Hubballi: ನೈರುತ್ಯ ರೈಲ್ವೆ ವಲಯ ದಾಖಲೆಯ ಪಾರ್ಸೆಲ್ ಸೇವೆ
* ಪಾರ್ಸೆಲ್ ಸೇವೆಯಿಂದಲೇ 100 ಕೋಟಿಗೂ ಅಧಿಕ ಆದಾಯ
* ಕಳೆದ ವರ್ಷ ಬರೀ .48.34 ಕೋಟಿ ಆಗಿತ್ತು
* ಪಾರ್ಸೆಲ್ ಸೇವೆಯಲ್ಲಿ ಆದಾಯ ಗಳಿಸುವ ಮೂಲಕ ದಾಖಲೆ ಸೃಷ್ಟಿ
ಶಿವಾನಂದ ಗೊಂಬಿ
ಹುಬ್ಬಳ್ಳಿ(ಫೆ.19): ನೈರುತ್ಯ ರೈಲ್ವೆ ವಲಯವೂ(South Western Railway) ಪಾರ್ಸೆಲ್ ಸೇವೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಆದಾಯ ಗಳಿಸಿದೆ. 2021-22ರ ಫೆ. 1ರವರೆಗೆ ಬರೋಬ್ಬರಿ 100 ಕೋಟಿ ಆದಾಯವನ್ನು ಪಾರ್ಸೆಲ್ ಸೇವೆಯಿಂದಲೇ ಗಳಿಸಿದೆ. ಪಾರ್ಸೆಲ್ ಸೇವೆಯಿಂದ ಇಷ್ಟೊಂದು ಆದಾಯ ಗಳಿಸಿರುವುದು ಇದೇ ಮೊದಲಾಗಿದೆ. ಕರ್ನಾಟಕ, ಆಂಧ್ರ, ಗೋವಾ ವ್ಯಾಪ್ತಿಯ ವಲಯದಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮೂರು ವಿಭಾಗಗಳನ್ನು ಹೊಂದಿರುವ ದೊಡ್ಡ ವಲಯವೆನಿಸಿಕೊಂಡಿದೆ. ತನ್ನ ಆದಾಯ ಹೆಚ್ಚಿಸಿಕೊಳ್ಳಲು ವಿವಿಧ ಸಂಪನ್ಮೂಲ ಕ್ರೂಢೀಕರಣಕ್ಕೆ ಮುಂದಾಗುತ್ತದೆ. ಇದೀಗ ಪಾರ್ಸೆಲ್ ಸೇವೆಯ(Parcel Service) ಆದಾಯವನ್ನು(Income) ದ್ವಿಗುಣಗೊಳಿಸಿಕೊಂಡಿರುವುದು ವಿಶೇಷ.
ಕಳೆದ ವರ್ಷ(2020-2021) ಪಾರ್ಸೆಲ್ ಸೇವೆಯಿಂದ ಬರೋಬ್ಬರಿ 48.34 ಕೋಟಿ ಆದಾಯ ಗಳಿಸಿತ್ತು. ಈ ವರ್ಷ ಫೆ. 1ರೊಳಗೆ .100 ಕೋಟಿಗೂ ಅಧಿಕ ಆದಾಯ ಗಳಿಸುವ ಮೂಲಕ ದಾಖಲೆ ಸೃಷ್ಟಿಸಿದೆ.
South Western Railway: ಕರ್ನಾಟಕಕ್ಕೆ ಬಂಪರ್ 6900 ಕೋಟಿ ರೈಲ್ವೆ ಅನುದಾನ, ಯಾವೆಲ್ಲ ಹೊಸ ಯೋಜನೆ?
ವಿಭಾಗವಾರು ಎಷ್ಟು?
ಮೂರು ವಿಭಾಗಕ್ಕೆ ಹೋಲಿಸಿದರೆ ಬೆಂಗಳೂರು ವಿಭಾಗದಲ್ಲಿ(Bengaluru Division) ಅತಿ ಹೆಚ್ಚು ಆದಾಯ ಗಳಿಸಲಾಗಿದೆ. ಇಲ್ಲಿ ಬರೋಬ್ಬರಿ 74.78 ಕೋಟಿ ಪಾರ್ಸೆಲ್ ಸೇವೆಯಿಂದಲೇ ಗಳಿಸಲಾಗಿದೆ. ಕಳೆದ ವರ್ಷ ಈ ವಿಭಾಗದಲ್ಲಿ .32.08 ಕೋಟಿ ಆದಾಯವಾಗಿತ್ತು.ಇನ್ನೂ ಹುಬ್ಬಳ್ಳಿ .17.49 ಕೋಟಿ (ಕಳೆದ ವರ್ಷ . 6.50 ಕೋಟಿ), ಮೈಸೂರು . 7.78 (ಕಳೆದ ವರ್ಷ . 7.76 ಕೋಟಿ) ಆದಾಯವಾಗಿತ್ತು. ಕಳೆದ ವರ್ಷ 0.77 ಲಕ್ಷ ಟನ್‌ಗಳಷ್ಟು ವಿವಿಧ ವಸ್ತುಗಳನ್ನು ಬೇರೆಡೆ ಸಾಗಿಸಲಾಗಿದ್ದರೆ, ಈ ವರ್ಷ ಇದು ದುಪ್ಪಟ್ಟಾಗಿದೆ. ಅಂದರೆ ಫೆ. 1ರವರೆಗೆ ಸಾಗಿಸಿರುವುದು ಬರೋಬ್ಬರಿ 1.66 ಲಕ್ಷ ಟನ್ ವಸ್ತುಗಳು.
ಯಾವ್ಯಾವ ವಸ್ತುಗಳು:
ಪಾರ್ಸೆಲ್ ಸೇವೆಯನ್ನು ಆಕರ್ಷಿಸುವಲ್ಲಿ ವಿವಿಧ ಹಂತಗಳಲ್ಲಿ ವ್ಯಾಪಾರೋದ್ಯಮದ(Marketing) ಕೇಂದ್ರೀಕೃತ ಪ್ರಯತ್ನ ಮಾಡಿರುವುದೇ ಇಷ್ಟೊಂದು ಆದಾಯ ಗಳಿಸಲು ಸಾಧ್ಯವಾಗಿದೆ. ಇದರಲ್ಲಿ 74 ಟೈಂ ಟೇಬಲ್ಡ್ ಪಾರ್ಸೆಲ್ ಎಕ್ಸ್‌ಪ್ರೆಸ್ ರೈಲ್‌ಗಳಲ್ಲಿ ಐಸ್ಡ್ ಫಿಶ್, ಡ್ರೈ ಫಿಶ್, ನೆಸ್ಲೆ ಉತ್ಪನ್ನ, ಟೈರ್‌ಗಳು, ತರಕಾರಿ, ಹ್ಯಾಚಿಂಗ್ ಎಗ್ ಇವೆಲ್ಲವನ್ನು ಒಟ್ಟುಗೂಡಿಸಿ ಬೆಂಗಳೂರಿನಿಂದ ದಿಮಾಪುರ ಮತ್ತು ಹೌರಾ ಹಾಗೂ ವಾಸ್ಕೋದಿಂದ ಗುವಾಹಟಿಗೆ ರವಾನಿಸಲಾಯಿತು. ಕಿಸಾನ್ ಸ್ಪೆಷಲ್ ಹೆಸರಿನಲ್ಲಿ 33 ರೈಲುಗಳಲ್ಲಿ ಮಾವು, ತರಕಾರಿ, ಈರುಳ್ಳಿ ಸೇರಿದಂತೆ ತಾಜಾ ಹಣ್ಣುಗಳನ್ನು ವಿವಿಧ ಸ್ಥಳಗಳಿಗೆ ರವಾನಿಸಲಾಗಿತು.
ಪಾರ್ಸೆಲ್ ಸೇವೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಗೂಡ್ಸ್ ರೈಲುಗಳಲ್ಲಿ(Goods Railway) ಕೆಲವೊಂದಿಷ್ಟುಬದಲಾವಣೆ (ನ್ಯೂ ಮಾಡಿಫೈಡ್ ಗೂಡ್ಸ್ (ಎನ್‌ಎಂಜಿ)ಕೂಡ ಮಾಡಿದ್ದು ವಿಶೇಷ. ಈ ರೀತಿ 69 ಗೂಡ್ಸ್ ರೈಲುಗಳು ಕೋರಿ, ದೆಹಲಿ, ಸಂಕ್ರೈಲ್‌ಗೆ ಟೈರ್, ನೆಸ್ಲೆ ಉತ್ಪನ್ನ ಸೇರಿದಂತೆ ಇತರೆ ಸರಕನ್ನು ಸಾಗಿಸಿದೆ.
ಹವಾನಿಯಂತ್ರಿತ ರೈಲು:
ವಾಸ್ಕೋ ಡಿಗಾಮಾದಿಂದ ಗುವಾಹಟಿಗೆ ಮತ್ತು ಯಶವಂತಪುರದಿಂದ ದೆಹಲಿಗೆ ಹವಾನಿಯಂತ್ರಿತ ಕೋಚ್‌ಗಳಲ್ಲಿ ಮ್ಯಾನ್ಲಿ ನೆಸ್ಲೆ ಚಾಕೋಲೆಟ್‌ಗಳನ್ನು ರವಾನಿಸಿರುವುದು ವಿಶೇಷ. ಈ ರೀತಿ ಹವಾನಿಯಂತ್ರಿತ ಕೋಚ್‌ಗಳಲ್ಲಿ ಪಾರ್ಸೆಲ್ ಸೇವೆ ಒದಗಿಸಿದ್ದು ಇದೇ ಮೊದಲ ಬಾರಿಗೆ ಎಂಬುದು ಮತ್ತೊಂದು ವಿಶೇಷ.
ಈ ರೈಲ್ವೆ ಪಾರ್ಸೆಲ್ ಕಾರ್ಗೋ ಎಕ್ಸ್‌ಪ್ರೆಸ್ ರೈಲನ್ನು ಗುತ್ತಿಗೆ ನೀಡಲಾಗಿದೆ.ಅಂತಹ ಎರಡು ರೈಲುಗಳನ್ನು ಲೀಸ್ ಮಾಡಿರುವುದು ವಿಶೇಷ. ಒಂದನ್ನು ಯಶವಂತಪುರದಿಂದ ದೆಹಲಿಗೆ ಇನ್ನೊಂದು ವಾಸ್ಕೋಡಿಗಾಮಾದಿಂದ ಅಜಾರಾಗೆ ರವಾನಿಸಲಾಗುತ್ತಿದೆ. ಈ ರೈಲುಗಳಲ್ಲಿ ಇಲ್ಲಿವರೆಗೂ ಮೂರು ಟ್ರಿಪ್‌ಗಳನ್ನು ಮಾಡಿವೆ.
South Western Railway: ಸಮಯಪಾಲನೆಯಲ್ಲಿ ನೈಋುತ್ಯ ರೈಲ್ವೆಗೆ 3ನೇ ಸ್ಥಾನ
ಇದನ್ನು ಹೊರತುಪಡಿಸಿ ಬೆಂಗಳೂರು/ವಾಸ್ಕೋ-ಡಿ-ಗಾಮಾ/ಮೈಸೂರುಗಳಿಂದ ದೆಹಲಿ, ಪಾಟ್ನಾ, ಹೌರಾ, ಗುವಾಹಟಿ, ಕೊಬಾರ್ ಇತ್ಯಾದಿಗಳಿಗೆ ಎಲ್ಲ ಪ್ರಮುಖ ಎಕ್ಸ್‌ಪ್ರೆಸ್‌ಗಳಲ್ಲಿ ಗುತ್ತಿಗೆ ಪಡೆದ ಪಾರ್ಸೆಲ್ ವ್ಯಾಗನ್ ಲಗತಿಸಲಾಗುತ್ತಿದೆ.
ಒಟ್ಟಿನಲ್ಲಿ ಪಾರ್ಸೆಲ್ ಸೇವೆಯನ್ನು ಅತ್ಯುತ್ತಮಗೊಳಿಸಿರುವ ನೈರುತ್ಯ ರೈಲ್ವೆ ವಲಯವು ಈ ವರ್ಷ ದಾಖಲೆ ಪ್ರಮಾಣದಲ್ಲಿ ಪಾರ್ಸೆಲ್ ಸೇವೆಯಲ್ಲಿ ಆದಾಯ ಗಳಿಸುವ ಮೂಲಕ ದಾಖಲೆ ಸೃಷ್ಟಿಸಿರುವುದಂತೂ ಸತ್ಯ.
ನೈರುತ್ಯ ರೈಲ್ವೆ ವಲಯ ಸ್ಥಾಪನೆಯಾದ ಬಳಿಕ ಮೊದಲ ಬಾರಿಗೆ .100 ಕೋಟಿ ಆದಾಯವನ್ನು ಪಾರ್ಸೆಲ್ ಸೇವೆಯಿಂದ ಗಳಿಸಿದೆ. ಇದು ಐತಿಹಾಸಿಕ ದಾಖಲೆಯಾಗಿದೆ ಅಂತ ನೈರುತ್ಯ ರೈಲ್ವೆ ವಲಯದ ಮಹಾಪ್ರಬಂಧಕ, ಸಂಜೀವ ಕಿಶೋರ್ ತಿಳಿಸಿದ್ದಾರೆ.
ವಿಶೇಷವಾಗಿ ಹಾಳಾಗುವ ವಸ್ತುಗಳು, ಎಫ್.ಎಂ.ಸಿಜಿ, ಕೃಷಿ ಉತ್ಪನ್ನಗಳ ತಯಾರಕರಿಗೆ ರೈಲ್ವೆ ಪಾರ್ಸೆಲ್ ಸೇವೆಯಿಂದ ಸಾಕಷ್ಟುಅನುಕೂಲವಾಗಿದೆ. ಕರ್ನಾಟಕದ ರೈತರಿಗೆ ದೆಹಲಿ, ಆಸ್ಸಾಂ, ಬಿಹಾರ ಸೇರಿದಂತೆ ವಿವಿಧ ದೂರದ ಮಾರುಕಟ್ಟೆಗಳಿಗೆ ತಮ್ಮ ಮಾಲು ತಲುಪಿಸಲು ಸಹಾಯವಾಗುತ್ತಿದೆ. ಉತ್ತಮ ಬೆಲೆಯೂ ದೊರೆಯುತ್ತಿದೆ ಅಂತ ನೈರುತ್ಯರೈಲ್ವೆ ವಲಯದ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಎ.ಎಸ್.ರಾವ್ ಹೇಳಿದ್ದಾರೆ.