Hassan News : ಜನರತ್ತ ಟೀ ಶರ್ಟ್‌ ಎಸೆದ ಎಂಎಲ್ಸಿ ಸೂರಜ್‌ ರೇವಣ್ಣ

By Kannadaprabha NewsFirst Published Jan 5, 2022, 9:53 AM IST
Highlights
  • ನೂತನ ಎಂಎಲ್ಸಿ ಡಾ.ಸೂರಜ್‌ ರೇವಣ್ಣ  ಹುಟ್ಟುಹಬ್ಬ
  •  ಅಭಿಮಾನಿಗಳು ಆಯೋಜಿಸಿದ್ದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ವೇಳೆ ಸೂರಜ್‌ ಅವರಿಂದ ಟೀಶರ್ಟ್‌ ಹಂಚಿಕೆ

ಹಾಸನ (ಜ.05): ನೂತನ ಎಂಎಲ್ಸಿ ಡಾ.ಸೂರಜ್‌ ರೇವಣ್ಣ (Suraj Revanna)  ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಚನ್ನರಾಯಪಟ್ಟಣದಲ್ಲಿ ಅಭಿಮಾನಿಗಳು ಆಯೋಜಿಸಿದ್ದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ವೇಳೆ ಸೂರಜ್‌ ಅವರಿಂದ ಟೀಶರ್ಟ್‌ಗಳನ್ನು (T Shirt) ಪಡೆಯಲು ನೂರಾರು ಅಭಿಮಾನಿಗಳು ಮುಗಿಬಿದ್ದರು.

ಇಲ್ಲಿನ ಮಾಧ್ಯಮಿಕ ಶಾಲಾ ಆವರಣದಲ್ಲಿ ಸೋಮವಾರದಿಂದ ಆರಂಭವಾದ ಕಬಡ್ಡಿ ಪಂದ್ಯಾವಳಿ ನಡೆಯುತ್ತಿರುವ ಸ್ಥಳಕ್ಕೆ ಮಂಗಳವಾರ ಆಗಮಿಸಿದ್ದ ಸೂರಜ್‌ ಅವರು ಕಿಕ್ಕಿರಿದು ತುಂಬಿದ ಯುವಕರ ಗುಂಪಿನ ಕಡೆ ಅಭಿಮಾನಿಗಳು ತಂದಿದ್ದ ಟೀ ಶರ್ಟ್‌ಗಳನ್ನು ವಿತರಿಸಲು ಮುಂದಾದ ವೇಳೆ ನೂಕುನುಗ್ಗರು ಉಂಟಾಯಿತು. ಈ ವೇಳೆ ಸೂರಜ್‌ ತಾವಿದ್ದ ಸ್ಥಳದಿಂದಲೇ ಟೀ ಶರ್ಟ್‌ಗಳನ್ನು ಯುವಕರ ಕಡೆ ಎಸೆದರು. ಟೀ ಶರ್ಟ್‌ಗಳನ್ನು ಹಿಡಿಯಲು ಮುಗಿಬಿದ್ದರು.

ರಾಜ್ಯದಲ್ಲಿ ಒಮಿಕ್ರೋನ್‌ (Omicron) ಭೀತಿಯಿಂದ ಜನ, ಜಂಗುಳಿ ಸೇರಲು ನಿರ್ಬಂಧವಿದ್ದರೂ, ಚನ್ನರಾಯಪಟ್ಟಣದಲ್ಲಿ ಇದ್ಯಾವುದರ ಪರಿವಿಲ್ಲದೇ ಜನ ಸಾವಿರಾರು ಮಂದಿ ಸೇರಿ ನೂತನ ಎಂಎಲ್ಸಿ, ಮಾಜಿ ಸಚಿವ ಎಚ್‌.ಡಿ.ರೇವಣ್ಣನವರ ಪುತ್ರ ಡಾ.ಸೂರಜ್‌ ರೇವಣ್ಣ ಅವರ ಹುಟ್ಟುಹಬ್ಬದಾಚರಣೆಯಲ್ಲಿ ತೊಡಗಿದ್ದರು. ಡಾ.ಸೂರಜ್‌ ಅವರ 34ನೇ ಹುಟ್ಟುಹಬ್ಬದ ಅಂಗವಾಗಿ ಎರಡು ದಿನಗಳ ರಾಜ್ಯಮಟ್ಟದ ಪ್ರೋ ಕಬಡ್ಡಿ ಮಾದರಿಯಲ್ಲಿ ಕಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ.

ಗೆದ್ದು ಬೀಗಿದ್ದ ಸೂರಜ್ : 

ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ (MLC election) ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಹಾಸನ (Hassan) ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಎಚ್ ಡಿ ರೇವಣ್ಣ ಪುತ್ರ ಸೂರಜ್ ರೇವಣ್ಣ (Dr Suraj Revanna) ಜಯಗಳಿಸಿದ್ದಾರೆ.   1523 ಮತಗಳ ಅಂತರದಿಂದ  ಕಾಂಗ್ರೆಸ್ (Congress) ಅಭ್ಯರ್ಥಿ ವಿರುದ್ಧ ಸೂರಜ್ ರೇವಣ್ಣ ಜಯ ಸಾಧಿಸಿದ್ದಾರೆ. ಈ ಮೂಲಕ ಗೌಡರ ಕುಟುಂಬದಿಂದ 8 ನೇ ವ್ಯಕ್ತಿ ರಾಜಕೀಯ ರಂಗ ಪ್ರವೇಶಿಸಿ ಗೆಲುವು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಹಾಸನ ಕ್ಷೇತ್ರದಲ್ಲಿ ಜಯಗಳಿಸಿದ ಸೂರಜ್ ರೇವಣ್ಣ 2247 ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ (Congress) ಅಭ್ಯರ್ಥಿ ಎಂ ಶಂಕರ್ 724 ಮತಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಬಿಜೆಪಿ (BJP)  ಎಚ್.ಎಂ. ವಿಶ್ವನಾಥ್ ಮೂರನೇ ಸ್ಥಾನದಲ್ಲಿದ್ದು 435 ಮತಗಳನ್ನು ತನ್ನದಾಗಿಸಿಕೊಂಡಿತ್ತು

ಹಲವು ಪರ ವಿರೋಧದ ನಡುವೆ ಎಚ್.ಡಿ ರೇವಣ್ಣ (HD Revanna) ಪುತ್ರ ಸೂರಜ್ ರೇವಣ್ಣ ವಿಧಾನ ಪರಿಷತ್ ಚುನಾವಣಾ ಕಣಕ್ಕೆ ಇಳಿದಿದ್ದು, ಇದೀಗ ಬರೋಬ್ಬರು 1523 ಮತಗಳ ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.   ಮೊದಲು ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣ ಹೆಸರು ಕೇಳಿ ಬಂದಿದ್ದು, ಕೊನೆಕ್ಷಣದಲ್ಲಿ ಸೂರಜ್ ಕಣಕ್ಕೆ ಇಳಿದಿದ್ದರು. 

ಸ್ಪರ್ಧೆ ಆರಂಭದಲ್ಲೇ ಸಮಸ್ಯೆ ಎದುರಿಸಿದ್ದರು ಸೂರಜ್ ರೇವಣ್ಣ :   ಹಾಸನ ಪರಿಷತ್‌ ಮೂಲಕ ರಾಜಕೀಯಕ್ಕೆ (Politics) ಎಂಟ್ರಿಕೊಟ್ಟ ಎಚ್​ಡಿ ರೇವಣ್ಣನವರ ಮಗ ಡಾ. ಸೂರಜ್ ರೇವಣ್ಣಗೆ (Suraj Revanna) ಸಂಕಷ್ಟ ಎದುರಾಗಿತ್ತು.  ಸೂರಜ್ ರೇವಣ್ಣ ನಾಮಪತ್ರ ಸಲ್ಲಿಸಿ ಭರ್ಜರಿ ಪ್ರಚಾರ ನಡೆಸಿದ್ದರು. ಆದ್ರೆ, ಈಗ ಸೂರಜ್ ರೇವಣ್ಣನವರ ನಾಮಪತ್ರವನ್ನು(ಣomination) ತಿರಸ್ಕರಿಸುವಂತೆ ಕೋರಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು.  ಕುಂದೂರು ಗ್ರಾಮ ಪಂಚಾಯ್ತಿ ಸದಸ್ಯ ಕೆ.ಎಲ್. ಹರೀಶ್​​  ರಿಟ್ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಎಂಎಲ್​ಸಿ ಅಭ್ಯರ್ಥಿ ಸೂರಜ್ ರೇವಣ್ಣಗೆ ನೋಟಿಸ್ ನೀಡಲಾಗಿತ್ತು. ಚುನಾವಣಾ ಆಯೋಗಕ್ಕೂ ಹೈಕೋರ್ಟ್ ನೋಟಿಸ್ ನೀಡಿತ್ತು. 

ಸೂರಜ್ ರೇವಣ್ಣ ನಾಮಪತ್ರ ಸಲ್ಲಿಸುವಾಗ ಸಲ್ಲಿಸಿದ ಅಫಿಡವಿಟ್​ನಲ್ಲಿ ತನ್ನ ಮದುವೆ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದಾರೆಂದು ಆರೋಪ ಕೇಳಿಬಂದಿತ್ತು. ತಮ್ಮ ಆಸ್ತಿಯನ್ನು ಮಾತ್ರ ಘೋಷಣೆ ಮಾಡಿರುವ ಸೂರಜ್ ರೇವಣ್ಣ ತಮ್ಮ ಪತ್ನಿ, ಆಕೆಯ ಆಸ್ತಿಯ ಮಾಹಿತಿ ನೀಡಿಲ್ಲವೆಂದು ಆರೋಪಿಸಲಾಗಿತ್ತು. ಮದುವೆ ಕಾಲಂನಲ್ಲಿ ಅನ್ವಯ ಇಲ್ಲ ಎಂದು ಉಲ್ಲೇಖ ಮಾಡಲಾಗಿರುವುದರಿಂದ ಅವರ ನಾಮಪತ್ರ ತಿರಸ್ಕರಿಸುವಂತೆ ತಕರಾರು ಮಾಡಲಾಗಿತ್ತು. ಆದರೆ, ಚುನಾವಣಾಧಿಕಾರಿ ಆ ತಕರಾರನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ‌ ರಿಟ್ ಅರ್ಜಿ ಸಲ್ಲಿಸಿದ್ದರು

ಎಚ್​ಡಿ ದೇವೇಗೌಡರ ಮೊಮ್ಮಗ ಸೂರಜ್ ರೇವಣ್ಣ ವೃತ್ತಿಯಲ್ಲಿ ವೈದ್ಯರಾಗಿದ್ದು, ಹಾಸನ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯತ್ವಕ್ಕೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ವೃತ್ತಿಯಲ್ಲಿ ವೈದ್ಯನಾಗಿರುವ ಸೂರಜ್ ರೇವಣ್ಣ ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಘೋಷಣೆ ಮಾಡಿರುವಂತೆ  65 ಕೋಟಿಗೂ ಹೆಚ್ಚು ಆಸ್ತಿಯ ಒಡೆಯರಾಗಿದ್ದಾರೆ.

ಅಫಿಡವಿಟ್ ಪ್ರಕಾರ, ಸೂರಜ್ ರೇವಣ್ಣನವರ ಹೆಸರಲ್ಲಿ ರೂ. 3.53 ಕೋಟಿ ಚರಾಸ್ತಿ ಮತ್ತು ರೂ. 61.68 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಡಾ. ಸೂರಜ್ ತಮ್ಮ ತಾತ-ಅಜ್ಜಿ, ಅತ್ತೆಯಂದಿರು, ಹಾಗೂ ತಂದೆ-ತಾಯಿಯಿಂದ ಸುಮಾರು 15 ಕೋಟಿ ರೂ. ಸಾಲ ಪಡೆದಿದ್ದಾರೆ. ಸೂರಜ್ ಅವರ ಬಳಿ ಸುಮಾರು 46 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 18 ಕೆಜಿ ಬೆಳ್ಳಿಯಿದೆ. ಆದರೆ, ಅವರು ತಮ್ಮ ಅಫಿಡವಿಟ್​ನಲ್ಲಿ ತಮ್ಮ ಪತ್ನಿಯ ಹೆಸರಲ್ಲಿರುವ ಆಸ್ತಿಯನ್ನು ಬಹಿರಂಗಪಡಿಸಿರಲಿಲ್ಲ. ಹಾಗೇ, ಮದುವೆಯಾಗಿದೆ ಎಂಬ ಬಗ್ಗೆಯೂ ಉಲ್ಲೇಖಿಸಿರಲಿಲ್ಲ.

ಸೂರಜ್ ರೇವಣ್ಣ 2020ರಲ್ಲಿ ಹಾಸನ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಆದರೆ, ಇದುವರೆಗೂ ವಿಧಾನಸಭೆ, ವಿಧಾನ ಪರಿಷತ್, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಜೆಡಿಎಸ್ ಪರವಾಗಿ ಚುನಾವಣಾ ಪ್ರಚಾರಗಳಲ್ಲಿ ಪಾಲ್ಗೊಳ್ಳುತ್ತಿದ್ದ ಸೂರಜ್ ರೇವಣ್ಣ ಇದೀಗ ಎಂಎಲ್​ಸಿ ಚುನಾವಣೆ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಆದ್ರೆ, ಆರಂಭದಲ್ಲಿ ವಿಘ್ನ ಎದುರಾಗಿತ್ತು.

click me!