ಸ್ಮಾರ್ಟ್‌ಸಿಟಿ ಸಭೆ ಅರ್ಧಕ್ಕೆ ಮೊಟಕು. ಅಧಿಕಾರಿಗಳನ್ನು ತೀವ್ರ ತರಾಟೆಗೈದ ಸದಸ್ಯರು . ಸದಸ್ಯರ ಪ್ರಶ್ನೆಗಳಿಗೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಕಂಗಾಲು.
ಹುಬ್ಬಳ್ಳಿ (ಅ.20): ಸ್ಮಾರ್ಟ್‌ಸಿಟಿ ಯೋಜನೆಯಡಿ ಅನುಷ್ಠಾನಗೊಂಡ, ಅನುಷ್ಠಾನ ಹಂತದಲ್ಲಿರುವ ಹಾಗೂ ಭವಿಷ್ಯದಲ್ಲಿ ಕೈಗೊಳ್ಳಬಹುದಾದ ಯೋಜನೆಗಳ ಮಾಹಿತಿ ಹಂಚಿಕೊಳ್ಳಲು ಪಾಲಿಕೆ ಸದಸ್ಯರೊಂದಿಗೆ ಕರೆದ ಸಮಾಲೋಚನಾ ಸಭೆ ಅರ್ಧಕ್ಕೆ ಮೊಟಕುಗೊಂಡ ಘಟನೆ ಬುಧವಾರ ನಡೆಯಿತು. ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡ ಸ್ಮಾರ್ಟ್‌ಸಿಟಿ ಯೋಜನೆಯ ಸಮಾಲೋಚನೆ ಸಭೆಯು ಅಕ್ಷರಶಃ ಗೊಂದಲದ ಗೂಡಾಗಿತ್ತು. ಪಕ್ಷಭೇದ ಮರೆತು ಎಲ್ಲ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ಮಾರ್ಟ್‌ಸಿಟಿ ಬದಲಿಗೆ ಡರ್ಟಿ ಸಿಟಿ ಮಾಡುತ್ತಿದ್ದೀರಿ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸಭೆ ಆರಂಭವಾಗುತ್ತಿದ್ದಂತೆ ಸ್ಮಾರ್ಟ್‌ಸಿಟಿ ಕಾಮಗಾರಿಗಳ ಅವ್ಯವಸ್ಥೆ ಮತ್ತು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯರ ಪ್ರಶ್ನೆಗಳಿಂದ ಅಧಿಕಾರಿಗಳು ಕಂಗಾಲಾದರು. ಕಾಮಗಾರಿ ಅವ್ಯವಸ್ಥೆ ಭಿತ್ತಿಚಿತ್ರ ತೋರಿಸಿ ಸ್ಮಾರ್ಟ್‌ಸಿಟಿ ಅವೈಜ್ಞಾನಿಕ ಯೋಜನೆ ಎಂಬುದನ್ನು ಪ್ರತಿಬಿಂಬಿಸಿ ಸದಸ್ಯರು ಗಮನ ಸೆಳೆದರು. ಅಧಿಕಾರಿಗಳು ಸ್ಮಾರ್ಟ್‌ಸಿಟಿ ಯೋಜನೆ ಬಗೆಗಿನ ಮಾಹಿತಿ ಪುಸ್ತಕ ಸಿದ್ಧಪಡಿಸದೇ ಇದ್ದದ್ದು ಸದಸ್ಯರನ್ನು ಕೆರಳಿಸುವಂತೆ ಮಾಡಿತು. ಈ ಕುರಿತಾಗಿ ಸದಸ್ಯರು ತರಾಟೆ ತೆಗೆದುಕೊಂಡರು. ಫೋನ್ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ನಮಗೆ ಮರ್ಯಾದೆ ಇಲ್ಲವೇ ಎಂದು ಸರ್ವ ಸದಸ್ಯರು ಎಂಡಿ ಶಕೀಲ್ ಅಹ್ಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡದ ಸದಸ್ಯರು ಕೇವಲ ಹುಬ್ಬಳ್ಳಿಗಷ್ಟೇ ಏಕೆ ಸ್ಮಾರ್ಟ್‌ಸಿಟಿ ಯೋಜನೆ ಎಂದು ಆಕ್ಷೇಪಿಸಿದರು. ಎಂಎಲ್‌ಎ, ಎಂಪಿ, ಸಚಿವರಷ್ಟೇ ಜನಪ್ರತಿನಿಧಿಗಳೇನು? ನಾವು ಜನಪ್ರತಿನಿಧಿಗಳಲ್ಲವೇ? ನಮಗೇಕೆ ವಿಷಯ ತಿಳಿಸುವುದಿಲ್ಲ ಎಂದು ಪ್ರಶ್ನಿಸಿದರು.
ಸ್ಮಾರ್ಟ್‌ಸಿಟಿ ಯ ಪ್ರತಿಯೊಂದು ಕಾಮಗಾರಿಗಳನ್ನು ಎಲ್ಲ ಸದಸ್ಯರು ಖುದ್ದು ಪರಿಶೀಲಿಸಿದ ಬಳಿಕವೇ ಪಾಲಿಕೆಗೆ ಹಸ್ತಾಂತರಿಸಬೇಕೆಂದು ಸದಸ್ಯರು ಆಗ್ರಹಿಸಿದರು.
ಹೀಗೆ ಪಾಲಿಕೆಯ ಎಲ್ಲ ಸದಸ್ಯರು ಅಭಿಪ್ರಾಯ ಹೇಳುತ್ತಲೇ ವೇದಿಕೆ ಬಳಿಯೇ ಬಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಇದರಿಂದ ಸಭೆಯಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಯಿತು.
ಮೇಯರ್ ಈರೇಶ ಅಂಚಟಗೇರಿ ಕೆಳಗೆ ಬಂದು ಮನವೊಲಿಸುವ ಪ್ರಯತ್ನ ಮಾಡಿದರೂ ಕೈಗೂಡಲಿಲ್ಲ. ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಮಧ್ಯಪ್ರವೇಶಿಸಿ ಮಾತನಾಡಲು ಆರಂಭಿಸುತ್ತಿದ್ದಂತೆ ಸಭೆ ಶಾಂತಗೊಂಡಿತು.
ಸ್ಮಾರ್ಟ್‌ಸಿಟಿ ಯು ಕಂಪನಿ ಪೂರ್ಣಗೊಳಿಸಿದ ಕಾಮಗಾರಿಗಳನ್ನು ಪಾಲಿಕೆಗೆ ಹಸ್ತಾಂತರಿಸಿಕೊಳ್ಳಲೇಬೇಕು. ಕಾಮಗಾರಿಗಳು ಲೋಪದಿಂದ ಕೂಡಿದ್ದರೆ, ಗುಣಮಟ್ಟರಹಿತವಾಗಿದ್ದರೆ, ಅವೈಜ್ಞಾನಿಕವಾಗಿದ್ದರೆ ಅವುಗಳನ್ನು ಪುನಃ ಸರಿಪಡಿಸಿ ಸುಸಜ್ಜಿತವಾಗಿ ತೆಗೆದುಕೊಳ್ಳಲಾಗುತ್ತದೆ. ಈ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಠರಾವು ತೆಗೆದುಕೊಂಡ ಬಳಿಕವೇ ಈ ಪ್ರಕ್ರಿಯೆ ನಡೆಯಲಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಮೂತ್ರ ವಿಸರ್ಜನೆಗೆ ಬಯಲೇ ಗತಿ..!
ಸಭೆಯಲ್ಲಿ ಮೇಯರ್ ಈರೇಶ ಅಂಚಟಗೇರಿ, ವಿರೋಧ ಪಕ್ಷದ ನಾಯಕ ದೊರಾಜ್ ಮನಿಕುಂಟ್ಲಾ, ಸದಸ್ಯರಾದ ಸಂತೋಷ ಚವ್ಹಾಣ, ಶಿವು ಮೆಣಸಿನಕಾಯಿ, ವೀರಣ್ಣ ಸವಡಿ, ತಿಪ್ಪಣ್ಣ ಮಜ್ಜಗಿ, ಇಮ್ರಾನ್ ಎಲಿಗಾರ, ಎಂ.ಎಂ. ಭದ್ರಾಪುರ ಸೇರಿದಂತೆ ಹಲವರಿದ್ದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾಗಿರುವ ರಸ್ತೆಗಳಲ್ಲಿ ಕಳ್ಳರ ಕಾಟ, ಕಂಬಗಳ ಕಳ್ಳತನ!
ಗ್ರೀನ್ ನಾಲಾ ಕಾರಿಡಾರ್ ಯೋಜನೆ ಸಂಪೂರ್ಣ ಅನುಷ್ಠಾನಗೊಂಡಲ್ಲಿ ಇಡೀ ವಿಶ್ವದಲ್ಲೇ ಮಾದರಿಯಾಗುತ್ತದೆ. ಸ್ಮಾರ್ಟ್‌ಸಿಟಿ ಯೋಜನೆಯಿಂದ ಬಹಳಷ್ಟುಪ್ರದೇಶಗಳಲ್ಲಿ ಆಸ್ತಿ ಮೌಲ್ಯ, ಆರ್ಥಿಕ ಚಟುವಟಿಕೆಗಳು ಹೆಚ್ಚಿವೆ. ಎರಡನೆಯ ಹಂತದಲ್ಲಿ ಧಾರವಾಡ ಭಾಗವನ್ನು ಯೋಜನೆ ವ್ಯಾಪ್ತಿಗೊಳಪಡಿಸಲಾಗುವುದು.
-ಶಕೀಲ್ ಅಹ್ಮದ್, ಎಂಡಿ, ಸ್ಮಾರ್ಟ್‌ಸಿಟಿ ಕಂಪನಿ ಹು-ಧಾ
ಸ್ಮಾರ್ಟ್‌ಸಿಟಿ ಯೋಜನೆಗಳ ಕುರಿತಾಗಿ ಪ್ರಗತಿ ಪರಿಶೀಲನೆ ಬಳಿಕ ಏಳು ದಿನಗಳೊಳಗಾಗಿ ಎಲ್ಲ ಕಾರ್ಪೊರೇಟರ್‌ಗಳು ಸೇರಿ ಕಾಮಗಾರಿಗಳ ಗುಣಮಟ್ಟಪರಿಶೀಲಿಸೋಣ. ಬಳಿಕ ವಿಶೇಷ ಸಾಮಾನ್ಯ ಸಭೆ ಕರೆದು ವಿಸ್ತೃತವಾಗಿ ಚರ್ಚಿಸಿ ಹಸ್ತಾಂತರ ಪ್ರಕ್ರಿಯೆ ಕೈಗೊಳ್ಳಲಾಗುವುದು.
-ಈರೇಶ ಅಂಚಟಗೇರಿ, ಮೇಯರ್, ಹು-ಧಾ ಪಾಲಿಕೆ