ಬಿಜೆಪಿ ಸರ್ಕಾರದಿಂದ ಮಲತಾಯಿ ಧೋರಣೆ| ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳ ಕಡೆಗಣನೆ| ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ದೇಶದ ರೈತರನ್ನು, ಕಾರ್ಮಿಕರನ್ನು ಕಡೆಗಣಿಸಿ ಕೆಂಗಣ್ಣಿಗೆ ಗುರಿಯಾಗಿದೆ: ಶಾಸಕ ಭೀಮಾನಾಯ್ಕ|
ಹಗರಿಬೊಮ್ಮನಹಳ್ಳಿ(ಜ.28): ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಕ್ಷೇತ್ರಗಳ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಶಾಸಕ ಎಸ್. ಭೀಮಾನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಗಂಗಾವತಿ ಭೀಮಪ್ಪನವರ ಸರ್ಕಾರಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ತಾಲೂಕು ಆಡಳಿತದಿಂದ ಮಂಗಳವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರ ಸಂವಿಧಾನದ ಮೂಲ ಆಶಯಗಳನ್ನೇ ಬುಡಮೇಲು ಮಾಡಿದೆ. ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳನ್ನು ಕಡೆಗಣಿಸುತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ರೈತರ ಹಾಗೂ ದೇಶದ ಹಿತ ಕಾಪಾಡಬೇಕಾಗಿರುವುದು ಸರ್ಕಾರಗಳ ಹೊಣೆ ಆದರೆ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ದೇಶದ ರೈತರನ್ನು, ಕಾರ್ಮಿಕರನ್ನು ಕಡೆಗಣಿಸಿ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಆರೋಪಿಸಿದರು.
ಹಂಪಿ ಹರೇಶಂಕರ ಮಂಟಪದೊಳಗೆ ಬಸ್ ಸಿಲುಕಿ ಸ್ಮಾರಕಕ್ಕೆ ಧಕ್ಕೆ
ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ ಶರಣಮ್ಮ ಗಣರಾಜ್ಯೋತ್ಸವದ ಮಹತ್ವ ಕುರಿತು ಮಾತನಾಡಿದರು. ತಾಪಂ ಅಧ್ಯಕ್ಷೆ ಕೆ. ನಾಗಮ್ಮ, ಉಪಾಧ್ಯಕ್ಷೆ ಬಿಕ್ಯಾಮುನ್ನಿ ಬಾಯಿ, ಪುರಸಭೆ ಅಧ್ಯಕ್ಷೆ ಕವಿತಾ ಹಾಲ್ದಾಳ್, ಉಪಾಧ್ಯಕ್ಷ ಹುಳ್ಳಿ ಮಂಜುನಾಥ, ಸದಸ್ಯೆ ಜಾಹಿದಾ ರೆಹಮಾನ್, ಮುಖಂಡರಾದ ಹೆಗ್ಡಾಳ್ ರಾಮಣ್ಣ, ಅಕ್ಕಿ ತೋಟೇಶ್, ಚಿಂತ್ರಪಳ್ಳಿ ದೇವೇಂದ್ರ, ಬಿಇಒ ಶೇಖರಪ್ಪ ಹೊರಪೇಟೆ, ಪೊಬೆಷನರಿ ಐಎಎಸ್ ಪುರಸಭೆ ಮುಖ್ಯಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಸಿಡಿಪಿಒ ಚನ್ನಪ್ಪ ಮತ್ತಿತರರು ಇದ್ದರು.
ತಾಲೂಕಿನಲ್ಲಿ ಉತ್ತಮ ಸೇವೆಗೈದ ಅಧಿಕಾರಿಗಳನ್ನು ಗುರುತಿಸಿ ತಾಪಂ ಇಒ ಹಾಲಸಿದ್ದಪ್ಪ ಪೂಜೇರಿ, ಆರೋಗ್ಯ ಇಲಾಖೆ ಆಡಳಿತಾಧಿಕಾರಿ ಡಾ. ಶಂಕರನಾಯ್ಕ, ತೋಟಗಾರಿಕೆ ಇಲಾಖೆ ಎಡಿ ಡಾ.ಜಿ.ಪರಮೇಶ್ವರ, ಕಂದಾಯ ಚನ್ನಬಸಪ್ಪ, ಪೊಲೀಸ್ ನಾಯಕರ ಪ್ರಕಾಶ್‌ರಿಗೆ ಸೇವಾ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.