ಗೋಲಿಬಾರ್ ಘಟನೆಯ ಬಳಿಕ ಮಂಗಳೂರಿನ ಪರಿಸ್ಥಿತಿ ಚೆನ್ನಾಗಿಲ್ಲ. ಸದ್ಯ ಜಿಲ್ಲೆಯಲ್ಲಿ ಶಾಂತಿ ನೆಲೆಸಿದ್ದು, ಭವಿಷ್ಯದಲ್ಲಿ ಕದಡಬಾರದು. ಇಂತಹ ಪರಿಸ್ಥಿತಿಯಲ್ಲಿ ಅಮಿತ್ ಶಾ ಮಂಗಳೂರಿಗೆ ಭೇಟಿ ನೀಡಿದರೆ ಸಮಾಜದ ಶಾಂತಿ ಕದಡಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಆಗ್ರಹಿಸಿದೆ.
ಮಂಗಳೂರು(ಜ.07): ಮಂಗಳೂರಿನಲ್ಲಿ ಗೋಲಿಬಾರ್ ಬಳಿಕ ಕರಾವಳಿಯ ಸದ್ಯದ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಹಾಗಾಗಿ ಜ.19ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳೂರು ಭೇಟಿಗೆ ಜಿಲ್ಲಾಡಳಿತ ಮತ್ತು ನಗರ ಪೊಲೀಸ್ ಆಯುಕ್ತಾಲಯ ಅವಕಾಶ ನೀಡಬಾರದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಆಗ್ರಹಿಸಿದೆ.
ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜನವರಿ 19ರಂದು ಮಂಗಳೂರಿನಲ್ಲಿ ನಡೆಯಲಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಸಮರ್ಥನಾ ಸಮಾವೇಶದಲ್ಲಿ ಅಮಿತ್ ಶಾ ಭಾಗವಹಿಸಿದ್ದೇ ಆದರೆ ಕಾಂಗ್ರೆಸ್ ವತಿಯಿಂದ ‘ಗೋ ಬ್ಯಾಕ್ ಅಮಿತ್ ಶಾ’ ಪ್ರತಿಭಟನೆ ಮಾತ್ರವಲ್ಲದೆ ಉಪವಾಸ ಸತ್ಯಾಗ್ರಹವನ್ನೂ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಮಂಗಳೂರಿನಲ್ಲಿ ಹಾರಿದ ಡ್ರೋನ್ ಕ್ಯಾಮೆರಾ : ಮತ್ತೆ ಹೆಚ್ಚಿದ ಆತಂಕ.
ಗೋಲಿಬಾರ್ ಘಟನೆಯ ಬಳಿಕ ಮಂಗಳೂರಿನ ಪರಿಸ್ಥಿತಿ ಚೆನ್ನಾಗಿಲ್ಲ. ಸದ್ಯ ಜಿಲ್ಲೆಯಲ್ಲಿ ಶಾಂತಿ ನೆಲೆಸಿದ್ದು, ಭವಿಷ್ಯದಲ್ಲಿ ಕದಡಬಾರದು. ಇಂತಹ ಪರಿಸ್ಥಿತಿಯಲ್ಲಿ ಅಮಿತ್ ಶಾ ಮಂಗಳೂರಿಗೆ ಭೇಟಿ ನೀಡಿದರೆ ಸಮಾಜದ ಶಾಂತಿ ಕದಡಬಹುದು. ಹಾಗಾಗಿ ಮಂಗಳೂರು ಪೊಲೀಸ್ ಆಯುಕ್ತಾಲಯ ಮತ್ತು ಜಿಲ್ಲಾಡಳಿತ ಅವರ ಭೇಟಿಗೆ ಅವಕಾಶ ಕಲ್ಪಿಸಬಾರದು ಎಂದು ಐವನ್ ಡಿಸೋಜ ಒತ್ತಾಯಿಸಿದ್ದಾರೆ.
ಬಿಜೆಪಿ ಅಭಿಯಾನ ನಿಲ್ಲಿಸಲಿ:
ಸಿಎಎ ಕುರಿತು ಬಿಜೆಪಿ ತನ್ನ ಜಾಗೃತಿ ಅಭಿಯಾನವನ್ನು ಕೂಡಲೆ ನಿಲ್ಲಿಸಿ ಪರಿಸ್ಥಿತಿ ಇನ್ನಷ್ಟುಉಲ್ಬಣಗೊಳ್ಳುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದ ಐವನ್ ಡಿಸೋಜ, ಎನ್‌ಆರ್‌ಸಿ ಮತ್ತು ಸಿಎಎ ವಿರುದ್ಧ ದೇಶಾದ್ಯಂತ ಪ್ರತಿಭಟನೆಯ ಜ್ವಾಲೆ ಎದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಲ್ಲಿ ಮೋದಿ ಕುರಿತ ಯಕ್ಷಗಾನ ಪ್ರದರ್ಶನ : ಏನಿತ್ತು ಕಥೆಯಲ್ಲಿ?
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಶಸ್ತ್ರಸಜ್ಜಿತವಾಗಿ ಮುಖಪರದೆ ಧರಿಸಿ ಹಲ್ಲೆ ನಡೆಸಿದ ಘಟನೆಯನ್ನು ಖಂಡಿಸಿದರು. ವಿವಿ ಆವರಣದೊಳಗಿನ ಹಿಂಸಾಚಾರವನ್ನು ಸರ್ಕಾರ ಕೂಡಲೆ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ರೆಡ್ಡಿ ವಜಾಕ್ಕೆ ಆಗ್ರಹ:
ಇತ್ತೀಚೆಗೆ ಕೋಮು ಪ್ರಚೋದನಕಾರಿ ಭಾಷಣ ಮಾಡಿರುವ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಅವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದ ಅವರು, ಪೊಲೀಸರು ಕೂಡಲೆ ಅವರನ್ನು ಬಂಧಿಸಿ ದೇಶದ್ರೋಹದ ಕಾನೂನಿನಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಪಕ್ಷದ ಮುಖಂಡರಾದ ನೀರಜ್ ಪಾಲ್, ಈಶ್ವರ ಭಚ್, ನಝೀರ್ ಬಜಾಲ್ ಮತ್ತಿತರರಿದ್ದರು.
ಬಿಜೆಪಿ ಶಾಸಕರು ಸಂತ್ರಸ್ತರ ಭೇಟಿಯಾಗಲಿ
ಗೃಹ ಸಚಿವ ಅಮಿತ್ ಶಾ ಮಂಗಳೂರಿಗೆ ಭೇಟಿ ನೀಡುವ ಬದಲು, ಗೋಲಿಬಾರ್ ಸಂದರ್ಭ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತರನ್ನು ಮತ್ತು ಪೊಲೀಸ್ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳನ್ನೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ವೇದವ್ಯಾಸ ಕಾಮತ್ ಭೇಟಿ ಮಾಡಲಿ ಎಂದು ಹರೀಶ್ ಕುಮಾರ್ ಮತ್ತು ಐವನ್ ಡಿಸೋಜ ಒತ್ತಾಯಿಸಿದ್ದಾರೆ.