
ಹಾಸನ (ಆ.09): ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ತೀವ್ರ ರಾಜಕೀಯ ಕಾದಾಟ ನಡೆಯುತ್ತಿದ್ದರೆ, ಹಾಸನ ಜಿಲ್ಲೆಯಲ್ಲಿ ಮಾತ್ರ ತೀರಾ ಭಿನ್ನ ಹಾಗೂ ಕುತೂಹಲಕಾರಿ ರಾಜಕೀಯ ಸಮೀಕರಣ ಕಂಡುಬರುತ್ತಿದೆ. ಪಕ್ಷದ ಗೆರೆಗಳನ್ನು ಮೀರಿ ಕಾಂಗ್ರೆಸ್‌ನ ನವ ಉದಯೋನ್ಮುಖ ಸಂಸದ ಶ್ರೇಯಸ್ ಎಂ. ಪಟೇಲ್ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂಗೌಡ ಅವರ ನಡುವಿನ ಆತ್ಮೀಯ ದೋಸ್ತಿ ಮತ್ತೊಮ್ಮೆ ಬಹಿರಂಗವಾಗಿ ಸಾಬೀತಾಗಿದೆ.
ಹಾಸನ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬಾಬು ಜಗಜೀವನ್ ರಾಮ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭದಲ್ಲಿ ಈ ಇಬ್ಬರೂ ಮುಖಂಡರು ಭಾಗವಹಿಸಿದ್ದರು. ವೇದಿಕೆಯಲ್ಲಿ ಅಕ್ಕಪಕ್ಕದಲ್ಲೇ ಆಸೀನರಾಗಿದ್ದ ಇಬ್ಬರೂ ನಾಯಕರು ಸುದೀರ್ಘ ಸಮಯ ಪಿಸುಪಿಸು ಮಾತನಾಡುತ್ತಾ, ಅತ್ಯಂತ ಆತ್ಮೀಯವಾಗಿ ಕಳೆಯುವ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದ್ದವರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಶ್ರೇಯಸ್ ಎಂ. ಪಟೇಲ್, ಪ್ರೀತಂಗೌಡ್ರು ಶಾಸಕರಾಗಿದ್ದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಕ್ತವಾಗಿ ಪ್ರಶಂಸಿಸಿದರು. "ಪಕ್ಷಗಳು ಬೇರೆಬೇರೆಯಾಗಿರಬಹುದು, ಆದರೆ ಸಮಾಜದ ಹಿತಕ್ಕಾಗಿ ಶ್ರಮಿಸಿದವರನ್ನು ಪಕ್ಷಾತೀತವಾಗಿ ಗುರುತಿಸುವುದು ನಮ್ಮ ಕರ್ತವ್ಯ. ಪ್ರೀತಂಗೌಡರು ಹಾಸನ ನಗರದ ಶಾಸಕರಾಗಿದ್ದಾಗ ನಗರದ ಸ್ವಚ್ಛತೆ, ಸೌಂದರ್ಯೀಕರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ" ಎಂದು ಬಹಿರಂಗವಾಗಿಯೇ ಅವರ ಕಾರ್ಯವೈಖರಿಯನ್ನು ಕೊಂಡಾಡಿದರು.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಿಂದಲೂ ಈ ಇಬ್ಬರೂ ನಾಯಕರ ನಡುವೆ ಸೌಹಾರ್ದಯುತ ಬಾಂಧವ್ಯ ಬೆಳೆದುಬಂದಿದೆ. ಚುನಾವಣೆ ಮುಗಿದ ಮೇಲೆಯೂ ಅವಕಾಶ ಸಿಕ್ಕಾಗಲೆಲ್ಲಾ ಒಬ್ಬರನ್ನೊಬ್ಬರು ಬಿಟ್ಟುಕೊಡದೆ ಪರಸ್ಪರ ಪ್ರಶಂಸಿಸಿಕೊಳ್ಳುವ ಮೂಲಕ ಜಿಲ್ಲೆಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದ್ದಾರೆ. ರಾಜ್ಯದಲ್ಲಿ ರಾಜಕೀಯ ವೈರತ್ವ ಉನ್ನತ ಮಟ್ಟದಲ್ಲಿದ್ದರೂ, ಹಾಸನದಲ್ಲಿ ಅಭಿವೃದ್ಧಿ ಹಾಗೂ ಸಮಾಜದ ಹಿತಾಸಕ್ತಿಗಾಗಿ ಇಬ್ಬರೂ ಯುವ ನಾಯಕರು ತೋರುತ್ತಿರುವ ಈ ಸೌಹಾರ್ದತೆ ಸ್ಥಳೀಯವಾಗಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.