ನಿಮ್ಗೆ ಕೌಂಟ್‌ಡೌನ್ ಶುರುವಾಗಿದೆ : ಡಿ.ಕೆ.ಸುರೇಶ್ ವಾರ್ನಿಂಗ್

By Kannadaprabha NewsFirst Published Mar 13, 2021, 12:14 PM IST
Highlights

ನೀವ್ ಯಾವ್ ಪಕ್ಷದ ಬೆಂಬಲಿಗರಾದ್ರೂ ಸೈ...  ಯಾರು ಏನು ಮಾಡುತ್ತಾರೆ ಎನ್ನುವ ದೋರಣೆಯಿಂದ ಹೊರಬನ್ನಿ.. ಸರಿಯಾಗಿ ಕೆಲಸ ಮಾಡಿ ಎಂದು ಸಂಸದ ಡಿಕೆ ಸುರೇಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ. 

 ರಾಮನಗರ (ಮಾ.13):  ಚೀನಾದಲ್ಲಿ ರೇಷ್ಮೆ ಕೃಷಿ ಮತ್ತು ಉದ್ಯಮ ಸಾಯುತ್ತಿದ್ದು, ಭಾರತದ ರೇಷ್ಮೆ ಕ್ಷೇತ್ರಕ್ಕೆ ಉತ್ತಮ ಭವಿಷ್ಯವಿದೆ. ಇದಕ್ಕೆ ತಕ್ಕಂತೆ ಮತ್ತು ಎದುರಾಗುವ ವಿಫುಲ ಅವಕಾಶಗಳನ್ನು ಬಳಸಿಕೊಳ್ಳಲು ಅಧಿಕಾರಿಗಳು ಕಾರ್ಯ ತಂತ್ರ ರೂಪಿಸಿ ಎಂದು ಸಂಸದ ಡಿ.ಕೆ.ಸುರೇಶ್‌ ಸಲಹೆ ನೀಡಿದರು.

ನಗರದ ಜಿಪಂ ಸಭಾಂಗ​ಣ​ದಲ್ಲಿ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆ​ಯಲ್ಲಿ ಮಾತ​ನಾ​ಡಿದ ಅವರು ಗೂಡು ಬೆಳೆಗಾರರು ತಮಗೆ ಸೂಕ್ತ ಎನಿಸಿದ ಮಾರುಕಟ್ಟೆಬೆಲೆ ಸಿಗುವವರೆಗೂ ಗೂಡನ್ನು ಒಣಗಿಸಿ ಇಟ್ಟುಕೊಳ್ಳಬಹುದು. ಹೀಗಾಗಿ ರೈತರಿಗೆ ನಷ್ಟಕಡಿಮೆಯಾಗಲಿದೆ. ಗೂಡು ಒಣಗಿಸುವ ಯಂತ್ರಗಳ ಸ್ಥಾಪನೆಗೆ ರೈತ ಉತ್ಪಾದಕ ಸಂಸ್ಥೆಗಳಿಗೆ ಆದ್ಯತೆ ಕೊಡಿ. ಈ ವಿಚಾರದಲ್ಲಿ ಸರ್ಕಾರದ ಗಮನ ಸೆಳೆದು ಪ್ರಸ್ತಾವನೆ ಸಲ್ಲಿಸಿ ಎಂದು ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿ​ದರು.

'ಜಾರಕಿಹೊಳಿ ರಾಸಲೀಲೆ CD ಪ್ರಕರಣದಲ್ಲಿ ಚನ್ನಪಟ್ಟಣದವರ ಭಾಗಿ ಇದೆ' .

ಮಾಗಡಿ ಮತ್ತು ಕುಣಿಗಲ್ ತಾಲೂಕುಗಳಲ್ಲಿ ಎಂಎಸ್‌ಪಿ (ಮೈಸೂರು ಸಿಲ್ಕ್… ಬಿತ್ತನೆ ಗೂಡು) ಬೆಳೆಯಲು ಮಾತ್ರ ಅವಕಾಶವಿದೆ ಎಂದು ಅಧಿಕಾರಿಗಳು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸಂಸದ ಡಿ.ಕೆ.ಸುರೇಶ್‌, ಆ ತಾಲೂಕುಗಳ ರೈತರೇನು ಅನ್ಯಾಯ ಮಾಡಿ​ದ್ದಾ​ರೇನು ಎಂದು ಪ್ರಶ್ನಿಸಿದರು. ಎಂ.ಎಸ್‌.ಪಿ ಗೂಡಿಗೆ ಇನ್ನು ಬೇಡಿಕೆ ಇದೆ. ಮೇಲಾಗಿ ಸರ್ಕಾರ ಈ ಎರಡೂ ತಾಲೂಕುಗಳಲ್ಲಿ ಇಂತಹದ್ದೆ ಗೂಡು ಬೆಳೆಯಬೇಕು ಎಂಬ ನಿಯಮ ಜಾರಿ ಮಾಡಿದ್ದಾರೆ. ಈ ನಿಯಮ ಸಡಲಿಕೆಯಾಗದ ಹೊರತು ಆ ಭಾಗದಲ್ಲಿ ಬೇರೆ ಗೂಡಿಗೆ ಅವಕಾಶವಿಲ್ಲ ಎಂದರು.

ಸಭೆಯಲ್ಲಿ ಶಾಸಕ ಎ.ಮಂಜುನಾಥ, ಜಿಲ್ಲಾಧಿಕಾರಿ ಡಾ.ರಾಕೇಶ್‌ ಕುಮಾರ್‌ , ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಿರೀಶ್‌, ಅಪರ ಜಿಲ್ಲಾ​ಧಿಕಾರಿ ​ಟಿ.ಜವರೇಗೌಡ ಉಪಸ್ಥಿತರಿದ್ದರು.

ಅಧಿ​ಕಾ​ರಿ​ಗ​ಳಿಗೆ ತರಾಟೆ ತೆಗೆ​ದು​ಕೊಂಡ ಡಿಕೆಸು

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದಿಶಾ ಸಭೆ ಆರಂಭವಾದ ಕೂಡಲೇ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮ ಸುಂದರ್‌ ಅವರು, ತಮ್ಮ ಇಲಾಖೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಸಾಧನೆಯನ್ನು ಸಭೆಯ ಗಮನಕ್ಕೆ ತಂದರು. ಇದಾದ ಬಳಿಕ ಸಂಸದ ಡಿ.ಕೆ.ಸುರೇಶ್‌ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಘಟನೆಯು ಜರುಗಿತು.

ಗ್ರೇಸ್‌ ಟೈಮ್ ಮುಗಿದಿದೆ:

ಕಳೆದ ಒಂದೂವರೆ ವರ್ಷಗಳಿಂದ ನಾನು ನೋಡತ್ತಲೇ ಇದ್ದೇನೆ. ನಿಮ್ಮ ಎಲ್ಲಾ ಗ್ರೇಸ್‌ ಟೈಮ್ ಮುಗಿದಿದ್ದು, ಕೌಂಟ್‌ಡೌನ್‌ ಶುರುವಾಗಿದೆ. ಕೆಲಸ ಮಾಡಿ. ನೀವು ಯಾವ ಪಕ್ಷದ ಬೆಂಬಲಿಗರಾದರೂ ಸರಿ, ಅಥವಾ ನೀವೇ ಅಭ್ಯರ್ಥಿಗಳಾದರೂ ಸರಿಯೇ, ಯಾರೂ ಏನ್‌ ಮಾಡಿಕೊಳ್ಳುತ್ತಾರೆ ಎಂಬ ಧೋರಣೆಯಿಂದ ಹೊರ ಬನ್ನಿ.  ನೀವು ನಿಮ್ಮದಾರಿ ಹಿಡಿದರೇ, ನಮಗು ಗೊತ್ತಿದೆ ಏನ್‌ ಮಾಡ್ಬೇಕು ಎಂದು ತರಾಟೆಗೆ ತೆಗೆದುಕೊಂಡರು.

ಸರ್ಕಾರ ಅನುದಾನ ನೀಡಿದೆ. ನೀವು ಖರ್ಚು ಮಾಡುತ್ತಿದ್ದೀರಾ? ಫಲಾನುಭವಿಗಳ ಆಯ್ಕೆ ಮಾಡಿಕೊಳ್ಳಬೇಕಾದರೆ, ನಿಮ್ಮ ಗ್ರಾಪಂ ,ತಾಪಂ, ಜಿಪಂ ಸದಸ್ಯ ,ಶಾಸಕರು ಹಾಗೂ ಸಂಸದರ ಗಮನಕ್ಕೆ ತರ​ಬೇಕು. ನಿಮಗೆ ಇಷ್ಟಬಂದ ಹಾಗೇ ಕಾರ್ಯನಿರ್ವಹಿಸಬೇಡಿ ಎಂದು ಕಿಡಿ​ಕಾ​ರಿ​ದ​ರು.

ಸರ್ಕಾ​ರದ ಯೋಜನೆಗಳಿಂದ ಯಾವುದೇ ರೈತರು ವಂಚಿತರಾಗಬಾರದು. ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯನ್ನು ಜಿಲ್ಲೆಯ 2,31,000 ರೈತರು ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ರೈತರು ಈ ಯೋಜನೆಗೆ ಅರ್ಹರಿದ್ದು, ಕಂದಾಯ ಹಾಗೂ ಕೃಷಿ ಇಲಾಖೆ ಅವರು ಜಂಟಿಯಾಗಿ ಮನೆ, ಮನೆ ಸಮೀಕ್ಷೆ ಮಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯನ್ನು ತಲುಪಿಸಬೇಕು ಎಂದರು.

ಚೀನಾಕ್ಕೆ ತಾವು ಭೇಟಿ ನೀಡಿದ್ದಾಗ ಅಲ್ಲಿ ಸಾಯುತ್ತಿರುವ ರೇಷ್ಮೆ ಕ್ಷೇತ್ರದ ಬಗ್ಗೆ ತಮಗೆ ಮನವರಿಕೆಯಾಗಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ರೇಷ್ಮೆ ಕೃಷಿ ಪ್ರಮಾಣ ಹೆಚ್ಚಾಗುತ್ತಿದೆ. ಇಂದು ರಾಜ್ಯ ರೇಷ್ಮೆ ಕ್ಷೇತ್ರಕ್ಕೆ ಸವಾಲು ಒಡ್ಡುತ್ತಿದ್ದು, ಭವಿಷ್ಯದಲ್ಲಿ ವಿಶ್ವ ರೇಷ್ಮೆ ಮಾರುಕಟ್ಟೆಯಲ್ಲಿ ನಮ್ಮ ರೇಷ್ಮೆಗೆ ಸ್ಥಾನಮಾನ ಸಿಗಬೇಕಾಗಿದೆ. ಇದಕ್ಕೆ ತಕ್ಕ ಕಾರ್ಯತಂತ್ರ ರೂಪಿಸಿ.

ಡಿ.ಕೆ.ಸುರೇಶ್‌, ಸಂಸದ

click me!