ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮದ್ದೂರು ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಮತ್ತಿತರಿಂದ ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಕಬಳಿಕೆಯಾದ ಸರ್ಕಾರಿ ಜಮೀನನ್ನು ವಶಕ್ಕೆ ಪಡೆಯಲು ಸೂಚಿಸಿದ ನ್ಯಾಯಾಲಯದ ಆದೇಶ ಪಾಲನಾ ವರದಿ ಸಲ್ಲಿಸಲು ಸರ್ಕಾರಕ್ಕೆ ಜು.7ರವರೆಗೆ ಹೈಕೋರ್ಟ್ ಕಾಲಾವಕಾಶ ನೀಡಿದೆ.
ಬೆಂಗಳೂರು (ಜೂ.17): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮದ್ದೂರು ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಮತ್ತಿತರಿಂದ ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಕಬಳಿಕೆಯಾದ ಸರ್ಕಾರಿ ಜಮೀನನ್ನು ವಶಕ್ಕೆ ಪಡೆಯಲು ಸೂಚಿಸಿದ ನ್ಯಾಯಾಲಯದ ಆದೇಶ ಪಾಲನಾ ವರದಿ ಸಲ್ಲಿಸಲು ಸರ್ಕಾರಕ್ಕೆ ಜು.7ರವರೆಗೆ ಹೈಕೋರ್ಟ್ ಕಾಲಾವಕಾಶ ನೀಡಿದೆ. ಪ್ರಕರಣದಲ್ಲಿ ಒತ್ತುವರಿ ಜಮೀನು ವಶಕ್ಕೆ ಪಡೆಯಲು ಸೂಚಿಸಿದ ಹೈಕೋರ್ಟ್ ಆದೇಶ ಜಾರಿಗೊಳಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ನೇತೃತ್ವದ ವಿಭಾಗೀಯ ಪೀಠ ಸರ್ಕಾರಕ್ಕೆ ಕಾಲಾವಕಾಶ ನೀಡಿತು.
ವಿಚಾರಣೆ ವೇಳೆ ಸರ್ಕಾರಿ ವಕೀಲರು ಹಾಜರಾಗಿ, ಒತ್ತುವರಿ ತೆರವು ಮಾಡುವಂತೆ ಸೂಚಿಸಿ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿತ್ತು. ಅವರು ಉತ್ತರಿಸಿ, ತಾವು ಸರ್ಕಾರಿ ಜಮೀನು ಒತ್ತುವರಿ ಮಾಡಿಲ್ಲ. ಭೂಮಿಯನ್ನು ಕೆಲವರಿಗೆ ಸರ್ಕಾರ ಮಂಜೂರು ಮಾಡಿದೆ. ಅವರಿಂದ ತಾವು ಖರೀದಿ ಮಾಡಿದ್ದೇವೆ ಎಂಬುದಾಗಿ ತಿಳಿಸಿದ್ದಾರೆ. ಆ ಕುರಿತು ದಾಖಲೆಗಳನ್ನು ಪರಿಶೀಲನೆ ನಡೆಸಲು ಸರ್ಕಾರ ಮುಂದಾಯಿತು. ಆದರೆ, ದಾಖಲೆಗಳು ಸದ್ಯ ನಾಶವಾಗಿವೆ. ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ನೀಡಲು ಮತ್ತು ಹೈಕೋರ್ಟ್ ಹಿಂದಿನ ಆದೇಶಗಳ ಅನುಪಾಲನಾ ವರದಿ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಹೈನೋದ್ಯಮ ಅಭಿವೃದ್ಧಿಗೆ ಸರ್ಕಾರ ಕ್ರಮಕೈಗೊಳ್ಳಲಿ: ಎಚ್.ಡಿ.ಕುಮಾರಸ್ವಾಮಿ ಸಲಹೆ
ಈ ಹೇಳಿಕೆ ಒಪ್ಪದ ನ್ಯಾಯಪೀಠ, ‘ದಾಖಲೆಗಳು ನಾಶವಾಗಿವೆ ಎಂದರೆ ಏನರ್ಥ? ಸರ್ಕಾರಿ ಭೂಮಿ ಮತ್ತು ದಾಖಲೆಗಳಿಗೆ ಸರ್ಕಾರವೇ ಕಸ್ಟೋಡಿಯನ್ ಆಗಿರುತ್ತದೆ. ದಾಖಲೆಗಳು ನಾಶವಾಗಿವೆ ಎಂದು ಹೇಳಿದರೆ ಒಪ್ಪಲಾಗದು. ಸರ್ಕಾರದ ಎಷ್ಟುಜಮೀನು ಒತ್ತುವರಿಯಾಗಿದೆ. ಅದರಲ್ಲಿ ಎಷ್ಟುಜಮೀನನ್ನು ಸರ್ಕಾರ ಮತ್ತೆ ವಶಕ್ಕೆ ಪಡೆದಿದೆ ಎಂಬುದರ ಕುರಿತು ವರದಿ ಸಲ್ಲಿಸುವಂತೆ ಹೈಕೋರ್ಟ್ ಈ ಹಿಂದೆಯೇ ನಿರ್ದೇಶಿಸಿದೆ. ಅದರಂತೆ ಹೈಕೋರ್ಟ್ ಆದೇಶದ ಅನುಪಾಲನಾ ವರದಿ ಸಲ್ಲಿಸಬೇಕು. ಪ್ರಕರಣದಲ್ಲಿ ಏನೆಲ್ಲಾ ಕ್ರಮ ಜರುಗಿಸಬೇಕು ಎಂಬ ಬಗ್ಗೆ ಸರ್ಕಾರ ಪರಿಶೀಲಿಸಬೇಕು. ಇಲ್ಲವಾದರೆ ನ್ಯಾಯಾಲಯವೇ ಅಗತ್ಯ ಕ್ರಮ ಜರುಗಿಸಲಿದೆ’ ಎಂದು ಮೌಖಿಕವಾಗಿ ತಿಳಿಸಿ ಅನುಪಾಲನಾ ವರದಿ ಸಲ್ಲಿಸಲು ಜು.7ರವರೆಗೆ ಕಾಲಾವಕಾಶ ನೀಡಿತು.
ಅರ್ಜಿಯು 2023ರ ಏ.11ರಂದು ವಿಚಾರಣೆಗೆ ಬಂದಾಗ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿ, ಕೇತಗಾನಹಳ್ಳಿಯ ಸರ್ವೇ ನಂ 8, 9, 10, 16/1, 16/8, 16/24 ಮತ್ತು 79ರಲ್ಲಿನ ಒಟ್ಟು 14 ಎಕರೆ 4 ಗುಂಟೆ ಜಾಗವನ್ನು ಸರ್ಕಾರ ವಶಕ್ಕೆ ಪಡೆದಿದೆ. ಇಡೀ ಜಾಗಕ್ಕೆ ತಂತಿಬೇಲಿ ಅಳವಡಿಸಲಾಗಿದೆ. ಉಳಿದಂತೆ ಸಂಬಂಧಪಟ್ಟವರಿಗೆ ಒತ್ತುವರಿ ತೆರವು ನೋಟಿಸ್ ನೀಡಲಾಗಿತ್ತು. ತಾವು ಯಾವುದೇ ಸರ್ಕಾರಿ ಜಮೀನಿನ ಭಾಗ ಒತ್ತುವರಿ ಮಾಡಿಲ್ಲ ಎಂಬುದಾಗಿ ಅವರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರತಾಪ್ ಸಿಂಹ-ಎಚ್‌ಡಿಕೆ ಅಡ್ಜಸ್ಟ್‌ಮೆಂಟ್ ರಾಜಕಾರಣಿಗಳು: ಎನ್.ಚಲುವರಾಯಸ್ವಾಮಿ
ಅದನ್ನು ಆಕ್ಷೇಪಿಸಿದ್ದ ಅರ್ಜಿದಾರರ ವಕೀಲರು, ಪ್ರಕರಣದಲ್ಲಿ ಒಟ್ಟು 71 ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆಯಯೆ ಹೊರತು 14 ಎಕರೆ 14 ಗುಂಟೆಯಲ್ಲ. ಈ ಕುರಿತು 2014ರ ಆ.4ರಂದು ನೀಡಿದ ಲೋಕಾಯುಕ್ತ ಸಂಸ್ಥೆಯನ್ನು ಸರ್ಕಾರ ಒಪ್ಪಿಕೊಂಡಿದೆ. ಲೋಕಾಯುಕ್ತ ವರದಿ ಜಾರಿಗೊಳಿಸಲಾಗುವುದು ಎಂಬುದಾಗಿ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಭರವಸೆ ನೀಡಿದೆ. ಆದರೆ, ಈವರೆಗೂ ಒತ್ತುವರಿಯಾದ ಜಮೀನು ಸರ್ಕಾರಕ್ಕೆ ವಶಕ್ಕೆ ಪಡೆದಿಲ್ಲ ದೂರಿದ್ದರು.