Congress Padayatra: ಮೇಕೆದಾಟುಗೂ ಮುನ್ನ ಮಹದಾಯಿಗಾಗಿ 'ಕೈ' ಪಾದಯಾತ್ರೆ

By Kannadaprabha News  |  First Published Jan 5, 2022, 11:03 AM IST

*  ಬೇಡಿಕೆ ಈಡೇರಿಕೆಗಾಗಿ ಕಾಂಗ್ರೆಸ್‌ ಪಾದಯಾತ್ರೆ
*  ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರಿನಲ್ಲಿ ಚಾಲನೆ
*  ಅಭಿವೃದ್ಧಿ ಕಾರ್ಯ ಮರೀಚಿಕೆ: ಆರೋಪ
 


ಹೊಳೆಆಲೂರ(ಜ.05): ಮಹದಾಯಿ(Mahadayi) ಯೋಜನೆ ಅನುಷ್ಠಾನ, ಹದಗೆಟ್ಟ ರಸ್ತೆ ಅಭಿವೃದ್ಧಿ, ಆಸರೆ ಮನೆಗಳ ಸಮರ್ಪಕ ಹಂಚಿಕೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಂಗ್ರೆಸ್‌ ಮುಖಂಡರು ನೂರಾರು ಕಾರ್ಯಕರ್ತರೊಂದಿಗೆ ಮಂಗಳವಾರ ಹೊಳೆಆಲೂರಿನಿಂದ(Holealur) ಗದಗವರೆಗೆ(Gadag) ಪಾದಯಾತ್ರೆ ಆರಂಭಿಸಿದ್ದಾರೆ. 

ಇಲ್ಲಿನ ಯಚ್ಚರೇಶ್ವರ ಮಠದ ಬಳಿ ಪಾದಯಾತ್ರೆಗೆ(Padayatra) ಚಾಲನೆ ನೀಡಿ ಮಾತನಾಡಿದ ಕಾಂಗ್ರೆಸ್‌(Congress) ಜಿಲ್ಲಾಧ್ಯಕ್ಷ ಜಿ.ಎಸ್‌. ಪಾಟೀಲ ಅವರು, ಜಿಲ್ಲೆಯ ಜನಸಾಮಾನ್ಯರು ಕಳೆದ ನಾಲ್ಕು ವರ್ಷಗಳಿಂದ ಅಭಿವೃದ್ಧಿ ಕೆಲಸಗಳಿಂದ ವಂಚಿತರಾಗಿದ್ದಾರೆ. ಬರೀ ಪೊಳ್ಳು ಭರವಸೆ ನಂಬಿ ಭ್ರಮನಿರಸನರಾಗಿದ್ದಾರೆ. ಲೋಕೋಪಯೋಗಿ ಸಚಿವರಾಗಿ ಕ್ಷೇತ್ರದ ರಸ್ತೆಗಳನ್ನು ಸರಿಪಡಿಸಲು ಇವರಿಗೇನು ಸಮಸ್ಯೆ ಎಂದು ಸಚಿವ ಸಿ.ಸಿ. ಪಾಟೀಲ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Latest Videos

undefined

North Karnataka ಪ್ರತ್ಯೇಕ ರಾಜ್ಯ ಬೇಡ, ಸಮಗ್ರ ಕರ್ನಾಟಕವೇ ಇರಲಿ: ಹೊರಟ್ಟಿ

ನಮ್ಮ ಭಾಗದ ಶಾಸಕರು ಲೋಕೋಪಯೋಗಿ ಸಚಿವರಾಗಿದ್ದಕ್ಕೆ ಜಿಲ್ಲೆಯ ರಸ್ತೆಗಳನ್ನು ಸರಿಪಡಿಸುತ್ತಾರೆ ಎಂದುಕೊಂಡಿದ್ದೆವು. ಬರೀ ಭೂಮಿಪೂಜೆ ಮಾಡುತ್ತಾ ಕಾರ್ಯರೂಪಕ್ಕೆ ತರದೇ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಮಂಜೂರಾಗಿದ್ದ ಯೋಜನೆಗಳನ್ನು ಮುಂದುವರಿಸಲು ಬಿಡದೆ ದ್ರೋಹ ಎಸಗುತ್ತಿದ್ದಾರೆ. ಮತಕ್ಷೇತ್ರದ ಹಿಂದುಳಿದ ವರ್ಗದ ಪ್ರತಿಭಾವಂತ ಮಕ್ಕಳಿಗಾಗಿ ಹೊಳೆಆಲೂರ, ಕೊಣ್ಣೂರ, ಲಕ್ಕುಂಡಿ ಗ್ರಾಮಗಳಲ್ಲಿ ವಸತಿ ಶಾಲಾ ಕಟ್ಟಡಗಳು, ಹೊಳೆಆಲೂರ- ಬಾದಾಮಿ ಸಂಪರ್ಕ ಕಲ್ಪಿಸುವ ಬ್ಯಾರೇಜ್‌ ಕಂ ಬ್ರಿಜ್‌ ನಾಲ್ಕು ವರ್ಷವಾದರೂ ಅನುಷ್ಠಾನಗೊಂಡಿಲ್ಲ. ಇನ್ನು ಬೆಳೆವಿಮೆ, ಬೆಳೆಹಾನಿ ಪರಿಹಾರ ಮರೀಚಿಕೆಯಾಗಿದೆ ಎಂದು ಆರೋಪಿಸಿದರು.

ನರಗುಂದ ಮಾಜಿ ಶಾಸಕ ಬಿ.ಆರ್‌. ಯಾವಗಲ್ಲ ಮಾತನಾಡಿ, ಗಾಡಗೋಳಿ, ಹೊಳೆಮಣ್ಣೂರ, ಹೊಳೆಹಡಗಲಿ ಸೇರಿದಂತೆ 16 ನವಗ್ರಾಮಗಳ ಮನೆ ಹಂಚಿಕೆ 11 ವರ್ಷವಾದರೂ ಆಗಿಲ್ಲ. ಹೊಳೆಆಲೂರಿನ ಕುಡಿಯುವ ನೀರು ಹಾಗೂ ರೈತರಿಗೆ(Farmers) ಅನುಕೂಲವಾಗುವಂತೆ 3.5 ಕೋಟಿ ವೆಚ್ಚದ ಬ್ಯಾರೇಜ್‌ ನನೆಗುದಿಗೆ ಬಿದ್ದಿದೆ. 1 ಕೋಟಿ ವೆಚ್ಚದಲ್ಲಿ ಹೊಳೆಮಣ್ಣೂರ ಗ್ರಾಮದ ಅಭಿವೃದ್ಧಿಗೆ ರೂಪಿಸಿದ ಗ್ರಾಮವಿಕಾಸ ಯೋಜನೆ ನಾಲ್ಕು ವರ್ಷವಾದರೂ ಅರ್ಧದಷ್ಟೂ ಪ್ರಗತಿಯಾಗಿಲ್ಲ. ರೈತರ ಬಹುದಿನಗಳ ಬೇಡಿಕೆಯಾದ ಮಹದಾಯಿ ನದಿ ಜೋಡಣೆ ಯೋಜನೆ ಶೀಘ್ರ ಅನುಷ್ಠಾನಗೊಳ್ಳಬೇಕು ಎಂದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ನರಗುಂದ ಬ್ಲಾಕ್‌ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ ಪ್ರವೀಣ ಯಾವಗಲ್ಲ, ಹೊಳೆಆಲೂರ ಬ್ಲಾಕ್‌ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ$ಎಂ.ಬಿ. ಕೊಳೇರಿ, ವಿವೇಕ ಯಾವಗಲ್ಲ, ಫಕ್ರುಸಾಬ್‌ ಚಿಕ್ಕಮಣ್ಣೂರ, ಬಿ.ಎಲ್‌. ಶಿರಗುಂಪಿ, ಪ್ರಕಾಶ ಭಜಂತ್ರಿ, ಬಸವರಾಜ ಪಾಟೀಲ, ರಾಜು ಕಲಾಲ್‌, ಕಲ್ಲಪ್ಪ ಬೇಲಿ, ಮಾಂತೇಶ ಪಾಟೀಲ ಹಾಗೂ ನರಗುಂದ, ಹೊಳೆಆಲೂರ ಬ್ಲಾಕ್‌ ಕಾಂಗ್ರೆಸ್‌ ಕಮಿಟಿಯ ಪದಾಧಿಕಾರಿಗಳು ಇದ್ದರು.

ಬೆಳವಣಕಿಯಲ್ಲಿ ವಾಸ್ತವ್ಯ:

ಮಂಗಳವಾರ ಹೊಳೆಆಲೂರಿನಿಂದ ಆರಂಭವಾಗಿರುವ ಕಾಂಗ್ರೆಸ್‌ ಪಾದಯಾತ್ರೆ ಗಾಡಗೋಳಿ, ಹೊಳೆಮಣ್ಣೂರ, ಅಸೂಟಿ, ಕರಮಡಿ, ಮಾಳವಾಡ, ಕೌಜಗೇರಿ ಮೂಲಕ ತೆರಳಿ ಬೆಳವಣಕಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದು, ಜ. 5ರಂದು ಬೆಳಗ್ಗೆ 8 ಗಂಟೆಯಿಂದ ಬೆಳವಣಕಿಯಿಂದ ಮಲ್ಲಾಪುರ, ಸಂದಿಗವಾಡ, ಹೊನ್ನಾಪುರ, ಕದಡಿ ಮಾರ್ಗವಾಗಿ ಗಾರವಾಡ ಗ್ರಾಮಕ್ಕೆ ತೆರಳಿ ಅಲ್ಲಿಯೇ ವಾಸ್ತವ್ಯ ಹೂಡಲಾಗುವುದು. ಜ. 6ರ ಬೆಳಗ್ಗೆ 8 ಗಂಟೆಯಿಂದ ಕಿರಟಗೇರಿ, ಹುಯಿಲಗೋಳ, ಚಿಕ್ಕೊಪ್ಪ, ಹಿರೇಕೊಪ್ಪ, ನಾಗಸಮುದ್ರ, ನರಸಾಪುರ, ಬೆಟಗೇರಿ ಮಾರ್ಗವಾಗಿ ಗದಗ ತಲುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಈ ವೇಳೆ ಶಾಸಕ ಎಚ್‌.ಕೆ. ಪಾಟೀಲ, ಮಾಜಿ ಶಾಸಕ ಡಿ.ಆರ್‌. ಪಾಟೀಲ ಸೇರಿದಂತೆ ಹಲವು ಮುಖಂಡರು ಭಾಗವಹಿಸುವರು.

ಪಾದಯಾತ್ರೆಯಲ್ಲಿ ಕಾರ್ಯಕರ್ತರ ದಂಡು

ಹೊಳೆಆಲೂರಿನಿಂದ ಆರಂಭವಾದ ಕಾಂಗ್ರೆಸ್‌ ಪಾದಯಾತ್ರೆಯಲ್ಲಿ ನಾಲ್ಕು ನೂರಕ್ಕೂ ಅಧಿಕ ಕಾರ್ಯಕರ್ತರು(Activists) ಪಾಲ್ಗೊಂಡಿದ್ದರು. ಒಟ್ಟು 71 ಕಿಮೀ ಪಾದಯಾತ್ರೆ ಇದಾಗಿದ್ದು, ಗುರುವಾರ ಗದುಗಿನಲ್ಲಿ ಡಿಸಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.

ಜನರ ದಾರಿ ತಪ್ಪಿಸುವ ಪಾದಯಾತ್ರೆ: ಸಿ.ಸಿ. ಪಾಟೀಲ

ರೋಣ(Ron): ಆಡಳಿತ ಪಕ್ಷಕ್ಕೆ ಅಭಿವೃದ್ಧಿ ಚುರುಕು ಮುಟ್ಟಿಸುವ ಬದಲು ನರಗುಂದ ಕಾಂಗ್ರೆಸ್‌ನ ಎರಡು ಗುಂಪುಗಳು ಪರಸ್ಪರ ಪೈಪೋಟಿಗೆ ಬಿದ್ದಂತೆ ಬೀದಿಗಿಳಿದು ಹೋರಾಟ ಮಾಡುತ್ತಾ ಜನರನ್ನು ದಾರಿ ತಪ್ಪಿಸುತ್ತಿರುವುದು ಹಾಸ್ಯಾಸ್ಪದ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ(CC Patil) ಕುಟುಕಿದರು.

Local Body Election Result: : ಬಿಜೆಪಿ ಪಾಲಿಗೆ ಅದೃಷ್ಟ ಲಕ್ಷ್ಮಿಯಾದ ಉಷಾ..!

ಮಂಗಳವಾರ ಸಂಜೆ ತಾಲೂಕಿನ ಹುಲ್ಲೂರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ರಸ್ತೆ ದುರಸ್ತಿ ಹಾಗೂ ರಕ್ಷಣಾ ಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕಾಂಗ್ರೆಸ್‌ನ ಎರಡು ಗುಂಪುಗಳ ಮಧ್ಯೆ ಪೈಪೋಟಿ ಶುರುವಾಗಿದ್ದು, ಒಬ್ಬರಿಗಿಂತ ಇನ್ನೊಬ್ಬರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆಗಳು ಅಭಿವೃದ್ಧಿಗೆ ಪೂರಕವಾಗಿರಬೇಕು. ಮಾರಕವಾಗಿರಬಾರದು. ಸಣ್ಣವನು ಹೋರಾಟ ಮಾಡುತ್ತಿದ್ದಾನೆ ಎಂದು ಹಿರಿಯರು, ಬುದ್ಧಿವಂತರು, ರಾಜಕೀಯದಲ್ಲಿ(Politics) ಅಪಾರ ಅನುಭವ ಹೊಂದಿದ ಬಿ.ಆರ್‌. ಯಾವಗಲ್ಲ ಅವರು ಸ್ಪರ್ಧೆಗೆ ಬಿದ್ದಂತೆ ಹೋರಾಟ ಮಾಡುತ್ತಿರುವುದು ವಿಪರ್ಯಾಸ ಸಂಗತಿ ಎಂದರು.

ಸಿಎಂ ಬೊಮ್ಮಾಯಿ(Basavaraj Bommai) ಅವರನ್ನು ಕಾಡಿಬೇಡಿ 45 ಕೋಟಿ ವೆಚ್ಚದಲ್ಲಿ ಶಿರೋಳ- ಹೊಳೆಆಲೂರ ರಸ್ತೆ ಅಭಿವೃದ್ಧಿಗೆ ಮುಂದಾದಲ್ಲಿ ಅವೈಜ್ಞಾನಿಕ ಅನ್ನುತ್ತಿದ್ದಾರೆ. ನಾನು ನಿರಂತರ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಮಾಡುತ್ತ ಹೋಗುತ್ತೇನೆ. ನೀವು ಅದೇ ರಸ್ತೆಯಲ್ಲಿ ಪಾದಯಾತ್ರೆ ಮಾಡುತ್ತಾ ಹೋಗಿ ಎಂದರು.

ಕಾರ್ಯಕ್ರಮದಲ್ಲಿ ಹೊಳೆಆಲೂರ ಬಿಜೆಪಿ ಮಂಡಳ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ, ಶಶಿಧರಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ನಂದಾ ಬರಡ್ಡಿ, ಉಪಾಧ್ಯಕ್ಷ ಬಸವರಾಜ ಬ್ಯಾಳಿ, ಹಿರಿಯ ಮುಖಂಡ ವೀರಯ್ಯ ಹಿರೇಮಠ, ಹೂವಪ್ಪ ಜಂಗಣ್ಣವರ, ಶೇಖಣ್ಣ ಹೊನ್ನಾಪೂರ, ಶರಣಪ್ಪ ಸೋಮನಕಟ್ಟಿ, ವೀರುಪಾಕ್ಷಗೌಡ ಪಾಟೀಲ, ಮುದಿಯಪ್ಪ ಕರಡಿ, ಶರಣಪ್ಪ ಅಂಗಡಿ ಇದ್ದರು. ಕೇದಾರಗೌಡ ಭರಮಗೌಡ್ರ ನಿರೂಪಿಸಿ, ವಂದಿಸಿದರು.
 

click me!