ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಶೇ. 8 ಮೀಸಲಾತಿ; ಬಂಪರ್ ಸುವರ್ಣವಕಾಶ

Published : Jan 09, 2026, 08:20 AM IST
college students

ಸಾರಾಂಶ

ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು, ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ ಪ್ರವೇಶದಲ್ಲಿ ಕಲಂ 371(ಜೆ) ಅಡಿಯಲ್ಲಿ ಶೇ. 8ರಷ್ಟು ಮೀಸಲಾತಿ ಘೋಷಿಸಿದೆ.

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿವಿ ಸ್ನಾತಕ ಪದವಿ ಪ್ರವೇಶದಲ್ಲಿ ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ 7 ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಕಲಂ 371 (ಕೆ) ಅನ್ವಯ ಶೇ. 8ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಹೀಗಾಗಿ ಇಲ್ಲಿರುವ 15 ಸ್ನಾತಕ ವಿಭಾಗಗಳಲ್ಲಿ ಪ್ರತಿ ವಿಭಾಗದಲ್ಲಿಯೂ 3ರಿಂದ 6ರಷ್ಟು ಸ್ಥಾನಗಳು ಕಲ್ಯಾಣ ಭಾಗದವರಿಗೆ ಲಭ್ಯವಾಗಲಿವೆ ಎಂದು ಕೇಂದ್ರೀಯ ವಿವಿ ಕುಲಪತಿ ಪ್ರೊ.ಬಟು ಸತ್ಯನಾರಾಯಣ ಹೇಳಿದ್ದಾರೆ.

ಕೇಂದ್ರೀಯ ವಿವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗಕ್ಕೆ ಸಂವಿಧಾನದ ಕಲಂ 371 (ಜೆ) ಅಡಿಯಲ್ಲಿ ವಿಶೇಷ ಸವಲತ್ತು ದೊರಕಿದೆ. ಅದೇ ಹಿನ್ನೆಲೆಯಲ್ಲಿ ಕೇಂದ್ರೀಯ ಸಂಸ್ಥೆಯಾದರೂ ತಮ್ಮ ವ್ಯಾಪ್ತಿಯಲ್ಲಿ ಕಲ್ಯಾಣದ ಜಿಲ್ಲೆಗಳ ಮಕ್ಕಳು ಹೆಚ್ಚಿಗೆ ಕೇಂದ್ರೀಯ ವಿವಿ ಪ್ರವೇಶ ಹೊಂದಲಿ ಎಂಬ ಸದುದ್ದೇಶದಿಂದ ಈ ಮೀಸಲಾತಿ ಮುಂದುವರಿಸಲಾಗಿದೆ ಎಂದರು.

15 ಸ್ನಾತಕ ಪದವಿ ವಿಭಾಗಗಳಿಗೆ ಪ್ರವೇಶ ಪ್ರಕ್ರಿಯೆ

ಈಗಾಗಲೇ ಇಲ್ಲಿನ 15 ಸ್ನಾತಕ ಪದವಿ ವಿಭಾಗಗಳಿಗೆ ಪ್ರವೇಶ ಪ್ರಕ್ರಿಯೆ ಶುರುವಾಗಿದೆ. ಜ. 3ರಿಂದಲೇ ಆನ್‌ಲೈನ್‌ ಅರ್ಜಿ ಸಲ್ಲಿಕೆ ಶುರುವಾಗಿದ್ದು, ಜ 31ರವರೆಗೆ ಅವಕಾಶವಿದೆ.ಕಲ್ಯಾಣ ನಾಡಿನ ಮಕ್ಕಳು ಹೆಚ್ಚಿಗೆ ಅರ್ಜಿ ಸಲ್ಲಿಸಿ ಕೇಂದ್ರೀಯ ವಿವಿ ಪ್ರವೇಶ ಪಡೆಯುವಂತಾಗಲಿ ಎಂದರು.

ಎನ್‌ಟಿಎ ಈ ಪ್ರವೇಶ ಪರೀಕ್ಷೆ ನಡೆಸಲಿದೆ. ಕಲಬುರಗಿ ಸೇರಿದಂತೆ ಬಳ್ಳಾರಿ, ಬೆಳಗಾವಿ, ಶಿವಮೊಗ್ಗ, ಮಂಗಳೂರು, ಬೀದರ್‌, ದಾವಣಗೆರೆ, ಹಾಸನ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ, ಚಿಕ್ಕಮಗಳೂರು ಇಲ್ಲೆಲ್ಲಾ ಪರೀಕ್ಷಾ ಕೇಂದ್ರಗಳಿವೆ. ರಾಜ್ಯದ ಮಕ್ಕಳು ಹೆಚ್ಚಿಗೆ ಪರೀಕ್ಷೆ ಬರೆಯಲೆಂದು ಎಲ್ಲೆಡೆ ಕೇಂದ್ರಗಳನ್ನು ಮಾಡಲಾಗಿದೆ ಎಂದು ಕುಲಪತಿಗಳು ವಿವರಿಸಿದರು.

ಮಹಾರಾಷ್ಟ್ರ ಗಡಿಗೆ ಹೊಂದಿದಂತೆ 13, ರಾಯಲಸೀಮಾ ಭಾಗದಲ್ಲಿ 9 ಹಾಗೂ ತೆಲಂಗಾಣ ಭಾಗದಲ್ಲಿ 1 ಪರೀಕ್ಷಾ ಕೇಂದ್ರಗಳಿದ್ದು ಎಲ್ಲಾ ಕಡೆಯಿಂದಲೂ ಮಕ್ಕಳು ಹೆಚ್ಚಿಗೆ ಬರಲಿ ಎಂಬುದೇ ಉದ್ದೇಶವೆಂದರು.

ಸ್ನಾತಕ ಪದವಿ ಕೋರ್ಸ್‌ಗಳು

ಕೇಂದ್ರೀಯ ವಿವಿ ಕಲಬುರಗಿಯಲ್ಲಿ ಈ ಕೆಳಗಿನ ಕೋರ್ಸ್‌ಗಳು ಪದವಿ ಸ್ನಾತಕದಲ್ಲಿ ಲಭ್ಯವಿವೆ. ಬಿಟೆಕ್‌- ಇಲೆಕ್ಟ್ರಿಕಲ್‌, ಇ ಆಂಡ್‌ ಸಿ, ಅರ್ಟಿಫಿಸಿಯಲ್‌ ಇಂಟನಿಜೆನ್ಸ್‌, ಮಶೀನ್‌ ಲರ್ನಿಂಗ್‌, ಗಣಿತ ಮತ್ತು ಕಂಪ್ಯೂಟಿಂಗ್‌, ಕಂಪ್ಯೂಟರ್‌ ಸೈನ್ಸ್‌, ಬಿಎಸ್‌ಸಿ- ಭೌತಶಾಸ್ತ್ರ, ರಸಾಯನಶಾಸ್ತ್ರ, ಭೂಗೋಳ, ಭೂವಿಜ್ಞಾನ, ಮನೋ ವಿಜ್ಞಾನ, ಬಿಬಿಎ, ಸಮಾಜ ಕಾರ್ಯ, ಬಿಎ- ಅರ್ಥಶಾಸ್ತ್ರ, ಇತಿಹಾಸ, ಇಂಗ್ಲೀಷ್‌, ಬಿಎಎಲ್‌ಎಲ್‌ಬಿ

ಸಿಯುಇಟಿ ಸ್ನಾತಕ ಪದವಿ ಪ್ರವೇಶ ಪರೀಕ್ಷೆಗಳು ಮೆ ತಿಂಗಳಲ್ಲಿ ಎನ್‌ಟಿಎ ನಡೆಸಲಿದೆ. ಸಿಯುಕೆ ವೆಬ್‌ಸೈಟ್‌ನ್ನು ಪರೀಕ್ಷಾರ್ಥಿಗಳು ಯಾವಾಗಲೂ ನೋಡುತ್ತಲಿರಬೇಕು. ದಾಖಲಾತಿ ಪ್ರಕ್ರಿಯೆಗಳು, ಉತ್ತರದ ಕೀ ಆನ್ಸರ್‌ಗಳನ್ನೆಲ್ಲ ವೆಬ್‌ಸೈಟ್‌ನಲ್ಲಿ ನಿರಂತರ ಅಪ್‌ಡೇಟ್‌ ಮಾಡಲಾಗುತ್ತಿರುತ್ತದೆ. ವಿದ್ಯಾರ್ಥಿಗಳು ಇವನ್ನೆಲ್ಲ ಗಮನಿಸುತ್ತಿರಬೇಕು ಎಂದು ಕುಲಪತಿ ಬಟು ಸತ್ಯನಾರಾಯಣ ಹೇಳಿದರು.

1 ಸಾವಿರ ಮಕ್ಕಳಿಗಾಗಿ ಹಾಸ್ಟೆಲ್‌ ನಿರ್ಮಾಣ

ಕುಲಸಚಿವ ಆರ್‌ ಆರ್‌ ಬಿರಾದಾರ್‌, ಕೇಂದ್ರೀಯ ವಿವಿಯಲ್ಲಿ ರಾಜ್ಯದ, ಅದರಲ್ಲೂ ಕಲ್ಯಾಣ ನಾಡಿನ ಮಕ್ಕಳು ಹೆಚ್ಚಿಗೆ ಪ್ರವೇಶ ಪಡೆಯಬೇಕು ಎಂಬುದೇ ತಮ್ಮೆಲ್ಲರ ಸದಾಶ, ಹೀಗಾಗಿ ಕಲಂ 371 (ಜೆ) ಅಡಿಯಲ್ಲಿ ಮೀಸಲಾತಿ ಸಹ ಪ್ರವೇಶದಲ್ಲಿ ನೀಡಲಾಗುತ್ತಿದೆ. ಸವಲತ್ತುಗಳು ಹೆಚ್ಚಿಸಲಾಗುತ್ತಿದೆ. 1 ಸಾವಿರ ಮಕ್ಕಳಿಗಾಗಿ ಹಾಸ್ಟೆಲ್‌ ನಿರ್ಮಾಣವಾಗುತ್ತಿವೆ. ಈ ಭಾಗದ ಮಕ್ಕಳು ಹೆಚ್ಚಿಗೆ ಪ್ರವೇಶ ಪರೀಕ್ಷೆ ಬರೆದು ಕಲಬುರಗಿ ಕೇಂದ್ರೀಯ ವಿವಿ ಆಯ್ಕೆ ಮಾಡಿಕೊಳ್ಳುವಂತಾಗಲಿ ಎಂದರು. ಸಿಯುಕೆ ಪರೀಕ್ಷಾ ನಿಯಂತ್ರಕ ಸಾಯಿ ಕೃಷ್ಣ, ಹನುಮೇಗೌಡ, ಹೆಗಡಿ, ಪ್ರಕಾಶ ಬಾಳಿಕಾಯಿ ಸುದ್ದಿಗೋಷ್ಠಿಯಲ್ಲಿದ್ದರು.

PREV
Read more Articles on
click me!

Recommended Stories

Kalaburagi bomb threat: ಬಾಂಬ್ ಬೆದರಿಕೆ ಇ-ಮೇಲ್ ಬಂದು 15 ದಿನವಾಗಿತ್ತು! ಈಗ ಎಚ್ಚೆತ್ತುಕೊಂಡರೇ ಅಧಿಕಾರಿಗಳು?
ಕೊನೆಗೂ ನಾಂದೇಡ-ಬೆಂಗಳೂರು ರೈಲು ನಿಲುಗಡೆ, ಕಮಲನಗರಕ್ಕೆ ಸಂಭ್ರಮ, ಕಲಬುರ್ಗಿಗೆ ವಿಮಾನ ಚಿಂತೆ