* ಚುನಾವಣೆಯ ನಂತರವೇ ಸ್ಪಷ್ಟ ಚಿತ್ರಣ
* ಜಗತ್ತಿಗೆ ಕಾಂಗ್ರೆಸ್ ಸಾಕಷ್ಟು ಕೊಡುಗೆ ನೀಡಿದೆ
* ಜನಾಶೀರ್ವಾದ ಯಾತ್ರೆಯ ನೆಪದಲ್ಲಿ ಬಿಜೆಪಿಯಿಂದ ಕೋವಿಡ್ ನಿಯಮ ಉಲ್ಲಂಘಣೆ
ಬೆಳಗಾವಿ(ಆ.24): ಪಾಲಿಕೆ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರದ ಗದ್ದುಗೆ ಹಿಡಿಯುವ ವಿಶ್ವಾಸವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾನಗರ ಪಾಲಿಕೆಯ ಅಧಿಕಾರಕ್ಕಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಮೊದಲ ಬಾರಿಗೆ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ಎದುರಿಸುತ್ತಿವೆ. ಅಂತಿಮವಾಗಿ ಚುನಾವಣೆಯ ನಂತರವೇ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ. ಕಾದು ನೋಡೋಣ ಎಂದರು. ಪಕ್ಷದ ರಾಜ್ಯ ನಾಯಕರು ಚುನಾವಣಾ ಪ್ರಚಾರಕ್ಕೆ ಬರುವುದಿಲ್ಲ. ಸ್ಥಳೀಯ ಮುಖಂಡರೇ ಪ್ರಚಾರ ಮಾಡುತ್ತಾರೆ. ಆಯಾ ವಾರ್ಡ ವ್ಯಾಪ್ತಿಯಲ್ಲಿ ಅಲ್ಲಿನ ಮುಖಂಡರು ಪ್ರಚಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ಬಿಜೆಪಿಗಿಂತ ಅನೇಕ ವರ್ಷಗಳ ಹಿಂದಿನಿಂದಲೇ ಕಾಂಗ್ರೆಸ್ ಇದೆ. ತನ್ನದೇ ಆದ ಇತಿಹಾಸ ಹೊಂದಿದೆ. ಜಗತ್ತಿಗೆ ಕಾಂಗ್ರೆಸ್ ಸಾಕಷ್ಟು ಕೊಡುಗೆ ನೀಡಿದೆ. ಅಧಿಕಾರಾವಧಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದೆ. ಬಿಜೆಪಿ ನಾಯಕರ ಹೇಳಿಕೆಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು. ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಜೈಲಿನಿಂದ ಬಿಡುಗಡೆಯಾದ ಸಂದರ್ಭದಲ್ಲಿ ಕಾರ್ಯಕರ್ತರು ಹುಮ್ಮಸ್ಸಿನಲ್ಲಿ ಮೆರವಣಿಗೆ ಮಾಡಿರಬಹುದು. ನಿಯಮಗಳನ್ನು ಯಾರು ಬ್ರೇಕ್ ಮಾಡಿದರು ಕೂಡ ತಪ್ಪೇ. ಅವರ ಮೇಲೆ ಕೇಸ್ ಹಾಕಲಾಗಿದೆ. ಈ ಬಗ್ಗೆ ಕೋರ್ಟ್‌ನಲ್ಲಿ ಹೋರಾಟ ಮಾಡುತ್ತಾರೆ ಎಂದರು. ಬಿಜೆಪಿಯವರು ಜನಾಶೀರ್ವಾದ ಯಾತ್ರೆಯ ನೆಪದಲ್ಲಿ ಕೋವಿಡ್ ನಿಯಮಗಳನ್ನು ಮೀರಿದ್ದಾರೆ. ಅವರ ಮೇಲೂ ಕೇಸ್‌ಗಳನ್ನು ಹಾಕಬೇಕು. ಎಲ್ಲರಿಗೂ ಒಂದೇ ನ್ಯಾಯ ಎಂದು ಹೇಳಿದರು.