ಹುಬ್ಬಳ್ಳಿ: ಪಾಲಿಕೆ ಚುನಾವಣೆಯಲ್ಲೂ ಕಾಂಗ್ರೆಸ್ಸಿಗೆ ನಿರಾಸಕ್ತಿ..!

By Kannadaprabha NewsFirst Published Jul 1, 2021, 3:24 PM IST
Highlights

* ವಿನಯ್‌ ಜೈಲಿಗೆ, ಮಾನೆ ಹಾನಗಲ್‌ಗೆ, ಛಬ್ಬಿ ಕಲಘಟಗಿಗೆ
* ಅಬ್ಬಯ್ಯ, ಅನಿಲ್‌, ಅಲ್ತಾಪ್‌ ಮಧ್ಯೆ ಹೊಂದಾಣಿಕೆ ಕೊರತೆ
* ಪಕ್ಷ ಸಂಘಟನೆಗಾಗಿ ಹಗಲಿರಳು ಶ್ರಮಿಸುತ್ತಿರುವ ಡಿ.ಕೆ.ಶಿವಕುಮಾರ
 

ಶಿವಾನಂದ ಗೊಂಬಿ

ಹುಬ್ಬಳ್ಳಿ(ಜು.01): ಮಹಾನಗರ ಪಾಲಿಕೆ ಗೆ ಸನ್ನಿಹಿತವಾಗುತ್ತಿದೆ. ಆದರೆ ಚುನಾವಣೆ ಸಿದ್ಧತೆಯಲ್ಲಿ ತೊಡಗಬೇಕಿದ್ದ ಜಿಲ್ಲಾ ಕಾಂಗ್ರೆಸ್‌ ಇಲ್ಲೂ ನಿರಾಸಕ್ತಿ ತೋರುತ್ತಿದ್ದು, ಆ ಪಕ್ಷದ ಟಿಕೆಟ್‌ ಆಕಾಂಕ್ಷಿಗಳಲ್ಲಿ ಬೇಸರ ಹುಟ್ಟಿಸಿದೆ.

ಕಳೆದ ಎರಡುವರೆ ವರ್ಷದಿಂದ ಪಾಲಿಕೆಯಲ್ಲಿ ಚುನಾಯಿತ ಆಡಳಿತ ಮಂಡಳಿಯೇ ಇಲ್ಲ. ಇದೀಗ ಚುನಾವಣೆ ನಡೆಯುವ ಸಾಧ್ಯತೆ ನಿಚ್ಚಳವಾಗಿ ಗೋಚರವಾಗುತ್ತಿದೆ. ಇದಕ್ಕಾಗಿ ಮತದಾರರ ಪಟ್ಟಿ ಕರಡು ಪ್ರತಿಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿರುವುದುಂಟು. ಜು. 9ಕ್ಕೆ ಅಂತಿಮ ಪಟ್ಟಿಯನ್ನು ಪ್ರಕಟಿಸಲಿದೆ. ಆದರೂ ಕಾಂಗ್ರೆಸ್‌ ಈವರೆಗೂ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಲೇ ಇಲ್ಲ.

ನಿರಾಸಕ್ತಿ ಏಕೆ?:

ಕಾಂಗ್ರೆಸ್‌ ಎಂದರೆ ಮೊದಲೇ ಭಿನ್ನಾಭಿಪ್ರಾಯ, ಗುಂಪುಗಾರಿಕೆ, ತಿಕ್ಕಾಟಕ್ಕೆ ಹಾಸುಹೊದ್ದಂತಿರುವ ಪಕ್ಷ. ಹೀಗಾಗಿ ಪ್ರತಿ ಚುನಾವಣೆಯಲ್ಲೂ ಈ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವುದು ಈ ಪಕ್ಷದವರೇ ಎಂಬ ಮಾತು ಸರ್ವೇಸಾಮಾನ್ಯ. ಈ ಕಾರಣದಿಂದಲೇ ಒಂದು ಕಾಲದಲ್ಲಿ ಕಾಂಗ್ರೆಸ್‌ ಕೋಟೆಯಂತಾಗಿದ್ದ ಧಾರವಾಡದಲ್ಲಿ ಇದೀಗ ಒಬ್ಬಿಬ್ಬರು ಶಾಸಕರು, ಚುನಾಯಿತ ಪ್ರತಿನಿಧಿಗಳಿದ್ದಾರೆ. ಕಳೆದ ಬಾರಿ ಇದೇ ರೀತಿ ಭಿನ್ನಾಭಿಪ್ರಾಯಗಳಿಂದಾಗಿ ಪಾಲಿಕೆಯಲ್ಲಿ ವಿರೋಧ ಪಕ್ಷವಾಗಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿತ್ತು.

ಹುಬ್ಬಳ್ಳಿ-ಧಾರವಾಡದಲ್ಲಿ 25 ಸಾವಿರ ಕೋಟಿ ಬಂಡವಾಳ ಹೂಡಿಕೆ: ಶೆಟ್ಟರ್‌

ಜಿಲ್ಲೆಯ ಮಟ್ಟಿಗೆ ಪ್ರಮುಖ ನಾಯಕನೆಂದು ಗುರುತಿಸಿಕೊಂಡಿದ್ದ, ಯುವಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಮಾಜಿ ಸಚಿವ ವಿನಯ್‌ ಕುಲಕರ್ಣಿ ಜೈಲು ಸೇರಿದ್ದರೆ, ವಿಧಾನಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಹಾನಗಲ್‌ಗೆ ಸೀಮಿತವಾಗಿದ್ದರೆ, ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ ಕಲಘಟಗಿ ಕ್ಷೇತ್ರಕ್ಕೆ ಕೇಂದ್ರೀಕೃತವಾಗಿದ್ದಾರೆ. ಇವರೆಲ್ಲರೂ ತಮ್ಮ ತಮ್ಮ ಕ್ಷೇತ್ರಗಳಿಗೆ ಸೀಮಿತವಾಗಿದ್ದರಿಂದ ಮಹಾನಗರ ಜಿಲ್ಲಾ ಹಾಗೂ ಗ್ರಾಮೀಣ ಜಿಲ್ಲಾ ಸಮಿತಿಯಲ್ಲಿ ಮುಖಂಡರ ಹಿಡಿತವೇ ಇಲ್ಲವೆಂಬಂತಾಗಿದೆ.

ನಗರದಲ್ಲಿ ನೆಲೆಸಿರುವ ಶಾಸಕ ಪ್ರಸಾದ ಅಬ್ಬಯ್ಯ, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರು, ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಮಧ್ಯೆ ಹೊಂದಾಣಿಕೆ, ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಮೂಲ ಕಾಂಗ್ರೆಸ್ಸಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ಅವರೆಲ್ಲರೂ ಮನೆ ಸೇರಿದ್ದಾರೆ. ಹೀಗಾಗಿ ಕಾಂಗ್ರೆಸ್‌ನಲ್ಲೇ ಎರಡ್ಮೂರು ಬಣಗಳಾಗಿ ಹೊರಹೊಮ್ಮಿದ್ದು ಬಹಿರಂಗ ಸತ್ಯ.

ವಿಶ್ವಾಸದ ಕೊರತೆ:

ಎರಡು ಜಿಲ್ಲಾ ಸಮಿತಿಗಳು ಒಮ್ಮೆಯೂ ಕೂಡ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸವನ್ನೇ ಮಾಡಿಲ್ಲ. ಹೀಗಾಗಿ ಕೊರೋನಾ ಸಮಯದಲ್ಲೂ 2ನೆಯ ಸಾಲಿನ ಕೆಲ ಮುಖಂಡರು ಜಿಲ್ಲಾ ಸಮಿತಿಗಳ ಸಹವಾಸಕ್ಕೆ ಹೋಗದೇ ತಮ್ಮ ಪಾಡಿಗೆ ತಾವೇ ಕೆಲಸ ಮಾಡಿದ್ದುಂಟು.

ಚುನಾವಣೆ ತಯಾರಿ ಬಗ್ಗೆ ಮುಖಂಡರನ್ನು ಕೇಳಿದರೆ, ನಾವು ನಮ್ಮ ಪಕ್ಷದಿಂದ ಚುನಾವಣೆ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ ಜನತೆಗೆ ಈಗ ಚುನಾವಣೆ ಬೇಕಾಗಿಲ್ಲ. ಕೊರೋನಾ ಆತಂಕ ಇರುವ ಕಾರಣ ಚುನಾವಣೆ ನಡೆಯಲಿಕ್ಕಿಲ್ಲ. ಆದರೂ ಯಾವಾಗ ಚುನಾವಣೆ ಬಂದರೂ ಎದುರಿಸಲು ಸಿದ್ಧ. ವಾರ್ಡ್‌ ಸಮಿತಿ ಮಾಡಿಕೊಳ್ಳುತ್ತಿದ್ದೇವೆ ಎಂದು ಪಕ್ಷದ ಜಿಲ್ಲಾ ಮುಖಂಡರು ನುಡಿಯುತ್ತಾರೆ.

ಕಡಿಮೆ ಲಸಿಕೆ ನೀಡಿ ದೊಡ್ಡ ಪ್ರಚಾರ ಪಡೆಯುತ್ತಿರುವ ಬಿಜೆಪಿ: ಲಾಡ್‌

ಅತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಪಕ್ಷ ಸಂಘಟನೆಗಾಗಿ ಹಗಲಿರಳು ಶ್ರಮಿಸುತ್ತಿದ್ದರೆ, ಇತ್ತ ಅವರ ಸ್ಪೀಡ್‌ಗೆ ಸಂಘಟನೆ ಮಾಡುವುದೂ ಒತ್ತಿಟ್ಟಿಗಿರಲಿ ಪಾಲಿಕೆ ಚುನಾವಣೆ ಹೊಸ್ತಿಲಲ್ಲಿದ್ದರೂ ಕಾಂಗ್ರೆಸ್‌ ಮುಖಂಡರು ಮಾತ್ರ ಗಾಢನಿದ್ರೆಯಿಂದ ಎಚ್ಚೆತ್ತುಕೊಳ್ಳುತ್ತಿಲ್ಲ. ಇನ್ನಾದರೂ ಡಿಕೆಶಿ ಕೊಂಚ ಜಿಲ್ಲಾ ಸಮಿತಿಗಳಿಗೆ ಬಿಸಿ ಮುಟ್ಟಿಸಿ ಪಾಲಿಕೆ ಚುನಾವಣೆಗೆ ತಯಾರುಗೊಳಿಸಬೇಕಾಗಿದೆ ಎಂಬುದು ಕಾರ್ಯಕರ್ತರ ಅಂಬೋಣ.

ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ 5-6 ಬಾರಿ ಸಭೆ ನಡೆಸಿದ್ದೇವೆ. ಆದರೆ ಸರ್ಕಾರ ಕೊರೋನಾ ಹಿನ್ನೆಲೆಯಲ್ಲಿ 6 ತಿಂಗಳು ಯಾವುದೇ ಚುನಾವಣೆ ನಡೆಸುವುದಿಲ್ಲ ಎಂದು ತೀರ್ಮಾನ ಕೈಗೊಂಡಿದೆ ಅಲಾ. ಹೀಗಾಗಿ ಚುನಾವಣೆ ನಡೆಯುವುದು ಡೌಟು. ಜೊತೆಗೆ ಜನತೆಗೆ ಈಗ ಚುನಾವಣೆ ಬೇಕಾಗಿಲ್ಲ. ನಾವಂತೂ ಚುನಾವಣೆ ಸಿದ್ಧವಾಗಿದ್ದೇವೆ ಎಂದು ಮಹಾನಗರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ್‌ ಹಳ್ಳೂರು ತಿಳಿಸಿದ್ದಾರೆ. 
 

click me!