ಹಲವು ದಿನಗಳಿಂದ ಸಮಸ್ಯೆ ಎದುರಿಸುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಕಂಪನಿಯ ಕಾರ್ಮಿಕರ ಸಮಸ್ಯೆ ಬಗೆಹರಿಸದಿದ್ದರೆ ಕಂಪನಿಗೆ ಬೀಗ ಜಡಿಯುವುದಾಗಿ ಸಂಸದ ಡಿಕೆ ಸುರೇಶ್ ಎಚ್ಚರಿಕೆ ನೀಡಿದ್ದಾರೆ.
ರಾಮನಗರ (ಜ.29): ನೀವು ಯಾರ ಜೊತೆಗೆ ಮಾತನಾಡುತ್ತೀರೊ ಗೊತ್ತಿಲ್ಲ. ಮುಂದಿನ 8 ದಿನದೊಳಗೆ ಕಾರ್ಮಿಕರ ಸಮಸ್ಯೆ ಬಗೆಹರಿಯಬೇಕು. ಇಲ್ಲದಿದ್ದರೆ ಕಂಪೆನಿಗೆ ಬೀಗ ಜಡಿಯುವುದಾಗಿ ಸಂಸದ ಡಿ.ಕೆ.ಸುರೇಶ್ ಟೊಯೋಟಾ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದರು.
ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಟೊಯೋಟಾ ಕಂಪೆನಿ ಎದುರು ಪಾದಯಾತ್ರೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಜಪಾನ್ನಲ್ಲಿರುವ ಆಡಳಿತ ಮಂಡಳಿ, ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರ ಆದಿಯಾಗಿ ಯಾರ ಜೊತೆ ಬೇಕಾದರೂ ಕಂಪೆನಿ ಚರ್ಚೆ ನಡೆಸಿ ಕಾರ್ಮಿಕರ ಸಮಸ್ಯೆ ಬಗೆಹರಿಸಲಿ. ಇದು ಕಡೆಯ ಎಚ್ಚರಿಕೆ ಎಂದರು.
ಲ್ಯಾಂಡ್ ಕ್ರೂಸರ್ SUV ಕಾರು ಓಡಿಸಿದ 5 ವರ್ಷದ ಪುಟ್ಟ ಬಾಲಕ; ವಿಡಿಯೋ ವೈರಲ್ ...
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ನೀತಿಗಳು ಟೊಯೋಟಾ ಕಂಪೆನಿ ಮೂಲಕ ಜಾರಿಗೆ ಬರುತ್ತಿದೆ. ಕಾರ್ಮಿಕ ಹಕ್ಕುಗಳನ್ನು ಕಸಿಯುವ ಹಾಗೂ ಕಾರ್ಮಿಕ ಸಂಘಟನೆಗಳನ್ನು ಹತ್ತಿಕ್ಕುವ ನೀತಿಗಳು ಜಾರಿಯಾಗಿರುವುದರಿಂದಲೇ ಇಂದು ಕಾರ್ಮಿಕರ ವಿರುದ್ಧ ದಬ್ಬಾಳಿಕೆ ನಡೆಯುತ್ತಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಹರಿಹಾಯ್ದರು.
ಸರಿಪಡಿಸಿಕೊಳ್ಳದಿದ್ದರೆ ಪರಿಣಾಮ: ಮಾಜಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಕಾರ್ಮಿಕರ ಸಮಸ್ಯೆ ಹಾಗೂ ಹೋರಾಟಕ್ಕೆ ಕಿವಿಗೊಡಲಾಗದಷ್ಟರ ಮಟ್ಟಿಗೆ ಟೊಯೋಟಾ ಕಂಪೆನಿ ಬಲಿಷ್ಠವಾಗಿ ಬೆಳೆದಿದೆ. ತನ್ನ ನಡವಳಿಕೆ ಸರಿಪಡಿಸಿಕೊಳ್ಳದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಮಿಕರು ಹಾಗೂ ರೈತರ ಪರವಾಗಿ ಇರಬೇಕಾಗಿದ್ದ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉದ್ಯಮಿಗಳು, ಬಂಡವಾಳ ಶಾಹಿಗಳ ಪರವಾಗಿ ನಿಂತಿವೆ. ಹೀಗಾಗಿಯೇ ರೈತರು, ಕಾರ್ಮಿಕರು ಬೀದಿ ಬೀಳುವಂತಾಗಿದೆ. ಯಾವ ಸರ್ಕಾರ ಹಾಗೂ ಕಂಪೆನಿಗಳು ರೈತರು, ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲವೊ ಅವುಗಳು ಹೆಚ್ಚು ದಿನ ಉಳಿಯುವುದಿಲ್ಲ ಎಂದರು.
ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಬೇಜವಾಬ್ದಾರಿಯಿಂದಾಗಿಯೇ ಟೊಯೋಟಾ ಸಮಸ್ಯೆ ಜಟಿಲವಾಗುತ್ತಿದೆ. ಕಾರ್ಮಿಕರ ಸಮಸ್ಯೆ ಬಗೆಹರಿಸಲಾಗದವರು ಧೈರ್ಯವಿಲ್ಲದೆ ರಾತ್ರೋರಾತ್ರಿ ಕಂಪೆನಿಯ ಕಾರ್ಯಕ್ರಮ ನಿಗದಿಪಡಿಸಿಕೊಂಡು ಭಾಗಿಯಾಗುತ್ತಿದ್ದಾರೆ. ನಾಯಕರು ಎನಿಸಿಕೊಂಡವರು ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ಸೂಚಿಸಿ ಕಣ್ಣೊರೆಸುವ ನಾಟಕವಾಡಿದರೆ ಸಾಲದು. ಕಾರ್ಮಿಕರ ಜತೆ ನಿಂತು ಹೋರಾಟಕ್ಕೆ ಶಕ್ತಿ ತುಂಬಬೇಕು. ಈ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಗುವವರೆಗೂ ಮಾಡು ಇಲ್ಲವೆ ಮಡಿ ಹೋರಾಟ ನಡೆಸುತ್ತೇವೆ. ದಬ್ಬಾಳಿಕೆ ನಡೆಸುವ ಇಂತಹ ಕಂಪೆನಿಗಳ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿ, ಟೊಯೋಟಾ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಅವಕಾಶವಿತ್ತು. ಆದರೆ, ಬಿಜೆಪಿ ಸರ್ಕಾರ ಕಂಪೆನಿಯ ಆಡಳಿತ ಮಂಡಳಿಯೊಂದಿಗೆ ಶಾಮೀಲಾಗಿರುವುದೇ ಸಮಸ್ಯೆ ಉಲ್ಬಣಗೊಳ್ಳಲು ಕಾರಣ. ಕಂಪನಿಯ ಮೂರುವರೆ ಸಾವಿರ ಕಾರ್ಮಿಕರನ್ನು ಬಲಿ ತೆಗೆದುಕೊಳ್ಳಲು ಬಾಯಿ ಮುಚ್ಚಿಕೊಂಡು ಕುಳಿತಿರುವ ಬಿಜೆಪಿ ಸರ್ಕಾರ ಪಂಚೇಂದ್ರಿಯಗಳನ್ನು ಕಳೆದುಕೊಂಡಿದೆ. ಖಾಸಗಿ ಕಂಪೆನಿಯ ಆಡಳಿತ ಮಂಡಳಿಯನ್ನು ಬಗ್ಗಿಸಲು ಸಾಧ್ಯವಾಗದಿದ್ದ ಮೇಲೆ ಮುಖ್ಯಮಂತ್ರಿಗಳು ಹಾಗೂ ಸಚಿವರು ರಾಜೀನಾಮೆ ನೀಡುವುದು ಸೂಕ್ತ ಎಂದು ಹೇಳಿದರು.
ಮಾಜಿ ಸಚಿವ ನರೇಂದ್ರಸ್ವಾಮಿ, ಮಾಜಿ ಶಾಸಕ ಕೆ.ರಾಜು, ಜಿಪಂ ಅಧ್ಯಕ್ಷ ಅಶೋಕ್, ಕಾಂಗ್ರೆಸ್ ಮುಖಂಡರಾದ ಗಣಿಗ ರವಿ, ಡಾ.ರವೀಂದ್ರ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ರಾಜ್ಯಾಧ್ಯಕ್ಷ ಕೃಷ್ಣೇಗೌಡ, ಕರವೇ ಜಿಲ್ಲಾಧ್ಯಕ್ಷ ಕಬ್ಬಾಳೇಗೌಡ, ರೈತಸಂಘ ಮುಖಂಡರಾದ ಭೈರೇಗೌಡ, ರಾಮು, ಟೊಯೋಟಾ ಕಾರ್ಮಿಕರ ಸಂಘದ ಅಧ್ಯಕ್ಷ ಪ್ರಸನ್ನ ಚಕ್ಕೆರೆ ಮತ್ತಿತರರು ಹಾಜರಿದ್ದರು.
ಆರೋಗ್ಯ ಸೇವೆಗೆ ಸಜ್ಜಾದ ಟೊಯೋಟಾ ಕಿರ್ಲೋಸ್ಕರ್; ಸಮುದಾಯ ಕೇಂದ್ರಕ್ಕೆ DCM ಶಂಕು ಸ್ಥಾಪನೆ! ...
ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕಾರ್ಮಿಕರ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಬೇಕು. ಪೊಲೀಸರನ್ನು ಮುಂದಿಟ್ಟುಕೊಂಡು ಕಾರ್ಮಿಕರನ್ನು ಹೆದರಿಸುವ ಅಥವಾ ಹತ್ತಿಕ್ಕುವ ಕೆಲಸ ನಡೆಯುವುದಿಲ್ಲ. ಟೊಯೋಟಾ ಅಧಿಕಾರಿಗಳು ಕಾರ್ಮಿಕರ ಕುಟುಂಬಗಳಿಗೆ ಫೋನು ಮಾಡಿ ಬೀದಿಗೆ ಬರುತ್ತೀರಾ ಎಂದು ಹೆದರಿಸುತ್ತಿದ್ದಾರೆ. ಸಮಸ್ಯೆ ಬಗೆಹರಿಯದಿದ್ದರೆ ಇಡೀ ಸಂಸ್ಥೆ ಬೀದಿಗೆ ಬೀಳಲಿದೆ.
ಡಿ.ಕೆ. ಸುರೇಶ್, ಸಂಸದ