈ ಮಾರ್ಗದಲ್ಲಿ 200 ಕಿಮೀ ಜೋಡಿ ಮಾರ್ಗ(Doubling Line) ಪೂರ್ಣಗೊಂಡಂತಾಗಿದೆ.

2015-16ರಲ್ಲಿ ಮಂಜೂರಾದ 96 ಕಿಮೀ ಅಂತರದ ಅರಸೀಕೆರೆ-ತುಮಕೂರು ಯೋಜನೆಯಡಿ ನಿಟ್ಟೂರು-ಬಾಣಸಂದ್ರ 22 ಕಿಮೀ ಜೋಡಿ ಮಾರ್ಗ ಪೂರ್ಣಗೊಂಡಿದೆ. ಇದರಿಂದಾಗಿ ಅರಸೀಕೆರೆ-ತುಮಕೂರು 96 ಕಿಮೀ ಜೋಡಿ ಮಾರ್ಗ ಪೂರ್ಣವಾದಂತಾಗಿದೆ. ಇನ್ನೂ 120.5 ಕಿಮೀ ಅಂತರದ ಯಲಹಂಕ- ಪೆನುಕೊಂಡ ಜೋಡಿ ಮಾರ್ಗದ ಯೋಜನೆಯಡಿ ದೇವರಪಲ್ಲಿ- ಪೆನುಕೊಂಡ ಮಧ್ಯೆ 48 ಕಿಮೀ ಜೋಡಿ ಮಾರ್ಗ ಪೂರ್ಣಗೊಂಡಿದೆ. ಇದರಿಂದ ಈ ಮಾರ್ಗ ಪೂರ್ಣಗೊಂಡಿದೆ. ಇದರಿಂದ ಬೆಂಗಳೂರು-ಸಿಕಂದರಬಾದ್‌ ನಡುವಿನ ಮಾರ್ಗದ ಸಾಮರ್ಥ್ಯ ಹೆಚ್ಚಿದೆ.

South Western Railway: ಕರ್ನಾಟಕಕ್ಕೆ ಬಂಪರ್‌ 6900 ಕೋಟಿ ರೈಲ್ವೆ ಅನುದಾನ, ಯಾವೆಲ್ಲ ಹೊಸ ಯೋಜನೆ?

190 ಕಿಮೀ ಅಂತರದ ಹುಬ್ಬಳ್ಳಿ-ಚಿಕ್ಕಜಾಜೂರು ಮಧ್ಯೆದಲ್ಲಿನ ಹಾವೇರಿ-ಸಂಶಿ 50 ಕಿಮೀ ಭಾಗ ನಿರ್ಮಾಣ ಪೂರ್ಣವಾಗಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಒಟ್ಟು 145 ಕಿಮೀ ಜೋಡಿ ಮಾರ್ಗ ಪೂರ್ಣಗೊಂಡಂತಾಗಿದ್ದು, ಇನ್ನುಳಿದ 45 ಕಿಮೀ 2022-23ರ ಸಾಲಿನಲ್ಲಿ ಪೂರ್ಣಗೊಳಿಸುವ ಗುರಿಯನ್ನು ನೈಋುತ್ಯ ರೈಲ್ವೆ ವಲಯ ಇಟ್ಟುಕೊಂಡಿದೆ. ಇದು ಪೂರ್ಣಗೊಂಡರೆ ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಪ್ರಯಾಣದ ಅವಧಿ ಕಡಿತವಾಗಲಿದೆ.

ಹುಬ್ಬಳ್ಳಿ-ಹೊಸಪೇಟೆ- ಲೋಂಡಾ- ವಾಸ್ಕೋ ಡಿ ಗಾಮಾ ಜೋಡಿ ಮಾರ್ಗದ ಯೋಜನೆಯ ಸ್ಯಾಂವೋರ್ಡೆಮ್‌-ಮಡಗಾಂವ್‌ ಮಧ್ಯೆದ 15.64 ಕಿ.ಮೀ ಜೋಡಿ ಮಾರ್ಗ ಪೂರ್ಣಗೊಂಡಿದೆ. ಒಟ್ಟು ಪ್ರಸಕ್ತ ವರ್ಷ 22 ಕಿಮೀ ಹೊಸ ಮಾರ್ಗ, 187.5 ಕಿಮೀ ಜೋಡಿ ಮಾರ್ಗ ನಿರ್ಮಾಣ ಮಾಡಿದಂತಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗದಗ- ವಾಡಿ ರೈಲು ಮಾರ್ಗ ಪೂರ್ಣವಾಗುವುದ್ಯಾವಾಗ?

ಹುಬ್ಬಳ್ಳಿ: ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಸಂಪರ್ಕಿಸುವ ಗದಗ- ವಾಡಿ ರೈಲು(Gadag-Wadi) ಮಾರ್ಗ ನಿರ್ಮಾಣ ಆಮೆಗತಿಯಲ್ಲಿ ಸಾಗುತ್ತಿದೆ. ಕಾಮಗಾರಿ ಪ್ರಾರಂಭವಾಗಿ ಏಳೆಂಟು ವರ್ಷವಾದರೂ ಆಗಿರುವುದು ಬರೀ ಶೇ. 10ರಷ್ಟು ಮಾತ್ರ. ಭೂಸ್ವಾಧೀನದ(Land Acquisition) ವಿಳಂಬತೆಯೇ ಇದಕ್ಕೆ ಮುಳುವಾಗಿದೆ.

ಗದಗ- ವಾಡಿ ರೈಲು ಮಾರ್ಗದ ಬೇಡಿಕೆ ಈಗಿನದ್ದಲ್ಲ. ಹಲವು ದಶಕಗಳ ಬೇಡಿಕೆ. ಈ ರೈಲು ಮಾರ್ಗವಾದರೆ ಕಲ್ಯಾಣ ಕರ್ನಾಟಕ(Kalyana Karnataka) ಸೇರಿದಂತೆ ನೆರೆ ರಾಜ್ಯವೆನಿಸಿರುವ ಹೈದ್ರಾಬಾದ್‌ಗೆ(Hyuderabad) ನೇರ ಸಂಪರ್ಕ ಸಾಧಿಸುವ ಮಾರ್ಗ ಇದಾಗಿದೆ. ಈ ಮಾರ್ಗದ ಮೊಟ್ಟ ಮೊದಲು ಸಮೀಕ್ಷೆ ನಡೆದಿರುವುದು ಬ್ರಿಟಿಷ್‌ ಸರ್ಕಾರದ ಅವಧಿಯಲ್ಲಿ. 1904ರಲ್ಲಿ ಬ್ರಿಟಿಷ್‌ ಸರ್ಕಾರ ಇದರ ಸಮೀಕ್ಷೆ ನಡೆಸಿತ್ತು. ನಂತರ ಸ್ವಾತಂತ್ರ್ಯ ಹೋರಾಟ ತೀವ್ರಗೊಂಡ ನಂತರ ಈ ಯೋಜನೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲವಂತೆ. ನಂತರ ಭಾರತ ಸ್ವಾತಂತ್ರ್ಯವಾದ ಬಳಿಕ ಆಗಿನ ರೈಲ್ವೆ ಸಚಿವ ಲಾಲ್‌ಬಹದ್ದೂರು ಶಾಸ್ತ್ರೀ ಕೂಡ ಈ ಯೋಜನೆಗೆ ಅಡಿಗಲ್ಲು ಇಟ್ಟಿದ್ದರು ಎಂಬ ಮಾತಿದೆ. ಬಳಿಕ ಇದ್ಯಾಕೆ ಪ್ರಾರಂಭವಾಗಲಿಲ್ಲವೋ ಆ ಬಗ್ಗೆ ಸಮರ್ಪಕ ಉತ್ತರ ಮಾತ್ರ ಯಾರ ಬಳಿಯೂ ಇಲ್ಲ. ಆದರೆ, ಯೋಜನೆಗೆ ಮಂಜೂರಾತಿ ಸಿಕ್ಕಿದ್ದು ಮಾತ್ರ 2013-14ರಲ್ಲಿ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ರೈಲ್ವೆ ಸಚಿವರಾಗಿದ್ದ ವೇಳೆ 2014ರಲ್ಲಿ ಪ್ರಾರಂಭವಾಗಿರುವ ಈ ಯೋಜನೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಂಟಿಯಾಗಿ ಶೇ. 50ರ ಅನುಪಾತದಲ್ಲಿ ಕೈಗೆತ್ತಿಕೊಂಡಿವೆ. .2841 ಕೋಟಿ ವೆಚ್ಚದ ಯೋಜನೆಯಾಗಿರುವ ಇದು ಬರೋಬ್ಬರಿ 252 ಕಿಮೀ ವ್ಯಾಪ್ತಿಯ ಯೋಜನೆ. ಈವರೆಗೆ ಬರೀ 22 ಕಿಮೀ ಮಾತ್ರ ರೈಲು ಮಾರ್ಗ ನಿರ್ಮಾಣವಾಗಿದೆ. ಇನ್ನೂ 230 ಕಿಮೀಗೂ ಅಧಿಕ ಕಾಮಗಾರಿ ಆಗಬೇಕಿದೆ.
 

click me!