ವಿವಸ್ತ್ರ ಕೇಸಲ್ಲಿ ಬಂಧನ ವೇಳೆ ಕುಸಿದ ಕೈ ಸದಸ್ಯೆ : ಆಸ್ಪತ್ರೆಗೆ ದಾಖಲಿಸಿದ ಪೊಲೀಸರು

Kannadaprabha News   | Kannada Prabha
Published : Jan 09, 2026, 09:04 AM IST
Hubli

ಸಾರಾಂಶ

ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಯನ್ನು ವಿವಸ್ತ್ರಗೊಳಿಸಿ ಬಂಧಿಸಿದ ಪ್ರಕರಣ ಸಂಬಂಧ ಘಟನೆಗೆ ಕುಮ್ಮಕ್ಕು ನೀಡಿದ ಆರೋಪದಡಿ ಮಹಾನಗರ ಪಾಲಿಕೆ ಕಾಂಗ್ರೆಸ್‌ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಸೇರಿ 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿ/ಬೆಂಗಳೂರು : ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಯನ್ನು ವಿವಸ್ತ್ರಗೊಳಿಸಿ ಬಂಧಿಸಿದ ಪ್ರಕರಣ ಸಂಬಂಧ ಘಟನೆಗೆ ಕುಮ್ಮಕ್ಕು ನೀಡಿದ ಆರೋಪದಡಿ ಮಹಾನಗರ ಪಾಲಿಕೆ ಕಾಂಗ್ರೆಸ್‌ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಸೇರಿ 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುವರ್ಣ ಕಲ್ಲಕುಂಟ್ಲಾ ಅವರನ್ನು ವಶಕ್ಕೆ ಪಡೆಯಲು ಹೋದ ವೇಳೆ ಎದೆ ನೋವೆಂದು ಕುಸಿದು ಬಿದ್ದು ಆಸ್ಪತ್ರೆ ಸೇರಿದ್ದಾರೆ.

ಚಾಲುಕ್ಯ ನಗರದಲ್ಲಿ ಜ.2ರಂದು ಮಧ್ಯಾಹ್ನ 1.30ರ ಸುಮಾರಿಗೆ ಪೀತಲು, ಡೇವಿಡ್ ಲುಂಜಾಲ, ಜ್ಞಾನೇಶ್, ನಿರ್ಮಲಾ ಸೇರಿ ಹಲವರು ತನ್ನ ಅಕ್ಕ ಸುಜಾತಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತನ್ನ ಅಕ್ಕ ಮತ್ತು ತಾಯಿಯ ಸೀರೆ ಎಳೆದಾಡಲು ಪ್ರಯತ್ನಿಸಿದ್ದಾರೆ. ತಾಯಿ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸುಜಾತಾ ಹಂಡಿ ಸಹೋದರ ಮರಿಯಾ ದಾಸ್ಕೇ ಅವರು ಕೇಶ್ವಾಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಕೇಸ್‌ ದಾಖಲಾಗುತ್ತಿದ್ದಂತೆ ಸುವರ್ಣ ಕಲ್ಲಕುಂಟ್ಲಾ ಬಂಧನದ ಭೀತಿಯಿಂದ ಗುರುವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದರು. ಸಂಜೆ ಭೈರಿದೇವರಕೊಪ್ಪದ ಸಂಬಂಧಿಕರ ಮನೆಯಲ್ಲಿ ಇರುವ ಮಾಹಿತಿ ತಿಳಿದು ಪೊಲೀಸರು ವಶಕ್ಕೆ ಪಡೆಯಲು ಹೋಗಿದ್ದರು. ಈ ವೇಳೆ ಕಲ್ಲಕುಂಟ್ಲಾ ಎದೆ ನೋವೆಂದು ಕುಸಿದು ಬಿದ್ದಿದ್ದಾರೆ. ಬಳಿಕ ಅಲ್ಲಿಯೇ ಇದ್ದ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರ ಪಾರ್ಚೂನರ್‌ ಕಾರಿನಲ್ಲಿಯೇ ಪೊಲೀಸರೇ ಕೆಎಂಸಿಆರ್‌ಐಗೆ ತಂದು ದಾಖಲಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಈ ನಡುವೆ ಕಾಂಗ್ರೆಸ್‌ ಮುಖಂಡರು, ಕೇಶ್ವಾಪುರ ಠಾಣೆಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಲ್ಲದೇ, ಬಿಜೆಪಿ ಒತ್ತಡಕ್ಕೆ ಮಣಿದು ಕಾಂಗ್ರೆಸ್‌ ಸದಸ್ಯೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದು ಖಂಡನೀಯ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಸುಮೋಟೋ ಕೇಸ್‌:

ಈ ಮಧ್ಯೆ ಬಿಜೆಪಿ ಮುಖಂಡೆ ಸುಜಾತಾ ಹಂಡಿ ವಿವಸ್ತ್ರಗೊಂಡಿರುವ ವಿಡಿಯೋ ವೈರಲ್‌ ಮಾಡಿರುವ ಕುರಿತು ಪೊಲೀಸರು ಸುಮೋಟೋ ಕೇಸ್‌ ದಾಖಲಿಸಿಕೊಂಡಿದ್ದಾರೆ. ವಿಡಿಯೋ ವೈರಲ್‌ ಮಾಡಿದ್ದು ಯಾರು ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಪೊಲೀಸ್‌ ಕಸ್ಟಡಿಯಲ್ಲಿ ಇದ್ದಾಗಲೇ ವಿವಸ್ತ್ರವಾಗಿರುವುದು ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಮೂಲಕ ತಮ್ಮದೇನೂ ತಪ್ಪಿಲ್ಲ ಎಂಬುದನ್ನು ಬಿಂಬಿಸಲು ಪೊಲೀಸರು ಹುನ್ನಾರ ನಡೆಸಿದ್ದಾರೆ ಎಂದ ಆರೋಪ ಕೇಳಿ ಬಂದಿದೆ.

ಕಲ್ಲುಕುಂಟ್ಲಾ ಮೇಲೆ 3 ಕೇಸ್‌:

ಸುವರ್ಣ ಕಲ್ಲಕುಂಟ್ಲಾ ಮೇಲೆ ಈ ಹಿಂದೆ 3 ಕೇಸ್‌ಗಳಿವೆ ಎಂದು ಮೂಲಗಳು ತಿಳಿಸಿವೆ. 2008, 2010ರಲ್ಲಿ ಹೊಡೆದಾಟಕ್ಕೆ ಸಂಬಂಧಪಟ್ಟಂತೆ, 2012ರಲ್ಲಿ ಕೆಎಂಸಿಆರ್‌ಐನಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸ್‌ ದಾಖಲಾಗಿತ್ತು. ಇದೀಗ 2026ರಲ್ಲಿ ಈ ಕೇಸ್‌ ಸೇರಿದಂತೆ ಒಟ್ಟು 4 ಕೇಸ್‌ಗಳಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು:ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ಪೊಲೀಸರು ವಿವಸ್ತ್ರಗೊಳಿಸಿದ ಘಟನೆಗೆ ಸಂಬಂಧಪಟ್ಟ ಪೊಲೀಸರನ್ನು ಶುಕ್ರವಾರ ಬೆಳಗ್ಗೆ ಒಂಬತ್ತು ಗಂಟೆಯೊಳಗಾಗಿ ಅಮಾನತು ಮಾಡಬೇಕು ಎಂದು ಗಡುವು ನೀಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್‌, ಇಲ್ಲದಿದ್ದರೆ ನಾನೇ ಹುಬ್ಬ‍ಳ್ಳಿಗೆ ತೆರಳಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಘಟನೆ ಮೂಲಕ ಪೊಲೀಸರೇ ದುಶ್ಶಾಸನರಾಗಿದ್ದಾರೆ. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದೂ ಒತ್ತಾಯಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಮಹಿಳಾ ಆಯೋಗ ಈಗಾಗಲೇ ಛೀಮಾರಿ ಹಾಕಿದೆ. ನಾನು ಮಾನವ ಹಕ್ಕು ಆಯೋಗ ಹಾಗೂ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದೇನೆ. ದೌರ್ಜನ್ಯಕ್ಕೊಳಗಾದ ಮಹಿಳೆ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದರು.

ಬದುಕುವ ಗ್ಯಾರಂಟಿ ಇಲ್ಲ:

ಕಾಂಗ್ರೆಸ್‌ ಸರ್ಕಾರದಲ್ಲಿ ಮಹಿಳೆಯರಿಗೆ ಬದುಕುವ ಗ್ಯಾರಂಟಿ ಇಲ್ಲ. ಈ ಹಿಂದೆ ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದರು. ಇತ್ತೀಚೆಗೆ ಮೈಸೂರಿನಲ್ಲಿ ಬಾಲಕಿಯ ಅತ್ಯಾಚಾರವಾಗಿತ್ತು. ಈಗ ಹುಬ್ಬಳ್ಳಿಯಲ್ಲಿ ಪೊಲೀಸರೇ ಮಹಿಳೆಯನ್ನು ವಿವಸ್ತ್ರ ಮಾಡಿ ಹಲ್ಲೆ ಮಾಡಿದ್ದಾರೆ. ಮಹಾಭಾರತದಲ್ಲಿ ಧೃತರಾಷ್ಟ್ರ ಕುರುಡಾಗಿದ್ದರೆ, ಗಾಂಧಾರಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಳು. ಹಾಗೆಯೇ ಇಲ್ಲಿ ಸಿಎಂ ಸಿದ್ದರಾಮಯ್ಯ ಕುರುಡಾಗಿದ್ದರೆ, ಡಿಸಿಎಂ ಡಿ.ಕೆ.ಶಿವಕುಮಾರ್‌ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಾರೆ. ಪೊಲೀಸರು ದುಶ್ಶಾಸನನಂತೆ ವಿವಸ್ತ್ರ ಮಾಡಿದ್ದಾರೆ. ಇದು ಕಾನೂನು ಸುವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದರು.

ಅವರೇ ಬಟ್ಟೆ ಬಿಚ್ಚಿಕೊಂಡರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯಾಧೀಶರಂತೆ ತೀರ್ಪು ನೀಡಿದ್ದಾರೆ. ಬಳ್ಳಾರಿಯಲ್ಲಿ ಗುಂಡೇಟಿನ ಪ್ರಕರಣ ನಡೆದಾಗ, ತನಿಖೆ ಪ್ರಗತಿಯಲ್ಲಿದೆ ಎಂದು ಸಿಎಂ ಹೇಳಿದ್ದರು. ಬಳಿಕ ಕಾಂಗ್ರೆಸ್‌ ಕಾರ್ಯಕರ್ತನ ಗನ್‌ನಿಂದ ಹಾರಿದೆ ಎಂದರು. ಈ ಪ್ರಕರಣದಲ್ಲಿ ಅವರೇ ಬಟ್ಟೆ ಬಿಚ್ಚಿದ್ದಾರೆ ಎಂದು ಹೇಳಿಕೆ ನೀಡುವ ಮುನ್ನ ತನಿಖಾ ವರದಿ ಬರಬೇಕಿತ್ತು. ವರದಿ ಬರುವ ಮುನ್ನವೇ ಮುಖ್ಯಮಂತ್ರಿ ತೀರ್ಪು ನೀಡುತ್ತಾರೆ ಎಂದರೆ ಪೊಲೀಸರು ಅದೇ ರೀತಿ ವರದಿ ಬರೆಯಬೇಕಾಗುತ್ತದೆ. ಈ ಪ್ರಕರಣ ಮುಚ್ಚಿ ಹಾಕಲು ಷಡ್ಯಂತ್ರ ನಡೆದಿದೆ ಎಂದು ಅಶೋಕ್‌ ಆಪಾದಿಸಿದರು.

ಮಹಿಳೆಯರ ಮೇಲೆ ದೌರ್ಜನ್ಯ: ವ್ಯಾನ್‌ನಲ್ಲಿ 20 ಪೊಲೀಸರಿರುವಾಗ ಮಹಿಳೆ ಬಟ್ಟೆ ಬಿಚ್ಚಿಕೊಳ್ಳಲು ಸಾಧ್ಯವಿಲ್ಲ. ಸ್ಥಳೀಯ ಕಾಂಗ್ರೆಸ್‌ ಕಾರ್ಪೊರೇಟರ್‌ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಅಡ್ಡಿ ಮಾಡಿದ್ದಾರೆ. ಕಾರ್ಪೊರೇಟರ್‌ ಮಾತು ಕೇಳಿಕೊಂಡು ಪೊಲೀಸರು ಕ್ರಮ ವಹಿಸಿದ್ದಾರೆ. ಬಾಂಗ್ಲಾದೇಶಿಯರನ್ನು ಬಂಧಿಸಲು, 7 ಕೋಟಿ ರು. ಬ್ಯಾಂಕ್‌ ಹಣ ಕದ್ದ ದರೋಡೆಕೋರರನ್ನು ಬಂಧಿಸಲು ಇಷ್ಟು ಉತ್ಸಾಹ ತೋರಿಲ್ಲ. ಕಾಂಗ್ರೆಸ್‌ ಅವಧಿಯಲ್ಲಿ 43,053 ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಸಂಪೂರ್ಣ ಅವಧಿಯಲ್ಲಿ ಇಷ್ಟು ಪ್ರಕರಣಗಳು ನಡೆದಿರಲಿಲ್ಲ. ಆದರೂ ಸಿದ್ದರಾಮಯ್ಯ ಹೋಲಿಕೆ ಮಾಡಿಕೊಳ್ಳುತ್ತಾರೆ ಎಂದು ಹರಿಹಾಯ್ದರು.

ಮಹಿಳೆ ವಿವಸ್ತ್ರ ಪ್ರಕರಣ: ಇನ್‌ಸ್ಪೆಕ್ಟರ್‌ ಎತ್ತಂಗಡಿ:

ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತೆಯ ವಿವಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ರಾತ್ರಿ ಕೇಶ್ವಾಪುರ ಠಾಣೆಯ ಇನ್‌ಸ್ಪೆಕ್ಟರ್‌ ಅವರನ್ನು ವರ್ಗಾಯಿಸಲಾಗಿದೆ. ಕೇಶ್ವಾಪುರ ಠಾಣೆಯಲ್ಲಿ ಪಿಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಎಸ್.ಹಟ್ಟಿ ಅವರನ್ನು ಕಮಿಷನರ್‌ ಕಚೇರಿಯ ಕಂಟ್ರೋಲ್‌ ರೂಮಿಗೆ ವರ್ಗಾವಣೆಗೊಳಿಸಲಾಗಿದೆ. ಪ್ರಭಾರಿ ಇನ್‌ಸ್ಪೆಕ್ಟರ್‌ ಆಗಿ ಘಂಟಿಕೇರಿ ಠಾಣೆಯ ಬಿ.ಎ.ಜಾಧವ್‌ ಅವರನ್ನು ನೇಮಿಸಿ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ ಆದೇಶಿಸಿದ್ದಾರೆ. ಪ್ರಕರಣದ ಸಮಗ್ರ ತನಿಖೆ ನಡೆಸಲು ತನಿಖಾಧಿಕಾರಿಯನ್ನಾಗಿ ಎಸಿಪಿ ಶಿವರಾಜ ಕಟಕಬಾವಿ ಅವರನ್ನು ನೇಮಿಸಲಾಗಿದೆ. 

ಶಿವಮೊಗ್ಗ, ಧಾರವಾಡದಲ್ಲಿ ಬಿಜೆಪಿಯಿಂದ ಪ್ರತಿಭಟನೆ: ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಅವರ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಧಾರವಾಡ ಹಾಗೂ ಶಿವಮೊಗ್ಗಗಳಲ್ಲಿ ಪ್ರತಿಭಟನೆ ನಡೆಸಿದರು.

ಧಾರವಾಡದಲ್ಲಿ ನಗರದ ಡೀಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ಗೂಂಡಾಗಿರಿ ವಿರುದ್ಧ ಘೋಷಣೆ ಕೂಗಿದರು. ಬಳಿಕ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಇದೇ ವೇಳೆ, ಶಿವಮೊಗ್ಗದಲ್ಲೂ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

PREV
Read more Articles on
click me!

Recommended Stories

ಬೆಂಗಳೂರಿನ ಜನರಲ್ಲಿ ಇನ್ಫ್ಲುಯೆನ್ಝಾ & ಎಚ್‌3ಎನ್‌2 ರೂಪಾಂತರ ಲಕ್ಷಣ: ನಿರ್ಲಕ್ಷ್ಯ ಬೇಡ
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಶೇ. 8 ಮೀಸಲಾತಿ; ಬಂಪರ್ ಸುವರ್ಣವಕಾಶ